ಬೆಂಗಳೂರಿಗಾಗಿ 26,000 ಕೋಟಿ ರೂ.ಗಳ ವಿಶೇಷ ಅನುದಾನ, ಮೇಕೆದಾಟು ಯೋಜನೆ ಮತ್ತು ಭದ್ರಾ ಮೇಲ್ದಂಡೆ ಯೋಜನೆಗೆ ಸಂಬಂಧಿಸಿದ ಪ್ರಸ್ತಾವನೆ ಸೇರಿ ಪ್ರಧಾನಿ ಮೋದಿ ಅವರಿಗೆ ವಿವಿಧ ಬೇಡಿಕೆಗಳನ್ನು ಸಿಎಂ ಸಿದ್ದರಾಮಯ್ಯ ಸಲ್ಲಿಸಿದರು.ಆದಿಚುಂಚನಗಿರಿ ಮಠದ ಕಾರ್ಯಕ್ರಮದಲ್ಲಿ ಭಾಗವಹಿಸುವ ಹಿನ್ನೆಲೆಯಲ್ಲಿ, ಇಂದು ಬೆಂಗಳೂರಿನ ಹೆಚ್ಎಎಲ್ ವಿಮಾನ ನಿಲ್ದಾಣಕ್ಕೆ ಬಂದಿಳಿದ ಪ್ರಧಾನಿ ನರೇಂದ್ರ ಮೋದಿ ಅವರನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಸ್ವಾಗತಿಸಿದರು. ಈ ವೇಳೆ, ಸಿಎಂ ರಾಜ್ಯದ 18 ವಿವಿಧ ಬೇಡಿಕೆಗಳ ಪಟ್ಟಿಯನ್ನು ಪ್ರಧಾನಿಗೆ ಸಲ್ಲಿಸಿದರು.
ಕಂದಾಯ ಸಚಿವ ಕೃಷ್ಣ ಬೈರೇಗೌಡ, ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್ ಹಾಜರಿದ್ದರು. ಈ ಸಂದರ್ಭ ಹೆಚ್ಎಎಲ್ ವಿಮಾನ ನಿಲ್ದಾಣದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರಧಾನಿ ನರೇಂದ್ರ ಮೋದಿಗೆ ಬೇಡಿಕೆಗಳನ್ನು ಒಳಗೊಂಡ ಮನವಿ ಪತ್ರ ಸಲ್ಲಿಸಿದರು. ಕರ್ನಾಟಕ ದೇಶದ ಬೊಕ್ಕಸಕ್ಕೆ ಅತಿ ಹೆಚ್ಚು ಕೊಡುಗೆ ನೀಡುತ್ತಿದೆ. ರಾಜ್ಯದ ಕೆಲ ದೀರ್ಘಕಾಲೀನ ಬೇಡಿಕೆಗಳತ್ತ ಕೂಡಲೇ ಗಮನಹರಿಸುವ ಅಗತ್ಯ ಇದೆ. ಇದರಿಂದ ರಾಜ್ಯದ ಪ್ರಗತಿ ಇನ್ನಷ್ಟು ವೃದ್ಧಿಯಾಗಲಿದೆ ಹಾಗೂ ಸಹಕಾರಿ ಒಕ್ಕೂಟ ವ್ಯವಸ್ಥೆ ಹಾಗೂ ಸಮಾನತೆ ತತ್ವವನ್ನು ಸದೃಢಗೊಳಿಸಲಿದೆ ಎಂದು ಮನವಿ ಪತ್ರದಲ್ಲಿ ತಿಳಿಸಿದ್ದಾರೆ.