Breaking News

650 ವರ್ಷಗಳ ಹಿಂದಿನ ಶಿವಲಿಂಗ ಪತ್ತೆ; ಕಾಡುಪಾಲಾಗಿದ್ದ ಮಹದೇವ ದೇಗುಲ ಪುನರುಜ್ಜೀವನಕ್ಕೆ ಗ್ರಾಮಸ್ಥರ ಸಂಕಲ್ಪ

Spread the love

ಮಡಿಕೇರಿ: ಕೊಡಗು ಜಿಲ್ಲೆಯ ವಿರಾಜಪೇಟೆ ಹೊರವಲಯದ ಐಮಂಗಲ ಗ್ರಾಮದಲ್ಲಿ ಪುರಾತನ ಶಿವಲಿಂಗ ಪತ್ತೆಯಾಗಿದೆ. ಸುಮಾರು 650 ವರ್ಷಗಳ ಹಿಂದಿನ ಮಹದೇವ ದೇವಾಲಯ ಇಲ್ಲಿ ಇತ್ತು ಎಂಬ ನಂಬಿಕೆ ಗ್ರಾಮಸ್ಥರಲ್ಲಿ ಮೂಡಿದ್ದು, ಕಾಡುಪಾಲಾಗಿದ್ದ ದೇವಾಲಯವನ್ನು ಪುನರುಜ್ಜೀವನಗೊಳಿಸಲು ಗ್ರಾಮಸ್ಥರು ಮುಂದಾಗಿದ್ದಾರೆ.

ಐಮಂಗಲ ಗ್ರಾಮದಿಂದ ಚೆಂಬೆಬೆಳ್ಳೂರು ರಸ್ತೆಯಲ್ಲಿ ಸುಮಾರು 3 ಕಿಲೋಮೀಟರ್ ದೂರದಲ್ಲಿರುವ ಕಾಡಿನ ಪ್ರದೇಶದಲ್ಲಿ ಶಿವಲಿಂಗ, ಬಸವ ಮೂರ್ತಿ, ಗರ್ಭಗುಡಿಯ ಕುರುಹು, ತೀರ್ಥಕುಂಡ ಸೇರಿದಂತೆ ಹಲವು ಅವಶೇಷಗಳು ಪತ್ತೆಯಾಗಿವೆ.

ಚಳಿ, ಮಳೆ, ಗಾಳಿ, ಬಿಸಿಲನ್ನೂ ಲೆಕ್ಕಿಸದೆ ಕಾಡಿನ ಮಧ್ಯೆ ಶಿವಲಿಂಗವೊಂದು ಇಂದಿಗೂ ಉಳಿದುಕೊಂಡಿದೆ. ಶಿವಲಿಂಗದ ಪಕ್ಕದಲ್ಲೇ ಅದೇ ದಿಕ್ಕಿಗೆ ಬಾಗಿಕೊಂಡಿರುವ ಬಸವ ಮೂರ್ತಿಯೂ ಕಂಡುಬಂದಿದೆ.

ಇದು ಇತ್ತೀಚಿನ ದೇವಾಲಯವಲ್ಲ. ಈ ಪ್ರದೇಶದಲ್ಲಿ ಹಿಂದೆ ಮಹದೇವ ದೇವಾಲಯವಿತ್ತು ಎಂಬ ನಂಬಿಕೆ ಗ್ರಾಮಸ್ಥರಲ್ಲಿದೆ. ಶಿವಲಿಂಗಕ್ಕೆ ಯಾವುದೇ ದೊಡ್ಡ ಹಾನಿಯಾಗದೆ ಉಳಿದಿರುವುದು ವಿಶೇಷ ಎಂದು ಸ್ಥಳೀಯರು ಹೇಳುತ್ತಾರೆ.

ಐಮಂಗಲ ಗ್ರಾಮದಲ್ಲಿ ಹಲವು ಪುರಾತನ ದೇವಾಲಯಗಳಲ್ಲಿ ಇಂದಿಗೂ ಪೂಜೆ-ಪುನಸ್ಕಾರಗಳು ನಡೆಯುತ್ತಿವೆ. ಆದರೆ ರಸ್ತೆಯ ಪಕ್ಕದಲ್ಲಿದ್ದ ಈ ಮಹದೇವ ದೇವಾಲಯ ಮಾತ್ರ ಕಾಲಕ್ರಮೇಣ ನಿರ್ಲಕ್ಷ್ಯಕ್ಕೆ ಒಳಗಾಗಿ ಕಾಡುಪಾಲಾಗಿತ್ತು ಎನ್ನಲಾಗಿದೆ.

