ಬೆಳಗಾವಿ:ವಿಶೇಷ ತೀವ್ರ ಸಮಗ್ರ ಪರಿಷ್ಕರಣೆ (ಎಸ್‌ಐಆರ್) ಪ್ರಕ್ರಿಯೆ ಮುಕ್ತಾಯಗೊಂಡಿದ್ದು, ಬೆಳಗಾವಿ ಜಿಲ್ಲೆಯಲ್ಲಿ 5,13,439 ಮತದಾರರ ಹೆಸರು ಕರಡು ಮತದಾರರ ಪಟ್ಟಿಯಿಂದ ಹೊರಗುಳಿದಿದೆ ಎಂದು ಜಿಲ್ಲಾಧಿಕಾರಿ ಮೊಹಮ್ಮದ ರೋಷನ್ ತಿಳಿಸಿದರು.
ನಗರದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಎಸ್‌ಐಆರ್ ಪ್ರಕ್ರಿಯೆಗೂ ಮುನ್ನ ಜಿಲ್ಲೆಯಲ್ಲಿ ಸುಮಾರು 41 ಲಕ್ಷ ಮತದಾರರಿದ್ದು, ಇದೀಗ 35,93,561 ಮತದಾರರ ಹೆಸರು ಮಾತ್ರ ಕರಡು ಪಟ್ಟಿಯಲ್ಲಿ ಉಳಿದಿದೆ. ಜಿಲ್ಲೆಯ ಎಲ್ಲ ಮತದಾರರ ವಿವರ ಹಾಗೂ ಪೌರತ್ವವನ್ನು ಪರಿಶೀಲನೆಗೆ ಒಳಪಡಿಸಿ ಈ ಪರಿಷ್ಕರಣೆ ಕೈಗೊಳ್ಳಲಾಗಿದೆ ಎಂದರು.
ಮನೆ ಮನೆಗೆ ತೆರಳಿ ಪರಿಶೀಲನೆ
ಎಸ್‌ಐಆರ್ ಪ್ರಕ್ರಿಯೆಯ ಮೊದಲ ಹಂತದಲ್ಲಿ ಮತದಾರರಿಗೆ ಗಣತಿ ನಮೂನೆಗಳನ್ನು ವಿತರಿಸಲಾಗಿತ್ತು. 2002ರ ಮತದಾರರ ಪಟ್ಟಿ ಹಾಗೂ 2026ರ ಮತದಾರರ ವಿವರಗಳನ್ನು ನಮೂನೆಯಲ್ಲಿ ಭರ್ತಿ ಮಾಡಿ ಸಲ್ಲಿಸುವಂತೆ ಸೂಚಿಸಲಾಗಿತ್ತು.
ನಂತರ ಮತಗಟ್ಟೆ ಮಟ್ಟದ ಅಧಿಕಾರಿಗಳು (ಬಿಎಲ್‌ಒ) ಮನೆ ಮನೆಗೆ ತೆರಳಿ ಪರಿಶೀಲನೆ ನಡೆಸಿದರು. ಈ ವೇಳೆ 2,83,249 ಮತದಾರರು ಶಾಶ್ವತವಾಗಿ ಸ್ಥಳಾಂತರಗೊಂಡಿರುವುದು, 1,34,903 ಮಂದಿ ಮೃತಪಟ್ಟಿರುವುದು ಪತ್ತೆಯಾಗಿದೆ. ಎಸ್‌ಐಆರ್ ಪ್ರಕ್ರಿಯೆಗೆ ಗೈರಾದವರು ಸೇರಿದಂತೆ ಒಟ್ಟು 5,13,439 ಮತದಾರರು ಪ್ರಸ್ತುತ ಕರಡು ಪಟ್ಟಿಯಿಂದ ಹೊರಗುಳಿದಿದ್ದಾರೆ ಎಂದು ಡಿಸಿ ವಿವರಿಸಿದರು.
ಕರಡು ಪಟ್ಟಿಯಿಂದ ಹೆಸರು ಹೊರಗುಳಿದಿರುವುದರಿಂದ ಮತದಾನದ ಹಕ್ಕು ಶಾಶ್ವತವಾಗಿ ಕಳೆದುಹೋದಂತಲ್ಲ. ಸಂಬಂಧಿಸಿದ ಮತದಾರರು ಅಗತ್ಯ ದಾಖಲೆಗಳೊಂದಿಗೆ ಫಾರ್ಮ್-6 ಸಲ್ಲಿಸಿ ಹೊಸದಾಗಿ ನೋಂದಣಿ ಮಾಡಿಕೊಳ್ಳಬಹುದು. ಪರಿಶೀಲನೆಯ ಬಳಿಕ ಪೌರತ್ವ ಸೇರಿದಂತೆ ಅಗತ್ಯ ಅರ್ಹತೆ ದೃಢಪಟ್ಟರೆ ಅವರ ಹೆಸರನ್ನು ಅಂತಿಮ ಮತದಾರರ ಪಟ್ಟಿಗೆ ಸೇರ್ಪಡೆ ಮಾಡಲಾಗುವುದು ಎಂದು ಸ್ಪಷ್ಟಪಡಿಸಿದರು.
