ಬೆಳಗಾವಿ : ಎಸ್‌ಐಆರ್ ಒಂದು ಸಹಜ ಪ್ರಕ್ರಿಯೆ. ಇದುವರೆಗೂ ಸುಮಾರು ಎಂಟು ಸಲ ದೇಶದಲ್ಲಿ ನಡೆದಿದೆ. ಎಲ್ಲೂ ಬಡವರ ಮತದಾನದ ಹಕ್ಕು ಕಸಿಯುವ ಪ್ರಯತ್ನವಾಗಿಲ್ಲ. ಇದು ಎಸ್‌ಐಆರ್ ನೀತಿ ಹಾಗೂ ಉದ್ದೇಶವೂ ಅಲ್ಲ ಎಂದು ವಿಧಾನ ಪರಿಷತ್ ಸದಸ್ಯ ಸಿ.ಟಿ.ರವಿ ಸ್ಪಷ್ಟಪಡಿಸಿದರು.
ಖಾಸಗಿ ಹೋಟೆಲ್‌ನಲ್ಲಿ ಗುರುವಾರ ಜರುಗಿದ ಬಿಜೆಪಿ ಸಂಘಟನಾತ್ಮಕ ಸಭೆಯಲ್ಲಿ ಮಾತನಾಡಿದ ಅವರು, ಬಿಎಲ್ಒಗಳು ಪ್ರತಿ ಮನೆಗೆ ಹೋಗಿ ನೈಜ ಮತದಾರರಿಗೆ ಮತದಾನದ ಹಕ್ಕು ದೊರಕುವಂತೆ ಮಾಡುವ ಕಾರ್ಯದಲ್ಲಿ ತೊಡಗಿದ್ದಾರೆ. ಅವರು ಈ ರೀತಿ ಪ್ರತಿ ಮನೆಗೆ ಹೋಗುವುದಕ್ಕೆ ಅಡ್ಡಿ ಮಾಡಿ, ಒಂದೇ ಕಡೆ ಎಲ್ಲರನ್ನು ಜಾತ್ರೆ ರೀತಿ ಸೇರಿಸಿ ಅವರ ಮೇಲೆ ಒತ್ತಡ ತರುವ ಕೆಲಸವನ್ನು ಸಂವಿಧಾನಾತ್ಮಕವಾಗಿ ರಚಿತವಾಗಿರುವ ಸರ್ಕಾರ ಮಾಡುತ್ತಿದೆ. ಇದು ಯಾವ ರೀತಿಯ ಘನ ಕಾರ್ಯ? ಎಂದು ಆಕ್ರೋಶ ವ್ಯಕ್ತಪಡಿಸಿದರು.
ಸಂಸದ ಜಗದೀಶ ಶೆಟ್ಟರ ಮತ್ತು ಶಾಸಕ ಬಾಲಚಂದ್ರ ಜಾರಕಿಹೊಳಿ ಮಾತನಾಡಿ ಜಿಪಂ, ತಾಪಂ ಹಾಗೂ ಗ್ರಾಪಂ ಚುನಾವಣೆ ಈ ವರ್ಷದ ಕೊನೆಯಲ್ಲಿ ನಡೆಯುವ ಸಾಧ್ಯತೆ ಇದೆ. ಪಕ್ಷದ ಕಾರ್ಯಕರ್ತರು, ಮುಖಂಡರು, ಜನಪ್ರತಿನಿಧಿಗಳು ಬೂತ್ ಮಟ್ಟದಲ್ಲಿ ಪಕ್ಷ ಸಂಘಟಿಸಬೇಕು. ೇಂದ್ರ ಸರ್ಕಾರದ ಹಾಗೂ ಹಿಂದಿನ ಬಿಜೆಪಿ ಆಡಳಿತದ ರಾಜ್ಯ ಸರ್ಕಾರದ ಜನಪರ ಯೋಜನೆಗಳನ್ನು ಮನೆ ಮನೆಗೆ ತಿಳಿಸುವ ಕೆಲಸ ಮಾಡಬೇಕು ಎಂದು ಸಲಹೆ ನೀಡಿದರು.
ರಾಜ್ಯ ಪ್ರಧಾನ ಕಾರ್ಯದರ್ಶಿ ಪಿ.ರಾಜೀವ, ಬೆಳಗಾವಿ ಗ್ರಾಮಾಂತರ ಜಿಲ್ಲಾ ಅಧ್ಯಕ್ಷ ಸುಭಾಸ ಪಾಟೀಲ, ಮಹಾನಗರ ಅಧ್ಯಕ್ಷೆ ಗೀತಾ ಸುತಾರ, ಶಾಸಕರಾದ ವಿಠ್ಠಲ ಹಲಗೇಕರ, ಸಾಬಣ್ಣ ತಳವಾರ, ಮಾಜಿ ಸಂಸದರಾದ ಈರಣ್ಣ ಕಡಾಡಿ, ಮಂಗಳಾ ಅಂಗಡಿ, ಮಾಜಿ ಶಾಸಕರಾದ ಸಂಜಯ ಪಾಟೀಲ, ವಿಶ್ವನಾಥ ಪಾಟೀಲ, ಅನಿಲ ಬೆನಕೆ, ಜಗದೀಶ ಮೆಟಗುಡ್ಡ, ಮಹಾಂತೇಶ ದೊಡ್ಡಗೌಡ್ರ, ಅರವಿಂದ ಪಾಟೀಲ, ಮುಖಂಡರಾದ ಎಂ.ಬಿ.ಜಿರಲಿ, ಧನಶ್ರೀ ದೇಸಾಯಿ, ಸಂದೀಪ ದೇಶಪಾಂಡೆ ಇತರರಿದ್ದರು.
Laxmi News 24×7