Breaking News

ಬರದಿಂದ ಶೇ. 80ರಷ್ಟು ಬೆಳೆ ನಷ್ಟ; ರೈತರಿಗೆ ಪರಿಹಾರ ಶೀಘ್ರ ಬಿಡುಗಡೆಗೆ ಕೇಂದ್ರಕ್ಕೆ ಒತ್ತಾಯ: ಪರಮೇಶ್ವರ್

Spread the love

ಬೆಂಗಳೂರು: ರಾಜ್ಯದಲ್ಲಿ ತೀವ್ರ ಬರ ಪರಿಸ್ಥಿತಿ ಎದುರಾಗಿದ್ದು, ಕೆಲವು ಪ್ರದೇಶಗಳಲ್ಲಿ ಶೇ. 80ರಷ್ಟು ಬೆಳೆ ನಷ್ಟವಾಗಿದೆ. ಮುಂದಿನ ದಿನಗಳಲ್ಲಿ ಆಹಾರ  ಧಾನ್ಯಗಳ ಉತ್ಪಾದನೆಯ ಮೇಲೂ ಇದರ ಪರಿಣಾಮ ಉಂಟಾಗುವ ಸಾಧ್ಯತೆಯಿದೆ. ಸದ್ಯಕ್ಕೆ ರಾಜ್ಯದಲ್ಲಿ ಆಹಾರ ಧಾನ್ಯಗಳ ದಾಸ್ತಾನು ಲಭ್ಯವಿದ್ದು, ಮುಂದಿನ ದಿನಗಳಲ್ಲಿ ಉತ್ಪಾದನೆಯಲ್ಲಿ ಕೊರತೆ ಎದುರಾದರೆ ಅದರ ಪರಿಣಾಮಗಳ ಬಗ್ಗೆ ಚರ್ಚಿಸಿ ಸೂಕ್ತ ಕ್ರಮ ಕೈಗೊಳ್ಳಬೇಕಾಗುತ್ತದೆ. ಕೇಂದ್ರ ಸರ್ಕಾರದಲ್ಲಿರುವ ರಾಜ್ಯದ ಸಂಸದರು ಮತ್ತು ಸಚಿವರು ಪಕ್ಷಭೇದ ಮರೆತು ಬರ ಪರಿಸ್ಥಿತಿಯನ್ನು ಎದುರಿಸಲು ನೆರವಾಗಬೇಕು ಎಂದು ಉಪಮುಖ್ಯಮಂತ್ರಿಗಳಾದ ಡಾ. ಜಿ. ಪರಮೇಶ್ವರ ತಿಳಿಸಿದರು.

ಬೆಂಗಳೂರಿನ ಸದಾಶಿವನಗರ ನಿವಾಸದ ಬಳಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಪರಿಹಾರ ಬಿಡುಗಡೆಗೆ ಸಂಬಂಧಿಸಿದಂತೆ ಆದೇಶ ಹೊರಡಿಸಲಾಗಿದೆ. ನಿಗದಿತ ಮಾನದಂಡಗಳ ಪ್ರಕಾರ ಪ್ರಕ್ರಿಯೆ ನಡೆಯುತ್ತಿದ್ದು, ಹಣ ಬಿಡುಗಡೆಯಾದ ಕೂಡಲೇ ಜಿಲ್ಲಾಧಿಕಾರಿಗಳ ಮೂಲಕ ರೈತರಿಗೆ ತಲುಪಿಸಲಾಗುವುದು ಎಂದರು.