ಜವಾಬ್ದಾರಿ ಮತ್ತು ದೂರದೃಷ್ಟಿಯೊಂದಿಗೆ ಭಾರತದ ಬೆಳವಣಿಗೆಗೆ ಕೊಡುಗೆ ನೀಡುವಲ್ಲಿ ಕರ್ನಾಟಕ ಯಾವಾಗಲೂ ಹೆಮ್ಮೆಪಡುತ್ತದೆ. ಆದಾಗ್ಯೂ, ಅನುಮೋದನೆಗಳು ಮತ್ತು ಅನುದಾನ ಬಿಡುಗಡೆಯಲ್ಲಿನ ವಿಳಂಬ ವ್ಯವಸ್ಥಿತ ಅಸಮಾನತೆಯ ಭಾವನೆ ಮೂಡಿಸಿದೆ. ಈ ಕಳಕಳಿಗಳನ್ನು ಪರಿಹರಿಸುವುದರಿಂದ ನಿಜವಾದ ಸಹಕಾರಿ ಒಕ್ಕೂಟ ವ್ಯವಸ್ಥೆ ಬಲಗೊಳ್ಳುತ್ತದೆ ಎಂದಿದ್ದಾರೆ.ರೈಲ್ವೆ ಬಜೆಟ್ನಲ್ಲಿ ಘೋಷಿಸಿದ ಕೋಚ್ ಫ್ಯಾಕ್ಟರಿ ಇನ್ನೂ ಅನುಷ್ಠಾನವಾಗಿಲ್ಲ. ರಾಜ್ಯ ಸರ್ಕಾರ 1,123 ಎಕರೆ ಭೂಮಿಯನ್ನು ಕೊಡಲು ಮುಂದಾಗಿದ್ದರೂ ಅನುಷ್ಠಾನ ಆಗಿಲ್ಲ. ಇದರ ಅನುಷ್ಠಾನದಿಂದ ಕೈಗಾರಿಕಾ ಅಭಿವೃದ್ದಿಯಾಗಲಿದ್ದು, ಉದ್ಯೋಗ ಸೃಷ್ಟಿಯಾಗಲಿದೆ ಎಂದು ಮನವಿ ಮಾಡಿದ್ದಾರೆ.ಪ್ರಸ್ತಾಪಿತ ಹೈ ಸ್ಪೀಡ್ ರೈಲು ಕಾರಿಡಾರ್ನಲ್ಲಿ ಬೆಂಗಳೂರು – ಮೈಸೂರು ವಿಭಾಗವನ್ನು ಸೇರ್ಪಡೆಗೊಳಿಸಿದರೆ, ಸಮತೋಲಿತ ಪ್ರಾದೇಶಿಕ ಅಭಿವೃದ್ಧಿಯಾಗಲಿದೆ ಎಂದು ಮನವಿ ಮಾಡಲಾಗಿದೆ.ಬೆಂಗಳೂರು ಉಪನಗರ ರೈಲು ಯೋಜನೆಗೆ ಕೂಡಲೇ ಹಣ ಬಿಡುಗಡೆ ಮಾಡಬೇಕು. ಜೊತೆಗೆ ಬೆಂಗಳೂರು-ಮುಂಬೈ ಹೈಸ್ಪೀಡ್ ರೈಲು ಕಾರಿಡಾರನ್ನು ಜಾರಿಗೊಳಿಸಲು ಕೋರಲಾಗಿದೆ.ಜಲ ಜೀವನ ಮಿಷನ್ ಯೋಜನೆಯ ಕೇಂದ್ರದ ಪಾಲಿನ 17,554 ಕೋಟಿ ರೂ. ಬಾಕಿ ಉಳಿದುಕೊಂಡಿದ್ದು, ಅದನ್ನು ಬಿಡುಗಡೆ ಮಾಡುವಂತೆ ತಿಳಿಸಲಾಗಿದೆ.ಎಲ್ಲ ಷರತ್ತುಗಳನ್ನು ಈಡೇರಿಸಿದ್ದರೂ, ಕರ್ನಾಟಕಕ್ಕೆ 2025-26 ಸಾಲಿನ 2,860 ಕೋಟಿ ರೂ. ಅನುದಾನ ಸಿಕ್ಕಿಲ್ಲ. ಅದರ ಸಕಾಲಿಕ ಬಿಡುಗಡೆ ಅಗತ್ಯವಾಗಿದೆ ಎಂದು ಕೋರಿದ್ದಾರೆ.ರಾಜ್ಯದ ಬಾಕಿ ಉಳಿದಿರುವ ರಾಷ್ಟ್ರೀಯ ಹೆದ್ದಾರಿ ಯೋಜನೆಗಳನ್ನು ಮೇಲ್ದರ್ಜೆಗೇರಿಸಲು ಹಾಗೂ ಜಾರಿ ಮಾಡುವಂತೆ ಮನವಿ ಮಾಡಲಾಗಿದೆ. ಕಳೆದ 12 ವರ್ಷದಿಂದ ರಾಜ್ಯಕ್ಕೆ ಯಾವುದೇ ದೊಡ್ಡ ರಾಷ್ಟ್ರೀಯ ಹೆದ್ದಾರಿ ಯೋಜನೆಗಳು ಸಿಕ್ಕಿಲ್ಲ ಎಂದಿದ್ದಾರೆ.
