ಬಳ್ಳಾರಿ: ಕೊರೊನಾ ವೈರಸ್ ಎಫೆಕ್ಟ್ ನಿಂದ ಇಡೀ ದೇಶವೇ ಲಾಕ್‍ಡೌನ್ ಆದ ಹಿನ್ನೆಲೆಯಲ್ಲಿ ಗಣಿನಗರಿ ಬಳ್ಳಾರಿಯಲ್ಲಿ ಮಂಗಳಮುಖಿಯರು ಚಿತ್ರಾನ್ನ ತಯಾರಿಸಿಕೊಂಡು ಅನಾಥರು ಹಾಗೂ ನಿರ್ಗತಿಕರಿಗೆ ಹಂಚುವ ಮೂಲಕ ಮಾನವೀಯತೆ ಮೆರೆದಿದ್ದಾರೆ.
ಮಹಾನಗರ ಪಾಲಿಕೆ ವ್ಯಾಪ್ತಿಯ ನಾಲ್ಕನೇಯ ವಾರ್ಡಿನ ಮಾಜಿ ಸದಸ್ಯೆ ಪರ್ವೀನ್ ಬಾನು ನೇತೃತ್ವದಲ್ಲಿ ಮಂಗಳಮುಖಿಯರು ಸೇರಿ ಈ ಕೆಲಸ ಮಾಡುತ್ತಿದ್ದಾರೆ. ಪಾದಾಚಾರಿ ರಸ್ತೆ, ಬಸ್ ಹಾಗೂ ರೈಲ್ವೇ ನಿಲ್ದಾಣ ಸೇರಿದಂತೆ ಇನ್ನಿತರೆ ಕಡೆಗಳಲ್ಲಿ ರಾತ್ರಿ ವೇಳೆಯಲ್ಲಿ ಹಸಿವಿನಿಂದ ಮಲಗಿಕೊಂಡಿದ್ದ ಅನಾಥರು, ನಿರ್ಗತಿಕರು ಹಾಗೂ ಬಸ್‍ಗಳಿಲ್ಲದೇ ಅಲ್ಲಿಯೇ ಠೀಕಾಣಿ ಹೂಡಿದ್ದ ದೂರದೂರಿನ ಪ್ರಯಾಣಿಕರಿಗೂ ಬಿಸಿಬಿಸಿ ಚಿತ್ರಾನ್ನ ಪ್ಯಾಕೇಟ್ ನೀಡುವ ಮೂಲಕ ಅವರ ಹಸಿವಿನ ಚೀಲ ತುಂಬಿಸಲು ಮುಂದಾಗಿದ್ದಾರೆ.
ಸಾಮಾನ್ಯವಾಗಿ ಸಂಘ, ಸಂಸ್ಥೆಗಳು, ಎನ್‍ಜಿಓಗಳು ಹಾಗೂ ರಾಜಕಾರಣಿಗಳ ಹಿಂಬಾಲಕರು ಅಥವಾ ಧನಿಕರು ಊಟದ ಪ್ಯಾಕೇಟ್ ಹಂಚಿಕೆ ಮಾಡೋದನ್ನು ನಾವು ನೀವೆಲ್ಲರೂ ನೋಡಿದ್ದೇವೆ. ಆದರೆ ಗಣಿನಗರಿಯ ಮಂಗಳಮುಖಿಯರು ಇಂತಹ ಸಾಮಾಜಿಕ ಕಾರ್ಯಕ್ಕೆ ಮುಂದಾಗಿರೋದು ಶ್ಲಾಘನಾರ್ಹ.