ಗದಗ: ಅನೈತಿಕ ಸಂಬಂಧದ ಆರೋಪದ ಹಿನ್ನೆಲೆಯಲ್ಲಿ ವ್ಯಕ್ತಿಯೊಬ್ಬನನ್ನು ಕಬ್ಬಿಣದ ರಾಡ್‌ನಿಂದ ಹೊಡೆದು ಕೊಲೆ ಮಾಡಿರುವ ಘಟನೆ ಗದಗ ಜಿಲ್ಲೆಯ ಲಕ್ಷ್ಮೇಶ್ವರ ತಾಲೂಕಿನ ಪುಟಗಾಂವ್ ಬಡ್ನಿ ಗ್ರಾಮದಲ್ಲಿ ನಡೆದಿದೆ.
34 ವರ್ಷದ ಈರಣ್ಣ ಅಗಸಿಬಾಗಿಲು ಮೃತ ವ್ಯಕ್ತಿ. ಈರಣ್ಣ ಸ್ಥಳೀಯ ರೇಣುಕಾ ಎಂಬ ಯುವತಿ ಜೊತೆ ಅನೈತಿಕ ಸಂಬಂಧ ಹೊಂದಿದ್ದ ಎನ್ನಲಾಗಿದೆ.
ಈರಣ್ಣ ಹಾಗೂ ರೇಣುಕಾ ಇಬ್ಬರು ಒಟ್ಟಿಗೆ ಇದ್ದ ವೇಳೆ ರೇಣುಕಾಳ ಕುಟುಂಬಸ್ಥರು ರೆಡ್‌ಹ್ಯಾಂಡ್ ಆಗಿ ಹಿಡಿದಿದ್ದಾರೆ. ಈ ವೇಳೆ ನಾಲ್ವರು ಸೇರಿ ಈರಣ್ಣನ ತಲೆಗೆ ಕಬ್ಬಿಣದ ರಾಡ್‌ನಿಂದ ಬಲವಾಗಿ ಹೊಡೆದಿದ್ದು, ಗಂಭೀರವಾಗಿ ಗಾಯಗೊಂಡ ಈರಣ್ಣ ಮೃತಪಟ್ಟಿದ್ದಾನೆ.
ಈ ಪ್ರಕರಣದಲ್ಲಿ ರೇಣುಕಾ ಕಳಸಾಪೂರ (22), ಆಕೆಯ ಪತಿ ಆಂಜನೇಯ ಕಳಸಾಪೂರ (32), ರೇಣುಕಾಳ ತಾಯಿ ಹನುಮವ್ವ ಭೋವಿ (40) ಹಾಗೂ ಸಹೋದರ ಧರ್ಮರಾಜ್ ಭೋವಿ (24) ಆರೋಪಿಗಳು.
ಕೊಲೆ ಬಳಿಕ ಆರೋಪಿಗಳು ಈರಣ್ಣ ವಿರುದ್ಧವೇ ದೂರು ನೀಡಲು ಪೊಲೀಸ್ ಠಾಣೆಗೆ ತೆರಳಿದ್ದರು. ಆದರೆ, ವಿಚಾರಣೆ ವೇಳೆ ಪ್ರಕರಣದ ಸತ್ಯಾಂಶ ಪೊಲೀಸರಿಗೆ ತಿಳಿದುಬಂದಿದ್ದು, ನಾಲ್ವರು ಆರೋಪಿಗಳನ್ನು ಬಂಧಿಸಲಾಗಿದೆ.
ಘಟನಾ ಸ್ಥಳಕ್ಕೆ ಲಕ್ಷ್ಮೇಶ್ವರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಕುರಿತು ಲಕ್ಷ್ಮೇಶ್ವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಮುಂದುವರಿಸಿದ್ದಾರೆ.
Laxmi News 24×7