ಬೆಂಗಳೂರು: ಎಪಿಎಂಸಿ ಮಾರುಕಟ್ಟೆಗಳಲ್ಲಿ ತೂಕದಲ್ಲಿ ವಂಚನೆ ಮಾಡಿರುವುದು ಬೆಳಕಿಗೆ ಬಂದಿದೆ. ಕರ್ನಾಟಕದಾದ್ಯಂತ 711 ಕಡೆ ತಪಾಸಣೆ ಮಾಡಲಾಗಿದ್ದು, 275 ವರ್ತಕರ ವಿರುದ್ಧ ಕೇಸ್ ದಾಖಲಿಸಿ, 9.8 ಲಕ್ಷ ರೂ. ದಂಡ ವಿಧಿಸಿಲಾಗಿದೆ.
ಆಹಾರ, ನಾಗರಿಕ ಪೂರೈಕೆ, ಗ್ರಾಹಕ ವ್ಯವಹಾರ ಮತ್ತು ಕಾನೂನು ಮಾಪನ ಶಾಸ್ತ್ರ ಇಲಾಖೆಯ ಮಹತ್ವಾಕಾಂಕ್ಷಿ `ಮಿಷನ್ ನಿಖರ’ನ ಮುಂದುವರೆದ ಭಾಗವಾಗಿ ಇಲಾಖೆಯ ಅಧಿಕಾರಿಗಳು ಸೋಮವಾರ (ನ.16) ಮುಂಜಾನೆ ರಾಜ್ಯಾದ್ಯಂತ ಒಂಬತ್ತು (9) ಪ್ರಮುಖ ಕೃಷಿ ಉತ್ಪನ್ನ ಮಾರುಕಟ್ಟೆಗಳಲ್ಲಿ ಏಕಕಾಲಕ್ಕೆ ತಪಾಸಣೆ ನಡೆಸಿ, ತೂಕದಲ್ಲಿ ಮೋಸ ಮತ್ತು ಕಾನೂನು ಮಾಪನ ಶಾಸ್ತ್ರ ಇಲಾಖೆ ನಿಗದಿಪಡಿಸಿದ ಮಾನದಂಡಗಳ ಉಲ್ಲಂಘನೆ ಮಾಡುತ್ತಿದ್ದ 275 ವರ್ತಕರ ವಿರುದ್ಧ ಮೊಕದ್ದಮೆ ದಾಖಲಿಸಿಕೊಂಡು 9.8 ಲಕ್ಷ ರೂ. ದಂಡ ವಿಧಿಸಿದ್ದಾರೆ.
ಆಹಾರ, ನಾಗರಿಕ ಪೂರೈಕೆ, ಗ್ರಾಹಕರ ವ್ಯವಹಾರಗಳು ಮತ್ತು ಕಾನೂನು ಮಾಪನ ಶಾಸ್ತ್ರ ಇಲಾಖೆ ಸಚಿವರಾದ ರಿಜ್ವಾನ್ ಅರ್ಷದ್ ಅವರು ಖುದ್ದಾಗಿ ಮೈಸೂರಿನ ಬಂಡಿಪಾಳ್ಯ ಎಪಿಎಂಸಿ ಮಾರುಕಟ್ಟೆಯಲ್ಲಿ ನಡೆಸಿದ ತಪಾಸಣೆಯ ನೇತೃತ್ವ ವಹಿಸಿಕೊಂಡಿದ್ದು, ಕಾರ್ಯಾಚರಣೆಯ ವಿಶೇಷವಾಗಿತ್ತು.
