ಬಾಗಲಕೋಟೆ : ಇತಿಹಾಸದ ಘಟನೆಗಳನ್ನು ಸ್ಮರಿಸುವುದು ಮುಖ್ಯ . ರಾಜರು ಸ್ಮರಣೆಗಾಗಿ ಕಟ್ಟಿದ ಸ್ಮಾರಕಗಳನ್ನು ರಕ್ಷಿಸುವುದು ನಮ್ಮೆಲ್ಲರ ಕರ್ತವ್ಯ ಎಂದು ಕಲಾದಗಿಯ ಸರಕಾರಿ ಪ್ರಥಮ ದರ್ಜೆ ಮಹಾವಿದ್ಯಾಲಯದ ಇತಿಹಾಸ ವಿಭಾಗದ ಸಹ ಪ್ರಾಧ್ಯಾಪಕಿ ಡಾ. ಸರೋಜಿನಿ ಹೊಸಕೇರಿ ಹೇಳಿದರು.
ನಗರದ ಬಿವಿವಿ ಸಂಘದ ಬಸವೇಶ್ವರ ಕಲಾ ಮಹಾವಿದ್ಯಾಲಯದ ರಾಷ್ಟ್ರೀಯ ಸೇವಾ ಯೋಜನೆ ಘಟಕಗಳಿಂದ ದತ್ತು ಗ್ರಾಮವಾದ ಯಡಹಳ್ಳಿಯ ಶ್ರೀ ಗುರು ಅಜಾತ ನಾಗಲಿಂಗೇಶ್ವರ ಸಾಧುಮಠದಲ್ಲಿ ಹಮ್ಮಿಕೊಂಡ ವಾರ್ಷಿಕ ವಿಶೇಷ ಶಿಬಿರದ ಎರಡನೇ ದಿನದ ಕಾರ್ಯಕ್ರಮದಲ್ಲಿ ಐತಿಹಾಸಿಕ ಸ್ಮಾರಕಗಳ ಸಂರಕ್ಷಣೆ ಕುರಿತು ಉಪನ್ಯಾಸ ನೀಡಿದ ಅವರು ಇತಿಹಾಸ ಎಂಬುದು ಪುರಾತನವಾದದ್ದು. ಸ್ಮಾರಕಗಳ ಗುಣಮಟ್ಟವನ್ನು ಅರಿತುಕೊಳ್ಳಬೇಕು. ಕಟ್ಟಡಗಳ ಸೂಕ್ಷ್ಮ ವೀಕ್ಷಣೆ ಮಾಡಬೇಕು. ಸ್ಮಾರಕಗಳು ಅತ್ಯಮೂಲ್ಯವಾದ ಮೌಲ್ಯಗಳನ್ನು ಹೊಂದಿವೆ. ರಾಜ ಮಹಾರಾಜರ ಸಾಮಾಜಿಕ ಜೀವನ, ಆಳ್ವಿಕೆ, ಆದರ್ಶ, ನೈತಿಕ ಮೌಲ್ಯಗಳನ್ನು ವಸ್ತುಸಂಗ್ರಹಾಲದಲ್ಲಿ ಕಾಣಬಹುದಾಗಿದೆ ಎಂದರು.
