Breaking News
Home / ಜಿಲ್ಲೆ / ಬೆಂಗಳೂರು / ರಾಜ್ಯದ 100 ಬರಪೀಡಿತ ತಾಲೂಕುಗಳಲ್ಲಿ ಬರ ನಿಯಂತ್ರಣ ಜಲಾನಯನ ಅಭಿವೃದ್ಧಿ ಹೊಸ ಯೋಜನೆ

ರಾಜ್ಯದ 100 ಬರಪೀಡಿತ ತಾಲೂಕುಗಳಲ್ಲಿ ಬರ ನಿಯಂತ್ರಣ ಜಲಾನಯನ ಅಭಿವೃದ್ಧಿ ಹೊಸ ಯೋಜನೆ

Spread the love

ಬೆಂಗಳೂರು, ಫೆ.17-ರಾಜ್ಯದಲ್ಲಿ ಹೆಚ್ಚುತ್ತಿರುವ ಬರಗಾಲವನ್ನು ತಗ್ಗಿಸಿ ಅಂತರ್ಜಲವನ್ನು ವೃದ್ಧಿಸುವ ನಿಟ್ಟಿನಲ್ಲಿ ರಾಜ್ಯದ 100 ಬರಪೀಡಿತ ತಾಲೂಕುಗಳಲ್ಲಿ ಬರ ನಿಯಂತ್ರಣ ಜಲಾನಯನ ಅಭಿವೃದ್ಧಿ ಹೊಸ ಯೋಜನೆಯನ್ನು ಜಾರಿ ಮಾಡಲಾಗುವುದು ಎಂದು ರಾಜ್ಯಪಾಲ ವಿ.ಆರ್.ವಾಲಾ ಘೋಷಿಸಿದರು.

ವಿಧಾನಮಂಡಲದ ಜಂಟಿ ಅಧಿವೇಶನ ಉದ್ದೇಶಿಸಿ ಭಾಷಣ ಮಾಡಿದ ಅವರು,ಮಹಾತ್ಮಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆ ಹಾಗೂ ಪ್ರಧಾನಮಂತ್ರಿ ಕೃಷಿ ಸಿಂಚಾಯಿ ಯೋಜನೆಯನ್ನು ಸಂಯೋಜನೆಗೊಳಿಸಿ 100 ಬರಪೀಡಿತ ತಾಲೂಕುಗಳಲ್ಲಿ ಬರ ನಿಯಂತ್ರಣ ಜಲಾನಯನ ಅಭಿವೃದ್ಧಿ ಯೋಜನೆಯನ್ನು ಜಾರಿ ಮಾಡುವುದಾಗಿ ಪ್ರಕಟಿಸಿದರು.

ಬೆಂಗಳೂರು ನಗರದಲ್ಲಿ ಉತ್ಪತ್ತಿಯಾಗುವ ಒಳಚರಂಡಿ ನೀರನ್ನು ಸಂಸ್ಕರಿಸಿ ಬರಪೀಡಿತ ಜಿಲ್ಲೆಗಳಾದ ಚಿಕ್ಕಬಳ್ಳಾಪುರ ಮತ್ತು ಕೋಲಾರ ಜಿಲ್ಲೆಗಳ ಕೆರೆಗಳಿಗೆ ತುಂಬಿಸಲಾಗುತ್ತದೆ. ಇದೇ ಮಾದರಿಯನ್ನು ಇತರ ಪ್ರಮುಖ ನಗರಗಳಿಗೆ ವಿಸ್ತರಿಸಲು ಉದ್ದೇಶಿಸಿದೆ ಎಂದು ಹೇಳಿದರು.

41 ತಾಲೂಕುಗಳಲ್ಲಿ ಅಂತರ್ಜಲ ನಿರ್ವಹಣೆ ಕಾರ್ಯವನ್ನು ಕೈಗೊಳ್ಳಲು ಅಟಲ್ ಭೂ ಜಲ ಯೋಜನೆಯಡಿ ಕೇಂದ್ರ ಸರ್ಕಾರ ನೀಡುವ ಅನುದಾನಕ್ಕೆ ಪೂರಕವಾಗಿ ಹೆಚ್ಚುವರಿ ಅನುದಾನ ನೀಡುವ ಮೂಲಕ ರಾಜ್ಯವನ್ನು ಬರ ಮುಕ್ತ ಮಾಡಲು ಸರ್ಕಾರ ಬದ್ಧವಾಗಿದೆ ಎಂದು ಹೇಳಿದರು.

