Breaking News

ಶಾಖೋತ್ಪನ್ನ ಸ್ಥಾವರಗಳಲ್ಲಿ ವಿದ್ಯುತ್ ಉತ್ಪಾದನೆ ಗಣನೀಯ ಏರಿಕೆ: ಕೆ.ಜೆ.ಜಾರ್ಜ್

Spread the love

ಬೆಂಗಳೂರು: ರಾಜ್ಯದಲ್ಲಿ ಮಳೆ ಕೊರತೆಯಿಂದ ಜಲ ವಿದ್ಯುತ್ ಉತ್ಪಾದನೆ ಕುಂಠಿತವಾಗಿರುವ ಹಿನ್ನೆಲೆ ಶಾಖೋತ್ಪನ್ನ ಕೇಂದ್ರಗಳಲ್ಲಿ ವಿದ್ಯುತ್ ಉತ್ಪಾದನೆಯನ್ನು ಗಣನೀಯವಾಗಿ ಹೆಚ್ಚಿಸಲಾಗಿದ್ದು, ಜುಲೈ ತಿಂಗಳಲ್ಲಿ ಪ್ರತಿನಿತ್ಯ ಸರಾಸರಿ 84.34 ದಶಲಕ್ಷ ಯೂನಿಟ್ ಶಾಖೋತ್ಪನ್ನ ವಿದ್ಯುತ್ ಉತ್ಪಾದನೆ ಮಾಡಲಾಗುತ್ತಿದೆ ಎಂದು ಇಂಧನ ಮತ್ತು ಪ್ರವಾಸೋದ್ಯಮ ಸಚಿವ ಕೆ.ಜೆ.ಜಾರ್ಜ್  ತಿಳಿಸಿದ್ದಾರೆ.

ಕರ್ನಾಟಕ ವಿದ್ಯುತ್ ನಿಗಮ ನಿಯಮಿತ (ಕೆಪಿಸಿಎಲ್) ರಾಜ್ಯದಲ್ಲಿ ಜಲ ವಿದ್ಯುತ್ ಮತ್ತು ಶಾಖೋತ್ಪನ್ನ ವಿದ್ಯುತ್ ಉತ್ಪಾದನಾ ಸ್ಥಾವರಗಳನ್ನು ನಿರ್ವಹಿಸುತ್ತಿದ್ದು, ಜಲಾಶಗಳಲ್ಲಿ ನೀರಿನ ಪ್ರಮಾಣ ಕಡಿಮೆ ಇರುವುದರಿಂದ ಶಾಖೋತ್ಪನ್ನ ವಿದ್ಯುತ್ ಸ್ಥಾವರಗಳನ್ನು ಸುಸ್ಥಿತಿಯಲ್ಲಿಟ್ಟು ಹೆಚ್ಚು ವಿದ್ಯುತ್ ಉತ್ಪಾದನೆ ಮಾಡಲಾಗುತ್ತಿದೆ. ಶಾಖೋತ್ಪನ್ನ ವಿದ್ಯುತ್ ಸ್ಥಾವರಗಳಲ್ಲಿ ಉತ್ಪಾದನೆಯನ್ನು ಪ್ರತಿನಿತ್ಯ 100 ದಶಲಕ್ಷ ಯೂನಿಟ್ ಗೆ ಹೆಚ್ಚಿಸಲು ಕ್ರಮ ವಹಿಸಲಾಗುತ್ತಿದೆ. ವಿದ್ಯುತ್ ಉತ್ಪಾದನೆ ಕುರಿತಂತೆ ಈಗಾಗಲೇ ಕೆಪಿಸಿಎಲ್‌ನ ಪ್ರಗತಿ ಪರಿಶೀಲನೆ ನಡೆಸಿದ್ದು, ಬೇಡಿಕೆಗೆ ತಕ್ಕಂತೆ ವಿದ್ಯುತ್ ಉತ್ಪಾದಿಸಲು ಅಗತ್ಯ ಕ್ರಮ ವಹಿಸುವಂತೆ ಸೂಚಿಸಿದ್ದಾರೆ.