15 ಹಣಕಾಸು ಆಯೋಗ ಶಿಫಾರಸಿನಂತೆ ರಾಜ್ಯಕ್ಕೆ ಬಾಕಿ ಉಳಿದಿರುವ ಆದಾಯ ಕೊರತೆಯ ಅನುದಾನವಾದ 5,495 ಕೋಟಿ ರೂ.ಗಳನ್ನು ತಕ್ಷಣ ಬಿಡುಗಡೆ ಮಾಡುವಂತೆ ಕೋರಲಾಗಿದೆ.
ಬೆಂಗಳೂರಿಗಾಗಿ 26,000 ಕೋಟಿ ರೂ.ಗಳ ವಿಶೇಷ ಅನುದಾನ, ಮೇಕೆದಾಟು ಕುಡಿಯುವ ನೀರಿನ ಯೋಜನೆ ಮತ್ತು ಭದ್ರಾ ಮೇಲ್ದಂಡೆ ಯೋಜನೆಗೆ ಸಂಬಂಧಿಸಿದ ಪ್ರಸ್ತಾವನೆಗಳನ್ನು ಸಲ್ಲಿಸಲಾಗಿದೆರಾಷ್ಟ್ರೀಯ ಆರ್ಥಿಕತೆಗೆ ಬೆಂಗಳೂರಿನ ಕೊಡುಗೆಯನ್ನು ಪರಿಗಣಿಸಿ, ಮೂಲಸೌಕರ್ಯಗಳನ್ನು ಬಲಪಡಿಸಲು ಮತ್ತು ಅದರ ಜಾಗತಿಕ ಸ್ಪರ್ಧಾತ್ಮಕತೆ ಉಳಿಸಿಕೊಳ್ಳಲು 26,000 ಕೋಟಿ ರೂ. ಅನುದಾನವನ್ನು ಶೀಘ್ರವಾಗಿ ಬಿಡುಗಡೆ ಮಾಡುವ ಅಗತ್ಯವಿದೆ ಎಂದು ಮನವಿ ಮಾಡಿದ್ದಾರೆ.ಬೆಂಗಳೂರಿನ ಕುಡಿಯುವ ನೀರಿಗಾಗಿ 67 ಟಿಎಂಸಿ (TMC) ಸಂಗ್ರಹಣೆ, 400 ಮೆಗಾ ವ್ಯಾಟ್ ಜಲವಿದ್ಯುತ್ ಉತ್ಪಾದನೆ ಗುರಿಯಾಗಿಟ್ಟುಕೊಂಡಿರುವ ಮೇಕೆದಾಟು ಯೋಜನೆಗೆ ಸಂಬಂಧಿಸಿದಂತೆ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರ (CWMA) ಮತ್ತು ಸುಪ್ರೀಂಕೋರ್ಟ್‌ನ 13.11.2025ರ ತೀರ್ಪಿನ ಅನ್ವಯ ಯೋಜನೆಯ ಮೌಲ್ಯಮಾಪನ ಮತ್ತು ಅನುಮೋದನೆಯನ್ನು ತ್ವರಿತಗೊಳಿಸಲು ಕೇಂದ್ರ ಜಲಶಕ್ತಿ ಸಚಿವಾಲಯ ಮತ್ತು ಕೇಂದ್ರ ಜಲ ಆಯೋಗಕ್ಕೆ ನಿರ್ದೇಶನ ನೀಡುವಂತೆ ಮನವಿ.ಕೇಂದ್ರ ಸರ್ಕಾರ ಘೋಷಿಸಿರುವ 25,300 ಕೋಟಿ ರೂ.ಗಳ ನೆರವನ್ನು PMKSY-AIBP ಯೋಜನೆಯಡಿ ಭದ್ರಾ ಮೇಲ್ದಂಡೆ ಯೋಜನೆಗೆ ಬಿಡುಗಡೆ ಮಾಡಬೇಕು ಮತ್ತು ಈ ಯೋಜನೆಗೆ ‘ರಾಷ್ಟ್ರೀಯ ಯೋಜನೆ’ ಎಂಬ ಸ್ಥಾನಮಾನವನ್ನು ನೀಡಬೇಕು ಎಂದು ಮನವಿ ಮಾಡಲಾಗಿದೆ. 