ಪರಿಹಾರ ಬಿಡುಗಡೆ ವಿಳಂಬವಾಗದಂತೆ ತಾವು ಕೂಡ ಕಂದಾಯ ಸಚಿವನಾಗಿ ಹಣಕಾಸು ಇಲಾಖೆಗೆ ಒತ್ತಾಯಿಸುತ್ತಿದ್ದೇನೆ. ಹಣಕಾಸು ಇಲಾಖೆಯಿಂದ ಅನುಮೋದನೆ ದೊರೆತಿದ್ದು, ಶೀಘ್ರ ಹಣ ಬಿಡುಗಡೆಯಾಗಬೇಕು ಎಂದು ಒತ್ತಾಯಿಸಲಾಗುವುದು. ಸರ್ವಪಕ್ಷದ ನಿಯೋಗದ ಪ್ರಸ್ತಾವನೆಯನ್ನು ಕೈಬಿಟ್ಟಿಲ್ಲ. ಈ ಸಂಬಂಧ ಕೇಂದ್ರದವರ ಬಳಿ ಸಮಯ ಕೇಳುತ್ತಿದ್ದೇವೆ ಆದರೆ, ಇನ್ನೂ ಸಮಯ ನೀಡಿಲ್ಲ ಎಂದು ತಿಳಿಸಿದರು.

ರಾಜ್ಯ ಸರ್ಕಾರ ತನ್ನ ಪಾಲಿನ ಜವಾಬ್ದಾರಿಯನ್ನು ನಿರ್ವಹಿಸಿದೆ. ಕೇಂದ್ರ ಸರ್ಕಾರವೂ ತನ್ನ ಪಾಲಿನ ಜವಾಬ್ದಾರಿಯನ್ನು ನಿರ್ವಹಿಸಬೇಕು. ರಾಜ್ಯ ಸರ್ಕಾರ 1,250 ಕೋಟಿ ರೂ. ಘೋಷಿಸಿರುವುದಾದರೂ ಯಾವ ವ್ಯವಸ್ಥೆಯಡಿ ಘೋಷಿಸಿದೆ ಎಂಬುದನ್ನು ಗಮನಿಸಬೇಕು. ಕೇಂದ್ರ ಸರ್ಕಾರ ಎನ್‌ಡಿಆರ್‌ಎಫ್ ಅಡಿಯಲ್ಲಿ ಪರಿಹಾರ ನೀಡದಿರುವುದರ ಬಗ್ಗೆಯೂ ಪ್ರಶ್ನೆಗಳಿವೆ. ಪರಸ್ಪರ ಆರೋಪ-ಪ್ರತ್ಯಾರೋಪ ಮಾಡುತ್ತಾ ಕುಳಿತರೆ ಸಂಕಷ್ಟ ಅನುಭವಿಸುವುದು ರೈತರು. ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ತಮ್ಮ ತಮ್ಮ ಜವಾಬ್ದಾರಿಗಳ ಬಗ್ಗೆ ಚರ್ಚಿಸುತ್ತಾ ಕಾಲ ಕಳೆಯುವ ಬದಲು ರೈತರ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬೇಕು ಎಂದು ಹೇಳಿದರು.

ಬರ ಪರಿಸ್ಥಿತಿಯ ಪರಿಣಾಮವಾಗಿ ಮುಂದಿನ ದಿನಗಳಲ್ಲಿ ಆಹಾರ ಧಾನ್ಯಗಳ ಉತ್ಪಾದನೆ ನಿರೀಕ್ಷಿತ ಮಟ್ಟದಲ್ಲಿ ಆಗದಿದ್ದರೆ ಅದರ ಪರಿಣಾಮ ಸಹಜವಾಗಿಯೇ ಎದುರಾಗುತ್ತದೆ. ಸದ್ಯಕ್ಕೆ ರಾಜ್ಯದಲ್ಲಿ ಆಹಾರ ಧಾನ್ಯಗಳ ದಾಸ್ತಾನು ಲಭ್ಯವಿದೆ. ಆದರೆ, ಉತ್ಪಾದನೆಯಲ್ಲಿ ಕೊರತೆ ಎದುರಾದರೆ ಆಹಾರ ಧಾನ್ಯಗಳ ಲಭ್ಯತೆ ಕುರಿತು ಚರ್ಚಿಸಿ ಅಗತ್ಯ ಕ್ರಮ ಕೈಗೊಳ್ಳಬೇಕು. ಕೇಂದ್ರ ಸರ್ಕಾರದಲ್ಲಿ ಸಚಿವರಾಗಿರುವ ಎಚ್.ಡಿ. ಕುಮಾರಸ್ವಾಮಿ ಸೇರಿದಂತೆ ರಾಜ್ಯದ ಸಂಸದರು ಹಾಗೂ ಸಚಿವರು ಬರ ಪರಿಸ್ಥಿತಿಯನ್ನು ಎದುರಿಸಲು ನೆರವಾಗಬೇಕು. ಒಬ್ಬರನ್ನೇ ಹೊಣೆಗಾರರನ್ನಾಗಿ ಮಾಡದೆ, ಕೇಂದ್ರದಲ್ಲಿ ಜವಾಬ್ದಾರಿ ಹೊಂದಿರುವ ಎಲ್ಲರೂ ಒಟ್ಟಾಗಿ ಈ ಬಗ್ಗೆ ಚಿಂತಿಸಬೇಕು ಎಂದರು.

