ಬೆಳಗಾವಿ: ದೇಸೂರು ಗ್ರಾಮದ ಸರ್ಕಾರಿ ಆದರ್ಶ ಪೂರ್ವ ಪ್ರಾಥಮಿಕ ಮರಾಠಿ ಶಾಲೆಯ ಶತಮಾನೋತ್ಸವ ಸಮಾರಂಭದಲ್ಲಿ ಭಾಗವಹಿಸಿದ್ದ ಶಾಸಕಿ ಲಕ್ಷ್ಮೀ ಹೆಬ್ಬಾಳಕರ್, ಶಾಲೆಯ ಸಮಗ್ರ ಅಭಿವೃದ್ಧಿಗೆ ಅಗತ್ಯ ಸಹಕಾರ ನೀಡುವುದಾಗಿ ಭರವಸೆ ನೀಡಿದರು.
ಬೆಳಗಾವಿ ಗ್ರಾಮೀಣ ಕ್ಷೇತ್ರದಲ್ಲಿ ಈಗಾಗಲೇ ಸುಮಾರು 200 ಶಾಲಾ ಕೊಠಡಿಗಳನ್ನು ನಿರ್ಮಿಸಿಕೊಡಲಾಗಿದ್ದು, ಮರಾಠಿ ಭಾಷಿಕ ಪ್ರದೇಶಗಳಲ್ಲಿ 30 ಸ್ಮಾರ್ಟ್ ಕ್ಲಾಸ್ಗಳನ್ನು ಒದಗಿಸಲಾಗಿದೆ. ಕಳೆದ ಎಂಟು ವರ್ಷಗಳಲ್ಲಿ ಶಿಕ್ಷಣ ಸೇರಿದಂತೆ ಹಲವು ಕ್ಷೇತ್ರಗಳಲ್ಲಿ ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳಲಾಗಿದೆ. ಮರಾಠಿ ಮಕ್ಕಳಿಗೆ ಮಾತೃಭಾಷೆಯಲ್ಲಿಯೇ ಶಿಕ್ಷಣ ದೊರೆಯಬೇಕು ಮತ್ತು ಭಾರತೀಯ ಸಂಸ್ಕೃತಿ, ಪರಂಪರೆ ಉಳಿಯಬೇಕು ಎಂಬ ಉದ್ದೇಶದಿಂದ ದೇಸೂರು ಶಾಲೆಯಲ್ಲಿ ಎಲ್ಕೆಜಿ, ಯುಕೆಜಿ ಆರಂಭಿಸಲು ಸರ್ಕಾರದಿಂದ ಅನುಮೋದನೆ ಕೊಡಿಸಲಾಗಿದೆ. ಒಂದೇ ಆವರಣದಲ್ಲಿ ಮರಾಠಿ ಮತ್ತು ಇಂಗ್ಲಿಷ್ ಕಲಿಕೆಗೆ ಅವಕಾಶ ಕಲ್ಪಿಸುವ ಉದ್ದೇಶವಿದೆ ಎಂದು ತಿಳಿಸಿದರು.
ಶಾಲೆಯ ಮುಖ್ಯಸ್ಥರು ಆಟದ ಮೈದಾನಕ್ಕಾಗಿ ಐದು ಎಕರೆ ಸರ್ಕಾರಿ ಜಮೀನು ಮಂಜೂರು ಮಾಡಿಸುವಂತೆ ಮನವಿ ಸಲ್ಲಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಶತಮಾನೋತ್ಸವದ ಸಂದರ್ಭದಲ್ಲಿ ದೇಸೂರು ಶಾಲೆಗೆ 5 ಎಕರೆ ಜಮೀನು ಮಂಜೂರು ಮಾಡಿಸಲು ಸರ್ಕಾರದ ಮಟ್ಟದಲ್ಲಿ ಪ್ರಯತ್ನಿಸುವುದಾಗಿ ಲಕ್ಷ್ಮೀ ಹೆಬ್ಬಾಳಕರ್ ಭರವಸೆ ನೀಡಿದರು.
