Breaking News

‘ನಮ್ಮನ್ನು ಶತ್ರುಗಳಂತೆ ನೋಡುತ್ತಿದ್ದರು’: ಸಂಜಯ್‌ ಪತ್ನಿ ಮನೇಕಾ ಗಾಂಧಿ ಜೊತೆಗಿನ ಕಹಿ ಸಂಬಂಧದ ಬಗ್ಗೆ ಸೋನಿಯಾ ಉಲ್ಲೇಖ

Spread the love

ನವದೆಹಲಿ: ಕಾಂಗ್ರೆಸ್‌ನ ಅಧಿನಾಯಕಿ ಸೋನಿಯಾ ಗಾಂಧಿ ಅವರ ಬದುಕಿನ ಕಥೆ ಈಗ ಪುಸ್ತಕದ ರೂಪದಲ್ಲಿ ಜಗತ್ತಿನ ಮುಂದೆ ಬಂದಿದೆ. Belonging: A Journey of Love.. ಇದು ಸೋನಿಯಾ ಗಾಂಧಿ ಅವರ ಬಹುನಿರೀಕ್ಷಿತ ಆತ್ಮಕಥನ. ಇಟಲಿಯ ಬಾಲ್ಯದಿಂದ ಭಾರತದ ರಾಜಕೀಯದ ಕೇಂದ್ರ ಬಿಂದುವಾಗುವವರೆಗಿನ ಪಯಣವನ್ನು ಈಗ ಈ ಪುಸ್ತಕ ತೆರೆದಿಟ್ಟಿದೆ. ಪುಸ್ತಕದಲ್ಲಿನ ಹಲವು ವಿಷಯಗಳು ಜನರ ಹುಬ್ಬೆರಿಸುವಂತೆ ಮಾಡಿದೆ.

Belonging: A Journey of Love… ಇದು ಕೇವಲ ಕಾಂಗ್ರೇಸ್ ಅಧಿನಾಯಕಿ ಸೋನಿಯಗಾಂಧಿ ಅವರ ಆತ್ಮಕಥನವಲ್ಲ. ಕಳೆದ ನಾಲ್ಕೈದು ದಶಕಗಳಲ್ಲಾದ ರಾಜಕೀಯ ಬೆಳವಣಿಗಳ ಹೂರಣ. ನಿನ್ನೆ ಬಿಡುಗಡೆಯಾದ ಈ ಪುಸ್ತಕ ಈಗ ದೇಶದ್ಯಾಂತ ಚರ್ಚೆಗೆ ಕಾರಣವಾಗಿದೆ. ಸೋನಿಯಗಾಂಧಿ ಉಲ್ಲೇಖಿಸಿದ ಹತ್ತಾರು ವಿಷಯಗಳು ಸಾಕಷ್ಟು ಚರ್ಚೆಗೆ ಗ್ರಾಸವಾಗಿದೆ.

ಹಾರ್ಪರ್ ಕಾಲಿನ್ಸ್ ಇಂಡಿಯಾ, ಅಮೆರಿಕದ ಆಲ್ಫ್ರೆಡ್ ಎ.ನಾಫ್ ಪ್ರಕಾಶನ ಸಂಸ್ಥೆಯ ಮೂಲಕ ಹೊರ ಬಂದ ಈ ಪುಸ್ತಕ ಪ್ರೀತಿ, ಕುಟುಂಬ, ಗುರುತು, ಕರ್ತವ್ಯ ಮತ್ತು ತಾನು ಸೇರಿಕೊಂಡ ದೇಶದೊಂದಿಗಿನ ಸಂಬಂಧ. ಈ ಐದು ಆಯಾಮಗಳಲ್ಲಿ ಸೋನಿಯಾ ತಮ್ಮ ಬದುಕಿನ ಸತ್ಯ ಕಥೆಯನ್ನು ಕಟ್ಟಿಕೊಟ್ಟಿದ್ದಾರೆ.

