ಭಾರತೀಯ ಶಾಲಾ ಶಿಕ್ಷಣ ವ್ಯವಸ್ಥೆಯಲ್ಲಿ ಒಂದು ಅತ್ಯಂತ ಪ್ರಮುಖ ಹಾಗೂ ಕ್ರಾಂತಿಕಾರಿ ಬದಲಾವಣೆಗೆ ಕೇಂದ್ರ ಸರ್ಕಾರ ಮುಂದಾಗಿದೆ. ಶಾಲೆ ಹಾಗೂ ಕಾಲೇಜುಗಳ ಪಠ್ಯಕ್ರಮದಲ್ಲಿ ಸಮಗ್ರ ಲೈಂಗಿಕ ಶಿಕ್ಷಣವನ್ನು ಅಳವಡಿಸಲು ನಿರ್ಧರಿಸಲಾಗಿದ್ದು, ಈ ಕುರಿತು ಸರ್ಕಾರವು ಸುಪ್ರೀಂಕೋರ್ಟ್‌ಗೆ ಮಾಹಿತಿ ನೀಡಿದೆ. ಇತ್ತೀಚಿನ ದಿನಗಳಲ್ಲಿ ಹೆಚ್ಚುತ್ತಿರುವ ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯಗಳು, ಸೈಬರ್ ಅಪರಾಧಗಳು, ಹದಿಹರೆಯದವರಲ್ಲಿ ಕಂಡುಬರುತ್ತಿರುವ ಗರ್ಭಧಾರಣೆ ಹಾಗೂ ಮಾನಸಿಕ ಆರೋಗ್ಯದ ಸಮಸ್ಯೆಗಳ ಹಿನ್ನೆಲೆ ಈ ನಿರ್ಧಾರ ಅತ್ಯಂತ ಮಹತ್ವದ್ದಾಗಿ ಹೊರಹೊಮ್ಮಿದೆ. ಅಲ್ಲದೆ, ಲೈಂಗಿಕತೆಯ ಕುರಿತು ಸಮಾಜದಲ್ಲಿರುವ ತಪ್ಪು ಕಲ್ಪನೆಗಳನ್ನು ಹೋಗಲಾಡಿಸಲು ಇದು ಪೂರಕವಾಗಲಿದೆ.
ಈ ಲೈಂಗಿಕ ಶಿಕ್ಷಣವನ್ನು ಎಲ್ಲಾ ವಯಸ್ಸಿನವರಿಗೂ ಒಂದೇ ರೀತಿ ನೀಡದೆ, ವಿದ್ಯಾರ್ಥಿಗಳ ವಯಸ್ಸು ಮತ್ತು ಮಾನಸಿಕ ಬೆಳವಣಿಗೆಗೆ ಅನುಗುಣವಾಗಿ ಅಂತಾರಾಷ್ಟ್ರೀಯ ಮಾನದಂಡಗಳ ಅನ್ವಯ ರೂಪಿಸಲು ತಜ್ಞರು ನಿರ್ಧರಿಸಿದ್ದಾರೆ. ಲೈಂಗಿಕ ಶಿಕ್ಷಣ ಎಂದರೇನು? ಪಠ್ಯದಲ್ಲಿ ಇದರ ಅಳವಡಿಕೆ ಹೇಗೆ? ಈ ಕುರಿತು ಸಂಪೂರ್ಣ ಮಾಹಿತಿ ಇಲ್ಲಿದೆ.
2024ರ ಸೆಪ್ಟೆಂಬರ್‌ನಲ್ಲಿ ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯದ ದೃಶ್ಯಾವಳಿಗಳಿಗೆ (CSAM) ಸಂಬಂಧಿಸಿದ ಪ್ರಕರಣವೊಂದರಲ್ಲಿ ಸುಪ್ರೀಂ ಕೋರ್ಟ್ ನೀಡಿದ ಐತಿಹಾಸಿಕ ತೀರ್ಪು ನೀಡಿತ್ತು. ಆದೇಶದಲ್ಲಿ ಲೈಂಗಿಕತೆ, ಸಂತಾನೋತ್ಪತ್ತಿ ಆರೋಗ್ಯ ಮತ್ತು ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯದ ಬಗ್ಗೆ ಜಾಗೃತಿ ಮೂಡಿಸಲು ರಾಷ್ಟ್ರೀಯ ಮಟ್ಟದಲ್ಲಿ ವ್ಯವಸ್ಥಿತ ಕಾರ್ಯಕ್ರಮವನ್ನು ರೂಪಿಸುವಂತೆ ಕರೆ ನೀಡಿತ್ತು. ಅದರಂತೆ ಇದೀಗ ಮಹತ್ವದ ಬೆಳವಣಿಗೆ ನಡೆದಿದೆ.