ಗ್ರಾಮದ ಮೂಲಸೌಕರ್ಯ ಅಭಿವೃದ್ಧಿ ಕಾರ್ಯಗಳನ್ನೂ ಪ್ರಸ್ತಾಪಿಸಿದ ಅವರು, ಇನ್ನುಳಿದಿರುವ ಕೆಲಸಗಳನ್ನೂ ಪೂರ್ಣಗೊಳಿಸಲು ಕ್ರಮ ಕೈಗೊಳ್ಳುವುದಾಗಿ ಹೇಳಿದರು.
ಶಾಲೆಯ ಸ್ಥಾಪನೆಗೆ ನೂರು ವರ್ಷಗಳ ಹಿಂದೆ ಜಮೀನು ದಾನ ಮಾಡಿದ ದೇಶಪಾಂಡೆ ಕುಟುಂಬದ ಕೊಡುಗೆಯನ್ನು ವಿಶೇಷವಾಗಿ ಸ್ಮರಿಸಿದ ಅವರು, ಸಾರಿಗೆ ಸೇರಿದಂತೆ ಯಾವುದೇ ಆಧುನಿಕ ಸೌಲಭ್ಯಗಳಿಲ್ಲದ ಕಾಲದಲ್ಲಿ ಗ್ರಾಮದ ಭವಿಷ್ಯ ಶಿಕ್ಷಣದಿಂದ ಮಾತ್ರ ಉಜ್ವಲವಾಗಲು ಸಾಧ್ಯವೆಂದು ದೂರದೃಷ್ಟಿಯಿಂದ ಜಮೀನು ದಾನ ಮಾಡಿರುವುದು ಮಹತ್ವದ ಸೇವೆಯಾಗಿದೆ. ಇಂತಹ ದಾನಿಗಳ ಕೊಡುಗೆಯನ್ನು ಎಷ್ಟು ಸ್ಮರಿಸಿದರೂ ಕಡಿಮೆಯೇ ಎಂದು ಪ್ರಶಂಸಿಸಿದರು.
ದೇಸೂರು ಹಾಗೂ ಮರಾಠಿ ಭಾಷಿಕರ ಪರವಾಗಿ ಗ್ರಂಥಾಲಯ ಸ್ಥಾಪಿಸುವಂತೆ ಸಲ್ಲಿಸಲಾದ ಮನವಿಗೂ ಸ್ಪಂದಿಸಿದ ಅವರು, ಛತ್ರಪತಿ ಶಿವಾಜಿ ಮಹಾರಾಜರ ರಾಜಹಂಸಗಡದ ಅಭಿವೃದ್ಧಿ ಮತ್ತು ಶಿವಚರಿತ್ರೆ ಯೋಜನೆಗೆ ರಾಜ್ಯ ಸರ್ಕಾರ ₹5 ಕೋಟಿ ಅನುದಾನ ಮಂಜೂರು ಮಾಡಿದೆ. ಈ ಯೋಜನೆಯ ಭಾಗವಾಗಿ ಕನಿಷ್ಠ ₹50 ಲಕ್ಷ ವೆಚ್ಚದಲ್ಲಿ ಗ್ರಂಥಾಲಯ ನಿರ್ಮಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.
ಗ್ರಂಥಾಲಯಕ್ಕೆ ಅಗತ್ಯವಿರುವ ಪುಸ್ತಕಗಳ ಪಟ್ಟಿಯನ್ನು ಶಿಕ್ಷಕರು ಹಾಗೂ ಸಂಬಂಧಪಟ್ಟವರು ಸಿದ್ಧಪಡಿಸಬೇಕು. ಗ್ರಂಥಾಲಯದ ಸದುಪಯೋಗವಾಗುವಂತೆ ನೋಡಿಕೊಳ್ಳುವ ಜವಾಬ್ದಾರಿ ಶಾಲಾ ಶಿಕ್ಷಕರು ಮತ್ತು ವಿದ್ಯಾರ್ಥಿಗಳ ಮೇಲಿದೆ ಎಂದರು.
