ಬೆಂಗಳೂರು: ಬಿಜೆಪಿ ಅವಧಿಯಲ್ಲಿ ಶೇ.17 ಕ್ಕೆ ಹೆಚ್ಚಳ ಮಾಡಿದ್ದ ಎಸ್ಸಿ ಮೀಸಲಾತಿಯನ್ನು ಶೇ.15ಕ್ಕೆ ಇಳಿಕೆ ಮಾಡಿದ್ದು, ಸಿದ್ದರಾಮಯ್ಯ ಸರ್ಕಾರ ದಲಿತ ಸಮುದಾಯಕ್ಕೆ ಅನ್ಯಾಯ ಮಾಡಿದೆ ಎಂದು ವಿಪಕ್ಷ ನಾಯಕ ಆರ್. ಅಶೋಕ್ ವಾಗ್ದಾಳಿ ನಡೆಸಿದ್ದಾರೆ.
ನಗರದ ಬಿಜೆಪಿ ಕಚೇರಿಯಲ್ಲಿ ಸುದ್ದಿಗೋಷ್ಟಿ ನಡೆಸಿ ಮಾತನಾಡಿದ ಅವರು, ಎಸ್‍ಸಿ-ಎಸ್‍ಟಿ ಮೀಸಲಾತಿ ಇಳಿಕೆ ಮಾಡಿರುವ ಕುರಿತು ಕಾಂಗ್ರೆಸ್ ಸರ್ಕಾರದ ವಿರುದ್ಧ ಹರಿಹಾಯ್ದರು.
“ರಾಜ್ಯದಲ್ಲಿ ನಾವು ಅಧಿಕಾರದಲ್ಲಿದ್ದಾಗ ಎಸ್‍ಸಿ ಮೀಸಲಾತಿಯನ್ನು ಶೇ. 15 ರಿಂದ ಶೇ. 17ಕ್ಕೆ ಹಾಗೂ ಎಸ್‍ಟಿ ಮೀಸಲಾತಿಯನ್ನು ಶೇ. 3ರಿಂದ 7ಕ್ಕೆ ಏರಿಸಿದ್ದೆವು. ದಲಿತರ ವಿರುದ್ಧ ಕುತಂತ್ರ ನಡೆಸಿ ಮೀಸಲಾತಿಯನ್ನು ಪುನಃ ಶೇ. 15ಕ್ಕೆ ಇಳಿಕೆ ಮಾಡಿ ಸಿದ್ದರಾಮಯ್ಯ ಘನಂದಾರಿ ಕೆಲಸ ಮಾಡಿದ್ದಾರೆ. ನಾವು ದಲಿತರ ಪರ ಅಂತ ಹೇಳುತ್ತಾ ಕಾಂಗ್ರೆಸ್ ದಲಿತರಿಗೆ ಅನ್ಯಾಯ ಮಾಡಿದೆ. ಇದೇನಾ ಕಾಂಗ್ರೆಸ್ ದಲಿತ ಪರ ನೀತಿ? ಎಂದು ಅಶೋಕ್ ಪ್ರಶ್ನಿಸಿದ್ದಾರೆ.
“ಇದರ ಬಗ್ಗೆ ನಾವು ಮಾತನಾಡಿದರೆ ಸಂವಿಧಾನದ 9ನೇ ಶೆಡ್ಯೂಲ್‍ಗೆ ಬಿಜೆಪಿ ಸೇರಿಸಲಿ ಅಂತ ಹೇಳುತ್ತಾರೆ. ಮನಮೋಹನ್ ಸಿಂಗ್ ಅವರ ಸರ್ಕಾರ ಇದ್ದಾಗ ಯಾಕೆ 9ನೇ ಶೆಡ್ಯೂಲ್‍ಗೆ ಸೇರಿಸಲಿಲ್ಲ. ನಿಮಗೆ ಕೇಳಲು ತಾಕತ್ ಇಲ್ವಾ? ಇದು ಕಾಂಗ್ರೆಸಿನ ದ್ವಂದ್ವ ನೀತಿ” ಎಂದು ಅಶೋಕ್ ಕಿಡಿಕಾರಿದ್ದಾರೆ.
ಕಾಂಗ್ರೆಸ್ ಸರ್ಕಾರದಿಂದ ಎಸ್‍ಟಿ ಸಮುದಾಯಕ್ಕೆ ದೊಡ್ಡ ಅನ್ಯಾಯ
ಎಸ್‍ಟಿ ಸಮುದಾಯ ಮೀಸಲಾತಿ ಹೆಚ್ಚಳದಿಂದ ವಂಚಿತ ಆಗಿದೆ. ಯಾರೋ ಝೆಂಝಿ ಹೋರಾಟದ ಒತ್ತಡ ಇತ್ತು ಅನ್ನೋ ಕಾರಣಕ್ಕೆ ಮೀಸಲಾತಿಯನ್ನು ಶೇ.3ಕ್ಕೆ ಇಳಿಸಿದ್ದೀರಿ. ಈ ಮೀಸಲಾತಿ ಹೆಚ್ಚಾಗಲು ಇನ್ನೆಷ್ಟು ವರ್ಷಗಳು ಬೇಕು? ಎಸ್‍ಟಿ ಸಮುದಾಯದ ಮೀಸಲಾತಿಯನ್ನು 3% ರಿಂದ 7% ಗೆ ಏರಿಕೆ ಮಾಡಿದಿದ್ದರೆ ಆ ಸಮುದಾಯ ಹೋರಾಟಕ್ಕಿಳಿದು ಆಕ್ರೋಶದ ಜ್ವಾಲೆಯನ್ನು ಹೊರ ಹಾಕಲಿದೆ. ಎಸ್‍ಟಿ ಸಮುದಾಯದ ಹೋರಾಟಕ್ಕೆ ಬಿಜೆಪಿ ಬೆಂಬಲ ನೀಡಲಿದೆ” ಎಂದು ಆರ್ ಅಶೋಕ್ ಎಚ್ಚರಿಕೆ ನೀಡಿದ್ದಾರೆ.
Laxmi News 24×7