Breaking News

H1N1 ನಿಯಂತ್ರಣಕ್ಕೆ ಕಟ್ಟುನಿಟ್ಟಿನ ಕ್ರಮ: ಆರೋಗ್ಯ ಇಲಾಖೆ ಹೈ ಅಲರ್ಟ್, ಆಸ್ಪತ್ರೆಗಳು ಸಂಪೂರ್ಣ ಸನ್ನದ್ಧ

Spread the love

ಬೆಂಗಳೂರು: ರಾಜ್ಯದಲ್ಲಿ H1N1 (ಹಂದಿ ಜ್ವರ) ಸೋಂಕು ದಿನೇ ದಿನೇ ಆತಂಕಕಾರಿ ಮಟ್ಟದಲ್ಲಿ ಏರಿಕೆಯಾಗುತ್ತಿದೆ. ಈ ವರ್ಷದ ಕೇವಲ 8 ತಿಂಗಳಲ್ಲಿ ರಾಜ್ಯಾದ್ಯಂತ  ಬರೋಬ್ಬರಿ 4,212 ಪ್ರಕರಣಗಳು ವರದಿಯಾಗಿವೆ. ರಾಜಧಾನಿ ಬೆಂಗಳೂರು ಸೇರಿದಂತೆ ರಾಜ್ಯದ 15 ಜಿಲ್ಲೆಗಳಲ್ಲಿ ಪ್ರಕರಣಗಳ ಸಂಖ್ಯೆ ಹೆಚ್ಚುತ್ತಿದ್ದು, ಆರೋಗ್ಯ ಇಲಾಖೆ ಹೈ ಅಲರ್ಟ್ ಘೋಷಿಸಿದೆ.

ಆರೋಗ್ಯ ಸಚಿವ ಯುಟಿ ಖಾದರ್‌ ಅಧ್ಯಕ್ಷತೆಯಲ್ಲಿ ರಾಜ್ಯ ಹಾಗೂ ಜಿಲ್ಲಾ ಮಟ್ಟದ ಹಿರಿಯ ಆರೋಗ್ಯ ಅಧಿಕಾರಿಗಳೊಂದಿಗೆ ಉನ್ನತ ಮಟ್ಟದ ಪರಿಶೀಲನಾ ಸಭೆ ನಡೆದಿದ್ದು, ಯಾವುದೇ ತುರ್ತು ಪರಿಸ್ಥಿತಿಯನ್ನು ಸಮರ್ಥವಾಗಿ ಎದುರಿಸಲು ರಾಜ್ಯದ ಆರೋಗ್ಯ ವ್ಯವಸ್ಥೆಯು ಅಗತ್ಯ ಮೂಲಸೌಕರ್ಯ, ಬೆಡ್‌ಗಳು ಹಾಗೂ ಔಷಧಿಗಳ ಸಂಗ್ರಹದೊಂದಿಗೆ ಸನ್ನದ್ಧವಾಗಿದೆ