ಕೃಷಿ ಉತ್ಪನ್ನಗಳ ತೂಕದಲ್ಲಿ ರೈತರಿಗೆ ಮೋಸ ಮಾಡಲಾಗುತ್ತಿದೆ ಎಂಬ ದೂರುಗಳ ಹಿನ್ನೆಲೆ ಸಚಿವ ರಿಜ್ವಾನ್ ಅರ್ಷದ್ ಅವರ ಸೂಚನೆ ಮೇರೆಗೆ, ಕಾನೂನು ಮಾಪನ ಶಾಸ್ತ್ರ ಇಲಾಖೆಯ 100ಕ್ಕೂ ಹೆಚ್ಚು ಅಧಿಕಾರಿಗಳು ಮತ್ತು ಸಿಬ್ಬಂದಿ ಬೆಂಗಳೂರು, ಮೈಸೂರು, ಗಂಗಾವತಿ, ರಾಯಚೂರು, ತುಮಕೂರು, ಹುಬ್ಬಳ್ಳಿ ಮತ್ತು ಬ್ಯಾಡಗಿ ಕೃಷಿ ಉತ್ಪನ್ನ ಮಾರುಕಟ್ಟೆಗಳಲ್ಲಿ ಬೆಳಿಗ್ಗೆ ಆರು ಗಂಟೆಯಿಂದಲೇ ಏಕಕಾಲಕ್ಕೆ ತಪಾಸಣೆ ಆರಂಭಿಸಿದರು. ಮಧ್ಯಾಹ್ನ 1.30 ಗಂಟೆವರೆಗೂ ತಪಾಸಣೆ ಮುಂದುವರೆಯಿತು
ಒಂಬತ್ತು ಮಾರುಕಟ್ಟೆಗಳಲ್ಲಿ ಒಟ್ಟು 711 ಅಂಗಡಿಗಳನ್ನು ತಪಾಸಣೆ ನಡೆಸಿದ ಅಧಿಕಾರಿಗಳು, ತೂಕದಲ್ಲಿ ಮೋಸ, ದೋಷಪೂರಿತ ಯಂತ್ರಗಳ ಬಳಕೆ, ನಿಗದಿತ ಅವಧಿಯೊಳಗೆ ಇಲಾಖೆಯಿಂದ ತೂಕದ ಯಂತ್ರಗಳ ಸತ್ಯಾಪನೆ ಮತ್ತು ಮುದ್ರೆ ಮಾಡಿಸಿಕೊಳ್ಳದಿರುವುದು, ಸತ್ಯಾಪನೆ ಪ್ರಮಾಣಪತ್ರವನ್ನು ತಮ್ಮ ಅಂಗಡಿಗಳಲ್ಲಿ ಪ್ರದರ್ಶನ ಮಾಡದಿರುವ 275 ವರ್ತಕರ ವಿರುದ್ಧ ಮೊಕದ್ದಮೆ ದಾಖಲಿಸಿದ್ದಾರೆ. ಈ ಉಲ್ಲಂಘನೆಗಳಿಗಾಗಿ 9,80,000 ರೂ. ದಂಡವನ್ನು ಈ ವರ್ತಕರಿಗೆ ವಿಧಿಸುವುದರ ಜೊತೆಗೆ ಇಲಾಖೆ ಅಧಿಕಾರಿಗಳು ದೋಷಪೂರಿತ ತೂಕದ ಯಂತ್ರಗಳು ಹಾಗೂ ಸತ್ಯಾಪನೆ ಮತ್ತು ಮುದ್ರೆ ಮಾಡಿಸಿಕೊಳ್ಳದ ತೂಕದ ಯಂತ್ರಗಳನ್ನು ವಶಪಡಿಸಿಕೊಂಡಿದ್ದಾರೆ.
ತೂಕದ ಯಂತ್ರಗಳನ್ನು ಸೀಜ್ ಮಾಡಿಸಿದ ಸಚಿವರು:
ಮೈಸೂರಿನ ಬಂಡಿಪಾಳ್ಯ ಮಾರುಕಟ್ಟೆಯಲ್ಲಿ ನಡೆದ ತಪಾಸಣೆಯ ನೇತೃತ್ವ ವಹಿಸಿದ್ದ ಸಚಿವ ರಿಜ್ವಾನ್ ಅರ್ಷದ್ ಅವರು ಹಲವು ಮಳಿಗೆಗಳಲ್ಲಿ ರೈತರ ಉತ್ಪನ್ನಗಳನ್ನು ಖುದ್ದಾಗಿ ತೂಕ ಮಾಡಿಸಿ ದೋಷಪೂರಿತ ಎಂದು ಕಂಡು ಬಂದ ಯಂತ್ರಗಳನ್ನು ಜಪ್ತಿ ಮಾಡಿಸಿದರು. ಮೈಸೂರಿನ ಈಪಿಎಂಸಿ ಮಾರುಕಟ್ಟೆಯೊಂದರಲ್ಲೇ ಇಂದು 180 ತಪಾಸಣೆ ನಡೆಸಿ, 60 ಮೊಕದ್ದಮೆಗಳನ್ನು ದಾಖಲಿಸಲಾಯಿತು.