ಕ್ಲೇಮ್, ಆಕ್ಷೇಪಣೆಗೆ ಅವಕಾಶ
ಕರಡು ಮತದಾರರ ಪಟ್ಟಿಗೆ ಸಂಬಂಧಿಸಿದಂತೆ ಆ.24ರಿಂದ ಸೆ.23ರವರೆಗೆ ಕ್ಲೇಮ್ ಮತ್ತು ಆಕ್ಷೇಪಣೆ ಸಲ್ಲಿಸಲು ಅವಕಾಶವಿದೆ. ಪಟ್ಟಿಯಲ್ಲಿ ಹೆಸರು ಇಲ್ಲದವರು ಅಥವಾ ವಿವರಗಳಲ್ಲಿ ಲೋಪದೋಷ ಕಂಡುಬಂದವರು ಈ ಅವಧಿಯಲ್ಲಿ ಅಗತ್ಯ ದಾಖಲೆಗಳೊಂದಿಗೆ ಅರ್ಜಿ ಸಲ್ಲಿಸಬೇಕು ಎಂದು ಡಿಸಿ ಮನವಿ ಮಾಡಿದರು.
84,422 ಮತದಾರರಿಗೆ ನೋಟಿಸ್
ವಯಸ್ಸಿನ ವ್ಯತ್ಯಾಸ, ಮ್ಯಾಪಿಂಗ್ ಲೋಪ ಪತ್ತೆ
ಕರಡು ಮತದಾರರ ಪಟ್ಟಿಯಲ್ಲಿ ಹೆಸರು ಪ್ರಕಟವಾಗಿದೆ ಎಂಬ ಕಾರಣಕ್ಕೆ ಮತದಾರರು ಸಂಪೂರ್ಣ ನಿರಾಳರಾಗುವಂತಿಲ್ಲ. ಪಟ್ಟಿಯಲ್ಲಿರುವ 35,93,561 ಮತದಾರರ ಪೈಕಿ 47,946 ಮಂದಿಯ ವಯಸ್ಸಿನ ವಿವರದಲ್ಲಿ ವ್ಯತ್ಯಾಸ ಕಂಡುಬಂದಿದೆ. ಮತ್ತೊಂದೆಡೆ 36,476 ಮತದಾರರ ಮ್ಯಾಪಿಂಗ್ ಆಗಿಲ್ಲ.
ಈ ಎರಡೂ ವಿಭಾಗಗಳು ಸೇರಿದಂತೆ ಒಟ್ಟು 84,422 ಮತದಾರರಿಗೆ ಆ.24ರಿಂದ ನೋಟಿಸ್ ಜಾರಿ ಮಾಡಲಾಗುತ್ತಿದೆ. ನೋಟಿಸ್ ಪ್ರಕ್ರಿಯೆ ಅ.22ರವರೆಗೆ ನಡೆಯಲಿದೆ.
ನೋಟಿಸ್ ಬಂದಿರುವುದಕ್ಕೆ ಯಾರೂ ಆತಂಕಪಡಬೇಕಿಲ್ಲ. ತಮ್ಮ ಬಳಿಯಿರುವ ಅಗತ್ಯ ದಾಖಲೆಗಳನ್ನು ಸಲ್ಲಿಸಿ, ಕಂಡುಬಂದಿರುವ ಲೋಪದೋಷಗಳನ್ನು ಸರಿಪಡಿಸಿಕೊಳ್ಳಲು ಕಾನೂನುಬದ್ಧ ಅವಕಾಶ ನೀಡಲಾಗಿದೆ ಎಂದು ಜಿಲ್ಲಾಧಿಕಾರಿ ಹೇಳಿದರು.