ಪ್ರಸ್ತುತ ಪೋಡಿ ಅಭಿಯಾನ ಯೋಜನೆಯಡಿ 2452 ಗ್ರಾಮಗಳಲ್ಲಿ ಪೋಡಿ ಕಾರ್ಯವನ್ನು ಪೂರ್ಣಗೊಳಿಸಿದೆ. ಉಳಿದ ಗ್ರಾಮಗಳಲ್ಲಿ ಈ ಯೋಜನೆ ಅನುಷ್ಠಾನವನ್ನು ಚುರುಕುಗೊಳಿಸಲು ತೀರ್ಮಾನಿಸಲಾಗಿದೆ ಎಂದರು.ಮಹಿಳೆಯರ ಸುರಕ್ಷತೆ ಮತ್ತು ರಕ್ಷಣೆಗೆ ನಮ್ಮ ಸರ್ಕಾರ ಬದ್ಧವಾಗಿದ್ದು, ಕಾರ್ಖಾನೆಗಳಲ್ಲಿ ಮಹಿಳೆಯರು ರಾತ್ರಿ ಪಾಳಿಯಲ್ಲಿ ಕಾರ್ಯನಿರ್ವಹಿಸಲು ಅವಕಾಶ ಕಲ್ಪಿಸಲಾಗಿದ್ದು, ಕಾರ್ಖಾನೆಗಳಿಗೆ ಕೆಲವು ಕಠಿಣ ಷರತ್ತುಗಳನ್ನು ವಿಧಿಸಲಾಗಿದೆ.

ಫೋಕ್ಸೋ ಕಾಯ್ದೆಯಡಿ ದಾಖಲಾಗುವ ಪ್ರಕರಣಗಳನ್ನು ತ್ವರಿತವಾಗಿ ವಿಚಾರಣೆ ನಡೆಸಲು ರಾಜ್ಯದ ವಿವಿಧೆಡೆ 17 ನ್ಯಾಯಾಲಯಗಳನ್ನು ಹಾಗೂ ಅತ್ಯಾಚಾರ, ಫೋಕ್ಸೋ ಕಾಯ್ದೆಗೆ ಸಂಬಂಧಿಸಿದ ಪ್ರಕರಣಗಳನ್ನು ತ್ವರಿತವಾಗಿ ವಿಲೇವಾರಿ ಮಾಡಲು 14 ತ್ವರಿತ ವಿಚಾರಣಾ ನ್ಯಾಯಾಲಯಗಳನ್ನು ಸ್ಥಾಪಿಸಲಾಗಿದೆ ಎಂದು ವಿವವರಿಸಿದರು. ಎಲ್ಲಾ ನ್ಯಾಯಾಲಯಗಳಲ್ಲೂ ಮಹಿಳಾ ವಕೀಲರಿಗಾಗಿ ಅಗತ್ಯ ಸೌಲಭ್ಯಗಳಿರುವ ಪ್ರತ್ಯೇಕ ವಿಶ್ರಾಂತಿ ಕೊಠಡಿಗಳನ್ನು ಒದಗಿಸಲಾಗುವುದು ಎಂದರು.


Spread the love

About Laxminews 24x7

Check Also

ವೈದ್ಯರ ಸಹಾಯ ಪಡೆಯಲು ನಿರಾಕರಣೆ: ಕೇಜ್ರಿವಾಲ್‌ ಸಾವಿಗೆ ಪಿತೂರಿ; ಎಎಪಿ ಆರೋಪ

Spread the love ನವದೆಹಲಿ: ತಿಹಾರ್‌ ಜೈಲಿನಲ್ಲಿರುವ ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್‌ ಅವರಿಗೆ ಇನ್ಸುಲಿನ್‌ ಪಡೆಯಲು ಮತ್ತು ವೈದ್ಯರ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