ಢಾಕಾ: ಬಾಂಗ್ಲಾದೇಶದ ರಂಗ್‌ಪುರ ನಗರದಲ್ಲಿ ನಿವೃತ್ತ ಹಿಂದೂ ಶಿಕ್ಷಕರೊಬ್ಬರು , ಅವರ ಪತ್ನಿ, ಮಗಳು ಹಾಗೂ 12 ವರ್ಷದ ಪುತ್ರ ಸೇರಿದಂತೆ ಒಂದೇ ಕುಟುಂಬದ ನಾಲ್ವರು ಮನೆಯೊಳಗೆ ಶವವಾಗಿ ಪತ್ತೆಯಾಗಿದ್ದಾರೆ.
ಶನಿವಾರ ತಡರಾತ್ರಿ ಈ ಘಟನೆ ಬೆಳಕಿಗೆ ಬಂದಿದ್ದು, ಕುಟುಂಬದ ಸದಸ್ಯರನ್ನು ಕತ್ತು ಹಿಸುಕಿ ಹತ್ಯೆ ಮಾಡಿರುವ ಶಂಕೆಯನ್ನು ಪೊಲೀಸರು ವ್ಯಕ್ತಪಡಿಸಿದ್ದಾರೆ. ರಾತ್ರಿ ಸುಮಾರು 11:30ಕ್ಕೆ ನಾಲ್ವರ ಮೃತದೇಹಗಳನ್ನು ಪತ್ತೆಹಚ್ಚಲಾಗಿದೆ. ಮೃತರನ್ನು ರಂಗ್‌ಪುರ ಜಿಲ್ಲಾ ಶಾಲೆಯ ನಿವೃತ್ತ ಶಿಕ್ಷಕ 65 ವರ್ಷದ ಗಣಪತಿ ಚಕ್ರವರ್ತಿ, ಅವರ 50 ವರ್ಷದ ಪತ್ನಿ ಪ್ರೀತಿಲತಾ ಚಕ್ರವರ್ತಿ, 23 ವರ್ಷದ ಪುತ್ರಿ ಅಗಾಮಿ ಚಕ್ರವರ್ತಿ ಪ್ರಾರ್ಥಿ ಹಾಗೂ 12 ವರ್ಷದ ಪುತ್ರ ಪ್ರಿಯಂ ಚಕ್ರವರ್ತಿ ಎಂದು ಗುರುತಿಸಲಾಗಿದೆ ಎಂದು ರಂಗ್‌ಪುರ ಮೆಟ್ರೋಪಾಲಿಟನ್ ಕೊತ್ವಾಲಿ ಪೊಲೀಸ್ ಠಾಣೆಯ ಅಧಿಕಾರಿ ನಜ್ಮುಲ್ ಕಾದರ್ ಮಾಹಿತಿ ನೀಡಿದ್ದಾರೆ.
ಮನೆಯ ವಿವಿಧೆಡೆ ಪತ್ತೆಯಾದ ಮೃತದೇಹಗಳು:
ಪ್ರೀತಿಲತಾ ಹಾಗೂ ಅಗಾಮಿ ಅವರ ಮೃತದೇಹಗಳು ಮನೆಯ ಮೆಟ್ಟಿಲುಗಳ ಬಳಿ ಪತ್ತೆಯಾಗಿವೆ. ಗಣಪತಿ ಅವರ ಮೃತದೇಹವನ್ನು ಮನೆಯ ಮೇಲ್ಛಾವಣಿಯಲ್ಲಿ ಪತ್ತೆಹಚ್ಚಲಾಗಿದ್ದು, 12 ವರ್ಷದ ಪ್ರಿಯಂನ ಮೃತದೇಹ ಹಾಸಿಗೆಯ ಕೆಳಗೆ ಪತ್ತೆಯಾಗಿದೆ ಎಂದು ರಂಗ್‌ಪುರ ಮೆಟ್ರೋಪಾಲಿಟನ್ ಸಿಐಡಿ ಅಧಿಕಾರಿ ಸುಬೀರ್ ಚೌಧರಿ ತಿಳಿಸಿದ್ದಾರೆ.