ಚುನಾವಣಾ ಆಯೋಗದ ಸೂಚನೆ ಪಾಲನೆ
ತುಮಕೂರಿನಲ್ಲಿ ಕಳೆದ ಬಾರಿ ಸಂಬಂಧಪಟ್ಟ ಕಾರ್ಯಕ್ರಮಕ್ಕೆ ಅನುಮತಿ ನೀಡಲಾಗಿತ್ತು. ಈ ಬಾರಿಯೂ ಅರ್ಜಿ ಸಲ್ಲಿಸಿದರೆ ಅನುಮತಿ ನೀಡುವಂತೆ ಅಧಿಕಾರಿಗಳಿಗೆ ಸೂಚಿಸಿದ್ದೆ. ಪಥ ಸಂಚಲನ ಕಾರ್ಯಕ್ರಮವು ಕೇವಲ ಒಂದು ಗಂಟೆ ನಡೆಯಲಿದೆ ಎಂದು ತಿಳಿಸಲಾಗಿತ್ತು. ಈ ಹಿಂದೆ ಯಾವುದೇ ದೂರುಗಳು ಬಂದಿರದ ಹಿನ್ನೆಲೆಯಲ್ಲಿ ಅನುಮತಿ ನೀಡಬಹುದು ಎಂದು ಹೇಳಿದ್ದೆ.

ಕಳೆದ ಬಾರಿ ತಾವೇ ಗೃಹ ಸಚಿವರಾಗಿದ್ದ ಸಂದರ್ಭದಲ್ಲಿ ಯಾವುದೇ ತೊಂದರೆ ಇರಲಿಲ್ಲ ಮತ್ತು ಅನುಮತಿ ನೀಡಲಾಗಿತ್ತು. ಈ ಬಾರಿಯೂ ಅರ್ಜಿ ಸಲ್ಲಿಸಿದರೆ ಅನುಮತಿ ನೀಡುವಂತೆ ಹೇಳಿದ್ದೆ. ಆದರೆ, ಚುನಾವಣಾ ಆಯೋಗವು ಮಾದರಿ ನೀತಿ ಸಂಹಿತೆ ಜಾರಿಯಲ್ಲಿರುವ ಕಾರಣ ಅನುಮತಿ ನೀಡಬಾರದು ಎಂದು ಪತ್ರ ಬರೆದಿರುವುದಾಗಿ ಜಿಲ್ಲಾಧಿಕಾರಿಗಳು ತಿಳಿಸಿದ್ದಾರೆ. ಚುನಾವಣಾ ಆಯೋಗದ ಸೂಚನೆಯನ್ನು ಮೀರಿ ಜಿಲ್ಲಾ ಆಡಳಿತ ಅನುಮತಿ ನೀಡಲು ಸಾಧ್ಯವಿಲ್ಲ. ಆಯೋಗದ ನಿರ್ದೇಶನ ಉಲ್ಲಂಘಿಸಿ ಅನುಮತಿ ನೀಡಿದರೆ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳುವ ಸಾಧ್ಯತೆಯಿದೆ. ತಾವು ಅನುಮತಿ ನೀಡುವಂತೆ ಮಾತ್ರ ಹೇಳಿದ್ದೆನೇ ಹೊರತು ಯಾವುದೇ ವಿವಾದ ಸೃಷ್ಟಿಸುವ ಉದ್ದೇಶ ಇರಲಿಲ್ಲ ಎಂದು ಸ್ಪಷ್ಟಪಡಿಸಿದರು.

