ಹಾವೇರಿ: ಮೊಬೈಲ್ ಫೋನ್ ಬಳಕೆ ಕಡಿಮೆ ಮಾಡಿ, ಓದಿಕೊಳ್ಳುವಂತೆ ಪೋಷಕರು ಬುದ್ಧಿವಾದ ಹೇಳಿದ್ದಕ್ಕೆ ಮನನೊಂದು 16 ವರ್ಷದ ಬಾಲಕ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಹಾವೇರಿ ಜಿಲ್ಲೆ ಬ್ಯಾಡಗಿ ತಾಲೂಕಿನ ಮಲ್ಲೂರು ಗ್ರಾಮದಲ್ಲಿ ನಡೆದಿದೆ.
ಮೃತ ಬಾಲಕನನ್ನು ಹರ್ಷ ಮೋರೆ (16) ಎಂದು ಗುರುತಿಸಲಾಗಿದೆ. ಹರ್ಷ ಎಸ್ಎಸ್ಎಲ್ಸಿ ವ್ಯಾಸಂಗ ಮಾಡುತ್ತಿದ್ದ. ಪರೀಕ್ಷೆ ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ ಬಾಲಕ ಹೆಚ್ಚು ಸಮಯ ಮೊಬೈಲ್ ಬಳಸುತ್ತಿರುವುದನ್ನು ಗಮನಿಸಿದ ಪೋಷಕರು, ಮೊಬೈಲ್ ಬಿಟ್ಟು ವಿದ್ಯಾಭ್ಯಾಸದ ಕಡೆ ಹೆಚ್ಚಿನ ಗಮನ ಹರಿಸುವಂತೆ ತಿಳಿಹೇಳಿದ್ದರು.
ಪೋಷಕರು ತಮ್ಮ ಒಳಿತಿಗಾಗಿಯೇ ಬುದ್ಧಿವಾದ ಹೇಳಿದ್ದರೂ, ಇದರಿಂದ ಬಾಲಕ ಮನನೊಂದಿದ್ದ ಎನ್ನಲಾಗಿದೆ. ಬಳಿಕ ಮನೆಯ ಕೋಣೆಯಲ್ಲಿ ಯಾರೂ ಇಲ್ಲದ ವೇಳೆ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ವಿಷಯ ತಿಳಿಯುತ್ತಿದ್ದಂತೆ ಬ್ಯಾಡಗಿ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಘಟನೆ ಕುರಿತು ಪೊಲೀಸರು ತನಿಖೆ ಮುಂದುವರಿಸಿದ್ದಾರೆ.
Laxmi News 24×7