Breaking News

ಸಮಜಾವೇ ನನ್ನ ಕುಟುಂಬ : ಮಠಕ್ಕೆ ಭಕ್ತರಾಗಿ ಬನ್ನಿ

Spread the love

ಬಾಗಲಕೋಟೆ: ಸಮಾಜವನ್ನೇ ಕುಟುಂಬ ಮಾಡಿಕೊಂಡು ಶ್ರಮಿಸುವ ಕೆಲಸ ಮಠಾಧಿಪತಿಯದಾಗಿದ್ದು ಮಠಕ್ಕೆ ಬರುವಾಗ ರಾಜಕೀಯ ವ್ಯಕ್ತಿಗಳಾಗದೇ ಭಕ್ತರಾಗಿ ಬನ್ನಿ ಎಂದು ನೂತನ ಚರಪಟ್ಟಾಧಿಕಾರಿಯಾದ ಶ್ರೀ ಮಲ್ಲಿಕಾರ್ಜುನ ಸ್ವಾಮಿಗಳು ಗುರು ಶ್ರೀ ರೇವಣಸಿದ್ದ ಸ್ವಾಮಿಗಳು ಹೇಳಿದರು.

ನಗರದ ಟೀಕಿನಮಠದ ಮಲ್ಲಿಕಾರ್ಜುನ ದೇಶಿಕರ ನಿರಂಜನ ಚರಪಟ್ಟಾಧಿಕಾರ ಮಹೋತ್ಸವ ನಿಮಿತ್ಯ ಚರಂತಿಮಠದ ಆವರಣದಲ್ಲಿ ರವಿವಾರ ಹಮ್ಮಿಕೊಂಡಿದ್ದ ಶೂನ್ಯಪೀಠಾರೋಹಣ ಕಾರ್ಯಕ್ರಮದಲ್ಲಿ ವಿರಕ್ತಮಠದ ಶ್ರೀ ಜಡೆಯ ಶಾಂತಲಿಂಗೇಶ್ವರ ಲಿಂಗಹಸ್ತದಿಂದ ಚಿರಪಟ್ಟಾಧಿಕಾರ ಪಡೆದು ಶೂನ್ಯಪೀಠಾರೋಹಣ ಮಾಡಿ ಅವರು ಮಾತನಾಡಿದರು. ಗುರುವಿಗಾಗಿ ತಾವು ಮಾಡಿದ ಶ್ರಮ ಸ್ಮರಣಾದಾಯಕವಾಗಿದೆ. ತಮ್ಮ ಮುಡಿಗೆ ಹೂ ತಾರದೇ ಹುಲ್ಲನೆಂದು ತರಲಾರೆ. ಸಮಾಜದ ಮಗುವಾಗಿ ತಮ್ಮ ಮಧ್ಯೆ ಇದ್ದು ಸಾಮಾಜವನ್ನು ಕುಟುಂಬವಾಗಿಸಿ ಶ್ರಮಿಸುವ ಕೆಲಸವನ್ನು ಮಾಡುತ್ತೇನೆ. ಕಾವಿ ಜೀವನಕ್ಕೆ ಶಕ್ತಿಯಾದ ಕುರಾಸ್ವಾಮಿಗಳು, ಬಸವಣ್ಣ, ನಿಜಗುಣ ಸ್ವಾಮಿಗಳ ಮಾರ್ಗದಲ್ಲಿ ನಡೆದು ಟೀಕಿನಮಠ ಟೆಂಗಿನಮಠದ ಪರಂಪರೆಯನ್ನು ಮುನ್ನಡಿಸುವ ಜವಾಬ್ದಾರಿ ತೆಗೆದುಕೊಂಡಿದ್ದು ಬಾಗಲಕೋಟೆ ಭಕ್ತರ ಸಹಕಾರ ಅತ್ಯಗತ್ಯ. ಪಿಠಾಧಿಪತಿ ಎಂದರೆ ವಿಷ ಕುಡಿದ ನಂಜಿನ ಜೀವನ ಇದ್ದಂತೆ. ಸರ್ವರನ್ನೂ ಸಮಾರನ್ನಾಗಿಸಿಕೊಂಡು ಹೋಗುವ ಹೊಣೆ ಮಠಗಳಿಗಿದ್ದು ಮಠಕ್ಕೆ ಬರುವಾಗ ಭಕ್ತರಾಗಿ ಬನ್ನಿ ಯಾರೂ ರಾಜಕೀಯವನ್ನು ತೆಗೆದುಕೊಂಡು ಬರಬೇಡಿ ಎಂದರು.

