ಮಂಡ್ಯ: ಕಾವೇರಿ ಕೊಳ್ಳದಲ್ಲಿ ಉಂಟಾಗಿರುವ ತೀವ್ರ ನೀರಿನ ಕೊರತೆ, ಬೆಂಗಳೂರಿನ ಕುಡಿಯುವ ನೀರಿನ ಸಮಸ್ಯೆ ಹಾಗೂ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರದ ಕಾರ್ಯವೈಖರಿ ಕುರಿತು ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರಿಗೆ ವಿವರವಾದ ಪತ್ರ ಬರೆದು ಕೇಂದ್ರದ ಮಧ್ಯಪ್ರವೇಶವನ್ನು ಕೋರಿದ್ದಾರೆ.
ಕಳೆದ ಮುಂಗಾರಿನಲ್ಲಿ ರಾಜ್ಯದಲ್ಲಿ ಮಳೆ ಕೊರತೆ ತೀವ್ರವಾಗಿದ್ದು, ಜಲಾಶಯಗಳು ಕೇವಲ 50 ರಿಂದ 55 ಪ್ರತಿಶತ ಮಾತ್ರ ಭರ್ತಿಯಾಗಿವೆ. ಇಂತಹ ಸಂಕಷ್ಟದ ಸ್ಥಿತಿಯಲ್ಲೂ ತಮಿಳುನಾಡಿಗೆ ನಿರಂತರವಾಗಿ ನೀರು ಹರಿಸುವಂತೆ CWMA ಸೂಚನೆ ನೀಡುತ್ತಿರುವುದು ಕರ್ನಾಟಕದ ಹಿತಾಸಕ್ತಿಗೆ ವಿರುದ್ಧವಾಗಿದೆ ಎಂದು ಅವರು ಪತ್ರದಲ್ಲಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಕುಡಿಯುವ ನೀರಿಗೆ ಪ್ರಥಮ ಆದ್ಯತೆ:
ತಮಿಳುನಾಡು ಕೃಷಿ/ನೀರಾವರಿ ಉದ್ದೇಶಕ್ಕಾಗಿ ನೀರು ಕೇಳುತ್ತಿದ್ದರೆ, ಕರ್ನಾಟಕದಲ್ಲಿ ಬೆಂಗಳೂರು ಸೇರಿದಂತೆ ಸುತ್ತಮುತ್ತಲಿನ ಜಿಲ್ಲೆಗಳಿಗೆ ಕುಡಿಯುವ ನೀರಿಗೇ ತಾತ್ಪರ ಉಂಟಾಗಿದೆ. ರಾಷ್ಟ್ರೀಯ ಜಲ ನೀತಿಯ ಪ್ರಕಾರ ಕುಡಿಯುವ ನೀರಿಗೆ ಪ್ರಥಮ ಆದ್ಯತೆ ನೀಡಬೇಕಾಗಿದ್ದರೂ, ಪ್ರಾಧಿಕಾರವು ತಮಿಳುನಾಡಿನ ಒತ್ತಡಕ್ಕೆ ಮಣಿದು ಆದೇಶ ನೀಡುತ್ತಿದೆ ಎಂದು ದೇವೇಗೌಡರು ಉಲ್ಲೇಖಿಸಿದ್ದಾರೆ.
CWMA ಅಧಿಕಾರ ಮರುಪರಿಶೀಲನೆ:
ನೀರಾವರಿಯು ಸಂವಿಧಾನಬದ್ಧವಾಗಿ ರಾಜ್ಯ ಪಟ್ಟಿಗೆ ಸೇರಿದ ವಿಷಯವಾಗಿದೆ. ಆದರೆ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರಕ್ಕೆ ಜಲಾಶಯಗಳ ನಿರ್ವಹಣೆ ಹಾಗೂ ನಿಯಂತ್ರಣದಂತಹ ಅಸಾಂವಿಧಾನಿಕ ಅಧಿಕಾರಗಳನ್ನು ನೀಡಲಾಗಿದೆ. ಸರ್ವೋಚ್ಚ ನ್ಯಾಯಾಲಯದ ಆದೇಶಗಳಿಗೆ ಅನುಗುಣವಾಗಿ CWMA ಅಧಿಕಾರ ವ್ಯಾಪ್ತಿಯನ್ನು ಕೇವಲ ಗಡಿಭಾಗದಲ್ಲಿ ನೀರು ಬಿಡುವುದನ್ನು ಮೇಲ್ವಿಚಾರಣೆ ಮಾಡುವುದಕ್ಕೆ ಮಾತ್ರ ಸೀಮಿತಗೊಳಿಸುವಂತೆ ಜಲಶಕ್ತಿ ಸಚಿವಾಲಯಕ್ಕೆ ಸೂಚಿಸಬೇಕೆಂದು ಅವರು ಒತ್ತಾಯಿಸಿದ್ದಾರೆ.
