ಬೆಂಗಳೂರು: ನಿರಂತರ ಮಳೆ ಕೊರತೆ ಹಿನ್ನೆಲೆ ರಾಜ್ಯದಲ್ಲಿರುವ ಎಲ್ಲಾ ಸಚಿವಾಲಯದ ಕಚೇರಿಗಳಲ್ಲಿ ನೀರು ಹಾಗೂ ವಿದ್ಯುತ್ ಅನ್ನು ಮಿತವಾಗಿ ಬಳಸುವಂತೆ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಆದೇಶ ಹೊರಡಿಸಿದ್ದಾರೆ.
ಸರ್ಕಾರದ ಮುಖ್ಯ ಕಾರ್ಯದರ್ಶಿಗಳ ಸೂಚನೆ ಮೇರೆಗೆ ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆಯಿಂದ ಆದೇಶ ಹೊರಡಿಸಿದೆ.
ಆದೇಶದಲ್ಲಿ ಏನಿದೆ?
ಪ್ರಸ್ತುತ ಸಂಭವಿಸುತ್ತಿರುವ ಎಲ್‌ನೊ ಹವಾಮಾನ ವೈಪರೀತ್ಯದ ಪರಿಣಾಮದಿಂದ ವಿಶ್ವದಾದ್ಯಂತ ಸಾಮಾನ್ಯ ಹವಾಮಾನ ಮಾದರಿಗಳನ್ನ ವ್ಯತ್ಯಯಗೊಳಿಸುತ್ತಿದ್ದು, ದೇಶದಲ್ಲಿ ಅತಿವೃಷ್ಟಿ, ಪ್ರವಾಹ ಮತ್ತು ಬರಗಾಲ ಮೊದಲಾದ ತೀವ್ರ ಹವಾಮಾನ ಪರಿಸ್ಥಿತಿಗಳಿಗೆ ಕಾರಣವಾಗಿದೆ. ಅಲ್ಲದೇ ದೇಶದಲ್ಲಿ ಮಳೆಯ ಕೊರತೆಯುಂಟಾಗುತ್ತಿದೆ. ಇದರಿಂದ, ನಮ್ಮ ರೈತರ ಕೃಷಿ ಉತ್ಪಾದನೆ ಮೇಲೆ ಪರಿಣಾಮ ಬೀರುತ್ತಿದೆ. ಆದ್ದರಿಂದ, ನಾವು ನಮ್ಮಲ್ಲಿರುವ ಅತ್ಯಮೂಲ್ಯ ನೈಸರ್ಗಿಕ ಸಂಪನ್ಮೂಲ ಮತ್ತು ಜೀವಜಲವಾದ ನೀರನ್ನ ಉಪಯೋಗಿಸುವಾಗ ಆದಷ್ಟು ಎಚ್ಚರಿಕೆ ವಹಿಸಬೇಕಾಗಿದೆ.
ಸಚಿವಾಲಯದಲ್ಲಿ ವಿದ್ಯುತ್‌ನ್ನು ಮಿತವಾಗಿ ಬಳಸುವ ಕುರಿತು ಆಗಾಗ್ಗೆ ಅನೇಕ ಸುತ್ತೋಲೆಗಳ ಮೂಲಕ ಹಲವಾರು ಬಾರಿ ಸೂಚನೆಗಳನ್ನು ನೀಡಲಾಗಿದೆ. ಆದರೂ, ಸಹ ಸಚಿವಾಲಯದ ಕಚೇರಿಗಳಲ್ಲಿ ವಿದ್ಯುತ್ತಿನ ಬಳಕೆಯಲ್ಲಿ ನಿಯಂತ್ರಣವಾಗದಿರುವುದು ಸರ್ಕಾರದ ಗಮನಕ್ಕೆ ಬಂದಿದೆ. ವಿದ್ಯುತ್ ನವೀಕರಿಸಲಾಗದಂತಹ ಅತ್ಯಂತ ಮಹತ್ವದ ನೈಸರ್ಗಿಕ ಸಂಪನ್ಮೂಲವಾಗಿರುವುದರಿಂದ ವಿದ್ಯುತ್‌ನ್ನು ಸ್ವೇಚ್ಛಾ ಮನೋಭಾವದಿಂದ ಬಳಸುವುದು ಸರಿಯಾದ ಕ್ರಮವಾಗಿರುವುದಿಲ್ಲ. ಇಂತಹ ಅಮೂಲ್ಯವಾದ ವಿದ್ಯುತ್‌ನ್ನು ವ್ಯಯ ಮಾಡದೇ ಮಿತವಾಗಿ ಬಳಸುವುದು ಮತ್ತು ಅನಗತ್ಯ ಬಳಕೆಯನ್ನು ತಡೆಗಟ್ಟುವುದರ ಮೂಲಕ ವಿದ್ಯುತ್ ಉಳಿತಾಯ ಮಾಡುವುದು ನಮ್ಮೆಲ್ಲರ ಆದ್ಯ ಕರ್ತವ್ಯವಾಗಿದೆ. ಆದ್ದರಿಂದ ಈ ಕೆಳಕಂಡ ಕ್ರಮಗಳನ್ನು ಕಟ್ಟುನಿಟ್ಟಾಗಿ ಅನುಸರಿಸುವಂತೆ ಸೂಚಿಸಿದೆ.