ಸಮೀಕ್ಷೆಗಳ ಬಗ್ಗೆ ಹೆಚ್ಚು ತಲೆಕೆಡಿಸಿಕೊಳ್ಳುವುದಿಲ್ಲ
ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ-ಜೆಡಿಎಸ್ ಮೈತ್ರಿಕೂಟಕ್ಕೆ 149 ಸ್ಥಾನಗಳು ದೊರೆಯಲಿವೆ ಎಂದು ವೋಟ್ ಇನ್ ಇಂಡಿಯಾ ಸಮೀಕ್ಷೆ ಹೇಳಿರುವ ಕುರಿತು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ಚುನಾವಣೆಗೆ ಇನ್ನೂ ಸಾಕಷ್ಟು ಸಮಯವಿದೆ. ಈಗಿನ ಟ್ರೆಂಡ್‌ಗಳನ್ನು ಆಧರಿಸಿ ಚುನಾವಣೆಯ ಫಲಿತಾಂಶವನ್ನು ನಿರ್ಧರಿಸಲು ಸಾಧ್ಯವಿಲ್ಲ. ಚುನಾವಣೆ ನಡೆಯುವ ಸಂದರ್ಭದಲ್ಲಿ ಜನರ ಮನಸ್ಥಿತಿ ಮತ್ತು ರಾಜಕೀಯ ಪರಿಸ್ಥಿತಿ ಹೇಗಿರುತ್ತದೆ ಎಂಬುದು ಮುಖ್ಯವಾಗುತ್ತದೆ.

ಸಮೀಕ್ಷೆಗಳ ಬಗ್ಗೆ ಹೆಚ್ಚು ತಲೆಕೆಡಿಸಿಕೊಳ್ಳುವುದಿಲ್ಲ. ಇಂತಹ ಸಮೀಕ್ಷೆಗಳಿಂದ ನಮಗೆ ನಮ್ಮ ಸ್ಥಿತಿಗತಿ ತಿಳಿಯುತ್ತದೆ. ಇದನ್ನು ಸವಾಲಾಗಿ ಸ್ವೀಕರಿಸಿ ಇನ್ನಷ್ಟು ಶ್ರಮವಹಿಸಿ ಕೆಲಸ ಮಾಡುತ್ತೇವೆ. ಜನರ ಪ್ರೀತಿ ಮತ್ತು ವಿಶ್ವಾಸ ಗಳಿಸಲು ಹೆಚ್ಚಿನ ಪ್ರಯತ್ನ ಮಾಡುತ್ತೇವೆ ಎಂದು ಹೇಳಿದರು.