ಪಟ್ಟಾಧಿಕಾರ ಸಮಿತಿಯ ಗೌರವಾಧ್ಯಕ್ಷರಾದ ಚರಂತಿಮಠದ ಪ್ರಭುಸ್ವಾಮಿಗಳು ಮಾತನಾಡಿ ಗುರು ತನ್ನ ಶಕ್ತ ಮತ್ತು ಸ್ಥಾನವನ್ನು ಶಿಷ್ಯನಿಗೆ ನೀಡುವುದರ ಮೂಲಕ ಶಿಷ್ಯನನ್ನು ಗುರುವಾಗಿಸುವುದು ಶೂನ್ಯಪೀಠಾರೋಹಣ ಆಗಿದೆ. ಎಲ್ಲವೂ ಇದ್ದು ಎಲ್ಲವನ್ನು ಸಮಾಜಕ್ಕೆ ಅರ್ಪಣೆ ಮಾಡಿ ಶೂನ್ಯಭಾವದಿಂದ ದೇವರಿಗೆ ಶರಣಾಗುವುದು ಶೂನ್ಯಪೀಠದ ಉದ್ದೇಶವಾಗಿದ್ದು ಗುರುವನ್ನು ಮುಟ್ಟಿ ಶಿಷ್ಯ ಗುರುವಾಗುತ್ತಾರೆ ಇಲ್ಲಿ ದೊಡ್ಡವರು ಚಿಕ್ಕವರು ಎಂಬ ಭೇದವಿಲ್ಲದೆ ಶರಣರೆಲ್ಲರು ಸಮಾನರಾಗುತ್ತಾರೆ. ಪಟ್ಟಾಧಿಕಾರದ ಬಳಿಕ ಈಗ ಮಲ್ಲಿಕಾರ್ಜುನ ದೇಶಿಕರು ಶ್ರೀ ಮಲ್ಲಿಕಾರ್ಜುನ ಸ್ವಾಮಿಗಳು ಗುರು ಶ್ರೀ ರೇವಣಸಿದ್ದ ಸ್ವಾಮಿಗಳಾಗಿ ಮರುನಾಮಕರಣದಿಂದ ಸಮಾಜಕ್ಕಾಗಿ ಶ್ರಮಿಸಲಿದ್ದಾರೆ ಎಂದರು.

