ಬೆಳಗಾವಿ – ಶಾಸಕ ಸತೀಶ ಜಾರಕಿಹೊಳಿ ಅವರ ನೇತೃತ್ವದಲ್ಲಿ ಯಮಕನಮರಡಿ ಕ್ಷೇತ್ರದಲ್ಲಿ ಕೊರೋನಾ ವಿರುದ್ದ ಹೋರಾಟದಲ್ಲಿ ಪ್ರಾಣದ ಹಂಗು ತೊರೆದು ಜನರ ರಕ್ಷಣೆಯಲ್ಲಿ ನಿರತರಾಗಿರುವ ಆರೋಗ್ಯ ಸಿಬ್ಬಂದಿ, ಪಂಚಾಯಿತಿ ಸಿಬ್ಬಂದಿ, ಪೊಲೀಸ್ ಸಿಬ್ಬಂದಿ, ಆಶಾ ಕಾರ್ಯಕರ್ತರಿಗೆ, ಸ್ವಚ್ಚತಾ ಕಾರ್ಮಿಕರಿಗೆ ಮತ್ತು ಜನಪ್ರತಿನಿಧಿಗಳಿಗೆ ಖುದ್ದು ಶಾಸಕರು ಪತ್ರ ಬರೆದು ಅಭಿನಂದನೆಗಳನ್ನು ತಿಳಿಸಿದ್ದಾರೆ.

ಜನರ ರಕ್ಷಣೆಗಾಗಿ ಕುಟುಂಬವನ್ನು ಬಿಟ್ಟು ನಿರತರಾಗಿರುವ ನಿಮ್ಮ ಅಮೂಲ್ಯವಾದ ಸೇವೆ ಮತ್ತು ಸಹನೆಗೆ ಬೆಲೆ ಕಟ್ಟಲಾಗದು ನಿಮ್ಮ ಶ್ರಮ ಶ್ಲಾಘನೀಯ. ಈ ಹಿಂದೆಯೂ ಪ್ರವಾಹ ಬಂದಾಗ ನೀವು ಸಲ್ಲಿಸಿದ ಸೇವೆಯೂ ಅತ್ಯಂತ ಅಮೂಲ್ಯ ಮತ್ರು ಸಹಕಾರಿ ಎಂದು ಬಣ್ಣಿಸಿರುವ ಶಾಸಕರು ನಿಮ್ಮ ಜೊತೆಗೆ ನಾವು ಸದಾಕಾಲವೂ ನಿಮ್ಮೊಂದಿಗೆ ಇರುತ್ತವೆ ಎಂದು ಭರವಸೆ ನೀಡಿದ್ದಾರೆ.

ಜಿ.ಪಂ.ಉಪಾಧ್ಯಕ್ಷ ಅರುಣ ಕಟಾಂಬಳೆ, ಜಿ.ಪಂ.ಸದಸ್ಯ ಸಿದ್ದು ಸುಣಗಾರ, ಕೆಪಿಸಿಸಿ ಸದಸ್ಯ ಮಲಗೌಡ ಪಾಟೀಲ ಮತ್ತು ರಾಜು ಮಾಯನ್ನಾಚೆ ಸೇರಿ ಗಣ್ಯರು ಶಾಸಕ ಸತೀಶ ಜಾರಕಿಹೊಳಿ ಪರವಾಗಿ ಫ್ರಂಟ್ ಲೈನ್ ಸೈನಿಕರಿಗೆ ಅಭಿನಂದನಾ ಪತ್ರ ಮತ್ತು ಹಣ್ಣು ಹಂಪಲುಗಳನ್ನು ನೀಡಿ ಸನ್ಮಾನಿಸಿದರು.
ಕೆಪಿಸಿಸಿ ಕಾರ್ಯಾಧ್ಯಕ್ಷರೂ ಆಗಿರುವ ಶಾಸಕ ಸತೀಶ ಜಾರಕಿಹೊಳಿ ಅವರು ಈಗಾಗಲೇ ಕ್ಷೇತ್ರದ ರೈತರ ಬೆನ್ನಿಗೆ ನಿಂತು ತರಕಾರಿಗಳನ್ನು ಖರೀದಿಸಿ ಉಚಿತವಾಗಿ ಜನರಿಗೆ ವಿತರಿಸಿದ್ದಾರೆ. ಫ್ರಂಟ್ ಲೈನ್ ಸೈನಿಕರಿಗೆ ಸ್ಯಾನಿಟೈಜರ್ ಮತ್ತು ಮಾಸ್ಕ್ ಗಳನ್ನು ನೀಡಿ ಕಳೆದ ಒಂದು ತಿಂಗಳಿನಿಂದ ಕ್ಷೇತ್ರದಾದ್ಯಂತ ಜನರಲ್ಲಿ ಕೊರೋನಾ ಕುರಿತು ಜಾಗೃತಿ ಮೂಡಿಸುವುದರಲ್ಲಿ ಶ್ರಮವಹಿಸಿದ್ದರು.