ಮೇಕೆದಾಟು ಯೋಜನೆಗೆ ತ್ವರಿತ ಅನುಮೋದನೆ:
ವೇಗವಾಗಿ ಬೆಳೆಯುತ್ತಿರುವ ಬೆಂಗಳೂರು ನಗರದ ಕುಡಿಯುವ ನೀರಿನ ಬವಣೆ ನೀಗಿಸಲು ಉದ್ದೇಶಿಸಿರುವ ಮೇಕೆದಾಟು ಸಮತೋಲನಾ ಜಲಾಶಯ ಯೋಜನೆಗೆ ಆದ್ಯತೆಯ ಮೇರೆಗೆ ಕೇಂದ್ರ ಜಲ ಆಯೋಗದಿಂದ ತ್ವರಿತ ಅನುಮೋದನೆ ದೊರಕಿಸಿಕೊಡಬೇಕು ಎಂದು ಮನವಿ ಮಾಡಿದ್ದಾರೆ.
ಕಾವೇರಿ ನ್ಯಾಯಮಂಡಳಿ ತೀರ್ಪಿನ ಮರುಪರಿಶೀಲನೆ:
ನ್ಯಾಯಮಂಡಳಿಯ ಅಂತಿಮ ತೀರ್ಪು ಬಂದು ಸುಮಾರು ಎರಡು ದಶಕಗಳು ಕಳೆದಿದ್ದು, 50 ವರ್ಷಗಳಿಗೂ ಹಿಂದಿನ ಹಳೆಯ ಹವಾಮಾನ ಮತ್ತು ನೀರಿನ ಲಭ್ಯತೆಯ ಅಂಕಿಅಂಶಗಳ ಆಧಾರದ ಮೇಲೆ ತೀರ್ಪು ನೀಡಲಾಗಿತ್ತು. ಜಾಗತಿಕ ತಾಪಮಾನ ಹಾಗೂ ಹವಾಮಾನ ವೈಪರೀತ್ಯದ ಹಿನ್ನೆಲೆಯಲ್ಲಿ ಈ ಅವಾರ್ಡ್ನ ಸಮಗ್ರ ಮರುಪರಿಶೀಲನೆ ನಡೆಸುವ ತುರ್ತು ಅಗತ್ಯವಿದೆ ಎಂದಿದ್ದಾರೆ.
ಗೋದಾವರಿ-ಕೃಷ್ಣಾ-ಕಾವೇರಿ ನದಿ ಜೋಡಣೆ ಯೋಜನೆ:
ರಾಷ್ಟ್ರೀಯ ಜಲ ಅಭಿವೃದ್ಧಿ ಸಂಸ್ಥೆ ರೂಪಿಸಿರುವ ಗೋದಾವರಿ-ಕಾವೇರಿ ಲಿಂಕ್ ಯೋಜನೆಯಲ್ಲಿ (ಒಟ್ಟು 147.7 ಟಿಎಂಸಿ) ತೆಲಂಗಾಣಕ್ಕೆ 45 ಟಿಎಂಸಿ, ಆಂಧ್ರಪ್ರದೇಶಕ್ಕೆ 43.8 ಟಿಎಂಸಿ ಮತ್ತು ತಮಿಳುನಾಡಿಗೆ 40.9 ಟಿಎಂಸಿ ಹಂಚಿಕೆ ಮಾಡಲಾಗಿದ್ದು, ಕರ್ನಾಟಕಕ್ಕೆ ಕೇವಲ 15.9 ಟಿಎಂಸಿ ಮಾತ್ರ ಪ್ರಸ್ತಾಪಿಸಲಾಗಿದೆ. ಇದು ರಾಜ್ಯಕ್ಕೆ ಮಾಡಿದ ತಾರತಮ್ಯವಾಗಿದ್ದು, ನೈಸರ್ಗಿಕ ನ್ಯಾಯ ಮತ್ತು ಸಮಾನತೆಯ ಆಧಾರದ ಮೇಲೆ ಕರ್ನಾಟಕದ ಪಾಲನ್ನು ಹೆಚ್ಚಿಸಬೇಕೆಂದು ದೇವೇಗೌಡರು ಪ್ರಧಾನಿಗಳನ್ನು ಕೋರಿದ್ದಾರೆ.
ಕಾವೇರಿ ಜಲಾನಯನ ಪ್ರದೇಶದ ಜನರ ಬದುಕಿನ ಹಿತದೃಷ್ಟಿಯಿಂದ ಜಲಶಕ್ತಿ ಸಚಿವಾಲಯಕ್ಕೆ ಸೂಕ್ತ ನಿರ್ದೇಶನ ನೀಡಿ, ರಾಜ್ಯಕ್ಕೆ ಎದುರಾಗಿರುವ ಅನ್ಯಾಯವನ್ನು ಸರಿಪಡಿಸಬೇಕೆಂದು ಮಾಜಿ ಪ್ರಧಾನಿಗಳು ಪತ್ರದ ಮುಖಾಂತರ ಆಗ್ರಹಿಸಿದ್ದಾರೆ.
Laxmi News 24×7