ದೇಶಾದ್ಯಂತ ಶಾಲೆ ಮತ್ತು ಕಾಲೇಜುಗಳಲ್ಲಿ ಶೀಘ್ರದಲ್ಲೇ ಸಮಗ್ರ ಲೈಂಗಿಕ ಶಿಕ್ಷಣವನ್ನು ಪರಿಚಯಿಸಲಾಗುವುದು ಎಂದು ಕೇಂದ್ರ ಸರ್ಕಾರ ಸುಪ್ರೀಂ ಕೋರ್ಟ್‌ಗೆ ತಿಳಿಸಿದೆ. ಇದರೊಂದಿಗೆ ಭಾರತದಲ್ಲಿ ಮಕ್ಕಳಿಗೆ ಆರೋಗ್ಯ, ಸುರಕ್ಷತೆ ಮತ್ತು ಸಂಬಂಧಗಳ ಬಗ್ಗೆ ಕಲಿಸುವ ವಿಧಾನದಲ್ಲಿ ದೊಡ್ಡ ಬದಲಾವಣೆಯಾಗುವ ಸಾಧ್ಯತೆಯಿದೆ. ಇದುವರೆಗೆ ವಿವಿಧ ರಾಜ್ಯಗಳಲ್ಲಿ ಲೈಂಗಿಕ ಶಿಕ್ಷಣದ ಬಗ್ಗೆ ಇದ್ದ ಭಿನ್ನ ವಿಭಿನ್ನ ನಿಲುವುಗಳ ಬದಲಾಗಿ, ಈಗ ಸಮಗ್ರ ಲೈಂಗಿಕ ಶಿಕ್ಷಣವನ್ನು ಅಧಿಕೃತ ಪಠ್ಯಕ್ರಮದ ಭಾಗವಾಗಿಸಲು ಸರ್ಕಾರ ಮುಂದಾಗಿದೆ.
ಲೈಂಗಿಕ ಶಿಕ್ಷಣ ಎಂದರೇನು?
ಲೈಂಗಿಕ ಶಿಕ್ಷಣ ಎಂದರೆ ಕೇವಲ ದೇಹರಚನೆ ಅಥವಾ ಸಂತಾನೋತ್ಪತ್ತಿಯ ಬಗ್ಗೆ ಮಾತ್ರ ತಿಳಿಸಿಕೊಡುವುದಲ್ಲ. ಇದು ಮಕ್ಕಳ ವಯಸ್ಸಿಗೆ ಅನುಗುಣವಾಗಿ ಅವರ ದೈಹಿಕ, ಮಾನಸಿಕ ಹಾಗೂ ಭಾವನಾತ್ಮಕ ಬೆಳವಣಿಗೆಯನ್ನು ಸರಿಯಾದ ದಾರಿಯಲ್ಲಿ ಮುನ್ನಡೆಸುವ ಒಂದು ಅಗತ್ಯ ಶಿಕ್ಷಣವಾಗಿದೆ.