ಸೋನಿಯಾ ಗಾಂಧಿ ಬದುಕಿನ ಪಯಣ ಆರಂಭವಾಗಿದ್ದು ಇಟಲಿಯಲ್ಲಿ. 1946ರಲ್ಲಿ ಜನಿಸಿದ ಸೋನಿಯಾ, ತಮ್ಮ ಬಾಲ್ಯ ಮತ್ತು ಯೌವನವನ್ನು ಇಟಲಿಯಲ್ಲಿ ಕಳೆದವರು. ಬಳಿಕ ಉನ್ನತ ಶಿಕ್ಷಣಕ್ಕಾಗಿ ಕೇಂಬ್ರಿಡ್ಜ್‌ಗೆ ತೆರಳಿದ್ದ ಸಂದರ್ಭದಲ್ಲಿ ರಾಜೀವ್ ಗಾಂಧಿ ಅವರ ಪರಿಚಯವಾಗಿತ್ತು. ಪರಿಚಯ ಪ್ರೀತಿಯಾಗಿ ಬದಲಾಯಿತು. 1968ರಲ್ಲಿ ರಾಜೀವ್ ಗಾಂಧಿಯವರನ್ನು ವಿವಾಹವಾದ ಸೋನಿಯಾ, ಭಾರತದ ಗಾಂಧಿ ಕುಟುಂಬದ ಸೊಸೆಯಾದರು. ಆದರೆ ಇಟಲಿಯ ಸಂಸ್ಕೃತಿಯಲ್ಲಿ ಬೆಳೆದಿದ್ದ ಸೋನಿಯಾಗೆ ಭಾರತದ ಜೀವನಶೈಲಿಗೆ ಹೊಂದಿಕೊಳ್ಳುವುದು ಸುಲಭವಾಗಿರಲಿಲ್ಲ.

ಈಗಾಗಲೇ ಬಿಡುಗಡೆಯಾಗಿರುವ ಪುಸ್ತಕದ ಕೆಲವು ಭಾಗಗಳಲ್ಲಿ ಭಾರತೀಯ ಆಹಾರ ಪದ್ಧತಿಗೆ ಹೊಂದಿಕೊಂಡ ತಮ್ಮ ಅನುಭವಗಳನ್ನು ಅವರು ವಿವರಿಸಿದ್ದಾರೆ. ರಾಜೀವ್ ಜೊತೆ ಮೊದಲ ಬಾರಿಗೆ ತಿಂದ ತಂದೂರಿ ಚಿಕನ್‌ನಿಂದ ಹಿಡಿದು, ಕುಟುಂಬದೊಂದಿಗೆ ಊಟದ ಮೇಜಿನಲ್ಲಿ ಕುಳಿತು ತಿಂದ ಅನ್ನ, ಫುಲ್ಕಾ, ತರಕಾರಿ, ಮಾಂಸಾಹಾರ ಮತ್ತು ಪ್ರತಿದಿನದ ಅರ್‌ಹರ್ ದಾಲ್‌ವರೆಗಿನ ನೆನಪುಗಳಿವೆ. ಅಪರಿಚಿತ ದೇಶವೊಂದು ನಿಧಾನವಾಗಿ ತನ್ನದಾಗುವ ಪ್ರಕ್ರಿಯೆಯನ್ನು ಆಹಾರ ಮತ್ತು ಕುಟುಂಬದ ನೆನಪುಗಳ ಮೂಲಕ ವಿವರಿಸಿದ್ದಾರೆ.

