ಉಡುಪಿ: ತಾಯಿಯ ಅಂತಿಮ ದರ್ಶನ ಪಡೆದು ಅಂತ್ಯಕ್ರಿಯೆಯಲ್ಲಿ ಪಾಲ್ಗೊಳ್ಳಲು ಭೂಗತ ಪಾತಕಿ ರವಿ ಪೂಜಾರಿ ಉಡುಪಿಗೆ ಆಗಮಿಸಿದ್ದಾನೆ.
ಹೃದಯಾಘಾತದಿಂದ ನಿಧನ ಹೊಂದಿದ ತಾಯಿ ಸುಶೀಲಾ ಪೂಜಾರ್ತಿ ಅವರ ಅಂತ್ಯಸಂಸ್ಕಾರ ಇಂದು ಮಲ್ಪೆಯ ನೆರ್ಗಿಯ ಹಿರಿಯ ಮನೆಯಲ್ಲಿ ನಡೆಯಲಿದೆ.
ನ್ಯಾಯಾಲಯದ ವಿಶೇಷ ಅನುಮತಿ ಮೇರೆಗೆ ಬಿಗಿ ಪೊಲೀಸ್ ಭದ್ರತೆಯಲ್ಲಿ ರವಿ ಪೂಜಾರಿಯನ್ನ ಬೆಂಗಳೂರಿನಿಂದ ಉಡುಪಿಗೆ ಕರೆತರಲಾಗಿದೆ. ಅಂತ್ಯಕ್ರಿಯೆ ವಿಧಿವಿಧಾನಗಳು ಪೂರ್ಣಗೊಂಡ ಬಳಿಕ ಮತ್ತೆ ಬೆಂಗಳೂರಿಗೆ ಕರೆದೊಯ್ಯುವಂತೆ ನ್ಯಾಯಾಲಯ ಸೂಚನೆ ನೀಡಿದೆ.
ಸುಮಾರು 26 ವರ್ಷಗಳ ಕಾಲ ಭೂಗತ ಜಗತ್ತಿನಲ್ಲಿ ಸಕ್ರಿಯವಾಗಿದ್ದ ರವಿ ಪೂಜಾರಿ ಇದೀಗ ತಾಯಿಯ ಅಂತಿಮ ಸಂಸ್ಕಾರದಲ್ಲಿ ಪಾಲ್ಗೊಳ್ಳಲು ಸ್ವಗ್ರಾಮಕ್ಕೆ ಆಗಮಿಸಿದ್ದಾನೆ. ರವಿ ಪೂಜಾರಿಯ ತಾಯಿ ಸುಶೀಲಾ ಪೂಜಾರ್ತಿ ಅವರು ಮೊನ್ನೆ ರಾತ್ರಿ ಹೃದಯಾಘಾತದಿಂದ ನಿಧನ ಹೊಂದಿದ್ದರು. ಅವರಿಗೆ 86 ವರ್ಷ ವಯಸ್ಸಾಗಿತ್ತು. ಐವರು ಮಕ್ಕಳಲ್ಲಿ ಇಬ್ಬರು ಹೆಣ್ಣು ಮಕ್ಕಳು ಹಾಗೂ ಮೂವರು ಗಂಡು ಮಕ್ಕಳಿದ್ದು, ಅವರಲ್ಲಿ ರವಿ ಪೂಜಾರಿ ಕೂಡ ಒಬ್ಬ.
Laxmi News 24×7