Breaking News

ಗೋಮಾಳದಲ್ಲಿ ಅವೈಜ್ಞಾನಿಕ ಸರ್ಕಾರಿ ಕಟ್ಟಡ ನಿರ್ಮಾಣಕ್ಕೆ ಯತ್ನ: ವಿರೋಧಿಸಿ ತಹಶಿಲ್ದಾರ್ ಕಚೇರಿಗೆ ಕುರಿ ನುಗ್ಗಿಸಿ ಪ್ರತಿಭಟನೆ

Spread the love

ದಾವಣಗೆರೆ: ಗೋಮಾಳ‌ ಜಾಗವನ್ನು ಸರ್ಕಾರಿ ಕಟ್ಟಡ ನಿರ್ಮಾಣ ಮಾಡಲು ಮಂಜೂರು ಮಾಡಿದ್ದಕ್ಕೆ ಆಕ್ರೋಶ ವ್ಯಕ್ತಪಡಿಸಿ ದಾವಣಗೆರೆ ಜಿಲ್ಲೆಯ ನ್ಯಾಮತಿ ತಾಲೂಕಿನ ದೊಡ್ಡೆತ್ತಿನಹಳ್ಳಿ ಗ್ರಾಮಸ್ಥರು ನ್ಯಾಮತಿ ತಾಲೂಕು ದಂಡಾಧಿಕಾರಿ ಕಚೇರಿ ಬಳಿ ವಿನೂತನವಾಗಿ ಪ್ರತಿಭಟನೆ ನಡೆಸಿದರು.

ಗ್ರಾಮದಲ್ಲಿದ್ದ ಸುಮಾರು ಐದು ಸಾವಿರ ಕುರಿಗಳನ್ನು ತಹಶಿಲ್ದಾರ್ ಕಚೇರಿಗೆ ನುಗ್ಗಿಸಿ ವಿನೂತನ ಪ್ರತಿಭಟನೆ ಮಾಡಿದ ಗ್ರಾಮಸ್ಥರು, ದೊಡ್ಡೆತ್ತಿನಹಳ್ಳಿ ಗ್ರಾಮಕ್ಕೆ ಸೇರಿದ ಸರ್ವೇ ನಂಬರ್ 32ರ ನಾಲ್ಕು ಎಕರೆ ಗೋಮಾಳ ಜಾಗದಲ್ಲಿ ಅಧಿಕಾರಿಗಳು ಸರ್ಕಾರಿ ಕಟ್ಟಡ ಕಟ್ಟಲು ಮುಂದಾಗಿದ್ದಾರೆ. ಇದೇ ಜಾಗದಲ್ಲಿ ಕುರಿಗಾಹಿಗಳು ತಮ್ಮ ಸಾವಿರಾರು ಜಾನುವಾರುಗಳನ್ನು ಮೇಯಿಸುತ್ತಿದ್ದಾರೆ. ಇಲ್ಲಿ ಕಟ್ಟಡ ಕಟ್ಟಿದ್ದೇ ಆದಲ್ಲಿ ಮೇವಿಗೆ ತೊಂದರೆಯಾಗುತ್ತದೆ. ಆದ್ದರಿಂದ ಪರ್ಯಾಯ ಜಾಗದಲ್ಲಿ ಕಟ್ಟಡ ಕಟ್ಟುವಂತೆ ಪ್ರತಿಭಟನಾಕಾರರು ಮನವಿ ಮಾಡಿದರು.

ಈಗಾಗಲೇ ಸ್ಥಳೀಯ ಗೋಮಾಳ ಜಾಗವನ್ನು ಕೆಲವು ಪಟ್ಟಭದ್ರ ಹಿತಾಸಕ್ತಿಗಳಿಗೆ ಕೊಡಲಾಗಿದೆ. ಇದು ತಪ್ಪು. ಮೊದಲೇ ಕುರಿಗಾಯಿಗಳಿಗೆ ಹಾಗೂ ಜಾನುವಾರುಗಳಿಗೆ ಮೇಯಿಸಲು ಜಾಗವಿಲ್ಲ. ಅಂತಹದರಲ್ಲಿ ಅವೈಜ್ಞಾನಿಕವಾಗಿ ದೊಡ್ಡೆತ್ತಿನಹಳ್ಳಿಯಲ್ಲಿನ ಗೋಮಾಳದಲ್ಲಿ ಸರ್ಕಾರಿ ಕಟ್ಟಡ ಕಟ್ಟಲು ಮುಂದಾಗಲಾಗುತ್ತಿದೆ. ವಿರೋಧದ ನಡುವೆ ಕಟ್ಟಡಕ್ಕೆ ಜಾಗ ಕೂಡ ಮಂಜೂರಾಗಿದೆ. ಇದನ್ನು ವಿರೋಧಿಸಿ ಸುಮಾರು 5 ಸಾವಿರ ಕುರಿಗಳೊಂದಿಗೆ ಪ್ರತಿಭಟನೆ ನಡೆಸಲಾಯಿತು. ಜಿಲ್ಲಾಧಿಕಾರಿಗಳು ಸರ್ಕಾರದಿಂದ ಡಿನೋಟಿಫಿಕೇಷನ್​ ಮಾಡಿಕೊಂಡು ಪಟ್ಟಣದ ಪಕ್ಕದಲ್ಲಿರುವ ಬೇರೆ ಜಾಗವನ್ನು ಖರೀದಿಸಿ ಅಲ್ಲಿ ಕಟ್ಟಡ ಕಟ್ಟಲು ಅನುವು ಮಾಡಿಕೊಡಬೇಕು ಎಂದು ಸ್ಥಳೀಯರು ಮನವಿ ಮಾಡಿದರು.