2.25 ಲಕ್ಷ ಹೆಕ್ಟೇರ್ ಪ್ರದೇಶಕ್ಕೆ ನೀರಾವರಿ ಒದಗಿಸುವ ಈ ಯೋಜನೆಗಾಗಿ ಈಗಾಗಲೇ ರಾಜ್ಯ ಸರ್ಕಾರ ಗಣನೀಯ ಪ್ರಮಾಣದ ಹಣವನ್ನು ವ್ಯಯಿಸಿದೆ ಮತ್ತು ಯೋಜನೆಯ ಪರಿಷ್ಕೃತ ವೆಚ್ಚದ ಮೌಲ್ಯಮಾಪನವೂ ಪೂರ್ಣಗೊಂಡಿದೆ ಎಂದು ವಿವರಿಸಿದ್ದಾರೆ.ಕೃಷ್ಣಾ ಜಲ ವಿವಾದ ನ್ಯಾಯಾಧಿಕರಣ-IIರ ತೀರ್ಪನ್ನು ಗೆಜೆಟ್‌ನಲ್ಲಿ ಅಧಿಸೂಚಿಸಲು ಮತ್ತು ಕೃಷ್ಣಾ ಮೇಲ್ದಂಡೆ ಯೋಜನೆ (ಹಂತ-III)ಯನ್ನು ‘ರಾಷ್ಟ್ರೀಯ ಯೋಜನೆ’ ಎಂದು ಘೋಷಿಸುವಂತೆ ಮನವಿ ಮಾಡಲಾಗಿದೆ. ಇದರಿಂದ ಕರ್ನಾಟಕಕ್ಕೆ ಹಂಚಿಕೆಯಾಗಿರುವ 173 ಟಿಎಂಸಿ ನೀರನ್ನು ಬಳಸಿಕೊಳ್ಳಲು ಅನುವು ಮಾಡಿಕೊಡಲಿದ್ದು, ಬರಪೀಡಿತ ಉತ್ತರ ಕರ್ನಾಟಕದ ಜಿಲ್ಲೆಗಳಿಗೆ ಪ್ರಯೋಜನವಾಗಲಿದೆ ಮತ್ತು ಲಕ್ಷಾಂತರ ರೈತರಿಗೆ ನೀರಾವರಿ ಸೌಲಭ್ಯ ತ್ವರಿತವಾಗಿ ತಲುಪಿಸಲಿದೆ ಎಂದಿದ್ದಾರೆ. ಮಹದಾಯಿ ನ್ಯಾಯಾಧಿಕರಣದ ತೀರ್ಪಿನ ಅನ್ವಯ ಕುಡಿಯುವ ನೀರಿನ ಉದ್ದೇಶಕ್ಕಾಗಿ 1.72 ಟಿಎಂಸಿ ನೀರನ್ನು ಬಳಸಿಕೊಳ್ಳಲು ಕಳಸಾ ನಾಲಾ ತಿರುವು ಯೋಜನೆ’ಗೆ ವನ್ಯಜೀವಿ ಮಂಡಳಿಯ ಅನುಮತಿ ನೀಡುವಂತೆ MoEF&CC ಮತ್ತು SC-NBWLಗೆ ನಿರ್ದೇಶನ ನೀಡಬೇಕು ಎಂದು ಮನವಿ ಮಾಡಲಾಗಿದೆ.ನದಿ ಜೋಡಣೆ ಕಾರ್ಯಕ್ರಮದಡಿ ಗೋದಾವರಿ-ಕಾವೇರಿ ಮತ್ತು ಬೆಡ್ತಿ-ವರದಾ ನದಿ ಜೋಡಣೆ ಯೋಜನೆಗಳಲ್ಲಿ ರಾಜ್ಯಕ್ಕೆ ಕನಿಷ್ಠ 40-45 ಟಿಎಂಸಿ ನೀರನ್ನು ನ್ಯಾಯಯುತವಾಗಿ ಹಂಚಿಕೆ ಮಾಡುವುದನ್ನು ಕೇಂದ್ರ ಸರ್ಕಾರ ಖಚಿತಪಡಿಸಿಕೊಳ್ಳಬೇಕು ಎಂದು ಕೋರಿದ್ದಾರೆ. ಕರ್ನಾಟಕದ ವಿಸ್ತಾರವಾದ ಬರಪೀಡಿತ ಪ್ರದೇಶಗಳ ಸಮಸ್ಯೆಗಳನ್ನು ಪರಿಹರಿಸಲು ಮತ್ತು ಸಮಾನ ಹಂಚಿಕೆಯ ತತ್ವವನ್ನು ಎತ್ತಿಹಿಡಿಯಲು ಈ ಹಂಚಿಕೆ ಅತ್ಯಗತ್ಯವಾಗಿದೆ ಎಂದಿದ್ದಾರೆ.ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಮತ್ತು ಇತರ ಹಿಂದುಳಿದ ವರ್ಗಗಳಿಗೆ ಶೇ.56ರಷ್ಟು ಮೀಸಲಾತಿ ನೀಡುವ ರಾಜ್ಯ ಸರ್ಕಾರದ ನಿರ್ಧಾರವನ್ನು ಸಂವಿಧಾನದ 9ನೇ ಅನುಸೂಚಿಯಲ್ಲಿ (Ninth Schedule) ಸೇರಿಸಲು ಕೇಂದ್ರ ಸರ್ಕಾರವನ್ನು ಕೋರಲಾಗಿದೆ.ರಾಜ್ಯ ಸರ್ಕಾರ ಶಿಫಾರಸು ಮಾಡಿರುವ ಕೆಲವು ಇತರ ಹಿಂದುಳಿದ ಜಾತಿಗಳನ್ನು ಕೇಂದ್ರದ ಪರಿಶಿಷ್ಟ ಪಂಗಡಗಳ ಪಟ್ಟಿಗೆ ಸೇರಿಸಲು ಮನವಿ ಮಾಡಲಾಗಿದೆ.ಸಂವಿಧಾನದ 371(ಜೆ) ವಿಧಿಯ ಆಶಯದಂತೆ ಕಲ್ಯಾಣ ಕರ್ನಾಟಕ ಪ್ರದೇಶದ ಅಭಿವೃದ್ಧಿಗಾಗಿ ವಾರ್ಷಿಕ 5,000 ಕೋಟಿ ರೂ.ಗಳ ಪ್ರತ್ಯೇಕ ಆರ್ಥಿಕ ನೆರವು ನೀಡುವಂತೆ ಮನವಿ ಮಾಡಿದ್ದಾರೆ. ಉತ್ತರ ಕರ್ನಾಟಕದ ಪ್ರತಿ ಜಿಲ್ಲೆಯಲ್ಲೂ ಕನಿಷ್ಠ ಒಂದು ಸಾರ್ವಜನಿಕ ವಲಯದ ಉದ್ದಿಮೆಯನ್ನು (PSU) ಸ್ಥಾಪಿಸುವಂತೆ ಕೋರಿದ್ದಾರೆ.ರಾಷ್ಟ್ರೀಯ ಮಟ್ಟದ ಮಹತ್ವದ ಈ ಇಂಧನ ಶೇಖರಣಾ ಯೋಜನೆಗೆ ಅರಣ್ಯ, ಪರಿಸರ ಮತ್ತು ವನ್ಯಜೀವಿ ಮಂಡಳಿಯ ಅನುಮೋದನೆಗಳನ್ನು ತ್ವರಿತಗೊಳಿಸುವುದು ಅತ್ಯಗತ್ಯ. ಇದು ವಿದ್ಯುತ್ ಗ್ರಿಡ್‌ನ ಸ್ಥಿರತೆಯನ್ನು ಹೆಚ್ಚಿಸಲಿದೆ ಮತ್ತು ಭಾರತದ ನವೀಕರಿಸಬಹುದಾದ ಇಂಧನ ಗುರಿಗಳಿಗೆ ಬೆಂಬಲ ನೀಡಲಿದೆ ಎಂದಿದ್ದಾರೆ.371(ಜೆ) ವಿಧಿಯ ಅಡಿಯಲ್ಲಿ ಬರುವ ಸಾಮಾಜಿಕ ಮತ್ತು ಆರ್ಥಿಕವಾಗಿ ಹಿಂದುಳಿದ ಕಲ್ಯಾಣ ಕರ್ನಾಟಕ ಪ್ರದೇಶದ ರಾಯಚೂರಿನಲ್ಲಿ ಏಮ್ಸ್ (AIIMS) ಸ್ಥಾಪನೆಗೆ ಶೀಘ್ರ ಅನುಮೋದನೆ ನೀಡುವುದರಿಂದ, ಈ ಭಾಗದ ಆರೋಗ್ಯ ಸೇವೆ ಮತ್ತು ಪ್ರಾದೇಶಿಕ ಅಭಿವೃದ್ಧಿಯಲ್ಲಿ ಗಣನೀಯ ಸುಧಾರಣೆಯಾಗಲಿದೆ ಎಂದು ಮನವರಿಕೆ ಮಾಡಿದ್ದಾರೆ.
Laxmi News 24×7