ಪ್ರಾಥಮಿಕ ತನಿಖೆಯಲ್ಲಿ ನಾಲ್ವರನ್ನು ಕತ್ತು ಹಿಸುಕಿ ಹತ್ಯೆ ಮಾಡಿರುವ ಸಾಧ್ಯತೆ ಇದೆ ಎಂದು ಪೊಲೀಸರು ಶಂಕಿಸಿದ್ದಾರೆ. ಗುರುವಾರ ಮಧ್ಯರಾತ್ರಿಯಿಂದ ಶುಕ್ರವಾರ ಮುಂಜಾನೆ ನಡುವಿನ ಅವಧಿಯಲ್ಲಿ ಹತ್ಯೆಗಳು ನಡೆದಿರಬಹುದು ಎಂದು ಅಧಿಕಾರಿಗಳು ಅಂದಾಜಿಸಿದ್ದಾರೆ. ಘಟನೆ ಕುರಿತು ಪೊಲೀಸರು, ಸಿಐಡಿ ಹಾಗೂ ಡಿಟೆಕ್ಟಿವ್ ಬ್ರಾಂಚ್ ತಂಡಗಳು ಜಂಟಿಯಾಗಿ ತನಿಖೆ ಆರಂಭಿಸಿವೆ.
ಕುಟುಂಬದ ನಾಲ್ವರು ಸದಸ್ಯರ ಮೊಬೈಲ್ ಫೋನ್‌ಗಳು ಗುರುವಾರ ರಾತ್ರಿ ಬಳಿಕ ಸ್ವಿಚ್‌ಆಫ್ ಆಗಿದ್ದವು ಎಂದು ಸಂಬಂಧಿಕರು ತಿಳಿಸಿದ್ದಾರೆ. ಗಣಪತಿ ಅವರ ಪತ್ನಿ ಪ್ರೀತಿಲತಾ ಅವರ ಸಹೋದರಿ ಪೂಜಾ ಚಕ್ರವರ್ತಿ ಅವರು ಗುರುವಾರ ಮಧ್ಯಾಹ್ನ ಕೊನೆಯ ಬಾರಿ ತಮ್ಮ ಸಹೋದರಿಯೊಂದಿಗೆ ಮಾತನಾಡಿದ್ದರು. ಬಳಿಕ ಫೋನ್‌ಗಳು ಸಂಪರ್ಕಕ್ಕೆ ಸಿಗದ ಹಿನ್ನೆಲೆಯಲ್ಲಿ ಶನಿವಾರ ರಾತ್ರಿ ಸಂಬಂಧಿಕರು ಮನೆಯ ಬಳಿಗೆ ತೆರಳಿದ್ದಾರೆ.
ಮನೆಯ ಮುಖ್ಯ ಗೇಟ್ ಒಳಗಿನಿಂದ ಲಾಕ್ ಆಗಿತ್ತು. ಮನೆಯೊಳಗಿನ ದೀಪಗಳೂ ಆರಿಸಲಾಗಿದ್ದವು. ಪೊಲೀಸರು ಸ್ಥಳಕ್ಕೆ ಆಗಮಿಸಿ ಬೀಗ ಒಡೆದು ಮನೆಯೊಳಗೆ ಪ್ರವೇಶಿಸಿದಾಗ ನಾಲ್ವರ ಮೃತದೇಹಗಳು ಪತ್ತೆಯಾಗಿವೆ.
ಕುಟುಂಬವು ಇತ್ತೀಚೆಗಷ್ಟೇ ಆ ಪ್ರದೇಶದಲ್ಲಿ ಹೊಸ ಮನೆಯನ್ನು ನಿರ್ಮಿಸಿತ್ತು. ಗಣಪತಿ ಚಕ್ರವರ್ತಿಗೆ ಯಾರೊಂದಿಗೂ ವೈಮನಸ್ಸು ಇತ್ತು ಎಂಬ ಮಾಹಿತಿ ತಮಗೆ ತಿಳಿದಿಲ್ಲ ಎಂದು ಪೂಜಾ ತಿಳಿಸಿದ್ದಾರೆ.
