Breaking News

KPSC ಬಗ್ಗೆ ಸಾರ್ವಜನಿಕರಿಗೆ ಅಸಹ್ಯಕರ ಭಾವನೆ ಮೂಡಿದೆ: ಹೆಚ್‌ಡಿಕೆ

Spread the love

ಬೆಂಗಳೂರು: ಕೆಪಿಎಸ್‌ಸಿ  ಬಗ್ಗೆ ಸಾರ್ವಜನಿಕರಿಗೆ ಅಸಹ್ಯಕರ ಭಾವನೆ ಮೂಡಿದೆ, ಈ ಸಂಸ್ಥೆ ಬೇಕಾ ಎಂದು ಜನ ಕೇಳುತ್ತಿದ್ದಾರೆ ಎಂದು ಕೇಂದ್ರ ಸಚಿವ ಹೆಚ್‌ಡಿ ಕುಮಾರಸ್ವಾಮಿ  ಕಿಡಿಕಾರಿದ್ದಾರೆ.

ಕೆಪಿಎಸ್‌ಸಿ ಎಇಇ ನೇಮಕಾತಿ ಅಕ್ರಮ ಬಗ್ಗೆ ಜೆಡಿಎಸ್ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ನನಗೆ ಸಂಪೂರ್ಣ ಅಧಿಕಾರ ಸಿಕ್ಕರೆ ಕೆಪಿಎಸ್‌ಸಿ ರದ್ದು ಮಾಡುತ್ತೇನೆ ಎಂದು ಪ್ರಿಯಾಂಕ್ ಖರ್ಗೆ ಹೇಳಿದ್ದರು. ಈಗ ಅಧಿಕಾರ ಸಿಕ್ಕಿದೆಯಲ್ಲ ಮಾಡಿ, ಗೃಹ ಸಚಿವರಾಗಿ ನೀವೇನು ಮಾಡಿದ್ದೀರಿ ಹೇಳಿ? ವಿದ್ಯಾರ್ಥಿಗಳ ಬದುಕಿನಲ್ಲಿ ಕೆಪಿಎಸ್‌ಸಿ ಚೆಲ್ಲಾಟ ಆಡುತ್ತಿದೆ. ಅದರ ವಿರುದ್ಧ ದನಿ ಎತ್ತಲು ನಾವು ಸದಾ ಸಿದ್ಧ. ಕೆಪಿಎಸ್‌ಸಿ ಹಂತಹಂತವಾಗಿ ಕೆಳಮಟ್ಟಕ್ಕೆ ಹೋಗಿದೆ. ಯಾವುದೇ ಭ್ರಷ್ಟಾಚಾರಕ್ಕೆ ಅವಕಾಶ ಕೊಡಲ್ಲ, ಸದೆ ಬಡಿತೀನಿ ಎಂದು ಸಿಎಂ ಹೇಳಿದ್ದರು. ಇಂಥ ಪರಿಸ್ಥಿತಿಯಲ್ಲಿರುವ ಕೆಪಿಎಸ್‌ಸಿ ಸಂಸ್ಥೆಯನ್ನು ಏನು ಸದೆ ಬಡೆಯೋದು ಎಂದು ವಾಗ್ದಾಳಿ ನಡೆಸಿದರು.

