Breaking News

ದಪ್ಪ ಚರ್ಮದ ಸರ್ಕಾರದ ಚಳಿ ಬಿಡಿಸುತ್ತೇವೆ, ಮತ್ತೊಂದು ವಿಕೆಟ್‌ ಬೀಳುವ ಭಯ: ಆಶೋಕ್

Spread the love

ಬೆಂಗಳೂರು: ಇದು ದಪ್ಪ ಚರ್ಮದ ಸರ್ಕಾರ. ಈ ಸರ್ಕಾರಕ್ಕೆ ಚಳಿ ಬಿಡಿಸುವ ಮತ್ತು ಕಿವಿ ಹಿಂಡುವ ಕೆಲಸವನ್ನು ಸದನದಲ್ಲಿ ಮಾಡೇ ಮಾಡುತ್ತೇವೆ ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಆರ್.ಅಶೋಕ್ ಅವರು ಹೇಳಿದ್ದಾರೆ.

ಮಾಧ್ಯಮಗಳೊಂದಿಗೆ ಮಾತನಾಡಿದ ಇವರು, ಕಳೆದ ಬಾರಿ ನಾವು ವಿಧಾನಸಭೆ ಕಲಾಪದಲ್ಲಿ ಈ ಸರ್ಕಾರಕ್ಕೆ ಚಳಿ ಬಿಡಿಸಿದ್ದೆವು. ನಮ್ಮ ಹೋರಾಟದಿಂದ ಒಂದು ವಿಕೆಟ್ ಬಿದ್ದು ಹೋಯಿತು. ಈ ಬಾರಿಯೂ ವಿರೋಧ ಪಕ್ಷವಾಗಿ ನಮ್ಮ ಕೆಲಸವನ್ನು ಸಮರ್ಥವಾಗಿ ಮಾಡುತ್ತೇವೆ ಎಂದು ಹೇಳಿದರು .

ಈ ಸರ್ಕಾರ ವಿಶೇಷ ಅಧಿವೇಶನವನ್ನು ಬೇಗ ಮುಗಿಸುವ ಸನ್ನಾಹದಲ್ಲಿದೆ. ರಾಜ್ಯದಲ್ಲಿನ ಬರಪರಿಸ್ಥಿತಿ ಬಗ್ಗೆ ಚರ್ಚೆಗೆ ಎರಡು ದಿನ ಹೆಚ್ಚುವರಿಯಾಗಿ ಮೀಸಲಿಡಿ ಎಂದು ಕೇಳಿದ್ದೇವೆ. ಸರ್ಕಾರ ಏನು ಮಾಡುವುದೋ ನೋಡಬೇಕು. ಬರ ಸಂಬಂಧ ಸರ್ಕಾರ ಈಗ ಎಚ್ಚೆತ್ತುಕೊಂಡಿದೆ. ನಾಲ್ಕು ತಿಂಗಳು ಮೊದಲೇ ಎಚ್ಚರವಾಗಬೇಕಿತ್ತು. ಇದು ಕೊಳ್ಳೆ ಹೊಡೆದ ಮೇಲೆ ದಿಡ್ಡಿ ಬಾಗಿಲು ಹಾಕಿದಂತಾಗಿದೆ. ಸರ್ಕಾರ ಬರವನ್ನು ನಿರ್ಲಕ್ಷ್ಯ ಮಾಡಿದ್ದರಿಂದ ರಾಜ್ಯದಲ್ಲಿ 2800 ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಸಾಲಬಾಧೆ ತಾಳದೆ ನಿನ್ನೆ ಚಾಮರಾಜ ನಗರದಲ್ಲಿ ರೈತರೊಬ್ಬರು ಹೊಲದಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಎಲ್ಲವನ್ನು ಸದನದಲ್ಲಿ ಪ್ರಮುಖವಾಗಿ ಚರ್ಚೆಗೆ ಎಳೆಯುತ್ತೇವೆ ಎಂದು ಹೇಳಿದರು.