ತಾಂಬೂಲ ಪ್ರಶ್ನೆ ಬಳಿಕ ಪುನರುಜ್ಜೀವನಕ್ಕೆ ನಿರ್ಧಾರ
ದೇವಾಲಯದಲ್ಲಿ ನಿತ್ಯ ಪೂಜೆ ನಿಂತ ಬಳಿಕ ಸ್ಥಳೀಯರಿಗೆ ಹಲವು ರೀತಿಯ ತೊಂದರೆಗಳು ಎದುರಾಗುತ್ತಿವೆ ಎಂಬ ನಂಬಿಕೆ ಗ್ರಾಮಸ್ಥರಲ್ಲಿ ಮೂಡಿತ್ತು. ಈ ಹಿನ್ನೆಲೆಯಲ್ಲಿ ಗ್ರಾಮದ ಪ್ರಮುಖರು ಸಭೆ ನಡೆಸಿ ದೇವಾಲಯದ ಇತಿಹಾಸ ಹಾಗೂ ಮುಂದಿನ ಕ್ರಮಗಳ ಬಗ್ಗೆ ಮಾಹಿತಿ ಸಂಗ್ರಹಿಸಲು ಮುಂದಾದರು.

ಕೇರಳದ ತಂತ್ರಿಗಳನ್ನು ಸಂಪರ್ಕಿಸಿ ತಾಂಬೂಲ ಪ್ರಶ್ನೆ ನಡೆಸಲಾಗಿದ್ದು, ಈ ವೇಳೆ ಇಲ್ಲಿ ಹಿಂದೆ ಮಹದೇವ ದೇವಾಲಯವಿದ್ದು, ಪೂಜೆ-ಪುನಸ್ಕಾರಗಳು ನಡೆಯುತ್ತಿದ್ದವು ಎಂಬ ಮಾಹಿತಿ ದೊರೆತಿದೆ ಎಂದು ಗ್ರಾಮಸ್ಥರು ತಿಳಿಸಿದ್ದಾರೆ.

ಹಳೆಯ ಅರ್ಚಕರ ಕುಟುಂಬದವರು ತಲೆತಲಾಂತರಗಳಿಂದ ಇಲ್ಲಿ ಪೂಜೆ ಸಲ್ಲಿಸುತ್ತಿದ್ದರು ಎನ್ನಲಾಗಿದೆ. ಆದರೆ ನಂತರ ಕುಟುಂಬದ ಸದಸ್ಯರು ಬೇರೆಡೆ ನೆಲೆಸಿದ ಹಿನ್ನೆಲೆಯಲ್ಲಿ ನಿತ್ಯ ಪೂಜೆ ಸ್ಥಗಿತಗೊಂಡು, ದೇವಾಲಯ ಕ್ರಮೇಣ ನಿರ್ಲಕ್ಷ್ಯಕ್ಕೆ ಒಳಗಾಯಿತು ಎಂದು ಗ್ರಾಮಸ್ಥರು ಹೇಳಿದ್ದಾರೆ.

2 ಕೋಟಿ ರೂ. ವೆಚ್ಚದಲ್ಲಿ ದೇವಾಲಯ ಪುನರ್ ನಿರ್ಮಾಣ
ತಂತ್ರಿಗಳ ಸೂಚನೆಯಂತೆ ದೇವಾಲಯವನ್ನು ಪುನರುಜ್ಜೀವನಗೊಳಿಸಲು ಗ್ರಾಮಸ್ಥರು ಒಕ್ಕೊರಲಿನಿಂದ ನಿರ್ಧರಿಸಿದ್ದಾರೆ. ಶಿವಲಿಂಗದ ಪೀಠದ ಪುನರ್ ನಿರ್ಮಾಣ, ತೀರ್ಥಕುಂಡ, ಗರ್ಭಗುಡಿ, ಕಲ್ಯಾಣಿ, ದೇವರ ನಡೆ, ಮೆಟ್ಟಿಲುಗಳು, ಪೌಳಿ, ತೀರ್ಥ ಸ್ನಾನಗೃಹ ಹಾಗೂ ಅರ್ಚಕರ ಗೃಹ ನಿರ್ಮಾಣ ಸೇರಿದಂತೆ ಹಲವು ಕಾಮಗಾರಿಗಳನ್ನು ಕೈಗೊಳ್ಳಲು ಯೋಜಿಸಲಾಗಿದೆ.

