Breaking News

ಸಿಎಂ ಆಗಿದ್ದಾಗಲೇ ನೈಸ್‌ ರದ್ದು ಮಾಡಿದ್ದರೆ ಸಮಸ್ಯೆಯೇ ಇರುತ್ತಿರಲಿಲ್ಲ: ಹೆಚ್‌ಡಿಕೆಗೆ ಕೃಷ್ಣ ಬೈರೇಗೌಡ ತಿರುಗೇಟು

Spread the love

ಬೆಂಗಳೂರು: ಹೆಚ್‌ಡಿ ಕುಮಾರಸ್ವಾಮಿ ಅವರೇ ಈ ಹಿಂದೆ ಮುಖ್ಯಮಂತ್ರಿಯಾಗಿದ್ದರು. ಪೆನ್ನು-ಪೇಪರ್ ಕೈಯಲ್ಲಿದ್ದಾಗಲೇ ನೈಸ್‌ ಯೋಜನೆಯನ್ನು  ರದ್ದು ಮಾಡಿದ್ದರೆ ಇವತ್ತು ಯಾವುದೇ ಸಮಸ್ಯೆಯೇ ಇರುತ್ತಿರಲಿಲ್ಲ ಎಂದು ಸಚಿವ ಕೃಷ್ಣ ಬೈರೇಗೌಡ ತೀಕ್ಷ್ಣ ತಿರುಗೇಟು ನೀಡಿದ್ದಾರೆ.

ಹೆಚ್.ಡಿ. ಕುಮಾರಸ್ವಾಮಿ ಅವರು ನೈಸ್  ಯೋಜನೆಯ ಕುರಿತು ಬಹಿರಂಗ ಚರ್ಚೆಗೆ ಆಹ್ವಾನ ನೀಡಿದ್ದಕ್ಕೆ ಪ್ರತಿಕ್ರಿಯಿಸಿದ ಅವರು, ತಮ್ಮ ಕೈಯಲ್ಲೇ ಅಧಿಕಾರವಿದ್ದಾಗ ಏನನ್ನೂ ಮಾಡದೆ, ಈಗ ರಾಜಕೀಯಕ್ಕಾಗಿ ಮಾತನಾಡಿದರೆ ಹೇಗೆ? ಈಗಲೂ ಅವರು ಕೇಂದ್ರ ಸರ್ಕಾರಕ್ಕೆ ಹೇಳಿ ಯೋಜನೆಯನ್ನು ರದ್ದು ಮಾಡಿಸಲಿ. ಹಿರಿಯರಾದ ಹೆಚ್.ಡಿ. ದೇವೇಗೌಡರು ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲೇ ಈ ಯೋಜನೆಗೆ ಸಹಿ ಹಾಕಲಾಗಿತ್ತು. ಈಗ ಟೀಕೆ ಮಾಡಿದರೆ ಏನು ಪ್ರಯೋಜನ ಎಂದು ಪ್ರಶ್ನಿಸಿದರು.

ಕೇಂದ್ರದ ಬಳಿಗೆ ತೆರಳುವ ಬರ ಪರಿಹಾರ ನಿಯೋಗದ ವಿಚಾರದಲ್ಲೂ ಪ್ರತಿಪಕ್ಷಗಳ ನಡೆಗೆ ಸಚಿವರು ತೀವ್ರ ಅಸಮಾಧಾನ ವ್ಯಕ್ತಪಡಿಸಿದರು. ಸದನದ ಒಳಗೆ ಸರ್ವಪಕ್ಷ ನಿಯೋಗ ಹೋಗೋಣ ಎಂದು ಹೇಳುವ ಬಿಜೆಪಿ ನಾಯಕರು, ಹೊರಗೆ ಬಂದು ನಾವು ಬರುವುದಿಲ್ಲ ಎನ್ನುತ್ತಾರೆ. ಕೇಂದ್ರ ಸರ್ಕಾರದ ಬಳಿ ಹೋಗಿ ನ್ಯಾಯ ಕೇಳಲು ಇವರಿಗೆ ಧೈರ್ಯವಿಲ್ಲ. ನಾವು ಕೇಂದ್ರಕ್ಕೆ ತೆರಿಗೆ ಕಟ್ಟುತ್ತಿರುವುದು ಅವರು ಮಜಾ ಮಾಡುವುದಕ್ಕಾ? ಬಿಜೆಪಿ ಮತ್ತು ಜೆಡಿಎಸ್ ಎರಡೂ ಪಕ್ಷಗಳು ಕನ್ನಡಿಗರಿಗೆ ದ್ರೋಹ ಬಗೆಯುತ್ತಿವೆ ಎಂದು ಆಕ್ರೋಶ ಹೊರಹಾಕಿದರು.

ಇಂತಹ ಕ್ಷುಲ್ಲಕ ಹೇಳಿಕೆಗಳಿಂದ ಜನರಿಗೆ ಯಾವುದೇ ಲಾಭವಾಗುವುದಿಲ್ಲ ಎಂದ ಸಚಿವರು, ಮೇಕೆದಾಟು ಯೋಜನೆ ವಿಚಾರವಾಗಿ ಕೇಂದ್ರ ಸರ್ಕಾರದ ಮೇಲೆ ಒತ್ತಡ ಹೇರುವಂತೆ ಮನವಿ ಮಾಡಿದರು.

ಮೇಕೆದಾಟು ವಿಚಾರದಲ್ಲಿ ಬಿಜೆಪಿಯವರಿಗೆ ಕೈಮುಗಿದು ಕೇಳಿಕೊಳ್ಳುತ್ತೇನೆ. ಸುಪ್ರೀಂ ಕೋರ್ಟ್ ಆದೇಶವಿದ್ದರೂ ಕೇಂದ್ರ ಸರ್ಕಾರ ಅನುಮತಿ ನೀಡುತ್ತಿಲ್ಲ. ದಯಮಾಡಿ ಕೇಂದ್ರದಿಂದ ಮೇಕೆದಾಟು ಯೋಜನೆಗೆ ಅನುಮತಿ ಕೊಡಿಸಿ. ಆಮೇಲೂ ನಾವು ಯೋಜನೆಯನ್ನು ಜಾರಿಗೊಳಿಸದಿದ್ದರೆ ಆಗ ನಮ್ಮನ್ನು ಟೀಕೆ ಮಾಡಿ ಎಂದು ಸವಾಲು ಹಾಕಿದರು.


Spread the love

About Laxminews 24x7

Check Also

5 ತಿಂಗಳಿಗೂ ಹೆಚ್ಚು ಕಾಲ ಚಿಕಿತ್ಸೆ ನೀಡಿದರೂ ಬದುಕುಳಿಯಲಿಲ್ಲ; ದುಬಾರೆ ಆನೆ ಶಿಬಿರದಲ್ಲಿ ಗಂಡಾನೆ ಸಾವು

Spread the loveಮಡಿಕೇರಿ: ಕೊಡಗಿನ ದುಬಾರೆ ಆನೆ ಶಿಬಿರದಲ್ಲಿ ಸುಮಾರು 19 ವರ್ಷದ ಗಂಡಾನೆಯೊಂದು ಮೃತಪಟ್ಟಿದೆ. ಕಾದಾಟದಲ್ಲಿ ಗಾಯಗೊಂಡು, ಮುರಿದ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