Breaking News

ಆಹಾರ ಆಯೋಗದ ದಿಢೀರ್ ದಾಳಿ; ಕಲಬೆರಕೆ ಖಾರದ ಪುಡಿ ಫ್ಯಾಕ್ಟರಿ ಬಂದ್

Spread the love

ಗದಗ: ಕರ್ನಾಟಕ ರಾಜ್ಯ ಆಹಾರ ಆಯೋಗ ತಂಡ  ಗದಗ ಜಿಲ್ಲೆಯ  ವಿವಿಧ ಆಹಾರ ಘಟಕಗಳು, ಶಾಲೆಗಳು ಮತ್ತು ಸರ್ಕಾರಿ ಕಚೇರಿಗಳ ಮೇಲೆ ದಿಢೀರ್ ದಾಳಿ ನಡೆಸಿ ಆಹಾರ ಸುರಕ್ಷತೆ ಪರಿಶೀಲಿಸಿದೆ.

ಮೊದಲಿಗೆ ಗದಗ ಇಂಡಸ್ಟ್ರಿಯಲ್ ಏರಿಯಾದಲ್ಲಿರುವ ‘ಕಲ್ಯಾಣಿ ಟ್ರೇಡಿಂಗ್ ಕಂಪನಿ’ಯ ಖಾರದ ಪುಡಿ ಫ್ಯಾಕ್ಟರಿಗೆ ಅಧಿಕಾರಿಗಳು ಭೇಟಿ ನೀಡಿದರು. ಅಲ್ಲಿ ಪರಿಶೀಲನೆ ನಡೆಸಿದಾಗ ಖಾರದ ಪುಡಿಗೆ ಕೃತಕ ಬಣ್ಣ ಕಲಬೆರಕೆ ಮಾಡಿರುವುದು ಮೇಲ್ನೋಟಕ್ಕೆ ಕಂಡುಬಂದಿದೆ. ಕಳಪೆ ಗುಣಮಟ್ಟದ ಮೆಣಸಿನಕಾಯಿ, ಎಣ್ಣೆ ಡಬ್ಬಗಳು ಮತ್ತು ಉಪ್ಪನ್ನು ಬಳಸಲಾಗಿದೆ.

ಫ್ಯಾಕ್ಟರಿಯಲ್ಲಿ ಯಾವುದೇ ಆಹಾರ ಸುರಕ್ಷತಾ ನಿಯಮಗಳನ್ನು ಪಾಲಿಸಿರಲಿಲ್ಲ. ಚೀಲಗಳ ಮೇಲೆ ಉತ್ಪಾದನೆ ಮತ್ತು ಅವಧಿ ಮುಗಿಯುವ ದಿನಾಂಕದ ಲೇಬಲ್ ಇರಲಿಲ್ಲ. ಕಾರ್ಮಿಕರಿಗೆ ಮಾಸ್ಕ್, ಹ್ಯಾಟ್ ಅಥವಾ ಹ್ಯಾಂಡ್ ಗ್ಲೌಸ್ ಕೂಡ ನೀಡಿರಲಿಲ್ಲ. ತಕ್ಷಣವೇ ನಾಲ್ಕೈದು ಬಗೆಯ ಪೌಡರ್ ಸ್ಯಾಂಪಲ್‌ಗಳನ್ನು ಪ್ರಯೋಗಾಲಯಕ್ಕೆ ಕಳುಹಿಸಿರುವ ಅಧಿಕಾರಿಗಳು, ವರದಿ ಬರುವವರೆಗೂ ಫ್ಯಾಕ್ಟರಿ ಬಂದ್ ಮಾಡುವಂತೆ ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ. ಜೊತೆಗೆ ಕಾರ್ಮಿಕರ ಹೆಲ್ತ್ ಸರ್ಟಿಫಿಕೇಟ್, ವೇತನ ಮತ್ತು ಘಟಕದ ನವೀಕರಣ ಪ್ರತಿಗಳನ್ನು ಸಲ್ಲಿಸಲು ಆದೇಶಿಸಿದ್ದಾರೆ.

ಬಿಸಿಯೂಟ ಅವ್ಯವಸ್ಥೆಗೆ ಮುಖ್ಯಶಿಕ್ಷಕಿಗೆ ನೋಟಿಸ್
ಅಧಿಕಾರಿಗಳು ಗಂಗಿಮಡಿ ಕಾಲೋನಿಯ ಕರ್ನಾಟಕ ಮೌಲಾನಾ ಆಜಾದ್ ಪಬ್ಲಿಕ್ ಶಾಲೆ ಹಾಗೂ ಸರ್ಕಾರಿ ಹಿರಿಯ ಉರ್ದು ಪ್ರಾಥಮಿಕ ಶಾಲೆಗೆ ಭೇಟಿ ನೀಡಿ ಮಧ್ಯಾಹ್ನದ ಬಿಸಿಯೂಟ ಪರಿಶೀಲಿಸಿದರು. ಈ ವೇಳೆ, ಮೂರು ದಿನದಿಂದ ಮೊಟ್ಟೆ ಕೊಟ್ಟಿಲ್ಲ, ಅನ್ನ ಸರಿಯಾಗಿ ಬೆಂದಿರುವುದಿಲ್ಲ, ಬರೀ ಬಾಳೆಹಣ್ಣು ಕೊಡುತ್ತಾರೆ ಎಂದು ಮಕ್ಕಳು ದೂರಿದ್ದಾರೆ. ಊಟ ಸರಿ ಇಲ್ಲದ ಕಾರಣ ಅನೇಕ ಮಕ್ಕಳು ಮನೆಯಿಂದಲೇ ಡಬ್ಬಿ ತರುತ್ತಿರುವುದು ಕಂಡುಬಂದಿದೆ.