ಇಂಟರ್ನೆಟ್ ಅಥವಾ ಸ್ನೇಹಿತರಿಂದ ಸಿಗುವ ತಪ್ಪು ಮಾಹಿತಿಯನ್ನು ನಂಬಿ ದಾರಿ ತಪ್ಪುವ ಬದಲಿಗೆ, ಶಾಲಾ ವಾತಾವರಣದಲ್ಲಿ ತರಬೇತಿ ಪಡೆದ ಶಿಕ್ಷಕರಿಂದ ಅಧಿಕೃತ ಹಾಗೂ ವೈಜ್ಞಾನಿಕ ಮಾಹಿತಿಯನ್ನು ಪಡೆದುಕೊಳ್ಳುವುದು. ಜೊತೆಗೆ ಮಕ್ಕಳು ತಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳಲು, ಇತರರೊಂದಿಗೆ ಉತ್ತಮ ಬಾಂಧವ್ಯ ಹೊಂದಲು ಮತ್ತು ಲೈಂಗಿಕ ಶೋಷಣೆ ಅಥವಾ ಸೈಬರ್ ಅಪರಾಧಗಳಂತಹ ಡಿಜಿಟಲ್ ಅಪಾಯಗಳಿಂದ ತಮ್ಮನ್ನು ತಾವು ರಕ್ಷಿಸಿಕೊಳ್ಳಲು ನೆರವಾಗುವ ಜಾಗೃತಿಯೇ ಲೈಂಗಿಕ ಶಿಕ್ಷಣ.
ವಯಸ್ಸಿಗೆ ತಕ್ಕಂತೆ ಪಠ್ಯಕ್ರಮ:
ಈ ಲೈಂಗಿಕ ಶಿಕ್ಷಣವನ್ನು ಎಲ್ಲಾ ವಯಸ್ಸಿನವರಿಗೂ ಒಂದೇ ರೀತಿ ನೀಡದೇ, ವಿದ್ಯಾರ್ಥಿಗಳ ವಯಸ್ಸು ಮತ್ತು ಮಾನಸಿಕ ಬೆಳವಣಿಗೆಗೆ ಅನುಗುಣವಾಗಿ ಅಂತಾರಾಷ್ಟ್ರೀಯ ಮಾನದಂಡಗಳ ಅನ್ವಯ ರೂಪಿಸಲು ತಜ್ಞರು ನಿರ್ಧರಿಸಿದ್ದಾರೆ.
ಪ್ರಾಥಮಿಕ ಹಂತ:
ಪ್ರಾಥಮಿಕ ಶಾಲಾ ಮಕ್ಕಳಿಗೆ ಆರಂಭದಲ್ಲಿ ವೈಯಕ್ತಿಕ ಸ್ವಚ್ಛತೆ, ಸುರಕ್ಷತೆ ಮತ್ತು ಪ್ರಮುಖವಾಗಿ ‘ಗುಡ್ ಟಚ್ ಮತ್ತು ಬ್ಯಾಡ್ ಟಚ್’ (ಸುರಕ್ಷಿತ ಮತ್ತು ಅಸುರಕ್ಷಿತ ಸ್ಪರ್ಶ) ಗಳ ನಡುವಿನ ವ್ಯತ್ಯಾಸವನ್ನು ತಿಳಿಸಿಕೊಡಲಾಗುತ್ತದೆ.
ಪ್ರೌಢಶಾಲಾ ಹಂತ:
ವಿದ್ಯಾರ್ಥಿಗಳು ಬೆಳೆಯುತ್ತಿರುವ ಹಂತದಲ್ಲಿ ಅವರ ದೇಹದಲ್ಲಿ ಉಂಟಾಗುವ ಹಾರ್ಮೋನ್ ಬದಲಾವಣೆಗಳು, ಪ್ರೌಢಾವಸ್ಥೆಯ ಲಕ್ಷಣಗಳು ಹಾಗೂ ಸಂತಾನೋತ್ಪತ್ತಿ ಆರೋಗ್ಯದ ಬಗ್ಗೆ ವೈಜ್ಞಾನಿಕ ಮಾಹಿತಿ ನೀಡಲಾಗುತ್ತದೆ.