ಸಾಮೂಹಿಕ ನಿರ್ಧಾರ
ರಾಜಕೀಯ ವ್ಯವಹಾರಗಳ ಸಮಿತಿ ರಚನೆಗೆ ಹೈಕಮಾಂಡ್ ಅನುಮತಿ ನೀಡಿದೆಯೇ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ಮುಖ್ಯಮಂತ್ರಿಗಳು ಇಂತಹ ಸಮಿತಿಯನ್ನು ರಚಿಸುವ ಮೊದಲು ಹೈಕಮಾಂಡ್‌ನೊಂದಿಗೆ ಚರ್ಚಿಸಿರಬಹುದು ಎಂದು ತಮಗೆ ಅನಿಸುತ್ತದೆ. ಪ್ರಮುಖ ನಿರ್ಧಾರಗಳನ್ನು ಒಬ್ಬರೇ ತೆಗೆದುಕೊಳ್ಳುವ ಬದಲು ಸಾಮೂಹಿಕವಾಗಿ ಚರ್ಚಿಸಿ ನಿರ್ಧಾರ ಕೈಗೊಳ್ಳುವ ಉದ್ದೇಶದಿಂದ ಸಮಿತಿ ರಚಿಸಲಾಗಿದೆ ಎಂದು ಹೇಳಿದರು.

ಕೆಲವು ಸಂದರ್ಭಗಳಲ್ಲಿ ಮುಖ್ಯಮಂತ್ರಿಗಳು ಏಕಾಂಗಿಯಾಗಿ ನಿರ್ಧಾರ ತೆಗೆದುಕೊಳ್ಳುವುದಕ್ಕಿಂತ ಸಮಿತಿಯ ಸದಸ್ಯರ ಅಭಿಪ್ರಾಯಗಳನ್ನು ಪಡೆದು ಸಾಮೂಹಿಕ ನಿರ್ಧಾರ ಕೈಗೊಳ್ಳುವುದು ಉತ್ತಮ. ಸಮಿತಿಯಲ್ಲಿರುವ ಸದಸ್ಯರು ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸುತ್ತಾರೆ. ಮುಖ್ಯಮಂತ್ರಿಗಳಿಗೆ ಆ ಅಭಿಪ್ರಾಯಗಳು ಸೂಕ್ತವೆನಿಸಿದರೆ ಸ್ವೀಕರಿಸುತ್ತಾರೆ, ಸೂಕ್ತವಲ್ಲವೆನಿಸಿದರೆ ಅವುಗಳನ್ನು ಒಪ್ಪದಿರಬಹುದು. ಬಳಿಕ ಮುಖ್ಯಮಂತ್ರಿಗಳು ಹೈಕಮಾಂಡ್‌ನೊಂದಿಗೆ ಚರ್ಚಿಸಿ ಮುಂದಿನ ನಿರ್ಧಾರ ಕೈಗೊಳ್ಳಬಹುದು ಎಂದರು.

ಸಮಿತಿ ಮತ್ತೊಂದು ಅಧಿಕಾರ ಕೇಂದ್ರವಾಗುತ್ತದೆಯೇ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಸಮಿತಿಯು ಮತ್ತೊಂದು ಅಧಿಕಾರ ಕೇಂದ್ರವಾಗುವ ಪ್ರಶ್ನೆಯೇ ಇಲ್ಲ. ಸದಸ್ಯರು ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸುವ ವೇದಿಕೆಯಾಗಿದೆ. ದೈನಂದಿನ ಆಡಳಿತಾತ್ಮಕ ಕಾರ್ಯಗಳಲ್ಲಿ ಸಮಿತಿ ಮಧ್ಯಪ್ರವೇಶಿಸುವುದಿಲ್ಲ. ಪ್ರಮುಖ ನೀತಿ ನಿರ್ಧಾರಗಳು ಹಾಗೂ ಮಹತ್ವದ ರಾಜಕೀಯ ವಿಚಾರಗಳ ಕುರಿತು ಚರ್ಚಿಸಿ ಅಭಿಪ್ರಾಯಗಳನ್ನು ಹಂಚಿಕೊಳ್ಳಲಾಗುತ್ತದೆ ಎಂದು ತಿಳಿಸಿದರು.

