ಕೊಪ್ಪಳ: ತಾಲೂಕಿನ ಕೂಕನಪಳ್ಳಿ ಗ್ರಾಮದಲ್ಲಿ ಸ್ಪಿರಿಟ್ ಕುಡಿದು ಇಬ್ಬರು ಯುವಕರು ಮೃತಪಟ್ಟಿದ್ದಾರೆ. ಮತ್ತೊಬ್ಬ ಸಾವು ಬದುಕಿನ ನಡುವೆ ಹೋರಾಟ ನಡೆಸುತ್ತಿದ್ದಾನೆ.
ಕೂಕನಪಳ್ಳಿ ಗ್ರಾಮದ ಅಮರಯ್ಯ ಹಿರೇಮಠ (35) ಹಾಗೂ ರಮೇಶ ಹೊಸಹಳ್ಳಿ (25) ಮೃತಪಟ್ಟಿದ್ದು, ಶರಣಪ್ಪ ಹಂಚಿನಾಳ ಎಂಬವನ ಸ್ಥಿತಿ ಚಿಂತಾಜನಕವಾಗಿದೆ. ಮೃತ ಅಮರಯ್ಯ ಜೆಸ್ಕಾಂ ಹೊರಗುತ್ತಿಗೆ ನೌಕರನಾಗಿ ಕೆಲಸ ಮಾಡುತ್ತಿದ್ದ. ರಮೇಶ ಹೊಸಹಳ್ಳಿ ತಂದೆ – ತಾಯಿಗೆ ಒಬ್ಬನೇ ಮಗನಾಗಿದ್ದ. ಮಕ್ಕಳನ್ನು ಕಳೆದುಕೊಂಡ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.
ಘಟನೆಗೆ ಸಂಬಂಧಿಸಿದಂತೆ ಮೃತರ ಜೊತೆಗೆ ರಾತ್ರಿ ಊಟ ಮಾಡಿದ್ದ ಮತ್ತು ಎಲ್ಲರಿಗೂ ಸ್ಪಿರಿಟ್ ಕುಡಿಸಿದ್ದ ಮಾರುತಿ ಬಂಡಿ ಹಾಗೂ ಶರಣಪ್ಪ ಗುರಿಕಾರ ಎಂಬವರನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ.

ಘಟನೆ ವಿವರ: ಐವರು ಸ್ನೇಹಿತರು ಕಳೆದ ಫೆ.4 ರಂದು ಪಾರ್ಟಿ ಮಾಡಿದ್ದರು. ಅಮರಯ್ಯ ಹಿರೇಮಠ ಹಾಗೂ ಶರಣಪ್ಪ ಹಂಚಿನಾಳ ಸ್ಪಿರಿಟ್ ಕುಡಿದಿದ್ದಾರೆ. ಆದರೆ, ಮಾರುತಿ ಬಂಡಿ, ಶರಣಪ್ಪ ಗುರಿಕಾರ ಹಾಗೂ ರಮೇಶ್ ಸ್ಪಿರಿಟ್ ಕುಡಿದಿರಲಿಲ್ಲ. ಮರು ದಿನವೇ ಸ್ಪಿರೀಟ್ ಕುಡಿದಿದ್ದ ಇಬ್ಬರೂ ಅಸ್ವಸ್ಥಗೊಂಡಿದ್ದು, ಹುಬ್ಬಳ್ಳಿಯ ಕಿಮ್ಸ್‌ನಲ್ಲಿ ದಾಖಲಾಗಿದ್ದರು. ಈ ಪೈಕಿ ಅಮರಯ್ಯ ಮೃತಪಟ್ಟಿದ್ದು, ಪೊಲೀಸರು ಜೊತೆಗಿದ್ದ ಮೂವರನ್ನು ವಶಕ್ಕೆ ಪಡೆದು ವಿಚಾರಣೆ ಮಾಡಿದ್ದಾರೆ. ಇದರಿಂದ ಆತಂಕಗೊಂಡ ರಮೇಶ ಪೊಲೀಸ್ ಠಾಣೆಯಿಂದ ಮನೆಗೆ ಬಂದು ಮತ್ತದೇ ಸ್ಪಿರೀಟ್ ಸೇವನೆ ಮಾಡಿ ಅಸ್ವಸ್ಥಗೊಂಡು ಮೃತಪಟ್ಟಿದ್ದಾನೆ. ಇದೀಗ ಇಬ್ಬರನ್ನೂ ವಶಕ್ಕೆ ಪಡೆದಿರುವ ಪೊಲೀಸರು ತನಿಖೆ ಮುಂದುವರೆಸಿದ್ದಾರೆ.
ಕೊಪ್ಪಳ ತಾಲೂಕಿನ ದದೇಗಲ್ ಗ್ರಾಮದ ವಾಟರ್ ಸರ್ವಿಸ್ ಮಾಡುವ ಮಾರುತಿ ಬಂಡಿ ಸ್ಪಿರಿಟ್ ತಂದಿದ್ದು, ಸರಾಯಿ ಎಂದು ಹೇಳಿ ಎಲ್ಲರಿಗೂ ಕೊಟ್ಟಿದ್ದಾನೆ. ಅವನ ಮಾತು ನಂಬಿದ ರಮೇಶ, ಶರಣಪ್ಪ ಹಂಚಿನಾಳ, ಅಮರಯ್ಯ ಹಿರೇಮಠ ಗ್ರಾಮದ ಹೊಲದಲ್ಲಿ ಬುಧವಾರ (ಫೆ.4) ರಾತ್ರಿ ಕುಡಿದು ಅಸ್ವಸ್ಥಗೊಂಡಿದ್ದರು. ಈ ಸಂಬಂಧ ಮೃತ ರಮೇಶ ತಂದೆ ಯಮನಪ್ಪ ಹೊಸಹಳ್ಳಿ ನೀಡಿದ ದೂರಿನ ಅನ್ವಯ ಮುನಿರಾಬಾದ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕಳೆದ 15 ದಿನಗಳ ಹಿಂದೆಯೆ ಮಾರುತಿ ಸ್ಪಿರಿಟ್ ಸಂಗ್ರಹಿಸಿದ್ದ ಎನ್ನಲಾಗಿದೆ. ಪೊಲೀಸರು ಮಾತ್ರ ಅದು ಗೋವಾದ ಕಾಜು ಮದ್ಯ ಎಂದುಕೊಂಡು ಸ್ಪಿರಿಟ್ ಸೇವನೆ ಮಾಡಿದ್ದಾರೆ ಎನ್ನುತ್ತಿದ್ದಾರೆ. ಸ್ಪಿರಿಟ್ ಕುಡಿದು ಮೃತ ಪಟ್ಟಿದ್ದಾರೆಯೇ? ಅಥವಾ ಕುಡಿಯುವಾಗ ಏನಾದರೂ ಮಿಕ್ಸ್ ಮಾಡಿದ್ದಾರಾ ಎಂಬ ಅನುಮಾನ ಈಗ ಹುಟ್ಟಿಕೊಂಡಿದೆ. ಜೊತೆಗೆ ಸಾವಿಗೆ ಕಾರಣವಾದ ಸ್ಪಿರಿಟ್ ಬಂದ ಮೂಲ ಪತ್ತೆ ಮಾಡುವುದು ಕೂಡ ಪೊಲೀಸರಿಗೆ ಸವಾಲಾಗಿದೆ.
Laxmi News 24×7