ಉನ್ನತ ಶಿಕ್ಷಣ ಹಂತ:
ಪ್ರೌಢ ಶಾಲೆ ಮತ್ತು ಕಾಲೇಜು ವಿದ್ಯಾರ್ಥಿಗಳಿಗೆ ಪರಸ್ಪರ ಒಪ್ಪಿಗೆಯ ಮಹತ್ವ, ಆರೋಗ್ಯಕರ ಬಾಂಧವ್ಯ, ಲೈಂಗಿಕ ಕಾಯಿಲೆಗಳ ಬಗ್ಗೆ ಜಾಗೃತಿ ಹಾಗೂ ಪೋಕ್ಸೋ ಕಾಯ್ದೆಯ ದುರ್ಬಳಕೆಯ ತಡೆಗೆ ಸಂಬಂಧಿಸಿದ ಕಾನೂನು ಅರಿವನ್ನು ಮೂಡಿಸಲಾಗುತ್ತದೆ. ಈ ಹಿಂದೆ ಶಾಲೆಗಳು ಬಳಸುತ್ತಿದ್ದ ಅನೌಪಚಾರಿಕ ವಿಧಾನಗಳ ಬದಲಿಗೆ, ತಜ್ಞರ ಸಮಿತಿಗಳು ಪಠ್ಯಪುಸ್ತಕಗಳನ್ನು ಪರಿಷ್ಕರಿಸಿ ವೈಜ್ಞಾನಿಕವಾಗಿ ನಿಖರವಾದ ಮಾಹಿತಿಯನ್ನು ನೀಡಲು ಸಿದ್ಧತೆ ನಡೆಸುತ್ತಿವೆ.
ಲೈಂಗಿಕ ಶಿಕ್ಷಣದ ಅಗತ್ಯವೇಕಿದೆ?
ರಾಷ್ಟ್ರೀಯ ಅಪರಾಧ ದಾಖಲೆಗಳ ಬ್ಯೂರೋ ಪ್ರಕಾರ, ಭಾರತದಲ್ಲಿ ಪ್ರತಿವರ್ಷ ಮಕ್ಕಳ ಮೇಲಿನ ದೌರ್ಜನ್ಯಕ್ಕೆ ಸಂಬಂಧಿಸಿದಂತೆ ಸಾವಿರಾರು ಪೋಕ್ಸೋ ಪ್ರಕರಣಗಳು ದಾಖಲಾಗುತ್ತಿವೆ. ಸುರಕ್ಷಿತ ಮತ್ತು ಅಸುರಕ್ಷಿತ ಸ್ಪರ್ಶ, ಆನ್‌ಲೈನ್ ಸುರಕ್ಷತೆ ಮತ್ತು ದೂರು ನೀಡುವ ವಿಧಾನಗಳ ಬಗ್ಗೆ ಮಕ್ಕಳಿಗೆ ಮುಂಚಿತವಾಗಿಯೇ ಅರಿವು ಮೂಡಿಸುವುದರಿಂದ ಇಂತಹ ಅಪರಾಧಗಳನ್ನು ತಡೆಯಬಹುದು ಮತ್ತು ಮಕ್ಕಳು ಸಕಾಲದಲ್ಲಿ ಧ್ವನಿ ಎತ್ತಲು ಸಹಾಯವಾಗುತ್ತದೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.
ಕೇಂದ್ರ ಸರ್ಕಾರದ ಈ ಭರವಸೆಯು ಭಾರತದಲ್ಲಿ ಲೈಂಗಿಕ ಶಿಕ್ಷಣದ ಕುರಿತಾದ ದಶಕಗಳ ಚರ್ಚೆಗೆ ಒಂದು ಸಮಾನ ರೂಪದ ವ್ಯವಸ್ಥೆಯನ್ನು ತರಲು ಸಹಕಾರಿಯಾಗಲಿದೆ. ಮುಂದಿನ ಹಂತದಲ್ಲಿ, ತರಗತಿಗಳಲ್ಲಿ ಇದನ್ನು ಯಶಸ್ವಿಯಾಗಿ ಜಾರಿಗೆ ತರಲು ಪಠ್ಯಕ್ರಮ ವಿನ್ಯಾಸ, ಶಿಕ್ಷಕರಿಗೆ ತರಬೇತಿ ಮತ್ತು ಭಾರತೀಯ ಸಮಾಜಕ್ಕೆ ಸೂಕ್ತವಾದ ವಿಷಯಗಳನ್ನು ಸಿದ್ಧಪಡಿಸಬೇಕಾಗಿದೆ.
ಸುಪ್ರೀಂ ಕೋರ್ಟ್ ಹೇಳಿದ್ದೇನು?
2024ರ ಸೆಪ್ಟೆಂಬರ್ ತೀರ್ಪಿನಲ್ಲಿ ಕೋರ್ಟ್, ಮೌನವಾಗಿರುವುದಕ್ಕಿಂತ ಶಿಕ್ಷಣ ನೀಡುವುದು ಮಕ್ಕಳನ್ನು ರಕ್ಷಿಸಲು ಇರುವ ಅತ್ಯಂತ ಪರಿಣಾಮಕಾರಿ ಮಾರ್ಗ ಎಂದು ಒತ್ತಿ ಹೇಳಿತ್ತು.