ಸೋನಿಯಾ ಬದುಕಿನಲ್ಲಿ ಪ್ರೀತಿ ಮತ್ತು ಕುಟುಂಬದ ನೆನಪುಗಳಷ್ಟೇ ಇಲ್ಲ. ಆಳವಾದ ನೋವುಗಳೂ ಇವೆ. ಸಂಜಯ್ ಗಾಂಧಿ ಅವರ ವಿಮಾನ ಅಪಘಾತದ ಸಾವು. 1984ರಲ್ಲಿ ಅತ್ತೆ ಇಂದಿರಾ ಗಾಂಧಿ ಅವರ ಹತ್ಯೆ. 1991ರಲ್ಲಿ ಪತಿ ರಾಜೀವ್ ಗಾಂಧಿ ಅವರ ಹತ್ಯೆ. ಒಂದರ ಹಿಂದೆ ಒಂದರಂತೆ ಎದುರಾದ ಈ ದುರಂತಗಳು ಸೋನಿಯಾ ಅವರನ್ನು ಮಾನಸಿಕವಾಗಿ ಕುಗ್ಗಿಸಿದ್ದವು. ವರ್ಷಗಳ ಕಾಲ ರಾಜಕೀಯದಿಂದ ದೂರ ಉಳಿಯಲು ಬಯಸಿದ್ದ ಸೋನಿಯಾ, ರಾಜೀವ್ ಹತ್ಯೆಯ ಬಳಿಕ ಕಾಂಗ್ರೆಸ್ ಪಕ್ಷದ ನಾಯಕತ್ವದ ಜವಾಬ್ದಾರಿಯನ್ನು ಹೊತ್ತುಕೊಂಡರು.

ಸೋನಿಯಾ ಗಾಂಧಿ ಆತ್ಮಕಥನದಲ್ಲಿ ಮನೇಕಾ ಗಾಂಧಿ ಜೊತೆಗಿನ ಕಹಿ ಸಂಬಂಧದ ಉಲ್ಲೇಖಿಸಿದ್ದಾರೆ. ನಮ್ಮನ್ನು ಶತ್ರುಗಳಂತೆ ನೋಡುತ್ತಿದ್ದರು ಎಂದು ಮನೇಕಾ ಗಾಂಧಿ ಬಗ್ಗೆ ಸೋನಿಯಾ ಗಾಂಧಿ ದಾಖಲಿಸಿದ್ದಾರೆ. ಸಂಜಯ್ ಗಾಂಧಿ ನಿಧನದ ಬಳಿಕ ಮನೇಕಾ ರಾಜಕೀಯ ಸ್ಥಾನಮಾನ ಬಯಸಿದ್ದರು. ಇಂದಿರಾ ಗಾಂಧಿ ಮನೇಕಾ ಅವರಿಗೆ ನಾಯಕತ್ವದ ಜವಾಬ್ದಾರಿ ನೀಡಲು ನಿರಾಕರಿಸಿದ್ದರು. ಈ ವಿಚಾರದಲ್ಲಿ ಸಾಕಷ್ಟು ಗಲಾಟೆಯಾಗಿದ್ದು, ಮನೇಕಾ ಅವಾಚ್ಯ ಶಬ್ದಗಳಿಂದ ನನ್ನನ್ನು ನಿಂಧಿಸಿದ್ದರು. ಇಂದಿರಾ ಗಾಂಧಿ ಮುಂದೆಯೇ ಎಲ್ಲವೂ ನಡೆಯುತ್ತಿತ್ತು. ಇದೇ ವಿಚಾರ ರಾಜೀವ್ ಗಾಂಧಿ, ಸಂಜಯ್ ಗಾಂಧಿ ನಡುವೆ ಭಿನ್ನಾಭಿಪ್ರಾಯಕ್ಕೆ ಕಾರಣವಾಯಿತು ಎಂದು ಮನೇಕಾ ಗಾಂಧಿ ಕುಟುಂಬದಿಂದ ದೂರವಾದ ಘಟನೆ ಬಗ್ಗೆಯೂ ಆತ್ಮಕಥನದಲ್ಲಿ ಸೋನಿಯಾ ಗಾಂಧಿ ಬರೆದಿದ್ದಾರೆ.


Spread the love

About Laxminews 24x7

Check Also

ಮುಂದಿನ ವರ್ಷ 3 ದಿನಗಳ ವಿಶ್ವ ಕನ್ನಡ ಸಾಹಿತ್ಯ ಸಮ್ಮೇಳನ: ಡಿಕೆಶಿ ಘೋಷಣೆ

Spread the loveಮೈಸೂರು: ಮುಂದಿನ ವರ್ಷ ಮೂರು ದಿನಗಳ ಮೂರು ದಿನಗಳ ವಿಶ್ವ ಕನ್ನಡ ಸಾಹಿತ್ಯ ಸಮ್ಮೇಳನ ಆಯೋಜನೆ ಮಾಡಲಾಗುವುದು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