ಗ್ರಾಮಸ್ಥೆ ಸುಜಾತ ಮಾತನಾಡಿ, ದೊಡ್ಡೆತ್ತಿನಹಳ್ಳಿಯಲ್ಲಿನ ಗೋಮಾಳವನ್ನು ಕಬಳಿಸುವಂತಹ ಕೆಲಸ ನಡೆಯುತ್ತಿದೆ. ಸ್ಥಳೀಯರೊಂದಿಗೆ ಯಾವುದೇ ಸಭೆಯನ್ನು ನಡೆಸದೇ ಇಲ್ಲಿಯ ಅಧಿಕಾರಿಗಳು ಇಲ್ಲಿ ಸರ್ಕಾರಿ ಕಟ್ಟಡ ಕಟ್ಟಲು ಹೊರಟಿದ್ದಾರೆ. ಇಲ್ಲಿ ಕಟ್ಟಡ ಕಟ್ಟಲು ನಮಗೆ ಸಹಮತ ಇಲ್ಲ. ಇಲ್ಲಿ 5 ಸಾವಿರ ಕುರಿಗಳಿದ್ದು, ಒಂದು ವೇಳೆ ಇದೇ ಜಾಗದಲ್ಲಿ ಕಟ್ಟಡ ಕಟ್ಟಿದ್ದಲ್ಲಿ ಕುರಿಗಳ ಪರಿಸ್ಥಿತಿ ಏನಾಗುತ್ತದೆ ಎಂಬುದನ್ನು ಅರಿತುಕೊಳ್ಳಬೇಕು. ಹಾಗಾಗಿ ಯಾವುದೇ ಕಾರಣಕ್ಕೂ ಈ ಗೋಮಾಳವನ್ನು ಬಿಟ್ಟುಕೊಡುವುದಿಲ್ಲ. ಬೇರೆ ಜಾಗದಲ್ಲಿ ಕಟ್ಟುವ ಮೂಲಕ ಕುರಿಗಾಹಿಗಳಿಗೆ ಹಾಗೂ ಜಾನುವಾರುಗಳಿಗೆ ಅನುಕೂಲ ಮಾಡಿಕೊಡುವಂತೆ ಮನವಿ ಮಾಡಿದರು.

ಇದರ ಬಗ್ಗೆ ಗ್ರಾಮ ಆಡಳಿತ ಅಧಿಕಾರಿಯನ್ನು ಕೇಳಿದರೆ ಗ್ರಾಮಸ್ಥರೊಂದಿಗೆ ಅಸಭ್ಯವಾಗಿ ವರ್ತಿಸಿದ್ದಾರೆ. ಕೂಡಲೇ ಆತನನ್ನು ವಜಾ ಮಾಡಬೇಕು. ಅಲ್ಲದೇ ಗೋಮಾಳ ಜಾಗವನ್ನು ಗ್ರಾಮಕ್ಕೆ ಬಿಟ್ಟುಕೊಡಬೇಕು ಎಂದು ಗ್ರಾಮಸ್ಥರು ಪಟ್ಟು ಹಿಡಿದರು.


Spread the love

About Laxminews 24x7

Check Also

ಬೆಳಗಾವಿ ಪೊಲೀಸರ ಭರ್ಜರಿ ಕಾರ್ಯಾಚರಣೆ; 20 ಬೈಕ್‌ಗಳ ಸಮೇತ ಅಂತರಜಿಲ್ಲಾ ಖದೀಮರ ಗ್ಯಾಂಗ್ ಅರೆಸ್ಟ್!

Spread the loveಬೆಳಗಾವಿ ಪೊಲೀಸರ ಭರ್ಜರಿ ಕಾರ್ಯಾಚರಣೆ; 20 ಬೈಕ್‌ಗಳ ಸಮೇತ ಅಂತರಜಿಲ್ಲಾ ಖದೀಮರ ಗ್ಯಾಂಗ್ ಅರೆಸ್ಟ್! • ಬೃಹತ್ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