ನಾಲ್ವಡಿ ಒಡೆಯರ್ ಅವರೊಂದಿಗೆ ಸಿದ್ದರಾಮಯ್ಯನವರ ಹೋಲಿಕೆ ಕೆಲಸದ ವಿಚಾರವಾಗಿಯೇ ವಿನಃ ವ್ಯಕ್ತಿಗತವಲ್ಲ: ಸಚಿವ ಮಹದೇವಪ್ಪ
ದಾವಣಗೆರೆ/ಹಾವೇರಿ: “ನಾಲ್ವಡಿ ಕೃಷ್ಣರಾಜ ಒಡೆಯರ್ ಅವರು ಜನಪರ, ಸಾಮಾಜಿಕ ನ್ಯಾಯದ ಪರವಾಗಿ ಮಹತ್ವದ ಸಮ ಸಮಾಜವನ್ನು ನಿರ್ಮಾಣ ಮಾಡಿದವರು. ಒಬ್ಬ ವ್ಯಕ್ತಿಯನ್ನು ಮತ್ತೊಬ್ಬ ವ್ಯಕ್ತಿ ಜೊತೆಗೆ ಹೋಲಿಕೆ ಮಾಡುವುದು ಸರಿಯಲ್ಲ, ಅವರು ಅವರಿಗೆ ಸಾಟಿ. ನಾಲ್ವಡಿ ಕೃಷ್ಣರಾಜ ಒಡೆಯರ್ ಅವರೊಂದಿಗೆ ಸಿಎಂ ಸಿದ್ದರಾಮಯ್ಯನವರ ಹೋಲಿಕೆ ಕೆಲಸದ ವಿಚಾರವಾಗಿಯೇ ವಿನಃ ವ್ಯಕ್ತಿಗತವಲ್ಲ. ಕಾಮಾಲೆ ಕಣ್ಣಿಂದ ನೋಡಿದ್ದೆಲ್ಲ ಹಳದಿ, ಅದೇ ರೀತಿ ಬಿಜೆಪಿ ನಾಯಕರು” ಎಂದು ಸಚಿವ ಹೆಚ್.ಸಿ. ಮಹದೇವಪ್ಪ ಟೀಕಿಸಿದರು.
ಮೈಸೂರಿಗೆ ನಾಲ್ವಡಿ ಕೃಷ್ಣರಾಜ ಒಡೆಯರ್ಗಿಂತಲೂ ಹೆಚ್ಚು ಅಥವಾ ಮಹಾರಾಜರಷ್ಟೇ ಅನುದಾನ ಕೊಟ್ಟು ಅಭಿವೃದ್ಧಿ ಮಾಡಿದವರು ಸಿದ್ದರಾಮಯ್ಯ ಎಂಬ ವಿಧಾನ ಪರಿಷತ್ ಸದಸ್ಯ ಯತೀಂದ್ರ ಸಿದ್ದರಾಮಯ್ಯ ಅವರ ಹೇಳಿಕೆಗೆ ಸಚಿವ ಹೆಚ್.ಸಿ. ಮಹದೇವಪ್ಪ ಈ ರೀತಿ ಪ್ರತಿಕ್ರಿಯಿಸಿದರು.
ದಾವಣಗೆರೆಯಲ್ಲಿ ಇಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, “ರಾಜ್ಯ ಕಾಂಗ್ರೆಸ್ ಉಸ್ತುವಾರಿ ಸುರ್ಜೇವಾಲಾ ಅವರು ಸೂಪರ್ ಸಿಎಂ ರೀತಿ ವರ್ತಿಸುತ್ತಿದ್ದಾರೆ ಎಂಬ ಆರೋಪದ ಬಗ್ಗೆ ಮಾತನಾಡಿ, ಕಾಂಗ್ರೆಸ್ ಪಕ್ಷ ಸರ್ಕಾರದ ಕೆಲಸಗಳಲ್ಲಿ ಎಂದೂ ತಲೆಹಾಕಿಲ್ಲ. ಉಸ್ತುವಾರಿಗಳು ಬಂದು ಸಚಿವರು ಹಾಗೂ ಶಾಸಕರನ್ನು ವಿಮರ್ಶೆ ಮಾಡಿದ ಉದಾಹರಣೆ ಇಲ್ಲ ಎಂದರು. ಸೆಪ್ಟಂಬರ್ನಲ್ಲಿ ಕ್ರಾಂತಿ ಆಗಲಿದೆ ಎಂಬ ವಿಚಾರವಾಗಿ ಪ್ರತಿಕ್ರಿಯಿಸಿ, ಸೆಪ್ಟಂಬರ್ಗೆ ನಾವು ಸಂಕ್ರಾಂತಿ ಮಾಡುತ್ತೇವೆ. ಈ ಸೆಪ್ಟಂಬರ್ ಕ್ರಾಂತಿ ಬಗ್ಗೆ ನಮಗೆ ಗೊತ್ತಿಲ್ಲ” ಎಂದು ತಿಳಿಸಿದರು.
ಬಿ.ಸಿ.ಪಾಟೀಲ್ ಲೇವಡಿ: ಮತ್ತೊಂದೆಡೆ, ಮಾಜಿ ಸಚಿವ ಬಿ.ಸಿ. ಪಾಟೀಲ್ ಅವರು ಹಾವೇರಿಯಲ್ಲಿ ಮಾತನಾಡಿ, “ಶಾಸಕ ಯತೀಂದ್ರ ಹೇಳಿಕೆಗೆ ಪ್ರತಿಕ್ರಿಯಿಸಿದರು. ಕನ್ನಂಬಾಡಿ ಕಟ್ಟಿದ್ದು ಸಿದ್ದರಾಮಯ್ಯನವರು ಅಲ್ವೇನಪ್ಪಾ, ಮೈಸೂರು ಅರಮನೆಯಿಂದ ಹಿಡಿದು ವಾಣಿವಿಲಾಸ, ಕನ್ನಂಬಾಡಿ ನಿರ್ಮಾಣ ಸಿದ್ದರಾಮಯ್ಯನವರ ಕಾಲದಲ್ಲೇ ಆಗಿದೆ. ಅದಕ್ಕೆ ಯತೀಂದ್ರ ಹೀಗೆ ಹೇಳಿದ್ದಾರೆ” ಎಂದು ಲೇವಡಿ ಮಾಡಿದರು.
Laxmi News 24×7