ನಾನು ಕಡಿಮೆ ಅವಧಿಯಲ್ಲಿ ಸಿಎಂ ಆಗಿರಬಹುದು. ಕಾನೂನುಬಾಹಿರವಾಗಿ ಯಾವುದೇ ಸೂಚನೆ ಯಾರಿಗೂ ಕೊಟ್ಟಿಲ್ಲ. ಕಾನೂನು ಮೀರಿ ರಕ್ಷಣೆ ಕೊಡಿ ಅಂತ ಹೇಳಿಲ್ಲ. ನಾನು ಸಿಎಂ ಆಗಿದ್ದಾಗ ದಲಿತ ಸಮಾಜದವರೊಬ್ಬರಿಗೆ ಕೆಪಿಎಸ್‌ಸಿ ಅಧ್ಯಕ್ಷ ಮಾಡಿದೆ, ನನ್ನ ಸಂಬಂಧಿಕರಿಗಾಗಲೀ, ಆಪ್ತರಿಗಾಗಲೀ ಮಾಡಿಲ್ಲ. 2006ರಲ್ಲಿ ದಲಿತ ಸಮಾಜದವರಿಗೆ ಅಧ್ಯಕ್ಷ ಮಾಡಿದೆ. ನನ್ನ ಕಾಲದಲ್ಲಿ ಪ್ರಶ್ನೆ ಪತ್ರಿಕೆ ಲೀಕ್ ಆದ ಬಗ್ಗೆ ಪ್ರಿಯಾಂಕ್ ಖರ್ಗೆ ಮಾತಾಡಿದ್ದಾರೆ. ಗ್ರಾಮೀಣಾಭಿವೃದ್ಧಿ ಇಲಾಖೆಯ ಎಇಇ ನೇಮಕಾತಿ ಯಾವ ರೀತಿ ಮಾಡಿದ್ದೀರಿ ಪ್ರಿಯಾಂಕ್ ಖರ್ಗೆ ಅವರೇ? ರೆಸಾರ್ಟ್‌ಗೆ ಪ್ರಶ್ನೆ ಪತ್ರಿಕೆ ತೆಗೆದುಕೊಂಡು ಹೋಗಿದ್ದಾರೆ. ನಿಮ್ಮ ಬಳಿ ಇಂಟಲಿಜೆನ್ಸ್ ಇಲ್ವಾ ಖರ್ಗೆ ಅವರೇ? ರಾಹುಲ್ ಗಾಂಧಿ ದೇಶವೆಲ್ಲ ಸುತ್ತಿ ವಿದ್ಯಾರ್ಥಿಗಳ ಜೊತೆ ಸಂವಾದ ಮಾಡುತ್ತಿದ್ದಾರೆ. ಅವರನ್ನು ಇಲ್ಲಿ ಕರೆಸಿ, ನಮ್ಮ ರಾಜ್ಯದ ಯುವಕರ ಜೊತೆ ಸಂವಾದ ಮಾಡಲಿ ಎಂದು ಹರಿಹಾಯ್ದರು.

ಜನವರಿ 1, 2024ರಲ್ಲಿ ಪ್ರಾವಿಷನ್ ಲಿಸ್ಟ್ ಸಿಎಸ್‌ಗೆ ಕಳುಹಿಸುತ್ತಾರೆ. ಆಗ ಅದನ್ನ ತಡೆಹಿಡಿಯಬೇಕು ಅಂತ ಹೇಳುತ್ತಾರೆ. ಇಲ್ಲಿವರೆಗೂ ಕೋರ್ಟ್‌ಗೂ ಅಬ್ಜೆಕ್ಷನ್ ಹಾಕಿಲ್ಲ ಸರ್ಕಾರ. ಒಎಂಆರ್ ತಿದ್ದಿದ್ದಾರೆ, ಸಿಸಿ ಕ್ಯಾಮೆರಾ ಇಲ್ಲಾ, ಫೂಟೇಜ್ ಹಾಳು ಮಾಡಿದ್ದಾರೆ. ಹೈಕೋರ್ಟ್ ಮುಂದೆ ಅಬ್ಜೆಕ್ಷನ್ ಹಾಕಿದ್ರಾ? ಪ್ರತಿಬಾರಿ ಕೋರ್ಟ್‌ನಲ್ಲಿ ಸಮಯ ಯಾಕೆ ಕೇಳಿದ್ರಿ ಪ್ರಿಯಾಂಕ್ ಖರ್ಗೆಯವರೆ? ಬಿಡದಿ ಟೌನ್ ಶಿಪ್ ಯೋಜನೆಗೆ ಆರು ಜನ ವಕೀಲರನ್ನ ಇಟ್ಟಿದ್ದಾರೆ. ಕಳೆದ ಆಗಸ್ಟ್‌ನಲ್ಲೂ ಕೋರ್ಟ್‌ಗೆ ಸಮಯ ಕೇಳಿದ್ದಾರೆ. ಯೋಗ್ಯತೆ ಇಲ್ಲದವರಿಗೆ ಪರೀಕ್ಷೆ ಬರೆಯೋದಕ್ಕೆ ಅವಕಾಶ ಕೊಟ್ಟಿದ್ದಾರೆ, ನೇಮಕಾತಿ ಮಾಡಿದ್ದೀರಾ? ಆರ್‌ಎಸ್‌ಎಸ್ ಬಗ್ಗೆ ಮಾತಾಡ್ತಿರಲ್ಲಾ, ಕಾಂಗ್ರೆಸ್ ನಾಯಕರು ಏನು ಪರಿಶುದ್ಧ ಮಾಡಿದ್ದೀರಾ? ಬಿಡಿಎ ಅರ್ಕಾವತಿ ಲೆಔಟ್ ನಾಶ ಮಾಡಿದವರಿಗೆ ಕೆಪಿಎಸ್‌ಸಿ ಚೇರ್ಮನ್ ಮಾಡ್ತಿರಾ? ಬೀದಿ ಬೀದಿಯಲ್ಲಿ ಒಂದು ಕೋಟಿ ತಗೊಂಡ್ರಲ್ಲಾ ಹೇಳಿ ಕಾಂಗ್ರೆಸ್ ನಾಯಕರೇ? 75 ಸಾವಿರ ಯುವಕರಿಗೆ ಉದ್ಯೋಗ ಕೊಡುತ್ತೇವೆ ಅಂತ ಹೇಳಿದ್ರಲ್ಲಾ, ಯಾವ ಆಧಾರದ ಮೇಲೆ ಸದಸ್ಯರನ್ನ ಆಯ್ಕೆ ಮಾಡುತ್ತಿದ್ದೀರಿ? ರಾಷ್ಟ್ರೀಯ ಅದ್ಯಕ್ಷರು ಯುವಕರ ಸಂವಾದ ಮಾಡುತ್ತಾರೆ. ಮುಂದಿನ ಪ್ರಧಾನಿ ಅಂತಾರಲ್ಲಾ ಕರೆಯರಿ ನಮ್ಮ ರಾಜ್ಯಕ್ಕೆ ಎಂದರು.

