ಬೆಂಗಳೂರು: ಸಿಲಿಕಾನ್ ಸಿಟಿಯ ಸಂಚಾರ ನಾಡಿ ನಮ್ಮ ಮೆಟ್ರೋ ಪ್ರಯಾಣ ಮತ್ತಷ್ಟು ದುಬಾರಿಯಾಗಿದೆ. ಪ್ರತಿವರ್ಷ ಫೆಬ್ರುವರಿ ತಿಂಗಳಲ್ಲಿ ಮೆಟ್ರೋ ದರ ಏರಿಕೆ ಮಾಡುವುದು ನಿಯಮವಿದೆ ಎಂಬ ನೆಪ ಹೇಳಿ ಬಿಎಂಆರ್‌ಸಿಎಲ್ ದರ ಪರಿಷ್ಕರಣೆ ಮಾಡಿ, ಪ್ರಯಾಣ ದರ ಏರಿಕೆ ಮಾಡುವುದಾಗಿ ತಿಳಿಸಿದೆ. ಈಗಾಗಲೇ 72% 72 ದರ ಏರಿಕೆ ಮಾಡಿರುವ ಬಿಎಂಆರ್‌ಸಿಎಲ್ ಮತ್ತೆ 5% ದರ ಏರಿಕೆ ಮಾಡಿದ್ದು, ಫೆಬ್ರುವರಿ 9ರಿಂದ ನೂತನ ದರ ಜಾರಿಯಾಗಲಿದೆ ಎಂದು ತಿಳಿಸಿದೆ. ಇದು ಮೆಟ್ರೋದಲ್ಲಿ ಸಂಚರಿಸುವವರಿಗೆ ಮತ್ತಷ್ಟು ಹೊರೆಯಾಗಲಿದೆ. ಸಾರ್ವಜನಿಕರ ಪ್ರಯಾಣ ತ್ರಾಸದಾಯಕವಾಗಿದೆ. ಅಲ್ಲದೇ, ಮನಸೋ ಇಚ್ಛೆ ದರ ಏರಿಕೆ ಮಾಡಿ ಪ್ರಯಾಣಿಕರ ಜೊತೆ ನಮ್ಮ ಮೆಟ್ರೋ ಚೆಲ್ಲಾಟವಾಡುತ್ತಿದೆ.
ಮೆಟ್ರೋ ಟಿಕೆಟ್ ದರ ಏರಿಕೆ ವಿಚಾರದಲ್ಲಿಯೂ ಪೊಲಿಟಿಕಲ್ ಫೈಟ್ ಮುಂದುವರೆದಿದೆ. ರಾಜ್ಯ ಹಾಗೂ ಕೇಂದ್ರ ಸರ್ಕಾರದ ನಡುವೆ ಸಂಘರ್ಷ ಜೋರಾಗಿದೆ. ಮೆಟ್ರೋ ಪ್ರಯಾಣದರ ಹೆಚ್ಚಳದಲ್ಲಿ ರಾಜ್ಯ-ಕೇಂದ್ರ ಸರ್ಕಾರಗಳ ನಡುವೆ ಮುಸುಕಿನ ಗುದ್ದಾಟ ಶುರುವಾಗಿದೆ. ಮೆಟ್ರೋ ಪ್ರಯಾಣ ದರ ಏರಿಕೆ ಮಾಡಿದ್ದು ರಾಜ್ಯ ಸರ್ಕಾರ ಎಂದು ಹೇಳುವ ಮೂಲಕ ಬೆಂಗಳೂರಿನ ಮೂವರು ಸಂಸದರಾದ ತೇಜಸ್ವಿ ಸೂರ್ಯ, ಶೋಭಾ ಕರಂದ್ಲಾಜೆ, ಪಿ.ಸಿ ಮೋಹನ್ ಕೈ ತೊಳೆದುಕೊಳ್ಳುವ ಕೆಲಸ ಮಾಡುತ್ತಿದ್ದಾರೆ. ಆರೋಪ-ಪ್ರತ್ಯಾರೋಪಗಳ ನಡುವೆ ಸಿಲಿಕಾನ್ ಸಿಟಿ ಜನರಂತೂ ಸಿಕ್ಕಾಪಟ್ಟೆ ಹೈರಾಣಾಗಿದ್ದಾರೆ.
ಇನ್ನು, ಮೆಟ್ರೋ ದರ ಪರಿಷ್ಕರಣೆ ವಿಚಾರವಾಗಿ ಸಂಸದ ಪಿ.ಸಿ ಮೋಹನ್ ಪಬ್ಲಿಕ್ ಟಿವಿಗೆ ರಿಯಾಕ್ಟ್ ಮಾಡಿದ್ದಾರೆ. ದರ ಏರಿಕೆ ಕೇಂದ್ರ ಸರಕಾರ ಮಾಡಿಲ್ಲ. ರಾಜ್ಯ ಸರ್ಕಾರವೇ ದರ ಏರಿಕೆ ಮಾಡಿರೋದು. ಈ ಸರ್ಕಾರ ದಿವಾಳಿ ಆಗಿದೆ. ಅದರ ಹೊರೆ ರಾಜ್ಯದ ಜನರ ಮೇಲೆ ಹಾಕ್ತಾ ಇದ್ದಾರೆ. ಕೇಂದ್ರ ಸರ್ಕಾರ ಮೆಟ್ರೋ ಯೋಜನೆಗೆ ಫಂಡಿಂಗ್ ಮಾತ್ರ ಮಾಡೋದು. ದರ ಏರಿಕೆ ಬೋರ್ಡ್‌ನಲ್ಲಿ ರಾಜ್ಯ ಸರ್ಕಾರದ ಪರವೇ ಓಟಿಂಗ್ ಪವರ್ ಜಾಸ್ತಿ ಇದೆ. ನಾವು 3 ಸಂಸದರೇ ಮೆಟ್ರೋ ಯೋಜನೆಗೆ ಅತಿ ಹೆಚ್ಚು ಅನುದಾನ ತಂದಿರುವುದು ಅಂತೇಳಿದ್ರು. ಅಲ್ಲದೇ, ದರ ಏರಿಕೆ ವಿಚಾರವಾಗಿ ಬಿಎಂಆರ್‌ಸಿಎಲ್ ಎಂಡಿ ಚರ್ಚೆಗೆ ಬರಲಿ, ಅದಕ್ಕೆ ನಾನು ಸಿದ್ಧನಿದ್ದೇನೆ ಎಂದು ಸವಾಲು ಹಾಕಿದ್ರು.
Laxmi News 24×7