ಲೈಂಗಿಕ ಶಿಕ್ಷಣದ ಬಗ್ಗೆ ಇರುವ ತಪ್ಪು ಕಲ್ಪನೆಗಳಿಂದಾಗಿ ಹಲವು ರಾಜ್ಯಗಳು ಇಂತಹ ಕಾರ್ಯಕ್ರಮಗಳನ್ನು ವಿರೋಧಿಸುತ್ತಿವೆ ಅಥವಾ ನಿಷೇಧಿಸುತ್ತಿವೆ ಎಂದು ನ್ಯಾಯಪೀಠ ಬೇಸರ ವ್ಯಕ್ತಪಡಿಸಿತ್ತು. ಅಷ್ಟೇ ಅಲ್ಲದೆ, ಲೈಂಗಿಕ ಶಿಕ್ಷಣ ಎನ್ನುವುದು ಭಾರತೀಯ ಸಾಮಾಜಿಕ ಮೌಲ್ಯಗಳಿಗೆ ಹೊಂದಿಕೆಯಾಗದ ಪಾಶ್ಚಾತ್ಯ ಪರಿಕಲ್ಪನೆಯಲ್ಲ ಎಂದು ಸ್ಪಷ್ಟಪಡಿಸಿತ್ತು.
ಪೋಕ್ಸೋ (POCSO) ಕಾಯ್ದೆಯ ಬಗ್ಗೆ ಚಿಕ್ಕ ವಯಸ್ಸಿನಿಂದಲೇ ಜಾಗೃತಿ ಮೂಡಿಸಲು ಮತ್ತು ಆರೋಗ್ಯ ಹಾಗೂ ಲೈಂಗಿಕ ಶಿಕ್ಷಣದ ಕುರಿತು ಸಮಗ್ರ ಕಾರ್ಯಕ್ರಮವನ್ನು ಅಭಿವೃದ್ಧಿಪಡಿಸಲು ತಜ್ಞರ ಸಮಿತಿಯನ್ನು ರಚಿಸುವಂತೆ ಸುಪ್ರೀಂ ಕೋರ್ಟ್ ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡಿತ್ತು. ಸಕಾರಾತ್ಮಕ ಲೈಂಗಿಕ ಶಿಕ್ಷಣವು ಆರೋಗ್ಯಕರ ಮನೋಭಾವವನ್ನು ಬೆಳೆಸುತ್ತದೆ ಮತ್ತು ಇಂಟರ್ನೆಟ್‌ನಂತಹ ಮಾಧ್ಯಮಗಳಿಂದ ಮಕ್ಕಳಿಗೆ ಸಿಗುವ ತಪ್ಪು ಗ್ರಹಿಕೆಗಳನ್ನು ತಡೆಯಲು ಸಹಾಯ ಮಾಡುತ್ತದೆ ಎಂದು ಕೋರ್ಟ್ ಹೇಳಿತ್ತು. 2025ರ .ಮೇನಲ್ಲಿ ಮತ್ತೊಂದು ಪ್ರಕರಣದ ವಿಚಾರಣೆ ನಡೆಸುವಾಗಲೂ ಕೋರ್ಟ್, ಹದಿಹರೆಯದವರು ಅರಿವಿಲ್ಲದೆ ಅಪರಾಧ ಕೃತ್ಯಗಳಲ್ಲಿ ಸಿಲುಕಿಕೊಳ್ಳುವುದನ್ನು ತಡೆಯಲು ರಾಷ್ಟ್ರೀಯ ನೀತಿಯನ್ನು ರೂಪಿಸುವಂತೆ ಕೇಂದ್ರಕ್ಕೆ ಸೂಚಿಸಿತ್ತು.
ಸುಪ್ರೀಂ ಕೋರ್ಟ್‌ಗೆ ಕೇಂದ್ರ ನೀಡಿದ ಪ್ರತಿಕ್ರಿಯೆ ಏನು?