ನೀರು, ವಿದ್ಯುತ್ ಮಿತ ಬಳಕೆಗೆ ಏನು ಮಾಡಬೇಕು?
>. ಸಚಿವಾಲಯದಲ್ಲಿ ಸಾಧ್ಯವಾದಷ್ಟು ಮಟ್ಟಿಗೆ ನೈಸರ್ಗಿಕ ಬೆಳಕನ್ನು ಬಳಸಬೇಕು.
>. ಕಚೇರಿಗಳ ಕಿಟಕಿಗಳನ್ನು ಪೂರ್ತಿ ತೆರೆದಿಟ್ಟು, ಅಗತ್ಯವಿದ್ದಾಗ ಮಾತ್ರ ದೀಪ ಮತ್ತು ಫ್ಯಾನ್‌ಗಳನ್ನು ಆನ್ ಮಾಡಬೇಕು.
>. ಪ್ರತಿ ಮಹಡಿಯ ಕಾವಲುಗಾರರು ಮತ್ತು ಭದ್ರತಾ ಸಿಬ್ಬಂದಿಗಳು ಸಂಜೆ 6 ಗಂಟೆಯ ನಂತರ ಅನಗತ್ಯ ವಿದ್ಯುತ್ ದೀಪಗಳನ್ನು ನಂದಿಸಲಾಗಿದೆಯೇ ಹಾಗೂ ಬೆಳಿಗ್ಗೆ 6 ಗಂಟೆಗೆ ಆಫ್ ಮಾಡಲಾಗಿದೆಯೇ ಎಂದು ಪರಿಶೀಲಿಸಿ ಖಚಿತಪಡಿಸಿಕೊಳ್ಳಬೇಕು.
>. ಸಚಿವರು ಮತ್ತು ಅಧಿಕಾರಿಗಳು ಕೊಠಡಿಯಲ್ಲಿ ಇಲ್ಲದ ಸಮಯದಲ್ಲಿ ಹಾಗೂ ಕಚೇರಿ ವೇಳೆ ಮುಕ್ತಾಯವಾದ ನಂತರ ವಿದ್ಯುತ್ ಸಂಪರ್ಕದ ಎಲ್ಲಾ ಸ್ವಿಚ್‌ಗಳನ್ನು ಕಡ್ಡಾಯವಾಗಿ ಆಫ್ (Switch Off) ಮಾಡಬೇಕು.
>. ಕಚೇರಿಗೆ ಬೀಗ ಹಾಕುವ ಮುನ್ನ ಇದನ್ನು ಖಚಿತಪಡಿಸಿಕೊಳ್ಳುವ ಜವಾಬ್ದಾರಿ ಆಪ್ತ ಕಾರ್ಯದರ್ಶಿಗಳು ಮತ್ತು ಭದ್ರತಾ ಸಿಬ್ಬಂದಿಯದ್ದು.
>. ಅಧಿಕಾರಿಗಳ ಕಚೇರಿಗಳಲ್ಲಿನ ಏರ್ ಕಂಡಿಷನರ್‌ಗಳನ್ನು (AC) ಕಡ್ಡಾಯವಾಗಿ 24-26°C ತಾಪಮಾನದಲ್ಲೇ ಬಳಸಬೇಕು.
>. ಸಾಂಪ್ರದಾಯಿಕ ದೀಪಗಳ ಬದಲಿಗೆ ದೀರ್ಘಕಾಲ ಬಾಳಿಕೆ ಬರುವ ಎಲ್‌ಇಡಿ (LED) ದೀಪಗಳನ್ನು ಅಳವಡಿಸುವುದು ಹಾಗೂ ಕಾರಿಡಾರ್‌ಗಳು, ವಿಶ್ರಾಂತಿ ಕೊಠಡಿಗಳು ಮತ್ತು ಸಭಾಂಗಣಗಳಲ್ಲಿ ಚಲನಶೀಲ ಸಂವೇದಕಗಳನ್ನು (Motion Sensors) ಅಳವಡಿಸಲು ಸೂಚನೆ.
Laxmi News 24×7