ಚಿತ್ರದುರ್ಗ ಸಂಸದರಾದ ಗೋವಿಂದ ಕಾರಜೋಳ ಅವರು ಮಾತನಾಡಿ ಟೆಂಗಿನಮಠ ಟೀಕಿನಮಠ ಸಂಪ್ರದಾಯದಿಂದ ಕೂಡಿದ ಮಠವಾಗಿದೆ. ಬ್ರಹ್ಮಜ್ಞಾನಕ್ಕಾಗಿ ಆಶ್ರಮ, ಗುರುಕುಲಗಳು ಹುಟ್ಟಿಕೊಂಡವು. 19 ಮತ್ತು 20 ನೇ ಶತಮಾನದ ಪೂರ್ವ ಮಠಾಧೀಶರ ಕೆಲಸವನ್ನು ಇಡೀ ಮಾನವ ಕುಲ ಮರೆಯಲು ಸಾಧ್ಯವಿಲ್ಲ. ಸಮಾಜದ ಏಳಿಗೆಗಾಗಿ, ಕಲ್ಯಾಣಕ್ಕಾಗಿ ಮಠಗಳಿಂದ ಶಿಕ್ಷಣ ಸಂಸ್ಥೆಗಳನ್ನು ಸ್ಥಾಪಿಸಲಾಯಿತು. ಮಾನವ ಕುಲಕೋಟಿಗಾಗಿ ಬಸವಣ್ಣ, ಅಲ್ಲಮ ಪ್ರಭು ಅವರು ವಚನದಲ್ಲಿನ ಕಾಯಕದ ಸಾರಾಂಶವನ್ನು ಅರಿಯಬೇಕು. ಜಾತಿ, ಕುಲವನ್ನು ಬದಿಗಿಟ್ಟುಕೊಂಡು, ಇತಿಹಾಸದ ಪುಟವನ್ನು ಮುಂದಿನ ಪೀಳಿಗೆಗೆ ಪರಿಚಯಿಸಿ ಕೊಡಬೇಕು. ಬಸವೇಶ್ವರ ವೀರಶೈವ ವಿದ್ಯಾವರ್ಧಕ ಸಂಘದ ಏಳಿಗೆಯನ್ನು, ಬೀಳೂರು ಅಜ್ಜನ ಆಶಯವನ್ನು ವೀರಣ್ಣ ಚರಂತಿಮಠ ಈಡೇರಿಸುತ್ತಿದ್ದಾರೆ. ಐವತ್ತು ಸಾವಿರ ಮಕ್ಕಳಿಗೆ ಜ್ಞಾನ ದಾಸೋಹ ನೀಡುತ್ತಿರುವುದು ಹೆಮ್ಮೆಯ ವಿಷಯ ಎಂದರು.