ಸುಪ್ರೀಂ ಕೋರ್ಟ್‌ನ ನಿರ್ದೇಶನಗಳಿಗೆ ಪ್ರತಿಕ್ರಿಯಿಸಿರುವ ಕೇಂದ್ರ ಸರ್ಕಾರ, ಸಮಗ್ರ ಲೈಂಗಿಕ ಶಿಕ್ಷಣವನ್ನು ಪರಿಚಯಿಸಲು ಒಪ್ಪಿಕೊಂಡಿದ್ದು, ಶೀಘ್ರದಲ್ಲೇ ಇದನ್ನು ಶಾಲೆ ಮತ್ತು ಕಾಲೇಜುಗಳ ಪಠ್ಯಕ್ರಮದಲ್ಲಿ ಸೇರಿಸಲಾಗುವುದು ಎಂದು ತಿಳಿಸಿದೆ.
ಸರ್ಕಾರದ ಸಲ್ಲಿಕೆಯ ಪ್ರಕಾರ, ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯದ ಜಾಗೃತಿಯು ಪಠ್ಯಕ್ರಮದ ಪ್ರಮುಖ ಭಾಗವಾಗಬೇಕು ಎಂದು ತಜ್ಞರ ಸಮಿತಿ ಶಿಫಾರಸು ಮಾಡಿದೆ. ಇದರಿಂದ ಮಕ್ಕಳು ಅಸುರಕ್ಷಿತ ನಡವಳಿಕೆಯನ್ನು ಗುರುತಿಸಲು, ತಮ್ಮ ದೇಹದ ಸ್ವಾಯತ್ತತೆಯನ್ನು ಅರ್ಥಮಾಡಿಕೊಳ್ಳಲು ಮತ್ತು ಅಗತ್ಯವಿದ್ದಾಗ ಸಹಾಯವನ್ನು ಪಡೆಯಲು ಕಲಿಯಬಹುದು.
ಈ ಹಿಂದೆ ಇದ್ದ ವಿವಾದಗಳೇನು?
ಭಾರತದಲ್ಲಿ ಲೈಂಗಿಕ ಶಿಕ್ಷಣವನ್ನು ತರಲು ಈ ಹಿಂದೆಯೂ ಪ್ರಯತ್ನಗಳು ನಡೆದಿದ್ದವು. 2000ರ ದಶಕದ ಕೊನೆಯಲ್ಲಿ ರಾಷ್ಟ್ರೀಯ ಏಡ್ಸ್ ನಿಯಂತ್ರಣ ಸಂಸ್ಥೆ ಸಹಭಾಗಿತ್ವದಲ್ಲಿ ತಂದ ‘ಹದಿಹರೆಯದ ಶಿಕ್ಷಣ ಕಾರ್ಯಕ್ರಮ’ಕ್ಕೆ ಹಲವು ರಾಜ್ಯಗಳಿಂದ ವಿರೋಧ ವ್ಯಕ್ತವಾಗಿತ್ತು. ಇದು ಭಾರತೀಯ ಸಂಸ್ಕೃತಿಗೆ ವಿರುದ್ಧವಾಗಿದೆ ಎಂದು ಕೆಲವು ರಾಜ್ಯಗಳು ಕಾರ್ಯಕ್ರಮವನ್ನು ಸ್ಥಗಿತಗೊಳಿಸಿದ್ದವು, ಇನ್ನು ಕೆಲವು ಮಾರ್ಪಡಿಸಿದ್ದವು. ಆದರೆ ಈಗ ಸುಪ್ರೀಂ ಕೋರ್ಟ್ ಆ ವಾದವನ್ನು ಸಂಪೂರ್ಣವಾಗಿ ತಿರಸ್ಕರಿಸಿದೆ.
ಯಾವ್ಯಾವ ದೇಶಗಳಲ್ಲಿ ಲೈಂಗಿಕ ಶಿಕ್ಷಣ ಜಾರಿಯಲ್ಲಿದೆ?