ಇಂಟಿಗ್ರೇಟೆಡ್ ಹೆಲ್ತ್ ಇನ್ಫಾರ್ಮೇಷನ್ ಪ್ಲಾಟ್‌ಫಾರ್ಮ್ ನೀಡಿರುವ ಕಣ್ಗಾವಲು ವರದಿಯ ಪ್ರಕಾರ 32 ಜಿಲ್ಲೆಗಳಲ್ಲಿ ಒಟ್ಟು 4,212* ಪ್ರಯೋಗಾಲಯ ದೃಢೀಕೃತ ಪಾಸಿಟಿವ್ ಪ್ರಕರಣಗಳು ದಾಖಲಾಗಿವೆ. 2025 ರಲ್ಲಿ 4,583 ಹಾಗೂ 2024 ರಲ್ಲಿ 3,903 ಪ್ರಕರಣಗಳು ವರದಿಯಾಗಿದ್ದವು. ರಾಜ್ಯದಲ್ಲಿ ಸಾಮಾನ್ಯವಾಗಿ ಪ್ರತಿ ವರ್ಷ ಜನವರಿಯಿಂದ ಮಾರ್ಚ್ ಹಾಗೂ ಜುಲೈನಿಂದ ಸೆಪ್ಟೆಂಬರ್ ಅವಧಿಯಲ್ಲಿ ಇನ್‌ಫ್ಲುಯೆಂಜಾ ಪ್ರಕರಣಗಳು ಹೆಚ್ಚಾಗುವುದು ವಾಡಿಕೆಯಾಗಿದೆ.
ಇನ್‌ಫ್ಲುಯೆಂಜಾ ಲಕ್ಷಣಗಳುಳ್ಳ ಜ್ವರ ಮತ್ತು ತೀವ್ರ ಉಸಿರಾಟದ ಸೋಂಕು  ಪ್ರಕರಣಗಳನ್ನು ಪತ್ತೆಹಚ್ಚಲು ಜಿಲ್ಲಾ ಆಸ್ಪತ್ರೆಗಳು, ವೈದ್ಯಕೀಯ ಕಾಲೇಜುಗಳು ಹಾಗೂ ಸೂಪರ್-ಸ್ಪೆಷಾಲಿಟಿ ಆಸ್ಪತ್ರೆಗಳನ್ನು ನಿಗದಿತ ಕಣ್ಗಾವಲು ಕೇಂದ್ರಗಳನ್ನಾಗಿ ಮಾಡಲಾಗಿದೆ.

ICMR-NCDC ಪ್ರಯೋಗಾಲಯಗಳು, ರಾಜ್ಯದ ವೈರಲ್ ರೋಗನಿರ್ಣಯ ಪ್ರಯೋಗಾಲಯಗಳು (VRDL) ಹಾಗೂ ನಿಮ್ಹಾನ್ಸ್ (NIMHANS) ಮೂಲಕ ಮಾದರಿಗಳ ಕ್ಷಿಪ್ರ ಪರೀಕ್ಷೆಗೆ ಅಗತ್ಯ ಕಿಟ್‌ಗಳು ಮತ್ತು ಉಪಕರಣಗಳನ್ನು ಒದಗಿಸಲಾಗಿದೆ.

ರಾಜ್ಯದ ಪ್ರಾಥಮಿಕ ಆರೋಗ್ಯ ಕೇಂದ್ರಗಳಿಂದ ಹಿಡಿದು ಜಿಲ್ಲಾಸ್ಪತ್ರೆಗಳವರೆಗೆ ಅಗತ್ಯವಿರುವಷ್ಟು ಒಸೆಲ್ಟಾಮಿವಿರ್ (Oseltamivir)ಮಾತ್ರೆಗಳು/ಔಷಧಿಗಳು, N95 ಮಾಸ್ಕ್‌ಗಳು ಹಾಗೂ ಪಿಪಿಇ (PPE) ಕಿಟ್‌ಗಳನ್ನು ದಾಸ್ತಾನು ಇರಿಸಲಾಗಿದೆ. ರೋಗಿಗಳನ್ನು ಆರಂಭಿಕ ಹಂತದಲ್ಲೇ ಗುರುತಿಸಿ ಸೂಕ್ತ ಚಿಕಿತ್ಸೆ ನೀಡಲು ವೈದ್ಯರು ಮತ್ತು ಶುಶ್ರೂಷಾ ಸಿಬ್ಬಂದಿಗೆ ವಿಶೇಷ ತರಬೇತಿ ನೀಡಲಾಗಿದೆ.

