Breaking News

ರಾಜ್ಯದಲ್ಲಿ ಭೀಕರ ಬರ|ಶೇ.50ರಷ್ಟು ಮೊತ್ತವನ್ನು ಮಧ್ಯಂತರ ಪರಿಹಾರವಾಗಿ ಬಿಡುಗಡೆ ಮಾಡಿ – ಮೋದಿಗೆ ಡಿಕೆಶಿ ಪತ್ರ

Spread the love

ಬೆಂಗಳೂರು: ರಾಜ್ಯದಲ್ಲಿ ಮುಂಗಾರು ಮಳೆ ಕೊರತೆಯಿಂದಾಗಿ ಬರ ಪರಿಸ್ಥಿತಿ ಮತ್ತಷ್ಟು ಬಿಗಡಾಯಿಸಿದ್ದು ತುರ್ತಾಗಿ ಮಧ್ಯಂತರ ಪರಿಹಾರವನ್ನು ಬಿಡುಗಡೆ ಮಾಡಿ ಎಂದು ಸಿಎಂ ಡಿಕೆ ಶಿವಕುಮಾರ್‌  ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದು ಮನವಿ ಮಾಡಿದ್ದಾರೆ.

ರಾಜ್ಯ ಸರ್ಕಾರವು ಹೆಚ್ಚುವರಿಯಾಗಿ 76 ತಾಲೂಕುಗಳನ್ನು ಬರಪೀಡಿತ ಎಂದು ಘೋಷಿಸಿದೆ. ಇದರೊಂದಿಗೆ ರಾಜ್ಯದಲ್ಲಿ ಬರಪೀಡಿತ ತಾಲೂಕುಗಳ ಒಟ್ಟು ಸಂಖ್ಯೆ 177ಕ್ಕೆ ಏರಿಕೆಯಾಗಿದೆ. ಈ ಹಿನ್ನೆಲೆಯಲ್ಲಿ, ನಷ್ಟದ ಸಮಗ್ರ ಮೌಲ್ಯಮಾಪನ ಪೂರ್ಣಗೊಳ್ಳುವ ಮೊದಲೇ ತುರ್ತಾಗಿ ಮನವಿ ಮೊತ್ತದ ಶೇ.50 ರಷ್ಟು ಹಣವನ್ನು ಮಧ್ಯಂತರ ಪರಿಹಾರವಾಗಿ ಬಿಡುಗಡೆ ಮಾಡುವಂತೆ ಪತ್ರ ಬರೆದು ರಾಜ್ಯದಲ್ಲಿನ ತೀವ್ರ ಬರ ಪರಿಸ್ಥಿತಿಯ ಗಂಭೀರತೆಯನ್ನು ವಿವರಿಸಿದ್ದಾರೆ.

ಪತ್ರದಲ್ಲಿ ಏನಿದೆ?
ಈ ಹಿಂದೆ ಸೆಪ್ಟೆಂಬರ್ 10 ರಂದು ಸಲ್ಲಿಸಲಾಗಿದ್ದ ಜ್ಞಾಪನಾ ಪತ್ರದಲ್ಲಿ 101 ತಾಲೂಕುಗಳಿಗೆ ತಕ್ಷಣದ ಪರಿಹಾರವಾಗಿ 3705.30 ಕೋಟಿ ರೂ. ಆರ್ಥಿಕ ನೆರವು ಕೋರಲಾಗಿತ್ತು. ಇದೀಗ ‘ಬರ ನಿರ್ವಹಣಾ ಕೈಪಿಡಿ-2020’ ರ ವೈಜ್ಞಾನಿಕ ಮಾನದಂಡಗಳ ಅನ್ವಯ ಮತ್ತೆ 76 ತಾಲೂಕುಗಳನ್ನು ಬರಪೀಡಿತ ಪಟ್ಟಿಗೆ ಸೇರಿಸಲಾಗಿದ್ದು, ಒಟ್ಟು ಬರಪೀಡಿತ ತಾಲೂಕುಗಳ ಸಂಖ್ಯೆ 177ಕ್ಕೆ ತಲುಪಿದೆ. ನೈಋತ್ಯ ಮುಂಗಾರು ಅಂತ್ಯದ ವೇಳೆಗೆ ಈ ಸಂಖ್ಯೆ 200 ದಾಟುವ ಸಾಧ್ಯತೆಯಿದೆ.

ಮಳೆಯ ಕೊರತೆ ಹಾಗೂ ತೇವಾಂಶದ ಕೊರತೆಯಿಂದಾಗಿ ರಾಜ್ಯದಲ್ಲಿ ಬರೋಬ್ಬರಿ 40 ಲಕ್ಷ ಹೆಕ್ಟೇರ್‌ಗೂ ಹೆಚ್ಚಿನ ಪ್ರದೇಶದಲ್ಲಿ ಕೃಷಿ ಬೆಳೆ ನಷ್ಟವಾಗುವ ಭೀತಿ ಎದುರಾಗಿದೆ. ಹೆಚ್ಚುವರಿ ತಾಲೂಕುಗಳ ಹಾನಿಯ ಸಮೀಕ್ಷೆ ನಡೆಯುತ್ತಿದ್ದು, ಶೀಘ್ರದಲ್ಲೇ ಎನ್‌ಡಿಆರ್‌ಎಫ್  ಅಡಿಯಲ್ಲಿ ಮತ್ತೊಂದು ಹೆಚ್ಚುವರಿ ಜ್ಞಾಪನಾ ಪತ್ರವನ್ನು ಕೇಂದ್ರಕ್ಕೆ ಸಲ್ಲಿಸಲಾಗುವುದು.