ಈ ಬಾರಿ ಮಳೆಗಾಲದಲ್ಲಿ, ಅದರಲ್ಲೂ ಮುಖ್ಯವಾಗಿ ಜುಲೈ ತಿಂಗಳಲ್ಲಿ ರಾಜ್ಯದ ಮೂರು ಶಾಖೋತ್ಪನ್ನ ವಿದ್ಯುತ್ ಸ್ಥಾವರಗಳಲ್ಲಿ ಅಗತ್ಯ ಕಲ್ಲಿದ್ದಲು ಪೂರೈಕೆ ಜೊತೆಗೆ ವಿದ್ಯುತ್ ಉತ್ಪಾದನೆಯಲ್ಲೂ ಗಣನೀಯವಾಗಿ ಏರಿಕೆಯಾಗಿದೆ. ಇದರಿಂದಾಗಿ ಪ್ರತಿನಿತ್ಯ ಸರಾಸರಿ 84.34 ದಶಲಕ್ಷ ಯೂನಿಟ್ ಶಾಖೋತ್ಪನ್ನ ವಿದ್ಯುತ್ ಉತ್ಪಾದನೆಯಾಗುತ್ತಿದೆ. ಕಳೆದ ವರ್ಷ ಜುಲೈ ತಿಂಗಳಲ್ಲಿ ನಿತ್ಯ ಸರಾಸರಿ 54.47 ದಶಲಕ್ಷ ಯೂನಿಟ್ ಉತ್ಪಾದನೆ ಮಾಡಲಾಗಿತ್ತು ಎಂದಿದ್ದಾರೆ.

ಜಲ ವಿದ್ಯುತ್ ಉತ್ಪಾದನೆ ಕುಂಠಿತವಾಗಿರುವ ಕಾರಣ ಪೂರೈಕೆಗೆ ಸಮಸ್ಯೆಯಾಗದಂತೆ ಮುಕ್ತ ಮಾರುಕಟ್ಟೆಯಿಂದ ವಿದ್ಯುತ್ ಖರೀದಿಸಬೇಕಾಗುತ್ತದೆ. ಇದರಿಂದ ಸರ್ಕಾರದ ಬೊಕ್ಕಸದ ಮೇಲೆ ಹೊರೆ ಬೀಳುತ್ತದೆ. ಇದನ್ನು ತಪ್ಪಿಸಿ ರಾಜ್ಯದಲ್ಲೇ ಹೆಚ್ಚು ವಿದ್ಯುತ್ ಉತ್ಪಾದನೆ ಮಾಡಲು ಶಾಖೋತ್ಪನ್ನ ವಿದ್ಯುತ್ ಸ್ಥಾವರಗಳನ್ನು ಸನ್ನದ್ಧಗೊಳಿಸಲಾಗಿದೆ ಎಂದು ಹೇಳಿದ್ದಾರೆ.

ಶಾಖೋತ್ಪನ್ನ ಸ್ಥಾವರಗಳಲ್ಲಿ ವಿದ್ಯುತ್ ಉತ್ಪಾದನೆ ಪ್ರಮಾಣ:
ಈ ವರ್ಷದ ಜುಲೈ ತಿಂಗಳಲ್ಲಿ ರಾಯಚೂರು ಶಾಖೋತ್ಪನ್ನ ವಿದ್ಯುತ್ ಸ್ಥಾವರದಲ್ಲಿ ಜುಲೈ ತಿಂಗಳಲ್ಲಿ ಸರಾಸರಿ 24.45 ದಶಲಕ್ಷ ಯೂನಿಟ್ ವಿದ್ಯುತ್ ಉತ್ಪಾದನೆ ಮಾಡಲಾಗಿದೆ. ಕಳೆದ ವರ್ಷದ ಜುಲೈ ತಿಂಗಳಲ್ಲಿ ಸರಾಸರಿ 13.12 ದಶಲಕ್ಷ ಯೂನಿಟ್ ವಿದ್ಯುತ್ ಉತ್ಪಾದನೆಯಾಗಿತ್ತು. ಬಳ್ಳಾರಿ ಶಾಖೋತ್ಪನ್ನ ವಿದ್ಯುತ್ ಸ್ಥಾವರದಲ್ಲಿ 33.64 ದಶಲಕ್ಷ ಯೂನಿಟ್ ವಿದ್ಯುತ್ ಉತ್ಪಾದನೆಯಾಗುತ್ತಿದೆ. ಕಳೆದ ವರ್ಷ ಜುಲೈ ತಿಂಗಳಲ್ಲಿ ಸರಾಸರಿ 25.35 ದಶಲಕ್ಷ ಯೂನಿಟ್ ವಿದ್ಯುತ್ ಉತ್ಪಾದನೆ ಮಾಡಲಾಗಿತ್ತು.