ಸ್ಟಿಂಗ್ ಪ್ರಕರಣವೇ ದುರದೃಷ್ಟಕರ
ಸ್ಟಿಂಗ್ ಪ್ರಕರಣದ ವಿಚಾರವಾಗಿ ಸರ್ಕಾರದ ಕೆಲಸ ಕಾರ್ಯಗಳಿಗಿಂತ ವಿವಾದಗಳೇ ಹೆಚ್ಚು ಮುನ್ನೆಲೆಗೆ ಬರುತ್ತಿವೆ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ಇದು ದುರದೃಷ್ಟಕರ. ಸರ್ಕಾರ ಆಡಳಿತ ನಡೆಸುತ್ತಿದ್ದರೆ, ವಿರೋಧ ಪಕ್ಷವು ತನ್ನ ಜವಾಬ್ದಾರಿಯನ್ನು ನಿರ್ವಹಿಸುತ್ತಿದೆ. ಆದರೆ, ಒಂದೇ ವಿಚಾರವನ್ನು ಪ್ರಮುಖವಾಗಿ ಚರ್ಚಿಸುತ್ತಾ ಕುಳಿತರೆ ಜನರ ಸಮಸ್ಯೆಗಳು ಮತ್ತು ಸರ್ಕಾರದ ಅಭಿವೃದ್ಧಿ ಕಾರ್ಯಗಳು ಹಿನ್ನೆಲೆಗೆ ಸರಿಯುತ್ತವೆ.

ಪ್ರಕರಣದ ಬಗ್ಗೆ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಬೇಕು. ಆದರೆ, ಪ್ರತಿದಿನ ಪತ್ರಿಕೆಗಳು ಮತ್ತು ಎಲೆಕ್ಟ್ರಾನಿಕ್ ಮಾಧ್ಯಮಗಳಲ್ಲಿ ಇದೇ ವಿಚಾರವನ್ನು ಜನರು ನೋಡುತ್ತಿದ್ದರೆ ಅವರಿಗೆ ಬೇಸರವಾಗುವುದಿಲ್ಲವೇ? ಜನರ ನಿರೀಕ್ಷೆ ಏನು ಎಂಬುದನ್ನು ಅರ್ಥಮಾಡಿಕೊಳ್ಳಬೇಕು. ಸರ್ಕಾರದ ಕೆಲಸಗಳು, ಜನರ ಸಮಸ್ಯೆಗಳು ಹಾಗೂ ಅಭಿವೃದ್ಧಿ ಕಾರ್ಯಗಳ ಬಗ್ಗೆಯೂ ಚರ್ಚೆಯಾಗಬೇಕು ಎಂದರು.

ಹೈಕಮಾಂಡ್ ಮಧ್ಯಪ್ರವೇಶದ ಅಗತ್ಯವಿಲ್ಲ
ಸ್ಟಿಂಗ್ ಪ್ರಕರಣದಿಂದ ಸರ್ಕಾರ ಮತ್ತು ಪಕ್ಷದ ವರ್ಚಸ್ಸಿಗೆ ಧಕ್ಕೆಯಾಗುತ್ತಿರುವ ಹಿನ್ನೆಲೆಯಲ್ಲಿ ಹೈಕಮಾಂಡ್ ಮಧ್ಯಪ್ರವೇಶಿಸಬೇಕೆಂಬ ಒತ್ತಾಯದ ಕುರಿತು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ಈ ವಿಚಾರದಲ್ಲಿ ತಕ್ಷಣವೇ ಹೈಕಮಾಂಡ್ ಮಧ್ಯಪ್ರವೇಶಿಸಬೇಕೆಂದು ಹೇಳುವ ಅಗತ್ಯವಿಲ್ಲ. ಮುಖ್ಯಮಂತ್ರಿ ಹಾಗೂ ಪಕ್ಷದ ಅಧ್ಯಕ್ಷರು ಕುಳಿತು ಚರ್ಚಿಸಿ, ಸರ್ಕಾರ ಅಥವಾ ಪಕ್ಷಕ್ಕೆ ಮುಜುಗರವಾಗದ ರೀತಿಯಲ್ಲಿ ಸ್ಥಳೀಯವಾಗಿಯೇ ಸಮಸ್ಯೆಯನ್ನು ಬಗೆಹರಿಸಿಕೊಳ್ಳಬೇಕು.