ಲೈಂಗಿಕ ಶಿಕ್ಷಣವನ್ನು ಅತ್ಯಂತ ವ್ಯವಸ್ಥಿತವಾಗಿ ಮತ್ತು ಕಡ್ಡಾಯವಾಗಿ ಜಾರಿಗೆ ತಂದಿರುವುದರಲ್ಲಿ ಯುರೋಪ್ ದೇಶಗಳು ಮುಂಚೂಣಿಯಲ್ಲಿವೆ. ವಿಶ್ವದಲ್ಲೇ ಮೊದಲ ಬಾರಿಗೆ (1955ರಲ್ಲಿ) ಸ್ವೀಡನ್ ಶಾಲಾ ಹಂತದಲ್ಲಿ ಲೈಂಗಿಕ ಶಿಕ್ಷಣವನ್ನು ಕಡ್ಡಾಯಗೊಳಿಸಿತು. ಇನ್ನೂ ನೆದರ್ಲ್ಯಾಂಡ್ಸ್ ನಲ್ಲಿ 4 ರಿಂದ 5 ವರ್ಷದ ಮಕ್ಕಳಿದ್ದಾಗಲೇ ವಯಸ್ಸಿಗೆ ತಕ್ಕಂತೆ ಲೈಂಗಿಕ ಶಿಕ್ಷಣ ಆರಂಭವಾಗುತ್ತದೆ. ಈ ಕಾರಣದಿಂದಾಗಿ ಇಲ್ಲಿ ಹದಿಹರೆಯದವರ ಗರ್ಭಧಾರಣೆ ಪ್ರಮಾಣ ಅತ್ಯಂತ ಕಡಿಮೆಯಿದೆ.
ಜರ್ಮನಿ, ಫ್ರಾನ್ಸ್ ಮತ್ತು ಯುನೈಟೆಡ್ ಕಿಂಗ್‌ಡಮ್ ದೇಶಗಳಲ್ಲಿ ಪ್ರಾಥಮಿಕ ಮತ್ತು ಪ್ರೌಢಶಾಲಾ ಹಂತಗಳಲ್ಲಿ ಸಂಬಂಧಗಳು ಮತ್ತು ಲೈಂಗಿಕತೆಯ ಕುರಿತಾದ ಶಿಕ್ಷಣ ಕಡ್ಡಾಯವಾಗಿದೆ.
ಏಷ್ಯಾದ ಕೆಲವು ದೇಶಗಳಲ್ಲಿ ಸಾಂಸ್ಕೃತಿಕ ಚೌಕಟ್ಟಿನೊಳಗೆ ಲೈಂಗಿಕ ಶಿಕ್ಷಣವನ್ನು ನೀಡಲಾಗುತ್ತಿದೆ. ದಕ್ಷಿಣ ಕೊರಿಯಾದಲ್ಲಿ ಪ್ರಾಥಮಿಕ ಶಾಲೆಯಿಂದ ಹೈಸ್ಕೂಲ್ ತನಕ ಆರೋಗ್ಯ, ಸುರಕ್ಷತೆ ಮತ್ತು ಸಂತಾನೋತ್ಪತ್ತಿಯ ಜಾಗೃತಿ ಮೂಡಿಸಲು ಲೈಂಗಿಕ ಶಿಕ್ಷಣ ಕಡ್ಡಾಯವಾಗಿದೆ. ಥೈಲ್ಯಾಂಡ್ ನಲ್ಲಿ ಹದಿಹರೆಯದವರ ಆರೋಗ್ಯ ಸಮಸ್ಯೆಗಳನ್ನು ನಿವಾರಿಸಲು ದೀರ್ಘಕಾಲದಿಂದಲೂ ಪಠ್ಯಕ್ರಮದಲ್ಲಿ ಇದನ್ನು ಅಳವಡಿಸಿಕೊಂಡಿದೆ. ಇಂಡೋನೇಷ್ಯಾ ಮತ್ತು ನೇಪಾಳದ ಶಾಲೆಗಳಲ್ಲಿ ವ್ಯವಸ್ಥಿತವಾಗಿ ಲೈಂಗಿಕ ಶಿಕ್ಷಣ ತಲುಪಿಸಲು ಇತ್ತೀಚಿನ ವರ್ಷಗಳಲ್ಲಿ ಕ್ರಮ ಕೈಗೊಂಡಿವೆ. ಹೀಗೆ ಕೆನಡಾ, ಆಸ್ಟ್ರೇಲಿಯಾ, ಅರ್ಜೆಂಟೀನಾ, ದಕ್ಷಿಣ ಆಫ್ರಿಕಾ, ಜಾಂಬಿಯಾ, ಸಿಯೆರಾ ಲಿಯೋನ್, ಫಿನ್ಲ್ಯಾಂಡ್, ಎಸ್ಟೋನಿಯಾ, ಐರ್ಲೆಂಡ್, ಬೆಲ್ಜಿಯಂ, ಮತ್ತು ಸ್ವಿಟ್ಜರ್ಲೆಂಡ್ ಸೇರಿದಂತೆ ಹಲವೆಡೆ ಲೈಂಗಿಕ ಶಿಕ್ಷಣ ಜಾರಿಯಲ್ಲಿದೆ.