ಯರಮರಸ್ ಶಾಖೋತ್ಪನ್ನ ಸ್ಥಾವರದಲ್ಲಿ ಸರಾಸರಿ 26.25 ದಶಲಕ್ಷ ಯೂನಿಟ್ ವಿದ್ಯುತ್ ಉತ್ಪಾದನೆ ಮಾಡಲಾಗುತ್ತಿದೆ. ಕಳೆದ ವರ್ಷ ಜುಲೈ ತಿಂಗಳಲ್ಲಿ ಸರಾಸರಿ 16 ದಶಲಕ್ಷ ಯೂನಿಟ್ ವಿದ್ಯುತ್ ಉತ್ಪಾದನೆಯಾಗಿತ್ತು ಎಂದು ಮಾಹಿತಿ ನೀಡಿದ್ದಾರೆ.

ಕಲ್ಲಿದ್ದಲು ಸಂಗ್ರಹ ಹೆಚ್ಚಳ
ಶಾಖೋತ್ಪನ್ನ ಕೇಂದ್ರಗಳಲ್ಲಿ ಹೆಚ್ಚುವರಿ ವಿದ್ಯುತ್ ಉತ್ಪಾದನೆ ಮಾಡಲು ಕಲ್ಲಿದ್ದಲು ಸಂಗ್ರಹ ಹೆಚ್ಚಿಸುವ ನಿಟ್ಟಿನಲ್ಲಿ ಈಗಾಗಲೇ ಕ್ರಮ ವಹಿಸಲಾಗಿದೆ. ಕಳೆದ ವರ್ಷ ಈ ಅವಧಿಯಲ್ಲಿ 12 ದಿನಕ್ಕೆ ಬೇಕಾಗುವ ಕಲ್ಲಿದ್ದಲು ಸಂಗ್ರಹವಿತ್ತು. ಜುಲೈ ತಿಂಗಳಲ್ಲಿ 15 ದಿನಕ್ಕೆ ಬೇಕಾಗುವ ಕಲ್ಲಿದ್ದಲು ಸಂಗ್ರಹವಾಗಿದೆ. ಜೊತೆಗೆ ಕಲ್ಲಿದ್ದಲು ಸಂಗ್ರಹವನ್ನು 20 ದಿನಕ್ಕೆ ಬೇಕಾಗುವಷ್ಟು ಹೆಚ್ಚಿಸಲು ಕ್ರಮ ವಹಿಸಲಾಗುತ್ತಿದ್ದು, ದಿನಕ್ಕೆ 17ರಿಂದ 18 ರೇಕ್ ಕಲ್ಲಿದ್ದಲು ತರಿಸಿಕೊಳ್ಳಲಾಗುತ್ತಿದೆ ಎಂದು ತಿಳಿಸಿದ್ದಾರೆ.


Spread the love

About Laxminews 24x7

Check Also

ಇನ್ಮುಂದೆ ಫುಟ್‌ಪಾತ್‌ನಲ್ಲಿ ಬೈಕ್ ಚಲಾಯಿಸಿದ್ರೆ 5,000 ರೂ. ದಂಡ: ಕೃಷ್ಣ ಬೈರೇಗೌಡ

Spread the loveಬೆಂಗಳೂರು: ಪಾದಾಚಾರಿ ಮಾರ್ಗದಲ್ಲಿ ಮೋಟಾರು ವಾಹನ ಚಲಾಯಿಸುವವರಿಗೆ ವಿಧಿಸುತ್ತಿದ್ದ ದಂಡದ  ಮೊತ್ತವನ್ನು 5,000 ರೂ.ಗಳಿಗೆ ಹೆಚ್ಚಿಸುವಂತೆ ಒತ್ತಾಯಿಸಿ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