ಪಶುವೈದ್ಯಾಧಿಕಾರಿ ನೇಮಕಾತಿಯಲ್ಲಿ ಅಕ್ರಮ ಆಗಿದೆ. ರ‍್ಯಾಂಕ್ ವಿದ್ಯಾರ್ಥಿಗಳು ಇಲ್ಲಿ ಕೊನೆಯಲ್ಲಿ ಇದ್ದಾರೆ. ಕಳೆದ ಮೂರು ವರ್ಷದಲ್ಲಿ ಎಷ್ಟು ಉದ್ಯೋಗ ಕೊಟ್ಟಿದ್ದೀರಿ ಎಂದು ಜನರ ಮುಂದಿಡಿ. ಕೆಪಿಎಸ್‌ಸಿ ಯಾವಾಗ ತೊಳೀತೀರಿ ಹೇಳಿ? ಎಂತೆಂಥವರನ್ನು ಅಧ್ಯಕ್ಷರಾಗಿ ಮಾಡಿದ್ದೀರಲ್ಲ? ನಿಮ್ಮ ಅನ್ಯಾಯದ ದಾಖಲೆಗಳು ಕಣ್ಮುಂದೆ ಇವೆ. ಕೆಪಿಎಸ್‌ಸಿ ಸದಸ್ಯರ ಅಧಿಕಾರ ಏನು, ಕೆಲಸ ಏನು? ನೀವು ಸರ್ಕಾರದ ಅಧೀನದಲ್ಲಿದ್ದೀರ. ಕೆಪಿಎಸ್‌ಸಿ ಕಾರ್ಯದರ್ಶಿ ಅಧಿಕಾರ ಏನು, ಕಂಟ್ರೋಲರ್ ಅಧಿಕಾರ ಏನು? ಕೆಪಿಎಸ್‌ಸಿಯಲ್ಲಿರುವ ಒಬ್ಬ ಐಎಎಸ್ ಅಧಿಕಾರಿ ಮೇಲೆ ಕ್ರಮ ಆಗಿದೆಯಾ? ಬರೀ ಹೇಳಿಕೆ ಕೊಡಬೇಡಿ, ಪ್ರಾಮಾಣಿಕವಾಗಿ ಕೆಲಸ ಮಾಡಿ. ಬಹಳ ದಿನ ಇದೆಲ್ಲ ನಡೆಯಲ್ಲ, ಬಹಳ ಜನ ಹೊರಟು ಹೋಗಿದ್ದಾರೆ. 2013ರಿಂದಲೂ ಕೆಪಿಎಸ್‌ಸಿ ಸರಿಪಡಿಸಿಲ್ಲ, ಇಲ್ಲಿಯವರೆಗೂ ಏನ್ ಮಾಡಿದ್ರಿ ಎಂದು ಪ್ರಶ್ನಿಸಿದರು.