ಪ್ರಸ್ತುತ ಶಿವಲಿಂಗ ಇರುವ ಸ್ಥಳದಿಂದ ಆಗ್ನೇಯ ದಿಕ್ಕಿಗೆ ಸ್ಥಳಾಂತರಿಸಿ, ಅಗತ್ಯ ವಿಧಿ-ವಿಧಾನ ಹಾಗೂ ಹೋಮ-ಹವನಗಳ ಮೂಲಕ ಪುನರ್ ಪ್ರತಿಷ್ಠಾಪನೆ ಮಾಡುವಂತೆ ತಂತ್ರಿಗಳು ಸೂಚಿಸಿದ್ದಾರೆ ಎಂದು ಗ್ರಾಮಸ್ಥರು ತಿಳಿಸಿದ್ದಾರೆ.

ಸುಮಾರು 2 ಕೋಟಿ ರೂಪಾಯಿ ವೆಚ್ಚದಲ್ಲಿ ಪುರಾತನ ದೇವಾಲಯವನ್ನು ಪುನರುಜ್ಜೀವನಗೊಳಿಸುವ ಗುರಿಯನ್ನು ಗ್ರಾಮಸ್ಥರು ಹೊಂದಿದ್ದಾರೆ. ಗ್ರಾಮಸ್ಥರು ಹಾಗೂ ವಿವಿಧ ಸಂಘ-ಸಂಸ್ಥೆಗಳಿಂದ ದೇಣಿಗೆ ಸಂಗ್ರಹಿಸಿ ದೇವಾಲಯ ನಿರ್ಮಾಣ ಕಾರ್ಯ ಕೈಗೊಳ್ಳಲು ಉದ್ದೇಶಿಸಲಾಗಿದೆ.

ತಂತ್ರಿಗಳ ಸೂಚನೆಯಂತೆ ಯಾವುದೇ ಜಾತಿ ಅಥವಾ ಭಾಷೆಯ ತಾರತಮ್ಯವಿಲ್ಲದೆ ಎಲ್ಲರೂ ದೇವಾಲಯಕ್ಕೆ ಆಗಮಿಸಿ ಪೂಜೆ ಸಲ್ಲಿಸಬಹುದು ಎಂದು ಗ್ರಾಮಸ್ಥರು ತಿಳಿಸಿದ್ದಾರೆ. 

ಇದರ ಮೊದಲ ಹೆಜ್ಜೆಯಾಗಿ ದೇವಾಲಯದ ಆವರಣದಲ್ಲಿ ಹೋಮ-ಹವನ ಹಾಗೂ ವಿಶೇಷ ಪೂಜೆ ನೆರವೇರಿಸಲಾಯಿತು. ಆಗಮಿಸಿದ್ದ ಭಕ್ತರು ತಮ್ಮ ಶಕ್ತಿಗೆ ಅನುಗುಣವಾಗಿ ಕಾಣಿಕೆ ಸಲ್ಲಿಸಿ, ದೀಪ ಬೆಳಗಿಸಿ ದೇವಾಲಯ ಪುನರುಜ್ಜೀವನ ಕಾರ್ಯಕ್ಕೆ ಕೈಜೋಡಿಸುವ ಸಂಕಲ್ಪ ಮಾಡಿದರು.

ಶತಮಾನಗಳ ಇತಿಹಾಸದ ಕುರುಹು ಹೊತ್ತಿರುವ ಶಿವಲಿಂಗ, ಕಾಡಿನ ಮಧ್ಯೆ ಪಾಳುಬಿದ್ದಿರುವ ಪುರಾತನ ದೇವಾಲಯದ ಅವಶೇಷಗಳು ಇದೀಗ ಮತ್ತೆ ಗಮನ ಸೆಳೆದಿವೆ. ಗ್ರಾಮಸ್ಥರ ಒಗ್ಗಟ್ಟಿನ ಪ್ರಯತ್ನದಿಂದ ಈ ಸ್ಥಳದಲ್ಲಿ ಮತ್ತೆ ಪೂಜಾ ಕೈಂಕರ್ಯ ಆರಂಭವಾಗುವ ನಿರೀಕ್ಷೆ ಮೂಡಿದೆ.


Spread the love

About Laxminews 24x7

Check Also

ಒಂದು ತಿಂಗಳಿಂದ ಗ್ರಾಮಸ್ಥರ ನಿದ್ದೆಗೆಡಿಸಿದ್ದ ಚಿರತೆ ಕೊನೆಗೂ ಸೆರೆ

Spread the loveಮಂಡ್ಯ: ಜಿಲ್ಲೆಯ ಮದ್ದೂರು ತಾಲ್ಲೂಕಿನ ಹೆಚ್.ಹೊಸಹಳ್ಳಿ ಗ್ರಾಮದಲ್ಲಿ ಕಳೆದ ಒಂದು ತಿಂಗಳಿಂದ ಜನಸಾಮಾನ್ಯರು ಹಾಗೂ ರೈತರ ನಿದ್ದೆಗೆಡಿಸಿದ್ದ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