ಬೆಳಗಾವಿ: ರಾಜ್ಯ ರಾಜಕಾರಣದಲ್ಲಿ ಈಗ ಸಚಿವ ಸಂಪುಟ ಪುನಾರಚನೆಯದ್ದೇ ಸದ್ದು. ಅದರಲ್ಲೂ ಕುಂದಾನಗರಿ ಬೆಳಗಾವಿ ಜಿಲ್ಲೆಗೆ ಮತ್ತೊಂದು ಮಂತ್ರಿಗಿರಿ ಸಿಗುತ್ತಾ ಎಂಬ ಚರ್ಚೆ ಈಗ ಗಲ್ಲಿಯಿಂದ ದಿಲ್ಲಿಯವರೆಗೆ ಹಬ್ಬಿದೆ. ಸದ್ಯ ಜಿಲ್ಲೆಯ ಇಬ್ಬರು ಪ್ರಭಾವಿ ನಾಯಕರು ಸಚಿವ ಸಂಪುಟದಲ್ಲಿದ್ದರೂ, ಮತ್ತೊಂದು ಸ್ಥಾನಕ್ಕಾಗಿ ಕಾಂಗ್ರೆಸ್ ಶಾಸಕರಲ್ಲಿ ತೀವ್ರ ಪೈಪೋಟಿ ಆರಂಭವಾಗಿದೆ.
ಐವರು ಶಾಸಕರಿಂದ ಹೈಕಮಾಂಡ್ ಮಟ್ಟದಲ್ಲಿ ಲಾಬಿ
ಸದ್ಯ ಬೆಳಗಾವಿ ಜಿಲ್ಲೆಯಿಂದ ಸತೀಶ್ ಜಾರಕಿಹೊಳಿ ಮತ್ತು ಲಕ್ಷ್ಮೀ ಹೆಬ್ಬಾಳಕರ್ ಸಚಿವರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಆದರೆ ಈಗ ತೆರವಾಗಿರುವ ಅಥವಾ ಪುನಾರಚನೆಯಾಗಲಿರುವ ಸಂಪುಟದಲ್ಲಿ ಸ್ಥಾನ ಪಡೆಯಲು ಜಿಲ್ಲೆಯ ಐವರು ಪ್ರಮುಖ ಶಾಸಕರು ಹೈಕಮಾಂಡ್ ಮಟ್ಟದಲ್ಲಿ ಭರ್ಜರಿ ಲಾಬಿ ನಡೆಸುತ್ತಿದ್ದಾರೆ. ನಾಲ್ವರು ಲಿಂಗಾಯತ ಹಾಗೂ ಓರ್ವ ಅಲ್ಪಸಂಖ್ಯಾತ ಶಾಸಕರು ಸಚಿವ ಸ್ಥಾನಕ್ಕಾಗಿ ಪಟ್ಟು ಹಿಡಿದಿರುವುದು ರಾಜ್ಯ ರಾಜಕಾರಣದಲ್ಲಿ ಕುತೂಹಲ ಮೂಡಿಸಿದೆ.
ರೇಸ್‌ನಲ್ಲಿರುವ ಪ್ರಮುಖ ನಾಯಕರು:
ಲಕ್ಷ್ಮಣ ಸವದಿ (ಅಥಣಿ): ಬಿಜೆಪಿಯಿಂದ ಕಾಂಗ್ರೆಸ್‌ಗೆ ಬರುವ ಸಂದರ್ಭದಲ್ಲಿ ಪಕ್ಷದ ವರಿಷ್ಠರು ಸವದಿಯವರಿಗೆ ಸಚಿವ ಸ್ಥಾನದ ಭರವಸೆ ನೀಡಿದ್ದರು ಎನ್ನಲಾಗಿದೆ. ಈ ಹಿನ್ನೆಲೆಯಲ್ಲಿ ಅವರ ಹೆಸರು ಮುಂಚೂಣಿಯಲ್ಲಿದೆ.
ಅಶೋಕ ಪಟ್ಟಣ (ರಾಮದುರ್ಗ): ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಆಪ್ತ ವಲಯದಲ್ಲಿ ಗುರುತಿಸಿಕೊಂಡಿರುವ ಇವರಿಗೆ ‘ಮುಂದಿನ ದಿನಗಳಲ್ಲಿ ಮಂತ್ರಿ ಮಾಡ್ತೀನಿ’ ಎಂಬ ಭರವಸೆ ಸಿಕ್ಕಿದೆ ಎನ್ನಲಾಗುತ್ತಿದೆ.
