ಮೈಸೂರು: ಕಳೆದ 45 ವರ್ಷಗಳಲ್ಲಿ ಇದೇ ಮೊದಲ ಬಾರಿಗೆ ಗಜಪಡೆಯ ಕ್ಯಾಪ್ಟನ್ (ಅಂಬಾರಿ ಆನೆ) ಆಯ್ಕೆ ವಿಚಾರವನ್ನ ನನ್ನಿಂದ ಮುಚ್ಚಿಡಲಾಗಿತ್ತು ಎಂದು ರಾಜವಂಶಸ್ಥೆ ಪ್ರಮೋದಾದೇವಿ ಒಡೆಯರ್ ಬೇಸರ ಹೊರಹಾಕಿದ್ದಾರೆ.
ಮೈಸೂರು ದಸರಾ ಮುಕ್ತಾಯಗೊಂಡ ಬೆನ್ನಲ್ಲೇ ಪತ್ರಿಕಾ ಪ್ರಕಟಣೆ ಹೊರಡಿಸಿರುವ ಅವರು, ಗಜಪಡೆಯ ಕ್ಯಾಪ್ಟನ್ ಆಯ್ಕೆ ವಿಚಾರವನ್ನ ತಮ್ಮಿಂದ ಮುಚ್ಚಿಡಲಾಗಿತ್ತು ಅಂತಾ ಬೇಸರ ವ್ಯಕ್ತಪಡಿಸಿದ್ದಾರೆ.
ಪ್ರಕಟಣೆಯಲ್ಲಿ ಏನಿದೆ?
ಕಳೆದ 45 ವರ್ಷಗಳಲ್ಲಿ ಇದೇ ಮೊದಲ ಬಾರಿಗೆ, ಅಂಬಾರಿ ಹೊರುವ ಆನೆಯ ವಿಷಯವನ್ನು ನಮ್ಮಿಂದ ಮುಚ್ಚಿಡಲಾಗಿತ್ತು. ಕೊನೆಯ ಕ್ಷಣದವರೆಗೂ ನಮಗೆ ಈ ಬಗ್ಗೆ ಯಾವುದೇ ಮಾಹಿತಿ ನೀಡಿರಲಿಲ್ಲ. ಕಾರ್ಯಕ್ರಮಕ್ಕೆ 5 ದಿನಗಳಿರುವಾಗ, ಅಂಬಾರಿ ಹೊರುವ ಜವಾಬ್ದಾರಿಯನ್ನು ಯಾವ ಆನೆಗೆ ನೀಡಲಾಗಿದೆ ಎಂದು ತಿಳಿಸುವಂತೆ ನಾನು ಸ್ವತಃ ಡಿಸಿಎಫ್ ಅವರ ಬಳಿ ಕೇಳಬೇಕಾಯಿತು. ಯಾವುದೇ ಕಾರಣವಿಲ್ಲದೆ, ಈ ಪರಿಸ್ಥಿತಿಯು ನಮಗೆ ತೀವ್ರ ಒತ್ತಡ ಉಂಟುಮಾಡಿತು.
ಪ್ರತಿ ವರ್ಷವೂ ಎಲ್ಲರಿಗೂ ಅನುಕೂಲವಾಗಲಿ ಎಂದು ನಾನು ವಿಶೇಷ ಆಸಕ್ತಿ ವಹಿಸಿ ಸಂಪೂರ್ಣ ಸಹಕಾರ ನೀಡುತ್ತಾ ಬಂದಿದ್ದೇನೆ. ಆದರೆ, ನಮ್ಮ ಸಹಕಾರವನ್ನ ಅವರು ಕೇವಲ ಒಂದು ಸಾಮಾನ್ಯ ಸಂಗತಿ ಎಂದು ಪರಿಗಣಿಸಿ ನಿರ್ಲಕ್ಷ್ಯ ತೋರುತ್ತಿರುವುದು ನನಗೆ ನಿರಾಶೆ ತಂದಿದೆ ಎಂದು ಸರ್ಕಾರದ ವಿರುದ್ಧ ಬೇಸರ ಹೊರಹಾಕಿದ್ದಾರೆ.
Laxmi News 24×7