ಬೆಂಗಳೂರು: ಮೆಡಿಕಲ್ ಶಾಪ್ ಮಾಲೀಕ ಸುಹೇಲ್ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮಡಿವಾಳ ಪೊಲೀಸರು ಆರು ಮಂದಿ ಆರೋಪಿಗಳನ್ನು ಬಂಧಿಸಿದ್ದಾರೆ.
ಬಂಡೆಪಾಳ್ಯ ರೌಡಿಶೀಟರ್ ಆದಿಲ್ ಸೇರಿ ಆರು ಮಂದಿಯನ್ನು ಪೊಲೀಸರು ಬಂಧಿಸಿದ್ದಾರೆ. ಬಂಧಿತ ಆರೋಪಿ ಆದಿಲ್ ಸ್ನೇಹಿತ ಶಬ್ಬೀರ್ ಕೊಲೆಗೆ ಪ್ರತೀಕಾರವಾಗಿ ಸುಹೇಲ್ ಹತ್ಯೆ ನಡೆದಿದೆ ಎನ್ನಲಾಗಿದೆ. ಸುಹೇಲ್ ಹತ್ಯೆ ಬಳಿಕ ಆರೋಪಿಗಳು ಮುಂಬೈಗೆ ಪರಾರಿಯಾಗಲು ಸ್ಕೆಚ್ ಹಾಕಿದ್ದರು. ಅಷ್ಟರಲ್ಲೇ ದುಷ್ಕರ್ಮಿಗಳನ್ನು ಪೊಲೀಸರು ಬಂಧಿಸಿದ್ದಾರೆ.
ಕಳೆದ ಜನವರಿಯಲ್ಲಿ ಬಂಡೆಪಾಳ್ಯ ವ್ಯಾಪ್ತಿಯಲ್ಲಿ ಶಬ್ಬೀರ್ ಕೊಲೆಯಾಗಿತ್ತು. ಈ ಕೊಲೆಗೆ ಮೆಡಿಕಲ್ ಶಾಪ್ ಮಾಲೀಕ ಸುಹೇಲ್ ಹಣ ನೀಡಿದ್ದ. ಅಲ್ಲದೇ ಶಬ್ಬೀರ್ ಹತ್ಯೆಯಲ್ಲಿ ಸುಹೇಲ್ ಸಹೋದರರು ಭಾಗಿಯಾಗಿದ್ದರು. ಇದರಿಂದ ಕೋಪಗೊಂಡಿದ್ದ ಶಬ್ಬೀರ್‌ನ ಸ್ನೇಹಿತ ಆದಿಲ್, ಪ್ರತಿಕಾರವಾಗಿ ಸುಹೇಲ್ ಹತ್ಯೆ ಮಾಡಿಸಿದ್ದಾನೆ.
ಈ ಮಧ್ಯೆ ಕೊಲೆಯಾದ ಸುಹೇಲ್ ಗೆಳೆಯರ ಬಳಿ ಆದಿಲ್‌ನನ್ನ ಹೊಡೆಸುವುದಾಗಿ ಎಚ್ಚರಿಕೆ ನೀಡಿದ್ದನಂತೆ. ಆದಿಲ್ ಹೊಡೆಸುವುದಕ್ಕೂ ಮುಂಚೆ ನಾನೇ ಹೊಡೆಯುವುದಾಗಿ ಸುಹೇಲ್ ಹೇಳಿದ್ದನಂತೆ. ಹಾಗೆ ಹೇಳಿದ್ದ ಸುಹೇಲ್ ಬರ್ಬರವಾಗಿ ಕೊಲೆಯಾಗಿದ್ದು, ಕೊಲೆಗೈದ ಆರೋಪಿಗಳು ಪೊಲೀಸರ ಅತಿಥಿಗಳಾಗಿದ್ದಾರೆ.
ಏನಿದು ಘಟನೆ?
ಮಂಗಮ್ಮನಪಾಳ್ಯದ ಸುಹೇಲ್ ಶನಿವಾರ (ಆ.22) ರಾತ್ರಿ ಸುಮಾರು 10 ಗಂಟೆಯ ವೇಳೆಗೆ ಮಡಿವಾಳದಿಂದ ಕೊರಮಂಗಲ ಕಡೆಗೆ ತಮ್ಮ ಬೈಕ್‌ನಲ್ಲಿ ತೆರಳುತ್ತಿದ್ದಾಗ ದುಷ್ಕರ್ಮಿಗಳು ದಾಳಿ ನಡೆಸಿ ಹತ್ಯೆ ಮಾಡಿದ್ದರು.
ಟ್ರಾಫಿಕ್ ಜಾಮ್‌ನಲ್ಲಿ ಬೈಕ್ ನಿಲ್ಲಿಸಿಕೊಂಡಿದ್ದಾಗ, ಎರಡು ಬೈಕ್‌ಗಳಲ್ಲಿ ಬಂದ ನಾಲ್ವರು ದುಷ್ಕರ್ಮಿಗಳ ಗ್ಯಾಂಗ್ ಏಕಾಏಕಿ ತಲ್ವಾರ್‌ಗಳಿಂದ ಕೊಚ್ಚಿ ಕೊಲೆ ಮಾಡಿದ ಹಂತಕರು ಸ್ಥಳದಿಂದ ಪರಾರಿಯಾಗಿದ್ದರು.
Laxmi News 24×7