ಮುನ್ನೆಚ್ಚರಿಕೆ ಮಾರ್ಗಸೂಚಿ ಏನು?
– ರೋಗಲಕ್ಷಣಗಳು ಕಂಡುಬಂದರೆ ಮನೆಯಲ್ಲೇ ಪ್ರತ್ಯೇಕವಾಗಿ (ಐಸೋಲೇಟ್) ಇರಬೇಕು.
– ಸಾರ್ವಜನಿಕ ಸ್ಥಳಗಳಲ್ಲಿ ಕಡ್ಡಾಯವಾಗಿ ಮಾಸ್ಕ್ ಧರಿಸಬೇಕು. ಸೋಪು ಅಥವಾ ಸ್ಯಾನಿಟೈಸರ್ ಬಳಸಿ ಆಗಾಗ್ಗೆ ಕೈ ತೊಳೆಯುತ್ತಿರಬೇಕು.
– ಶುದ್ಧೀಕರಿಸಿದ ಬಿಸಿ ನೀರನ್ನೇ ಕುಡಿಯಲು ಬಳಸಬೇಕು.
– ಕೈಗಳಿಂದ ಪದೇ ಪದೇ ಕಣ್ಣು, ಮೂಗು ಹಾಗೂ ಬಾಯಿಯನ್ನು ಮುಟ್ಟಬಾರದು.
– ವೈದ್ಯರ ಸಲಹೆ ಪಡೆಯದೆ ಸ್ವಯಂ ಚಿಕಿತ್ಸೆ (Self-Medication) ತೆಗೆದುಕೊಳ್ಳಬಾರದು.
– ಜ್ವರ ಅಥವಾ ಶೀತದ ಲಕ್ಷಣಗಳಿರುವಾಗ ಇತರರಿಗೆ ಹಸ್ತಲಾಘವ (Shake hand) ಮಾಡುವುದನ್ನು ತಪ್ಪಿಸಿ.
– ಸಾರ್ವಜನಿಕವಾಗಿ ಹೆಚ್ಚು ಜನ ಸೇರುವ ಸ್ಥಳಗಳಿಗೆ ಅನಗತ್ಯವಾಗಿ ತೆರಳಬಾರದು.
– ಸೀನುವಾಗ ಮತ್ತು ಕೆಮ್ಮುವಾಗ ಕರವಸ್ತ್ರ ಅಥವಾ ಟಿಶ್ಯೂ ಪೇಪರ್ ಕಡ್ಡಾಯವಾಗಿ ಬಳಸಬೇಕು.

ಶಾಲೆಗಳಲ್ಲಿ ಆತಂಕ ಬೇಡ
ಬೆಂಗಳೂರಿನ ಶಾಲೆಯಲ್ಲಿ ವಿದ್ಯಾರ್ಥಿಗಳಿಗೆ ಸೋಂಕು ವ್ಯಾಪಿಸಿದೆ ಎಂಬ ವದಂತಿಗಳನ್ನು ಸಚಿವರು ತಳ್ಳಿಹಾಕಿದ್ದಾರೆ. ಶಾಲೆಯ ಇಬ್ಬರು ಶಿಕ್ಷಕರಲ್ಲಿ ಮಾತ್ರ ಲಕ್ಷಣಗಳು ಕಂಡುಬಂದಿದ್ದು, ಯಾವುದೇ ವಿದ್ಯಾರ್ಥಿಗಳಿಗೆ ಸೋಂಕು ತಗುಲಿಲ್ಲ. ಈ ಬಗ್ಗೆ ಪೋಷಕರು ಭಯಭೀತರಾಗುವ ಅಗತ್ಯವಿಲ್ಲ ಎಂದು ತಿಳಿಸಿರುವ ಇಲಾಖೆ, ಶಾಲಾ ಆವರಣಗಳಲ್ಲಿ ಸಾಂಕ್ರಾಮಿಕ ರೋಗ ಹರಡದಂತೆ ಮುನ್ನೆಚ್ಚರಿಕೆ ವಹಿಸಲು ಶಾಲಾ ಆಡಳಿತ ಮಂಡಳಿಗಳಿಗೆ ಪ್ರತ್ಯೇಕ ಮಾರ್ಗಸೂಚಿ ರವಾನಿಸಿದೆ.


Spread the love

About Laxminews 24x7

Check Also

“ದಲಿತರ 187 ಕೋಟಿ ಹಣವನ್ನು ನುಂಗಿದ ನಾಗೇಂದ್ರ ರಾಜೀನಾಮೆ ನೀಡಲೇಬೇಕು” – ವಿಧಾನಸೌಧ ಮುತ್ತಿಗೆ, ಬಿಜೆಪಿ ನಾಯಕರು ವಶ

Spread the loveಬೆಂಗಳೂರು: ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮದ ಬಹುಕೋಟಿ ಹಗರಣಕ್ಕೆ ಸಂಬಂಧಿಸಿದಂತೆ ಸಚಿವ ಬಿ. ನಾಗೇಂದ್ರ  …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