ಪಕ್ಷದ ಪ್ರಧಾನ ಕಾರ್ಯದರ್ಶಿ ಹಾಗೂ ರಾಜ್ಯ ಉಸ್ತುವಾರಿಗಳೂ ಇದ್ದಾರೆ. ಪ್ರತಿಯೊಂದು ವಿಚಾರಕ್ಕೂ ಹೈಕಮಾಂಡ್ ಮಧ್ಯಪ್ರವೇಶವನ್ನು ನಿರೀಕ್ಷಿಸುತ್ತಾ ಕುಳಿತರೆ ಸಮಸ್ಯೆ ಬಗೆಹರಿಯುವುದಿಲ್ಲ. ಹಿರಿಯ ನಾಯಕರ ತಂಡವನ್ನು ಕಳುಹಿಸಲಾಗುತ್ತದೆ ಎಂಬ ಚರ್ಚೆಗಳ ಕುರಿತು ಕೇಳಿದ ಪ್ರಶ್ನೆಗೆ, ಆ ಬಗ್ಗೆ ತಮಗೆ ಮಾಹಿತಿ ಇಲ್ಲ ಎಂದು ಹೇಳಿದರು.

ಹಣಕಾಸು ಇಲಾಖೆಗೆ ಒತ್ತಾಯ
ಬರ ಪರಿಹಾರ ಘೋಷಣೆಯಾಗಿ ಒಂದು ತಿಂಗಳು ಕಳೆದಿದ್ದರೂ ರೈತರಿಗೆ ಹಣ ತಲುಪದಿರುವ ಕುರಿತು ಮತ್ತೊಮ್ಮೆ ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ಪರಿಹಾರ ಬಿಡುಗಡೆಗೆ ಆದೇಶ ಹೊರಡಿಸಲಾಗಿದೆ. ನಿಗದಿತ ಮಾನದಂಡಗಳ ಪ್ರಕಾರ ಪ್ರಕ್ರಿಯೆ ನಡೆಯುತ್ತಿದೆ. ತಾವು ಕಂದಾಯ ಸಚಿವರಾಗಿಯೂ ಹಣವನ್ನು ಶೀಘ್ರ ಬಿಡುಗಡೆ ಮಾಡುವಂತೆ ಒತ್ತಾಯಿಸುತ್ತಿದ್ದೇನೆ. ಹಣಕಾಸು ಇಲಾಖೆಗೆ ತ್ವರಿತವಾಗಿ ಹಣ ಬಿಡುಗಡೆ ಮಾಡುವಂತೆ ಹೇಳಲಾಗುವುದು. ಹಣ ಬಿಡುಗಡೆಯಾದ ಬಳಿಕ ಜಿಲ್ಲಾಧಿಕಾರಿಗಳ ಮೂಲಕ ರೈತರಿಗೆ ತಲುಪಿಸಲಾಗುವುದು ಎಂದರು.


Spread the love

About Laxminews 24x7

Check Also

ಮೌಢ್ಯ ಬದಿಗೊತ್ತಿ ಚಾಮರಾಜನಗರಕ್ಕೆ ಭೇಟಿ ಕೊಟ್ಟ ಡಿಕೆಶಿ

Spread the loveಚಾಮರಾಜನಗರ: ಈ ಕ್ಷೇತ್ರಕ್ಕೆ ಭೇಟಿ ನೀಡಿದರೆ ಅಧಿಕಾರ ಕಳೆದುಕೊಳ್ಳುತ್ತಾರೆ ಎಂಬ ಮೌಢ್ಯವನ್ನು ಬದಿಗೊತ್ತಿ ಸಿಎಂ ಡಿ.ಕೆ ಶಿವಕುಮಾರ್‌  …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