ತಾಲೂಕು ಕೇಂದ್ರಕ್ಕೆ ಅಲೆದಾಟ ತಪ್ಪಿಸಲು ಕ್ರಮ
ಗ್ರಾಪಂ, ನಗರ ಸ್ಥಳೀಯ ಸಂಸ್ಥೆಗಳಲ್ಲೇ ವಿಚಾರಣೆ
ಮತದಾರರು ತಮ್ಮ ಸಮಸ್ಯೆಗಾಗಿ ತಾಲೂಕು ಅಥವಾ ಜಿಲ್ಲಾ ಕೇಂದ್ರಗಳಿಗೆ ಅಲೆದಾಡುವುದನ್ನು ತಪ್ಪಿಸಲು ಆಡಳಿತ ವ್ಯವಸ್ಥೆ ಮಾಡಲಾಗಿದೆ. ಗ್ರಾಮೀಣ ಪ್ರದೇಶಗಳಲ್ಲಿ ಗ್ರಾಮ ಪಂಚಾಯಿತಿ, ನಗರ ಪ್ರದೇಶಗಳಲ್ಲಿ ನಗರಸಭೆ, ಪುರಸಭೆ ಹಾಗೂ ಪಟ್ಟಣ ಪಂಚಾಯಿತಿ ಕಚೇರಿಗಳ ನೋಟಿಸ್ ಫಲಕಗಳಲ್ಲಿ ಕರಡು ಮತದಾರರ ಪಟ್ಟಿಯನ್ನು ಪ್ರಕಟಿಸಲಾಗುತ್ತಿದೆ.
ಜನರು ತಮ್ಮ ಹೆಸರು ಪಟ್ಟಿಯಲ್ಲಿ ಇರುವುದನ್ನು ಪರಿಶೀಲಿಸಿಕೊಳ್ಳಬೇಕು. ಶಾಶ್ವತವಾಗಿ ಸ್ಥಳಾಂತರಗೊಂಡವರು ಅಥವಾ ಎಸ್‌ಐಆರ್ ಪ್ರಕ್ರಿಯೆಯಲ್ಲಿ ಗೈರಾಗಿದ್ದವರು ಅಗತ್ಯ ದಾಖಲೆಗಳೊಂದಿಗೆ ಫಾರ್ಮ್-6 ಮೂಲಕ ಮತದಾರರ ಪಟ್ಟಿಗೆ ಸೇರ್ಪಡೆಗೆ ಅರ್ಜಿ ಸಲ್ಲಿಸಬಹುದು. ಸ್ಥಳೀಯ ಸಂಸ್ಥೆಗಳ ಮಟ್ಟದಲ್ಲೇ ಮತದಾರರ ವಿಚಾರಣೆ ನಡೆಸಲು ವ್ಯವಸ್ಥೆ ಮಾಡಲಾಗಿದೆ ಎಂದು ಮೊಹಮ್ಮದ ರೋಷನ್ ತಿಳಿಸಿದರು.
ಮತಗಟ್ಟೆಗಳ ಸಂಖ್ಯೆ 4,544ಕ್ಕೆ ಏರಿಕೆ
ಎಸ್‌ಐಆರ್ ಪ್ರಕ್ರಿಯೆ ಸಂದರ್ಭದಲ್ಲಿ ಜಿಲ್ಲೆಯ ಮತಗಟ್ಟೆಗಳ ಸಂಖ್ಯೆಯಲ್ಲೂ ಬದಲಾವಣೆ ಮಾಡಲಾಗಿದೆ. ಜಿಲ್ಲೆಯಲ್ಲಿ ಈ ಹಿಂದೆ 4,525 ಮತಗಟ್ಟೆಗಳಿದ್ದವು. ಕೆಲ ಮತಗಟ್ಟೆಗಳ ವ್ಯಾಪ್ತಿಯಲ್ಲಿ 1,200ಕ್ಕೂ ಅಧಿಕ ಮತದಾರರು ಇರುವುದನ್ನು ಪರಿಶೀಲನೆ ವೇಳೆ ಗುರುತಿಸಲಾಯಿತು.
ಚುನಾವಣಾ ಆಯೋಗದ ನಿರ್ದೇಶನ ಹಾಗೂ ನಿಯಮಗಳ ಅನ್ವಯ 119 ಹೊಸ ಮತಗಟ್ಟೆಗಳನ್ನು ಹೆಚ್ಚಿಸಲಾಗಿದ್ದು, ಇದೀಗ ಜಿಲ್ಲೆಯ ಒಟ್ಟು ಮತಗಟ್ಟೆಗಳ ಸಂಖ್ಯೆ 4,544ಕ್ಕೆ ಏರಿಕೆಯಾಗಿದೆ ಎಂದು ಜಿಲ್ಲಾಧಿಕಾರಿ ವಿವರಿಸಿದರು
Laxmi News 24×7