ಸಾಮಾನ್ಯವಾಗಿ ಈ ಎಲ್ಲಾ ದೇಶಗಳಲ್ಲಿ ಕೇವಲ ದೈಹಿಕ ಕ್ರಿಯೆಯ ಬಗ್ಗೆ ಹೇಳಿಕೊಡದೆ, ವೈಯಕ್ತಿಕ ಸುರಕ್ಷತೆ, ಗುಡ್ ಟಚ್-ಬ್ಯಾಡ್ ಟಚ್, ಮಾನಸಿಕ ಬೆಳವಣಿಗೆ, ಲಿಂಗ ಸಮಾನತೆ ಮತ್ತು ಸೈಬರ್ ಅಪರಾಧಗಳಿಂದ ರಕ್ಷಣೆ ಪಡೆಯುವಂತಹ ಸಮಗ್ರ ವಿಷಯಗಳನ್ನು ಕಲಿಸಲಾಗುತ್ತದೆ. ಭಾರತದಲ್ಲೂ ಸಹ ಪ್ರಸ್ತುತ ಶಾಲಾ-ಕಾಲೇಜುಗಳಲ್ಲಿ ಇಂತಹ ಸಮಗ್ರ ಲೈಂಗಿಕ ಶಿಕ್ಷಣವನ್ನು ಅಧಿಕೃತವಾಗಿ ಜಾರಿಗೆ ತರಲು ಕೇಂದ್ರ ಸರ್ಕಾರವು ಸಿದ್ಧತೆ ನಡೆಸುತ್ತಿದೆ.
ಲೈಂಗಿಕ ಶಿಕ್ಷಣ ಎನ್ನುವುದು ಅತ್ಯಂತ ಸೂಕ್ಷ್ಮವಾದ ವಿಷಯವಾಗಿರುವುದರಿಂದ, ಇದನ್ನು ವಿದ್ಯಾರ್ಥಿಗಳಿಗೆ ತಲುಪಿಸುವ ವಿಧಾನ ಬಹಳ ಮುಖ್ಯ. ಮಕ್ಕಳಿಗೆ ಯಾವುದೇ ತಪ್ಪು ತಿಳವಳಿಕೆ ಮೂಡದಂತೆ ಸೂಕ್ತ ರೀತಿಯಲ್ಲಿ ಬೋಧಿಸಲು ತರಬೇತಿ ಪಡೆದ ಶಿಕ್ಷಕರ ಅಗತ್ಯವಿದೆ. ತರಬೇತಿ ಪಡೆದ ಶಿಕ್ಷಕರಿಂದ ಮಾತ್ರ ಈ ವಿಷಯದ ಗಾಂಭೀರ್ಯತೆ ಮತ್ತು ಮಹತ್ವವನ್ನು ವಿದ್ಯಾರ್ಥಿಗಳಿಗೆ ಸರಿಯಾಗಿ ತಲುಪಿಸಲು ಸಾಧ್ಯ. ಸುಪ್ರೀಂಕೋರ್ಟ್‌ನ ತೀರ್ಪಿನಿಂತೆ ಈ ಯೋಜನೆ ಜಾರಿಗೆ ಬಂದಲ್ಲಿ, ಇದು ಭಾರತದ ಶಾಲಾ-ಕಾಲೇಜು ಶಿಕ್ಷಣ ಇತಿಹಾಸದಲ್ಲೇ ಒಂದು ಐತಿಹಾಸಿಕ ಮತ್ತು ಪ್ರಗತಿಪರ ಬದಲಾವಣೆಗೆ ನಾಂದಿ ಹಾಡಲಿದೆ.
Laxmi News 24×7