ರಾಜಕೀಯ ಕೇವಲ ಚುನಾವಣೆಗೆ ಸೀಮಿತವಾಗಿದ್ದು, ಚುನಾವಣೆ ಮುಗಿದ ಬಳಿಕ ಸಮಾಜದ ಅಭಿವೃದ್ಧಿಯೇ ತಮ್ಮ ಆದ್ಯತೆ. ಜಾತಿ, ಭಾಷೆ ಅಥವಾ ಪಕ್ಷದ ಆಧಾರದಲ್ಲಿ ಯಾರನ್ನೂ ಪ್ರತ್ಯೇಕವಾಗಿ ನೋಡುವುದಿಲ್ಲ. ಯಾವುದೇ ಪಕ್ಷದವರಾದರೂ ಅಭಿವೃದ್ಧಿ ಕೆಲಸಕ್ಕಾಗಿ ತಮ್ಮ ಬಳಿ ಬಂದರೆ ಸ್ಪಂದಿಸುತ್ತೇನೆ. ಎಲ್ಲರನ್ನೂ ಜೊತೆಯಲ್ಲಿ ಕೊಂಡೊಯ್ದು ಕ್ಷೇತ್ರದ ಅಭಿವೃದ್ಧಿಗೆ ಶ್ರಮಿಸುವುದೇ ತಮ್ಮ ಉದ್ದೇಶ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಖಾನಾಪುರ ಶಾಸಕ ವಿಠ್ಠಲ ಹಲಗೇಕರ್, ಪ್ರಶಾಂತ ಪಾಟೀಲ, ತಾನಾಜಿ ಹೊಸೂರಕರ್, ಅರವಿಂದ ಪಾಟೀಲ, ಶಿವಾಜಿ ಸುಂಠಕರ, ರಮಾಕಾಂತ ಕೊಂಡೂಸ್ಕರ್, ವಿವೇಕಾನಂದ ಪಾಟೀಲ, ಪುಂಡಲೀಕ್ ಚೌಹಾಣ್, ಸಂಕೇತ್ ಪಾಟೀಲ, ರಮೇಶ್ ಗೊರಲ್, ಮನೋಜ ಸಾವರಕರ್, ಯಲ್ಲಪ್ಪ ಸಾವಂತ, ಮಂಗಳಾ ಕಾಂಬಳೆ, ಸುನಿಲ್ ಪಾಟೀಲ, ರಾಜೇಂದ್ರ ಪಾಟೀಲ, ಸುಭಾಷ್ ಪಾಟೀಲ, ರೋಹಿತ್ ತಳವಾರ, ಮಂಗೇಶ್ ದೇಶಪಾಂಡೆ, ಭರಮನಿ ಪಾಟೀಲ, ಸಾತೇರಿ ಕಳಸೇಕರ್, ದಿಗಂಬರರಾವ್ ಪಾಟೀಲ, ಹೇಮಂತ ಚೌಹಾಣ್, ಗಂಗಾರಾಮ್ ಮಜುಕರ್, ವೆಂಕಟ್ ಪಾಟೀಲ, ಜೋತಿಬಾ ಕಳಸೇಕರ್, ಸಂತೋಷ ಮರಗಾಯಿ, ಅಂಕುಶ್ ಕೆಸರಕರ್, ಜಿ.ಕೆ. ಪಾಟೀಲ ಸೇರಿದಂತೆ ಶಾಲಾ ಸಿಬ್ಬಂದಿ, ಎಸ್ಡಿಎಂಸಿ ಸದಸ್ಯರು ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.
Laxmi News 24×7