ಉಡುಪಿ: ಮಣಿಪಾಲ ಪೊಲೀಸ್ ಠಾಣೆಯ ಪ್ರಕರಣವೊಂದರಲ್ಲಿ ಕಳೆದ 18 ವರ್ಷಗಳಿಂದ ನ್ಯಾಯಾಲಯಕ್ಕೆ ಹಾಜರಾಗದೆ ತಲೆಮರೆಸಿಕೊಂಡಿದ್ದ ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.
ವಾರೆಂಟ್ ಆರೋಪಿಗಳಾದ ಮುಹಮ್ಮದ್ ಹನೀಫ್ ಮತ್ತು ಫಯಾಜ್ ಮಹಮ್ಮದ್ ಬಂಧಿತ ಆರೋಪಿಗಳು. ಮಣಿಪಾಲ ಠಾಣಾ ಸಿಬ್ಬಂದಿ ಚೇತನ್ ಮತ್ತು ಮಂಜುನಾಥ ಆರೋಪಿಗಳನ್ನು ಉಳ್ಳಾಲ ಮತ್ತು ತಲಪಾಡಿಯಲ್ಲಿ ಬಂಧಿಸಿ, ನ್ಯಾಯಾಲಯಕ್ಕೆ ಹಾಜರುಪಡಿಸಿದರು. ನ್ಯಾಯಾಲಯವು ಆರೋಪಿಗಳಿಗೆ ತಲಾ 10,000 ರೂ. ದಂಡ ವಿಧಿಸಿ ಪ್ರಕರಣವನ್ನು ಮುಕ್ತಾಯಗೊಳಿಸಿದೆ.
ಕಾರ್ಕಳ ನ್ಯಾಯಾಲಯದಲ್ಲಿ ವಿಚಾರಣೆ ನಡೆಯುತ್ತಿದ್ದ ನಾಲ್ಕು ಪ್ರಕರಣಗಳಲ್ಲಿ ಕಳೆದ 9 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಆರೋಪಿಯನ್ನು ಕಾರ್ಕಳ ಪೊಲೀಸರು ಬಂಧಿಸಿದ್ದಾರೆ.
ಕಾರ್ಕಳ ಎಸಿಜೆ ಮತ್ತು ಜೆಎಂಎಫ್‌ಇಸಿ ನ್ಯಾಯಾಲಯದ ನಾಲ್ಕು ಪ್ರಕರಣಗಳ ವಾರೆಂಟ್ ಆರೋಪಿ ಶಿವಮೊಗ್ಗ ವೆಂಕಟೇಶ್ ಎಂಬಾತ 2009ರಲ್ಲಿ ಜಾಮೀನು ಪಡೆದುಕೊಂಡು ಬಿಡುಗಡೆಯಾಗಿದ್ದನು. ಆ ನಂತರ ಆರೋಪಿ ನ್ಯಾಯಾಲಯಕ್ಕೆ ಹಾಜರಾಗದೆ 4 ಪ್ರಕರಣಗಳನ್ನು ನ್ಯಾಯಾಲಯದಲ್ಲಿ ಎಲ್‌ಪಿಸಿ ಪ್ರಕರಣವಾಗಿ ವಾರೆಂಟ್ ಜಾರಿಯಲ್ಲಿತ್ತು. ಈ ಮಧ್ಯೆ ಪೊಲೀಸರು 2017ರಲ್ಲಿ ಆರೋಪಿಯನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿ, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿತ್ತು. ಬಳಿಕ ಮತ್ತೆ ಜಾಮೀನು ಪಡೆದುಕೊಂಡು ಬಿಡುಗಡೆಯಾದ ವೆಂಕಟೇಶ್ ನ್ಯಾಯಾಲಯಕ್ಕೆ ಸುಮಾರು 9 ವರ್ಷಗಳಿಂದ ಹಾಜರಾಗದೆ ತಲೆಮರೆಸಿಕೊಂಡಿದ್ದನು.
ಅ.3ರಂದು ಮಂಡ್ಯ ಜಿಲ್ಲೆಯ ಪಾಂಡವಪುರದಲ್ಲಿ ಆರೋಪಿಯನ್ನು ಬಂಧಿಸಿದ ಪೊಲೀಸರು, ಅ.4ರಂದು ಕಾರ್ಕಳ ನ್ಯಾಯಾಲಯಕ್ಕೆ ಹಾಜರುಪಡಿಸಿದರು. ನ್ಯಾಯಾಲಯವು ಆರೋಪಿಗೆ ಅ.17ರವರೆಗೆ ನ್ಯಾಯಾಂಗ ಬಂಧನ ಒಪ್ಪಿಸಿ ಆದೇಶ ನೀಡಿದೆ.
Laxmi News 24×7