ಚರಪಟ್ಟಾಧಿಕಾರ ಸಮಿತಿ ಕಾರ್ಯಾದ್ಯಕ್ಷರಾದ ಡಾ.ವೀರಣ್ಣ ಚರಂತಿಮಠ ಅವರು ಮಲ್ಲಿಕಾರ್ಜುನ ದೇಶಿಕರ ನಿರಂಜನ ಚರಪಟ್ಟಧೀಕಾರದ ಸಂಪುಟ ಪತ್ರನೀಡಿ ಮಠದ ಜವಾಬ್ದಾರಿಯನ್ನು ನೀಡಿ ಮಾತನಾಡಿ ಪಟ್ಟಾಭಿಷೇಕ ಕಾರ್ಯಕ್ರಮದಿಂದ ಬಾಗಲಕೋಟೆಯಲ್ಲಿ ಧಾರ್ಮಿಕ ಜಾಗೃತಿಯಾಗಿದೆ. ಸಮಾಜಕ್ಕೆ ಸ್ವಾಮಿಯ ಪರಿಚಯ ಆಗಬೇಕಾದರೆ ತಪಸ್ಸು, ಪೂಜಾನಿಷ್ಠ, ಶಿವನಪೂಜೆ, ಅನುಷ್ಠಾನವನ್ನು ಮಾಡಬೇಕು. ಸ್ವಾಮಿಗಳ ಪಟ್ಟವನ್ನು ಧರಿಸಬೇಕಾದರೆ ಮಾತಿನ ಮೇಲೆ ಹಿಡಿತ ಮೈ ತುಂಬಾ ಕಣ್ಣು ಇದ್ದಾಗ ಮಾತ್ರ ಸಮಾಜದಲ್ಲಿ ನಂಬಿಕಸ್ಥ ಸ್ವಾಮಿಯಾಗಲು ಸಾಧ್ಯ. ಹಾನಗಲ್ ನಿರಂಜನ್ ಮಹಾಸ್ವಾಮಿಗಳ, ಜಡೆಯ ಶಾಂತಲಿಂಗೇಶ್ವರ ಮಹಾಸ್ವಾಮಿಗಳ ಚರಿತ್ರೆಯನ್ನು ಓದಿದರೆ ಜೀವನದಲ್ಲಿ ಹೇಗೆ ಬದುಕಬೇಕು ಎಂಬುದು ತಿಳಿಯುತ್ತದೆ. ಶಿವಕುಮಾರ ಸ್ವಾಮಿಗಳು ಜೀವನ ಬದುಕಿಗೆ ಸಂದೇಶವಾಗಿದ್ದು 1100 ಹಾಸಿಗೆಯ ಆಸ್ಪತ್ರೆ ಮತ್ತು ನಾಲ್ಕು ನೂರು ಹಾಸಿಗೆಯ ಸೂಪರ್ ಸ್ಪೆಶಲಿಟಿ ಆಸ್ಪತ್ರೆಯನ್ನು ಅವರ ಹೆಸರಿನಲ್ಲಿ ತೆಗೆಯುವುದರ ಮೂಲಕ ಬಿವಿವಿ ಸಂಘ ಕುಮಾರಸ್ವಾಮಿಗಳಿಗೆ ಗುರು ಕಾಣಿಕೆ ನೀಡಿದೆ ಎಂದರು.
ವೇದಿಕೆ ಮೇಲೆ ಹುಬ್ಬಳ್ಳಿಯ ಎರಡೆತ್ತಿನಮಠದ ಸಿದ್ಧಲಿಂಗ ಸ್ವಾಮಿಗಳು, ಹುಬ್ಬಳ್ಳಿಯ ರುದ್ರಾಕ್ಷಿಮಠದ ಬಸವಲಿಂಗ ಸ್ವಾಮಿಗಳು,ಗುಳೇದಗುಡ್ಡ ಮುರಾಘಾಮಠದ ಕಾಶೀನಾಥ ಸ್ವಾಮಿಗಳು, ನವಲಗುಂದ ಗವಿಮಠದ ಬಸವಲಿಂಗ ಸ್ವಾಮಿಗಳು, ಗುಳೇದಗುಡ್ಡ ಬೃಹನ್ಮಠದ ಗುರುಸಿದ್ಧ ಪಟ್ಟದಾರ್ಯ,ಗುರಗುಂಟಾ ಸದಾನಂದ ಶಿವಾಚಾರ್ಯ, ಗುಳೇದಗುಡ್ಡ ಒಪ್ಪತ್ತೇಶ್ವರ ಸ್ವಾಮಿಜಿ, ಬೀಳಗಿ ಕಲ್ಮಠದ ಗುರುಪಾದ ಶಿವಾಚಾರ್ಯ ದೇವರು, ಬೆಳಗಾವಿ ಕಾರಂಜಿಮಠದ ಶಿವಯೋಗಿ ದೇವರು, ಗುಣದಾಳದ ಡಾ. ವಿವೇಕಾನಂದ ದೇವರು, ಲೋಕಾಪುರದ ಚಂದ್ರಶೇಖರ ಸ್ವಾಮಿಗಳು, ಅನವಾಲದ ಕೈಲಾಸಪತಿ ಸ್ವಾಮಿಗಳು, ಅಖಿಲ ಭಾರತ ವೀರಶೈವ ಮಹಾಸಭಾದ ಜಿಲ್ಲಾಧ್ಯಕ್ಷ ಜಿ,ಎನ್,ಪಾಟೀಲ, ಬಿವಿವಿ ಸಂಘದ ಗೌರವ ಕಾರ್ಯದರ್ಶಿ ಮಹೇಶ ಎನ್.ಅಥಣಿ,ಅಶೋಕ ಎಮ್.ಸಜ್ಜನ. ಡಾ,ಬಸವರಜಾ ಕೆರೂಡಿ,ಅನಸೂಯಾ ಕೆರೂಡಿ, ಸೇರಿದಂತೆ ಟೀಕಿನಮಠ ಭಕ್ತ ಮಂಡಳಿಯವರು ಭಾಗವಹಿಸಿದ್ದರು.