ನಿವೃತ್ತಿಯ ಬಳಿಕ ಹೋಮಿಯೋಪತಿ ಚಿಕಿತ್ಸೆ ನೀಡುತ್ತಿದ್ದ ಶಿಕ್ಷಕ:
ಗಣಪತಿ ಚಕ್ರವರ್ತಿ 2025ರ ಡಿಸೆಂಬರ್ 31ರಂದು ರಂಗ್‌ಪುರ ಜಿಲ್ಲಾ ಶಾಲೆಯ ಶಿಕ್ಷಕ ಹುದ್ದೆಯಿಂದ ನಿವೃತ್ತರಾಗಿದ್ದರು. ನಿವೃತ್ತಿಯ ಬಳಿಕ ಅವರು ಹೋಮಿಯೋಪತಿ ವೈದ್ಯಕೀಯ ಸೇವೆ ನೀಡುತ್ತಿದ್ದರು ಎಂದು ಅವರ ಸಂಬಂಧಿಕರು ತಿಳಿಸಿದ್ದಾರೆ.
ಅವರ ಪುತ್ರಿ ಅಗಾಮಿ ಈ ವರ್ಷ ರಂಗ್‌ಪುರ ಕಾಲೇಜಿನಲ್ಲಿ ಇಂಗ್ಲಿಷ್ ವಿಷಯದಲ್ಲಿ ಸ್ನಾತಕೋತ್ತರ ಪದವಿ ಪೂರ್ಣಗೊಳಿಸಿದ್ದರು. ಪುತ್ರ ಪ್ರಿಯಂ ರಂಗ್‌ಪುರ ಜಿಲ್ಲಾ ಶಾಲೆಯಲ್ಲಿ 5ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದ. ಗಣಪತಿ ಅವರಿಗೆ ಯಾವುದೇ ಶತ್ರುಗಳಿರಲಿಲ್ಲ ಎಂದು ಅವರ ಸೋದರ ಸೊಸೆ ಸೋಮಾ ಚಕ್ರವರ್ತಿ ಹೇಳಿದ್ದಾರೆ.
ಮೂರು ಅಂತಸ್ತಿನ ಮನೆ ನಿರ್ಮಿಸಿದ್ದ ಕುಟುಂಬ:
ಕುಟುಂಬವು ಕಳೆದ ನಾಲ್ಕು ವರ್ಷಗಳಿಂದ ಆ ಪ್ರದೇಶದಲ್ಲಿ ವಾಸಿಸುತ್ತಿತ್ತು. ಗಣಪತಿ ಅವರು ಮೂರು ಅಂತಸ್ತಿನ ಮನೆಯನ್ನು ನಿರ್ಮಿಸಿದ್ದರು. ಆದರೆ ಕಟ್ಟಡದ ಕಾಮಗಾರಿ ಇನ್ನೂ ಸಂಪೂರ್ಣವಾಗಿ ಮುಗಿದಿರಲಿಲ್ಲ ಎಂದು ಸ್ಥಳೀಯ ನಿವಾಸಿ ಸುಧಾಂಶು ಚಂದ್ರ ದಾಸ್ ತಿಳಿಸಿದ್ದಾರೆ.
ಮರಣದ ನಿಖರ ಕಾರಣ ಮರಣೋತ್ತರ ಪರೀಕ್ಷೆಯ ವರದಿ ಬಂದ ಬಳಿಕವೇ ಸ್ಪಷ್ಟವಾಗಲಿದೆ. ನಾಲ್ವರು ಹೇಗೆ ಮೃತಪಟ್ಟರು ಮತ್ತು ಘಟನೆಗೆ ಯಾರು ಕಾರಣ ಎಂಬುದನ್ನು ಪತ್ತೆಹಚ್ಚಲು ಡಿಟೆಕ್ಟಿವ್ ಬ್ರಾಂಚ್ ಅಧಿಕಾರಿಗಳು ತನಿಖೆ ಮುಂದುವರಿಸಿದ್ದಾರೆ.
Laxmi News 24×7