ತೂಕದಲ್ಲಿ ಮೋಸ ಮಾಡುವ ಹಾಗೂ ದೋಷಪೂರಿತ ಯಂತ್ರಗಳನ್ನು ಬಳಸುತ್ತಿರುವ ವರ್ತಕರಿಗೆ ಎಚ್ಚರಿಕೆ ನೀಡಿದ ಸಚಿವರು, ಇನ್ನು ಮುಂದೆ ಇಂತವುಗಳನ್ನು ಯಾವುದೇ ಕಾರಣಕ್ಕೂ ಸಹಿಸುವುದಿಲ್ಲ. ರೈತರು ಮಾರುಕಟ್ಟೆಗೆ ತರುವ ಪ್ರತಿ ಉತ್ಪನ್ನಗಳ ತೂಕವನ್ನು ಪ್ರಾಮಾಣಿಕವಾಗಿ ಮಾಡಬೇಕು. ರಾಜ್ಯದ ಎಪಿಎಂಸಿಗಳಲ್ಲಿ ನಡೆಯುವ ಕೃಷಿ ಉತ್ಪನ್ನಗಳ ಪ್ರತಿಯೊಂದು ವ್ಯವಹಾರವೂ ನಿಖರತೆ ಮತ್ತು ಪಾರದರ್ಶಕತೆಯಿಂದ ಕೂಡಿರಬೇಕೆಂಬುದು ನಮ್ಮ ಸರ್ಕಾರದ ಸಂಕಲ್ಪ. ಇವತ್ತು ರಾಜ್ಯಾದ್ಯಂತ ಕೃಷಿ ಉತ್ಪನ್ನ ಮಾರುಕಟ್ಟೆಗಳಲ್ಲಿ ನಡೆದಿರುವ ತಪಾಸಣೆಗಳು ಈ ನಿಟ್ಟಿನಲ್ಲಿ ಮೊದಲ ಹೆಜ್ಜೆಯಾಗಿದ್ದು. ಇಂತಹ ತಪಾಸಣೆಗಳು ಇನ್ನು ಮುಂದೆ ನಿರಂತರವಾಗಿರುತ್ತವೆ,’ ಎಂದು ಸಚಿವರು ಹೇಳಿದರು.
ಮುಂದುವರೆದು ಸಚಿವರು, ರಾಜ್ಯದ ಎಲ್ಲ ಮಾರುಕಟ್ಟೆಗಳಲ್ಲಿ ಒಂದು ಮಾದರಿ ತೂಕದ ಯಂತ್ರವನ್ನು ಕಾನೂನು ಮಾಪನ ಶಾಸ್ತ್ರ ಇಲಾಖೆ ವತಿಯಿಂದಲೇ ಇಟ್ಟು, ರೈತರು ತಮ್ಮ ಉತ್ಪನ್ನಗಳ ತೂಕದಲ್ಲಿ ಸಂಶಯ ಕಂಡುಬಂದರೆ ಈ ಮಾದರಿ ಯಂತ್ರಗಳಲ್ಲಿ ದೃಢೀಕರಿಸಿಕೊಳ್ಳುವ ವ್ಯವಸ್ಥೆ ಮಾಡಬೇಕೆಂದು ಅಧಿಕಾರಿಗಳಿಗೆ ಸೂಚಿಸಿದರು. ಜೊತೆಗೆ ಎಲ್ಲ ಮಾರುಕಟ್ಟೆಗಳಲ್ಲಿ ಪ್ರಮಾಣಿತ ತೂಕದ ಆಚರಣೆಗಳ ಕುರಿತು ಡಿಸ್ಪ್ಲೇ ಬೋರ್ಡ್ಗಳನ್ನೂ ಅಳವಡಿಸುವಂತೆಯೂ ನಿರ್ದೇಶನ ನೀಡಿದರು.
Laxmi News 24×7