ಗಣೇಶ್ ಹುಕ್ಕೇರಿ (ಚಿಕ್ಕೋಡಿ): ಆಪರೇಷನ್ ಕಮಲದ ಸಮಯದಲ್ಲಿ ಬಿಜೆಪಿಯಿಂದ ಮಂತ್ರಿಗಿರಿ ಆಫರ್ ಬಂದಿದ್ದರೂ ನಿಷ್ಠಾವಂತ ಕಾಂಗ್ರೆಸ್ಸಿಗನಾಗಿ ಉಳಿದಿದ್ದ ಹುಕ್ಕೇರಿ, ಈಗ ತಮ್ಮ ಹಕ್ಕು ಮಂಡಿಸುತ್ತಿದ್ದಾರೆ.
ಮಹಾಂತೇಶ ಕೌಜಲಗಿ (ಬೈಲಹೊಂಗಲ): ತೆರೆಮರೆಯಲ್ಲಿ ಕಸರತ್ತು ನಡೆಸುತ್ತಿರುವ ಇವರು ಸೌಮ್ಯ ಸ್ವಭಾವದ ನಾಯಕರಾಗಿದ್ದು, ಹೈಕಮಾಂಡ್ ಗಮನ ಸೆಳೆಯುತ್ತಿದ್ದಾರೆ.
ಆಸೀಫ್ ಸೇಠ್ (ಬೆಳಗಾವಿ ಉತ್ತರ): ಉತ್ತರ ಕರ್ನಾಟಕ ಭಾಗದ ಏಕೈಕ ಅಲ್ಪಸಂಖ್ಯಾತ ಶಾಸಕರಾಗಿರುವ ಇವರು, ಅಲ್ಪಸಂಖ್ಯಾತ ಕೋಟಾದಡಿ ಸಚಿವ ಸ್ಥಾನದ ಬೇಡಿಕೆ ಇಟ್ಟಿದ್ದಾರೆ.
ಹಳೆಯ ಇತಿಹಾಸ ಮತ್ತು ಇಂದಿನ ನಿರೀಕ್ಷೆ
ಹಿಂದಿನ ಬಿ.ಎಸ್. ಯಡಿಯೂರಪ್ಪ ಅವರ ಸರ್ಕಾರದ ಅವಧಿಯಲ್ಲಿ ಬೆಳಗಾವಿ ಜಿಲ್ಲೆಗೆ ಬರೋಬ್ಬರಿ ಐದು ಮಂತ್ರಿ ಸ್ಥಾನಗಳು ಸಿಕ್ಕಿದ್ದವು. ಆದರೆ ಈಗಿನ ಕಾಂಗ್ರೆಸ್ ಸರ್ಕಾರದಲ್ಲಿ ಜಿಲ್ಲೆಗೆ ಕೇವಲ ಎರಡು ಸ್ಥಾನಗಳು ಮಾತ್ರ ಸಿಕ್ಕಿವೆ ಎಂಬ ಅಸಮಾಧಾನ ಶಾಸಕರಲ್ಲಿದೆ. ಆದ್ದರಿಂದ ಪ್ರಾದೇಶಿಕ ಸಮತೋಲನ ಮತ್ತು ಮುಂಬರುವ ಚುನಾವಣೆಗಳ ದೃಷ್ಟಿಯಿಂದ ಮತ್ತೊಂದು ಮಂತ್ರಿಗಿರಿ ಬೆಳಗಾವಿಯ ಪಾಲಾಗುವ ಸಾಧ್ಯತೆ ದಟ್ಟವಾಗಿದೆ.
ಮುಖ್ಯಮಂತ್ರಿಗೆ ತಲೆನೋವಾದ ‘ಪೈಪೋಟಿ’
ಶಾಸಕರ ಈ ಪೈಪೋಟಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಬಿಸಿ ತುಪ್ಪವಾಗಿ ಪರಿಣಮಿಸಿದೆ. ಹಿರಿಯರು, ನಿಷ್ಠಾವಂತರು ಮತ್ತು ವಲಸೆ ಬಂದವರ ನಡುವೆ ಯಾರಿಗೆ ಮಣೆ ಹಾಕಬೇಕು ಎಂಬುದು ಈಗ ಹೈಕಮಾಂಡ್ ಮುಂದಿರುವ ದೊಡ್ಡ ಸವಾಲು.
ಬೆಳಗಾವಿಯ ಈ ಪೈಪೋಟಿ ಅಂತಿಮವಾಗಿ ಯಾರಿಗೆ ಲಕ್ಕಿ ಡ್ರಾ ತರಲಿದೆ? ಕುಂದಾನಗರಿಯ ಮತ್ತೊಬ್ಬ ಶಾಸಕ ಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸುತ್ತಾರಾ? ಎಂಬುದನ್ನು ಕಾದು ನೋಡಬೇಕಿದೆ
Laxmi News 24×7