ಬೆಳಗಾವಿ: 2025ರ ಡಿಸೆಂಬರ್ 31ರೊಳಗೆ ಕ್ರಮವಹಿಸಿ ಹೊಸ ಜಿಲ್ಲೆಗಳನ್ನು ಘೋಷಣೆ ಮಾಡದೇ ಹೋದರೆ ಈ ಸರ್ಕಾರದ ಅವಧಿಯಲ್ಲಿ ಜಿಲ್ಲಾ ರಚನೆ ಮರೀಚಿಕೆ ಆಗುತ್ತದೆ. ಮುಖ್ಯಮಂತ್ರಿಗಳು, ಕಂದಾಯ ಸಚಿವರು ಹಾಗೂ ಜಿಲ್ಲೆಯ ಇಬ್ಬರು ಸಚಿವರು ಜನರ ಮೂಗಿಗೆ ತುಪ್ಪ ಹಚ್ಚುವುದನ್ನು ಬಿಟ್ಟು ಬೆಳಗಾವಿ ಜಿಲ್ಲೆಯನ್ನು ವಿಭಜಿಸುವಂತೆ ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ ಒತ್ತಾಯಿಸಿದರು.
ಬೆಳಗಾವಿಯಲ್ಲಿ ಇಂದು ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಕೇಂದ್ರದ ಜನಗಣತಿ ಇಲಾಖೆ ಒಂದು ಆದೇಶ ಹೊರಡಿಸಿದ್ದು, ಎಲ್ಲಾ ರಾಜ್ಯಗಳ ಮುಖ್ಯ ಕಾರ್ಯದರ್ಶಿಗಳಿಗೆ ಸುತ್ತೋಲೆ ಕಳಿಸಿದ್ದಾರೆ. 2026ರ ಎಪ್ರೀಲ್ 1ರಿಂದ ಜನಗಣತಿ ಕುರಿತು ಅಧಿಕೃತವಾಗಿ ಕಾರ್ಯ ಆರಂಭಿಸುತ್ತಿದ್ದು, ಮೊದಲ ಹಂತದಲ್ಲಿ ಜನವಸತಿ ಪ್ರದೇಶಗಳು ಮತ್ತು ಮನೆಗಳ ಸಮೀಕ್ಷೆ ಮಾಡಲಿದ್ದೇವೆ. ಅದಾದ ಬಳಿಕ 2027ರ ಫೆಬ್ರವರಿಯಿಂದ ಜನಸಂಖ್ಯೆ ಗಣತಿ ಆರಂಭಿಸುತ್ತೇವೆ. ಇದಕ್ಕೆ ಎರಡು ವರ್ಷ ಬೇಕಾಗುತ್ತದೆ. ರಾಜ್ಯ ಸರ್ಕಾರಗಳು ತಮ್ಮ ಗ್ರಾಮ, ತಾಲೂಕು, ಜಿಲ್ಲೆ, ಉಪವಿಭಾಗಾಧಿಕಾರಿ ಕಚೇರಿಯ ಗಡಿಗಳನ್ನು ಬದಲಾವಣೆ ಮಾಡುವುದಿದ್ದರೆ ಇದೇ ವರ್ಷ ಡಿ.31ರೊಳಗೆ ಮಾಡಬೇಕು. ನಂತರದ ದಿನಗಳಲ್ಲಿ ಮಾಡಲು ತಮಗೆ ಅವಕಾಶ ಇಲ್ಲ. ಯಾಕೆಂದರೆ ಜನಗಣತಿಗೆ ತೊಂದರೆ ಆಗುತ್ತದೆ ಎಂದು ಸ್ಪಷ್ಟವಾಗಿ ಸುತ್ತೋಲೆಯಲ್ಲಿ ತಿಳಿಸಿದ್ದಾರೆ ಎಂದು ವಿವರಿಸಿದರು.
ಬೆಳಗಾವಿ ಜಿಲ್ಲಾ ವಿಭಜನೆಗೆ ಶಾಸಕರ ಸಹಮತ ಬೇಕು ಎಂಬ ಕಂದಾಯ ಸಚಿವ ಕೃಷ್ಣಭೈರೇಗೌಡ ಹೇಳಿಕೆಗೆ, ಜಿಲ್ಲಾ ವಿಭಜನೆಯಿಂದ ಆಗಲಿರುವ ಸಾಧಕ-ಭಾದಕಗಳ ಕುರಿತು ಚರ್ಚಿಸಲು ಮುಖ್ಯಮಂತ್ರಿ ಆಗಲಿ, ಕಂದಾಯ ಸಚಿವರಾಗಲಿ, ಜಿಲ್ಲಾ ಉಸ್ತುವಾರಿ ಸಚಿವರಾದರೂ ಜಿಲ್ಲೆಯ ಜನಪ್ರತಿನಿಧಿಗಳನ್ನು ಚರ್ಚೆಗೆ ಒಮ್ಮೆಯಾದರೂ ಕರೆದಿದ್ದಾರಾ ಎಂದು ಪ್ರಶ್ನಿಸಿದರು. ಹಿಂದೆ ಜೆ.ಎಚ್.ಪಟೇಲರ ಕಾಲದಿಂದಲೂ ನಾವು ಹೋರಾಟದಲ್ಲಿದ್ದೇವೆ ಎಂದರು.
ಸರ್ಕಾರ ನೇಮಕ ಮಾಡಿದ ಆಯೋಗಗಳು ಕೊಟ್ಟ ವರದಿಯಲ್ಲಿ ಯಾವ ತಾಲ್ಲೂಕುಗಳನ್ನು ಜಿಲ್ಲೆ ಮಾಡಬೇಕು ಎಂಬ ಬಗ್ಗೆ ಸಾರ್ವಜನಿಕ ಚರ್ಚೆಗೆ ಇಡಬೇಕಿದೆ. ರಾಜಕೀಯ ಬಲಾಬಲದ ಮೇಲೆ ರಚನೆ ಮಾಡುತ್ತೀರೋ.? ಆಡಳಿತಾತ್ಮಕ ವ್ಯವಸ್ಥೆಯನ್ನು ಸರಿ ಪಡಿಸಲು ಮಾಡುತ್ತಿರೋ..? ಆಯಾ ತಾಲ್ಲೂಕಿನವರು ತಮ್ಮದು ಜಿಲ್ಲೆ ಆಗಲಿ ಅಂತಾ ಬೇಡಿಕೆ ಇಡುವುದು ಸಹಜ ಅದು ತಪ್ಪಲ್ಲ. ಆದರೆ, ಯಾಕೆ ವಿಳಂಬ ಮಾಡುತ್ತಿದ್ದಿರಿ ಎಂದು ಪ್ರಶ್ನಿಸಿದರು.
Laxmi News 24×7