ಬೆಂಗಳೂರು: ರಸ್ತೆ ಅಪಘಾತದಲ್ಲಿ ಇಂದು ಮೃತಪಟ್ಟ ಪಬ್ಲಿಕ್ ಟಿವಿಯ ರಾಮನಗರ ಜಿಲ್ಲಾ ವರದಿಗಾರ ಹನುಮಂತು ಅವರ ನಿಧನಕ್ಕೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಸಂತಾಪ ಸೂಚಿಸಿದ್ದಾರೆ.
ಟ್ವೀಟ್ ಮಾಡಿರುವ ಸಿಎಂ ಯಡಿಯೂರಪ್ಪ ಅವರು, ಭಗವಂತನು ಹನುಮಂತು ಅವರ ಆತ್ಮಕ್ಕೆ ಶಾಂತಿ ನೀಡಲಿ ಹಾಗೂ ಅವರ ಅಕಾಲಿಕ ನಿಧನದ ನೋವನ್ನು ಸಹಿಸಿಕೊಳ್ಳುವ ಶಕ್ತಿಯನ್ನು ಅವರ ಕುಟುಂಬದವರಿಗೆ ನೀಡಲಿ ಎಂದು ಪ್ರಾರ್ಥಿಸುವುದಾಗಿ ಶೋಕ ಸಂದೇಶದಲ್ಲಿ ತಿಳಿಸಿದ್ದಾರೆ.
ಸಂಸದ ಡಿ.ಕೆ.ಸುರೇಶ್ ಟ್ವೀಟ್ ಮಾಡಿ, ಪಬ್ಲಿಕ್ ಟಿವಿಯ ರಾಮನಗರ ಜಿಲ್ಲಾ ವರದಿಗಾರ ಹನುಮಂತು ಅವರ ನಿಧನಕ್ಕೆ ಎಲ್ಲೆಡೆಯಿಂದ ತೀವ್ರ ಸಂತಾಪ ವ್ಯಕ್ತವಾಗಿದೆ. ಅದರಂತೆ ಕೆಪಿಸಿಸಿ ಅಧ್ಯಕ್ಷರಾದ ಡಿಕೆ ಶಿವಕುಮಾರ್ ಅವರು ಹನುಮಂತು ಅವರ ನಿಧನಕ್ಕೆ ಸಂತಾಪ ಸೂಚಿಸಿ 5 ಲಕ್ಷ ರೂಪಾಯಿ ಪರಿಹಾರ ಘೋಷಿಸಿದ್ದಾರೆ ಎಂದು ಹೇಳಿದ್ದಾರೆ.
ಉಪಮುಖ್ಯಮಂತ್ರಿ ಅಶ್ವತ್ಥನಾರಾಯಣ ಅವರು ಟ್ವೀಟ್ ಮಾಡಿ, ಹನುಮಂತು ಅವರ ಅಕಾಲಿಕ ಮರಣ ದುಃಖ ತಂದಿದೆ. ಸದಾ ಕ್ರಿಯಾಶೀಲ, ಉತ್ಸಾಹಿ, ದಿಟ್ಟ ಪತ್ರಕರ್ತರಾಗಿದ್ದ ಅವರು ಪ್ರಾಮಾಣಿತೆಯನ್ನು ನಂಬಿದ್ದರು. ಅಗಲಿಕೆಯ ದುಃಖ ಭರಿಸುವ ಶಕ್ತಿ ಭಗವಂತ ಅವರ ಕುಟುಂಬಕ್ಕೆ ನೀಡಲಿ. ಕುಟುಂಬಕ್ಕೆ ವೈಯಕ್ತಿಕವಾಗಿ 5 ಲಕ್ಷ ರೂಪಾಯಿಗಳ ಆರ್ಥಿಕ ನೆರವು ನೀಡುತ್ತೇನೆ ಎಂದು ತಿಳಿಸಿದ್ದಾರೆ.
ತಮ್ಮ ಪ್ರಾಮಾಣಿಕತೆಯಿಂದಲೇ ಗುರುತಿಸಿಕೊಂಡಿದ್ದ ಹನುಮಂತು, ರಾಮನಗರದಲ್ಲಿ ಚಿರಪರಿಚಿತರು. ತಮ್ಮ ವರದಿಗಳಿಂದಲೇ ಮಾಧ್ಯಮ ಲೋಕದಲ್ಲಿ ಹನುಮಂತು ಗುರುತಿಸಿಕೊಂಡಿದ್ದರು. ಹನುಮಂತು ಕಳೆದುಕೊಂಡು ಪಬ್ಲಿಕ್ ಟಿವಿ ಕುಟುಂಬ ಬಡವಾಗಿದೆ. ಇನ್ನು ಹನುಮಂತು ನಿಧನಕ್ಕೆ ಶಾಸಕಿ ಅನಿತಾ ಕುಮಾರಸ್ವಾಮಿ ಕಂಬನಿ ಮಿಡಿದಿದ್ದಾರೆ. ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಅವರು ಸಹ ಸಂತಾಪ ಸೂಚಿಸಿ 5 ಲಕ್ಷ ರೂ. ಪರಿಹಾರ ಘೋಷಿಸಿದ್ದಾರೆ.