ಇಂದು ಹಸ್ತಪ್ರತಿ, ನಾಣ್ಯಗಳು ಮತ್ತು ಇತರ ದಾಖಲೆಗಳು ಇತಿಹಾಸವನ್ನು ಸಾರುವ ಕುರುಹುಗಳಾಗಿವೆ. ಅಂದಿನ ನಾಣ್ಯಗಳ ಮೇಲಿನ ಲಾಂಛನಗಳು ರಾಜರ ಸಾಧನೆ ಮತ್ತು ಅವರ ಬಿರುದುಗಳನ್ನು ಸಾರುತ್ತವೆ. ವಿಜಯದ ಪ್ರತೀಕವಾಗಿ ವಜ್ರ ವೈಡುರ್ಯದಿಂದ ಸ್ಮಾರಕಗಳನ್ನು, ಶಿಲಾಮೂರ್ತಿಗಳನ್ನು ನಿರ್ಮಿಸಿದ್ದು ಅಂದಿನ ವೈಭೋಗವನ್ನು ಮುಂದಿನ ಪೀಳಿಗೆಗೆ ಕೊಂಡೊಯ್ಯುವುದು ಎಲ್ಲರ ಹೊಣೆಯಾಗಿದ್ದು. ಸಿಕ್ಕ ದಾಖಲೆಗಳನ್ನು ಸರಕಾರಕ್ಕೆ ಒಪ್ಪಿಸುವ ಕೆಲಸ ಮಾಡಬೇಕಿದೆ ಎಂದರು.
ಅಧ್ಯಕ್ಷತೆ ವಹಿಸಿದ ಕನ್ನಡ ವಿಭಾಗದ ಮುಖ್ಯಸ್ಥರಾದ ಡಾ. ಆರ್.ನಾಗರಾಜು ಅವರು ಮಾತನಾಡಿ ಇತಿಹಾಸ ಬಹಳ ವಿಶೇಷವಾಗಿದೆ. ರಾಜರು ನಿರ್ಮಿಸಿದ ಕಟ್ಟಡಗಳನ್ನು ನೋಡಿದಾಗ ಮನಸ್ಸಿನಲ್ಲಿ ಸುಮಧುರ ಭಾವನೆ ಮೂಡುತ್ತವೆ. ಇತಿಹಾಸದಲ್ಲಿ ಸಂಗೀತಕ್ಕೆ ಹೆಚ್ಚಿನ ಪ್ರಾಶಸ್ತ್ಯವಿತ್ತು. ಹೊಸ ಹೊಸ ವಿಚಾರಗಳನ್ನು ನೀಡುತ್ತವೆ ಅವುಗಳನ್ನು ಅಧ್ಯಯನ ಮಾಡಬೇಕು. ಶಿಬಿರಾರ್ಥಿಗಳು ಜನರು ನೆನಪಿಡುವ ಕೆಲಸವನ್ನು ಮಾಡಬೇಕು ಎಂದರು.
ಗ್ರಾಮದ ಪ್ರಮುಖರು ಅಶೋಕ್ ಮೇಟಿ ಅವರು ಮಾತನಾಡಿ ಶಿಬಿರದ ಮಹತ್ವದ ಅರಿವು ಮುಖ್ಯ. ಪಠ್ಯದ ಜೊತೆಗೆ ಪಠ್ಯೇತರ ಚಟುವಟಿಕೆ ಅಗತ್ಯ. ಸಾಧನೆ ಮಾಡಲು ಶಿಬಿರವೊಂದು ವೇದಿಕೆ. ವಿದ್ಯೆಯನ್ನು ಬೇಡುವವನು ವಿದ್ಯಾರ್ಥಿ. ಕಲಿಯುಗದಲ್ಲಿನ ಸ್ಮಾರಕಗಳನ್ನು ಸ್ಮರಿಸೋಣ ಎಂದರು.
ಸ್ನಾತಕೋತ್ತರ ಇಂಗ್ಲೀಷ್ ವಿಭಾಗದ ಸಂಯೋಜಕ ಡಾ. ಎಮ್. ಎಸ್. ಸಜ್ಜನರ, ಸ್ನಾತಕೋತ್ತರ ಕನ್ನಡ ವಿಭಾಗದ ಸಂಯೋಜಕ ಡಾ. ಬಸವರಾಜ ಕುಂಬಾರ, ಎನ್ಎಸ್ಎಸ್ ಘಟಕದ ಅಧಿಕಾರಿ ಡಾ.ಎಮ್.ಎಚ್.ವಡ್ಡರ ಸೇರಿದಂತೆ ಬೋಧಕ – ಬೋಧಕೇತರ ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
Laxmi News 24×7