ಜೂನ್‌ನಿಂದ ಆಗಸ್ಟ್‌ವರೆಗಿನ ಅವಧಿಯಲ್ಲಿ ವಾಡಿಕೆ ಮಳೆಯಾಗದ ಕಾರಣ ಜಲಾಶಯಗಳು ಭರ್ತಿಯಾಗಿಲ್ಲ. ಜಲವಿದ್ಯುತ್ ಉತ್ಪಾದನೆ, ಅಂತರ್ಜಲ ಮರುಪೂರಣ ಹಾಗೂ ಜಾನುವಾರುಗಳ ಮೇವಿನ ಲಭ್ಯತೆಯ ಮೇಲೂ ಇದು ಭಾರಿ ಪರಿಣಾಮ ಬೀರಿದೆ. ಪ್ರಮುಖವಾಗಿ ಕಾವೇರಿ ಜಲಾನಯನ ಪ್ರದೇಶದ ಜಲಾಶಯಗಳಲ್ಲಿ ನೀರಿನ ಸಂಗ್ರಹ ಅತ್ಯಂತ ಕಡಿಮೆಯಾಗಿದ್ದು, ಮುಂಬರುವ ದಿನಗಳಲ್ಲಿ ರಾಜಧಾನಿ ಬೆಂಗಳೂರು ಮತ್ತು ಸುತ್ತಮುತ್ತಲಿನ ಜಿಲ್ಲೆಗಳಲ್ಲಿ ಕುಡಿಯುವ ನೀರಿನ ತೀವ್ರ ಬಿಕ್ಕಟ್ಟು ಸೃಷ್ಟಿಯಾಗುವ ಆತಂಕವಿದೆ.

ಕೇಂದ್ರದ ಅಂತರ-ಸಚಿವಾಲಯ ಕೇಂದ್ರ ತಂಡ  ರಾಜ್ಯಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ, ವರದಿ ಸಲ್ಲಿಸಿ ಅಂತಿಮ ಅನುಮೋದನೆ ಪಡೆಯುವುದು ಸುದೀರ್ಘ ಪ್ರಕ್ರಿಯೆಯಾಗಿದ್ದು, ಇದಕ್ಕೆ ಸಾಕಷ್ಟು ಸಮಯ ತಗಲುತ್ತದೆ. ಆದರೆ ಪರಿಸ್ಥಿತಿ ದಿನೇದಿನೆ ಗಂಭೀರವಾಗುತ್ತಿರುವುದರಿಂದ, ರೈತರಿಗೆ ಇನ್‌ಪುಟ್ ಸಬ್ಸಿಡಿ ನೀಡಲು, ಜಾನುವಾರುಗಳ ರಕ್ಷಣೆ ಮತ್ತು ಕುಡಿಯುವ ನೀರಿನ ಪೂರೈಕೆ ಸೇರಿದಂತೆ ತುರ್ತು ಪರಿಹಾರ ಕಾರ್ಯಗಳನ್ನು ಕೈಗೊಳ್ಳಲು ಕೋರಿರುವ ಮೊತ್ತದ ಶೇ.50 ರಷ್ಟು ಹಣವನ್ನು ಮಧ್ಯಂತರ ಪರಿಹಾರವಾಗಿ ತಕ್ಷಣವೇ ಬಿಡುಗಡೆ ಮಾಡಬೇಕು.

ಇದರ ಜೊತೆಗೆ, ರಾಜ್ಯ ಸರ್ಕಾರವು ಪರಿಹಾರ ಕಾರ್ಯಗಳನ್ನು ಪರಿಣಾಮಕಾರಿಯಾಗಿ ಮುಂದುವರಿಸಲು ನೆರವಾಗುವಂತೆ ರಾಜ್ಯ ವಿಪತ್ತು ಪರಿಹಾರ ನಿಧಿಯ ಎರಡನೇ ಕಂತಿನ ಕೇಂದ್ರ ಸರ್ಕಾರದ ಪಾಲನ್ನು ಮುಂಚಿತವಾಗಿಯೇ ಬಿಡುಗಡೆ ಮಾಡಬೇಕು ಎಂದು ಪತ್ರದಲ್ಲಿ ಪ್ರಧಾನಿಯವರನ್ನು ಸಿಎಂ ಒತ್ತಾಯಿಸಿದ್ದಾರೆ.


Spread the love

About Laxminews 24x7

Check Also

ಹೈಕೋರ್ಟ್‌ನ ಎಸ್‌ಐಟಿ ಆದೇಶ ಪ್ರಶ್ನಿಸಿ ಸುಪ್ರೀಂನಲ್ಲಿ ಮೇಲ್ಮನವಿ ಸಲ್ಲಿಸಲು ಮುಂದಾದ ಸರ್ಕಾರ

Spread the loveಬೆಂಗಳೂರು: ಕೆಪಿಎಸ್‌ಸಿ (KPSC) ಪಶುವೈದ್ಯಾಧಿಕಾರಿ ನೇಮಕಾತಿ ಅಕ್ರಮ ಪ್ರಕರಣದ ತನಿಖೆಗೆ ವಿಶೇಷ ತನಿಖಾ ತಂಡ  ರಚಿಸಿ ಧಾರವಾಡ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