ಬಾಗಲಕೋಟೆ: ಜಿಲ್ಲೆಯ ಪೊಲೀಸ್ ಇಲಾಖೆಯಲ್ಲಿ ದಿಢೀರ್ ಬೆಳವಣಿಗೆಯೊಂದು ನಡೆದಿದೆ. ಕರ್ತವ್ಯ ಲೋಪದ ಗಂಭೀರ ಆರೋಪದ ಹಿನ್ನೆಲೆಯಲ್ಲಿ ಬನಹಟ್ಟಿ ಸಿಪಿಐ ಅವರನ್ನು ಅಮಾನತ್ತುಗೊಳಿಸಿ ಉತ್ತರ ವಲಯ ಐಜಿಪಿ ಆದೇಶ ಹೊರಡಿಸಿದ್ದಾರೆ. ಇಲಾಖೆಯ ಒಳಗಿನ ಈ ಹಠಾತ್ ಕ್ರಮ ಈಗ ಜಿಲ್ಲೆಯಾದ್ಯಂತ ಭಾರೀ ಚರ್ಚೆಗೆ ಕಾರಣವಾಗಿದೆ.”
ಬಾಗಲಕೋಟೆ ಜಿಲ್ಲೆಯ ರಬಕವಿ-ಬನಹಟ್ಟಿ ಪೊಲೀಸ್ ಠಾಣೆಯ ಸಿಪಿಐ ಹೆಚ್.ಆರ್. ಪಾಟೀಲ್ ಅವರನ್ನು ಸೇವೆಯಿಂದ ಅಮಾನತ್ತುಗೊಳಿಸಿ ಐಜಿಪಿ ಆದೇಶಿಸಿದ್ದಾರೆ. ಕರ್ತವ್ಯ ನಿರ್ವಹಣೆಯಲ್ಲಿ ನಿರ್ಲಕ್ಷ್ಯ ಹಾಗೂ ಶಿಸ್ತು ಉಲ್ಲಂಘನೆಯ ಆರೋಪದಡಿ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಪ್ರಾಥಮಿಕ ಮಾಹಿತಿಯಿಂದ ತಿಳಿದುಬಂದಿದೆ. ಉತ್ತರ ವಲಯ ಐಜಿಪಿ ಡಾ. ಚೇತನ್ ಸಿಂಗ್ ರಾಥೋಡ್ ಅವರು ಈ ಅಮಾನತ್ತಿನ ಆದೇಶ ಹೊರಡಿಸಿದ್ದು, ತಕ್ಷಣದಿಂದಲೇ ಜಾರಿಗೆ ಬರುವಂತೆ ಸೂಚಿಸಿದ್ದಾರೆ. ದಕ್ಷ ಅಧಿಕಾರಿ ಎಂದೇ ಗುರುತಿಸಿಕೊಂಡಿದ್ದ ಪಾಟೀಲ್ ಅವರ ವಿರುದ್ಧದ ಈ ಕ್ರಮ ಪೊಲೀಸ್ ಪಡೆಯಲ್ಲಿ ಸಂಚಲನ ಮೂಡಿಸಿದೆ.
ಆದರೆ, ಈ ಅಮಾನತ್ತಿಗೆ ನಿಖರವಾದ ಕಾರಣವನ್ನು ಇಲಾಖೆಯು ಅಧಿಕೃತವಾಗಿ ಬಹಿರಂಗಪಡಿಸದೆ ಗೌಪ್ಯವಾಗಿಟ್ಟಿರುವುದು ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ. ಯಾವುದೋ ದೊಡ್ಡ ಪ್ರಕರಣದ ತನಿಖೆಯಲ್ಲಿನ ಲೋಪ ಅಥವಾ ಆಡಳಿತಾತ್ಮಕ ಕಾರಣಗಳ ಹಿನ್ನೆಲೆಯಲ್ಲಿ ಈ ಹಠಾತ್ ಶಿಸ್ತು ಕ್ರಮ ಜರುಗಿಸಲಾಗಿದೆ ಎನ್ನಲಾಗುತ್ತಿದೆ. ಸದ್ಯ ಸಿಪಿಐ ಪಾಟೀಲ್ ಅವರ ಅಮಾನತ್ತು ಆದೇಶ ಪೊಲೀಸ್ ವಲಯದಲ್ಲಿ ಸಂಚಲನ ಸೃಷ್ಟಿಸಿದ್ದು, ಇಲಾಖೆಯ ಆಂತರಿಕ ಶಿಸ್ತಿನ ದೃಷ್ಟಿಯಿಂದ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂಬ ಮಾತುಗಳು ಕೇಳಿಬರುತ್ತಿವೆ.
* ಬನಹಟ್ಟಿ ಸಿಪಿಐ ಹೆಚ್.ಆರ್. ಪಾಟೀಲ್ ಅಮಾನತ್ತು
* ಉತ್ತರ ವಲಯ ಐಜಿಪಿ ಡಾ.ಚೇತನ್ ಆದೇಶ
* ಕರ್ತವ್ಯ ಲೋಪದ ಹಿನ್ನೆಲೆ ಶಿಸ್ತು ಕ್ರಮ
* ಅಮಾನತ್ತಿನ ನಿಖರ ಕಾರಣ ಸದ್ಯಕ್ಕೆ ಗೌಪ್ಯ
.
Laxmi News 24×7