ಷಟಸ್ಥಲ ಬ್ರಹ್ಮೋಪದೇಶ : ಬೆಳಗಿನ ಜಾವ ಟೀಕಿನಮಠದಲ್ಲಿ ವಿವಿಧ ಪೂಜ್ಯರ ಸಮ್ಮುಖದಲಿ ಉತ್ತರಾಧಿಕಾರಿಯಾದ ಮಲ್ಲಿಕಾರ್ಜುನ ಪೂಜ್ಯರಿಗೆ ನಿಂಬಾಳ ಹಾಗೂ ಬೆಂಗಳೂರಿನ ಸಮಾಧಾನ ಆಶ್ರಮದ ಪೂಜ್ಯರಾದ ಮೌನಯೋಗಿ ಜಡೆಯ ಶಾಂತಲಿಂಗ ಮಹಾಸ್ವಾಮಿಗಳ ಅಮೃತ ಹಸ್ತದಿಂದ ಷಟಸ್ಥಳ ಬ್ರಹ್ಮೋಪದೇಶವನ್ನು ಶಾಸ್ತ್ರೋಕ್ತವಾಗಿ ನೆರವೇರಿಸಿದರು,

ಸಂಭ್ರಮದ ಅಡ್ಡಪಲ್ಲಕ್ಕಿ ಉತ್ಸವ: ಬೀಳೂರ ಅಜ್ಜನ ಗುಡಿಯಿಂದ ಪ್ರಾರಂಭವಾದ ಟೀಕಿನಮಠದ ಪೂಜ್ಯರಾದ ಮಲ್ಲಿಕಾರ್ಜುನ ಸ್ವಾಮಿಗಳು ಗುರು ರೇವಣಸಿದ್ದಸ್ವಾಮಿಗಳ ಅಡ್ಡಪಲ್ಲಕ್ಕಿ ಉತ್ಸವ ಪ್ರಾರಂಭವಾಗಿ ಬಸವೇಶ್ವರ ವೃತ್ತ, ಮಹಾತ್ಮಾ ಗಾಂದಿ ರಸ್ತೆ, ಪೊಲೀಸ್ ಚೌಕಿ, ಅಡತ ಬಜಾರ, ಮೂಲಕ ಟೀಕಿನಮಠಕ್ಕೆ ಸಮಾರೋಪಗೊಂಡಿತು, ಮಹಿಳೆಯರ 1008 ಕುಂಭ ಮೇಳ ಗಮನಸೇಳೆಯಿತು. ವಿವಿಧ ಸಾಂಸ್ಕೃತಿಕ ತಂಡಗಳು ಸೇರಿದಂತೆ ಸಹಸ್ರಾಜು ಜನ ಭಕ್ತರು ಅಡ್ಡಪಲ್ಲಕ್ಕಿ ಉತ್ಸವದಲ್ಲಿ ಭಾಗವಹಿಸಿವು.


Spread the love

About Laxminews 24x7

Check Also

ಸಂತ್ರಸ್ತರ ಸೂರಿಗಾಗಿ ಕೊಟ್ಟ ‌ಜಾಗದಲ್ಲಿ ಮಸೀದಿ ನಿರ್ಮಾಣ: ಬಾಗಲಕೋಟೆಯಲ್ಲಿ ಭುಗಿಲೆದ್ದ ಆಕ್ರೋಶ

Spread the loveಬಾಗಲಕೋಟೆ: ಬಾಗಲಕೋಟೆ  ಜನರು ಆಲಮಟ್ಟಿ ಜಲಾಶಯಕ್ಕೆ ಮನೆ ಮಠ ಆಸ್ತಿ ಪಾಸ್ತಿ ಹಿರಿಯರ ಕನಸು ಎಲ್ಲವನ್ನು ಕೃಷ್ಣಾರ್ಪಣೆ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