ಎಇಇ ನೇಮಕಾತಿ ಅಕ್ರಮಕ್ಕೆ ಸರ್ಕಾರವೇ ನೇರ ಹೊಣೆ. ಪಶುವೈದ್ಯಾಧಿಕಾರಿ ನೇಮಕಾತಿ ಅಕ್ರಮಕ್ಕೆ ನೇರ ಹೊಣೆ ಸರ್ಕಾರ. ಯಾರಿಗೆ ತಲೆದಂಡ ಮಾಡ್ತೀರಿ? ಇಡಿ ತನಿಖೆ ಶುರುಮಾಡಿದ ಮೇಲೆ ಎಚ್ಚೆತ್ತುಕೊಳ್ತೀರಾ? ಪ್ರತಿಭಾನ್ವಿತ ವಿದ್ಯಾರ್ಥಿಗಳು ಕಣ್ಣೀರು ಹಾಕುತ್ತಿದ್ದಾರೆ. ನಮ್ಮ ಜೊತೆ ಸೇರಿ ದುಡ್ಡು ಕೊಟ್ರೆ ಪರೀಕ್ಷೆ ಪಾಸ್ ಮಾಡಬಹುದು ಅಂತಾರೆ. ಫೋನ್ ಮಾಡಿದ ನಂಬರ್ ತೆಗೆಸೋಕೆ ಆಗಲ್ವಾ? ಗ್ಯಾನೇಂದ್ರ ಅವರನ್ನ ದೆಹಲಿಗೆ ಕಳುಹಿಸಲು ಪರ್ಮಿಷನ್ ಕೊಟ್ಟವರು ಯಾರು? ದೆಹಲಿಯಲ್ಲಿ ಏನಾಯ್ತು ಅವರ ಸ್ನೇಹಿತರು ಏನು ಹೇಳಿದ್ರು? ತನಿಖೆಗೆ ಹೋಗೊವರೆಗೆ ಯಾವ ದೇವನಹಳ್ಳಿ ರೆಸಾರ್ಟ್‌ನಲ್ಲಿ ಇರಿಸಿಕೊಂಡಿದ್ರಿ ಮೂರು ದಿನ? ಮಾಹಿತಿ ಇಲ್ವಾ ನಿಮಗೆ ಎಂದು ಕಿಡಿಕಾರಿದರು.

ಪಶುವೈದ್ಯಕೀಯ ಪರೀಕ್ಷೆಯಲ್ಲಿ 95% ಬಂದವರಿಗೆ ಅವಕಾಶ ಸಿಕ್ಕಿಲ್ಲ. ಫೇಲ್ ಆದವರಿಗೆ ಎರಡನೆ ರ‍್ಯಾಂಕ್ ಬಂದಿದೆ. ಮುಂದಿನ ವರ್ಷ ನಾನೆ ಸಿಎಂ ಅಂತಾರೆ. ಸಾಯೋವರೆಗೂ ನೀವೇ ಇರಿ, ಇದನ್ನೆಲ್ಲಾ ಸರಿಪಡಿಸಿ. ನೀರಾವರಿ ಇಲಾಖೆಯಲ್ಲಿ ನೇಮಕಾತಿ ಬಗ್ಗೆ ನಿನ್ನೆ ಹೈಕೋರ್ಟ್ ಸ್ಟೇ ಕೊಟ್ಟಿದೆ. ಎಷ್ಟು ಉದ್ಯೋಗ ಕೊಟ್ಟಿದ್ದಿರಾ ಜನರ ಮುಂದೆ ಹೇಳಿ. ಕೆಪಿಎಸ್ ಸಿ ಯಾವಗ ತೊಳೆಯುತ್ತಿರಾ? ಸರ್ಕಾರದಿಂದ ಐಎಎಸ್ ಅಧಿಕಾರಿಯನ್ನ ಕಂಟ್ರೋಲರನ್ನಾಗಿ ಹಾಕುತ್ತಾರೆ. ಅಕ್ರಮ ಮಾಡಿದವರ ಮೇಲೆ ಒಬ್ಬರ ಮೇಲೆ ಕ್ರಮ ತಗೊಂಡಿದ್ದೀರಾ? ಜಾಹೀರಾತು ಮೂಲಕ ನಿಮ್ಮ ಫೋಟೋ ಜನರ ಮುಂದೆ ಇಡಬೇಡಿ. ಪ್ರಾಮಾಣಿಕವಾಗಿ ಕೆಲಸ ಮಾಡಿ. ಇದೆಲ್ಲಾ ಬಹಳ ದಿನ ಉಳಿಯಲ್ಲ ಎಂದು ಕೆಂಡಕಾರಿದರು.


Spread the love

About Laxminews 24x7

Check Also

ಬಂಡೆ ತಬ್ಬಿ ಬೆಂಗಳೂರಿಗರ ಪ್ರತಿಭಟನೆ – ಲಾಲ್‌ಬಾಗ್‌ ಉಳಿಸಲು ಬೃಹತ್‌ ಅಭಿಯಾನ

Spread the loveಬೆಂಗಳೂರು: ಉದ್ಯಾನವನಗಳ ಶೇ.5ರಷ್ಟು ಜಾಗವನ್ನು ಅನ್ಯ ಉದ್ದೇಶಗಳಿಗೆ ಬಳಸಲು ಅವಕಾಶ ಕಲ್ಪಿಸುವ ಸರ್ಕಾರದ ಕಾಯ್ದೆ ತಿದ್ದುಪಡಿಗೆ ಬೆಂಗಳೂರಿನಲ್ಲಿ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