ಕಸ್ತೂರಿ ರಂಗನ್‌ ವರದಿಗೆ ವಿರೋಧ
ಬಿಜೆಪಿ, ಕಸ್ತೂರಿರಂಗನ್ ವರದಿಗೆ ವಿರೋಧ ಮಾಡಿದೆ. ಈ ಹಿಂದೆ ಬಿ.ಎಸ್.ಯಡಿಯೂರಪ್ಪ ಹಾಗೂ ಬಸವರಾಜ ಬೊಮ್ಮಾಯಿ ಅವರು ಇದ್ದಾಗಲೂ ವಿರೋಧ ಮಾಡಿದ್ದೆವು. ನಮಗೆ ಜನರ ಭಾವನೆ ಮುಖ್ಯ, ಬದುಕು ಮುಖ್ಯ. ಎನ್‍ಡಿಎ ಮೈತ್ರಿ ಪಕ್ಷವಾಗಿರುವ ಜೆಡಿಎಸ್‍ನ ಎಚ್.ಡಿ.ಕುಮಾರಸ್ವಾಮಿ ಅವರೊಂದಿಗೆ ಸೇರಿ ನಾವು ಕಸ್ತೂರಿರಂಗನ್ ವರದಿ ವಿರೋಧಿಸಿದ್ದೇವೆ. ಬರ ಮತ್ತು ಕಸ್ತೂರಿರಂಗನ್ ವರದಿ ಬಗ್ಗೆ ವಿಧಾನಸಭೆಯಲ್ಲಿ ಚರ್ಚೆ ಮಾಡ್ತೇವೆ. ಜನರ ಪರವಾಗಿ ನಾವು ಧ್ವನಿ ಎತ್ತುತ್ತೇವೆ ಎಂದು ತಿಳಿಸಿದರು .

ಮತ್ತೊಂದು ವಿಕೆಟ್ ಬೀಳುವ ಭಯ.
ನಿಯಮದ ಪ್ರಕಾರ ವಿಶೇಷ ಅಧಿವೇಶನಕ್ಕೆ ಅವಕಾಶ ಇಲ್ಲ. ಈ ಸರ್ಕಾರಕ್ಕೆ ಯಾರು ಸಲಹೆ ನೀಡುತ್ತಾರೋ ಗೊತ್ತಿಲ್ಲ. ಈ ಅಧಿವೇಶನದಲ್ಲಿ ಮಸೂದೆಗಳ ಮಂಡನೆಯೂ ಇದೆಯಂತೆ. ರೈತರ ವಿಚಾರ, ಕೆಪಿಎಸ್‍ಸಿ ಹಗರಣ, ಬಿಡದಿ ಟೌನ್‍ಶಿಪ್ ವಿಚಾರ ಬಾರದಂತೆ ನೋಡಿಕೊಳ್ಳಲು ಸರ್ಕಾರ ಮುಂದಾಗಿದೆ. ಇವನ್ನೆಲ್ಲ ಮುಚ್ಚಿಹಾಕಲು ವಿಶೇಷ ಅಂತ ನೆಪಮಾಡಿ ಅಧಿವೇಶನ ಕರೆದಿದ್ದಾರೆ. ವಿಶೇಷ ಅಧಿವೇಶನ ಕರೆದಾಗ ಮಾನ್ಯ ರಾಜ್ಯಪಾಲರು ಅನುಮೋದಿಸಬೇಕು. ಇವೆಲ್ಲ ನಿಯಮಗಳನ್ನು ಡಿ.ಕೆ.ಶಿವಕುಮಾರ್ ಅವರೇ ತಮ್ಮ ಪುಸ್ತಕದಲ್ಲಿ ಸೃಷ್ಟಿಸಿಕೊಂಡಿದ್ದಾರೆ. ಬೇರೆ ವಿಚಾರವೆಲ್ಲಾದರೂ ಕಲಾಪದಲ್ಲಿ ಚರ್ಚೆಯಾದರೆ ಸರ್ಕಾರಕ್ಕೆ ಇರುಸುಮರಿಸು ಆಗಿ ಇನ್ನೊಂದು ವಿಕೆಟ್ ಬೀಳುತ್ತೆ ಅಂತ ಭಯ ಆಗಿದೆ. ನಾವೀಗ ಈಗಾಗಲೇ ನಿಲುವಳಿ ಸೂಚನೆ ಸಲ್ಲಿಸಿದ್ದೇವೆ ಎಂದು ವಿವರಿಸಿದರು.


Spread the love

About Laxminews 24x7

Check Also

ಶೀಲ ಶಂಕಿಸಿ ಪತ್ನಿಯ ಬರ್ಬರ ಹತ್ಯೆ – ಪಿಕಾಸಿಯಲ್ಲಿ ಹೊಡೆದು ಕೊಲೆಗೈದ ಪಾಪಿ ಪತಿ

Spread the loveಬೆಂಗಳೂರು: ಶೀಲ ಶಂಕಿಸಿ ಪತಿಯೇ ಪತ್ನಿಯ ಬರ್ಬರ ಹತ್ಯೆಗೈದಿರುವ ಘಟನೆ ಮಾರತಹಳ್ಳಿ (Bengaluru Crime) ಪೊಲೀಸ್ ಠಾಣಾ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