ಶಾಲೆಯಲ್ಲಿ ನೀರಿನ ಘಟಕ ರಿಪೇರಿಯಾಗಿಲ್ಲ, ಶೌಚಾಲಯ ಗಲೀಜಾಗಿದೆ, ಸುತ್ತಮುತ್ತ ಸ್ವಚ್ಛತೆಯೇ ಇಲ್ಲ. ಅಷ್ಟೇ ಅಲ್ಲದೆ, ತರಕಾರಿ ಬಿಲ್ ಇಲ್ಲದಿರುವುದು, ರಸೀದಿ ತಿದ್ದಿರುವುದು ಮತ್ತು ಖಾಲಿ ಚೆಕ್‌ಗೆ ಮೊದಲೇ ಸಹಿ ಮಾಡಿರುವುದನ್ನು ಕಂಡು ಅಧ್ಯಕ್ಷರು ಬೇಸರ ವ್ಯಕ್ತಪಡಿಸಿದರು. ಕರ್ತವ್ಯ ಲೋಪ ಎಸಗಿದ ಉರ್ದು ಶಾಲೆ ಮುಖ್ಯಶಿಕ್ಷಕಿಗೆ ತಕ್ಷಣ ನೋಟಿಸ್ ನೀಡಲು ಸೂಚಿಸಿದ್ದಾರೆ.

ಬಡವರಿಗೆ ಸೇರಬೇಕಾದ ಪಡಿತರ ಅಕ್ಕಿ ಕಳ್ಳಸಾಗಣೆಯಾಗುತ್ತಿರುವ ಬಗ್ಗೆಯೂ ಅಧ್ಯಕ್ಷರು ಗಂಭೀರವಾಗಿ ಪ್ರಸ್ತಾಪಿಸಿದರು. ಆಹಾರ ಇಲಾಖೆ ಅಧಿಕಾರಿಗಳು ಏನು ಕೆಲಸ ಮಾಡುತ್ತಿದ್ದಾರೆ ಎಂಬ ಬಗ್ಗೆ ವರದಿ ನೀಡುವಂತೆ ಗದಗ ಎಸಿ ಗಂಗಪ್ಪ ಅವರಿಗೆ ಸೂಚಿಸಿದರು. ಅವ್ಯವಹಾರದಲ್ಲಿ ಅಧಿಕಾರಿಗಳು ಭಾಗಿಯಾಗಿದ್ದರೆ ಅವರ ವಿರುದ್ಧವೂ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳುವಂತೆ ಎಚ್ಚರಿಕೆ ನೀಡಿದ್ದಾರೆ.

ಗದಗ-ಬೆಟಗೇರಿ ಅವಳಿ ನಗರದ ನ್ಯಾಯಬೆಲೆ ಅಂಗಡಿಗಳು, ಆಹಾರ ಧಾನ್ಯ ಸಗಟು ಮಳಿಗೆ, ಅಂಗನವಾಡಿ ಕೇಂದ್ರ, ಆಸ್ಪತ್ರೆ ಹಾಗೂ ವಿವಿಧ ಹಾಸ್ಟೆಲ್‌ಗಳಿಗೂ ತಂಡ ಭೇಟಿ ನೀಡಿ ಪರಿಶೀಲಿಸಿದೆ. ಇನ್ನೂ ಎರಡು ದಿನ ಜಿಲ್ಲೆಯಾದ್ಯಂತ ಈ ಸರ್ಪ್ರೈಸ್ ವಿಸಿಟ್ ಮುಂದುವರಿಯಲಿದೆ.


Spread the love

About Laxminews 24x7

Check Also

ಚುನಾವಣೆಯನ್ನು ಬಹಿಷ್ಕರಿಸುವುದಿಲ್ಲ, ವ್ಯವಸ್ಥೆಯೊಳಗೇ ಹೋರಾಟ: ರಾಹುಲ್ ಗಾಂಧಿ

Spread the loveನವದೆಹಲಿ: ವಿರೋಧ ಪಕ್ಷಗಳು ಚುನಾವಣೆಯನ್ನು ಬಹಿಷ್ಕರಿಸುವುದಿಲ್ಲ. ಬದಲಾಗಿ, ಚುನಾವಣಾ ಪ್ರಕ್ರಿಯೆಯಲ್ಲಿ ಭಾಗವಹಿಸುವ ಮೂಲಕವೇ ಪ್ರಜಾಪ್ರಭುತ್ವದ ಹಕ್ಕುಗಳಿಗಾಗಿ ಹೋರಾಟ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