Breaking News

ಇ-ಕಾಮರ್ಸ್ ವೇದಿಕೆಗಳಲ್ಲಿ ಸ್ಫೋಟಕಗಳ ಮಾರಾಟ ನಿಷಿದ್ಧ – ವೆಬ್‌ಲಿಂಕ್‌ಗೆ ಬಿತ್ತು ಬರೋಬ್ಬರಿ 20 ಲಕ್ಷ ದಂಡ

Spread the love

ನವದೆಹಲಿ: ಆನ್‌ಲೈನ್ ವೇದಿಕೆಯಲ್ಲಿ ಸ್ಪೋಟಕಗಳ ಮಾರಾಟ ವಿರುದ್ಧ ವೆಬ್‌ಲಿಂಕ್ ಇನ್ ಪ್ರೈವೇಟ್ ಲಿಮಿಟೆಡ್‌ಗೆ 20 ಲಕ್ಷ ರೂ. ದಂಡ ವಿಧಿಸಿದ್ದ CCPA ಆದೇಶವನ್ನು ರಾಷ್ಟ್ರೀಯ ಗ್ರಾಹಕ ವಿವಾದ ಪರಿಹಾರ ಆಯೋಗ ಎತ್ತಿ ಹಿಡಿದಿದೆ.

ನವದೆಹಲಿಯ ರಾಷ್ಟ್ರೀಯ ಗ್ರಾಹಕ ವಿವಾದ ಪರಿಹಾರ ಆಯೋಗ (NCDRC)ವು ExportersIndia.com ಅನ್ನು ನಿರ್ವಹಿಸುವ ‘ವೆಬ್‌ಲಿಂಕ್ ಇನ್ ಪ್ರೈವೇಟ್ ಲಿಮಿಟೆಡ್’ ಸಲ್ಲಿಸಿದ್ದ ಮೇಲ್ಮನವಿಗಳನ್ನು ವಜಾಗೊಳಿಸಿ ಮಹತ್ವದ ಆದೇಶ ನೀಡಿದೆ.

ಏನಿದು ಪ್ರಕರಣ?
ಇ-ಕಾಮರ್ಸ್ ವೇದಿಕೆಯಲ್ಲಿ ನಿಯಂತ್ರಿತ ಮತ್ತು ಅಪಾಯಕಾರಿ ಸ್ಫೋಟಕ ವಸ್ತುಗಳ ಮಾರಾಟಕ್ಕೆ ಅನುಕೂಲ ಕಲ್ಪಿಸಿದ್ದಕ್ಕಾಗಿ CCPA 20 ಲಕ್ಷ ರೂ. ಬೃಹತ್ ಮೊತ್ತದ ದಂಡ ವಿಧಿಸಿದ್ದಲ್ಲದೆ ಕಟ್ಟುನಿಟ್ಟಿನ ಎಚ್ಚರಿಕೆ ಸಹ ನೀಡಿತ್ತು. ಹಾಗಿದ್ದರೂ ಈ ಸಂಸ್ಥೆ ಕೇಂದ್ರ ಗ್ರಾಹಕ ಸಂರಕ್ಷಣಾ ಪ್ರಾಧಿಕಾರದ (CCPA) ಎರಡು ಅಂತಿಮ ಆದೇಶಗಳ ವಿರುದ್ಧ NCDRCಗೆ ಮೇಲ್ಮನವಿ ಸಲ್ಲಿಸಿತ್ತು. ಆದರೆ, ವಿಚಾರಣೆ – ಸಮಗ್ರ ಪರಿಶೀಲನೆ ನಡೆಸಿದ ರಾಷ್ಟ್ರೀಯ ಗ್ರಾಹಕ ವಿವಾದ ಪರಿಹಾರ ಆಯೋಗ CCPA ಕ್ರಮವನ್ನು ಎತ್ತಿ ಹಿಡಿದಿದೆ.

ಸಚಿವ ಪ್ರಹ್ಲಾದ್‌ ಜೋಶಿ ನಿರ್ದೇಶನ;
ಸ್ಫೋಟಕಗಳ ಮಾರಾಟ ವಿರುದ್ಧ ಸಮರ ಸಾರಿದ್ದ CCPA:
ಆನ್ ಲೈನ್ ವೇದಿಕೆಗಳಲ್ಲಿ ಸ್ಫೋಟಕ ವಸ್ತುಗಳ ಮಾರಾಟ, ಜಾಹೀರಾತು ಕಂಡು ಕೇಂದ್ರ ಗ್ರಾಹಕ ವ್ಯವಹಾರ ಸಚಿವ ಪ್ರಹ್ಲಾದ್‌ ಜೋಶಿ ಅವರು ಇದರ ವಿರುದ್ಧ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವಂತೆ CCPAಗೆ ನಿರ್ದೇಶನ ನೀಡಿದ್ದರು. ಈ ಹಿನ್ನೆಲೆ ಕಾರ್ಯಾಚರಣೆಗೆ ಇಳಿದ ಕೇಂದ್ರ ಗ್ರಾಹಕ ರಕ್ಷಣಾ ಪ್ರಾಧಿಕಾರದ ಮುಖ್ಯ ಆಯುಕ್ತೆ ನಿಧಿ ಖರೆ ಮತ್ತು ಆಯುಕ್ತ ಅನುಪಮ್ ಮಿಶ್ರಾ ಅವರ ನೇತೃತ್ವದ ತಂಡ ‘ಗ್ರಾಹಕ ಸಂರಕ್ಷಣಾ ಕಾಯಿದೆ, 2019’ರ ಸೆಕ್ಷನ್ 18 ಮತ್ತು 19ರ ಅಡಿ ಕ್ರಮ ಕೈಗೊಂಡಿತ್ತು. ಇ-ಕಾಮರ್ಸ್ ವೇದಿಕೆಗಳಲ್ಲಿ ಅಪಾಯಕಾರಿ ರಾಸಾಯನಿಕಗಳು, ಸ್ಫೋಟಕ ವಸ್ತುಗಳು ಮತ್ತು ಅವುಗಳ ತಯಾರಿಕೆಗೆ ಬಳಸುವ ಅಮೋನಿಯಂ ನೈಟ್ರೇಟ್, ಗನ್ ಪೌಡರ್, ಪಿಕ್ರಿಕ್ ಆಮ್ಲ ಮತ್ತು ಪೆಂಟಾಎರಿಥ್ರಿಟಾಲ್ ಟೆಟ್ರಾನೈಟ್ರೇಟ್ (PETN) ಗಳನ್ನು ಮಾರಾಟಕ್ಕೆ ಹೆಸರಿಸದಂತೆ ಕಟ್ಟು ನಿಟ್ಟಿನ ಸೂಚನೆ ಸಹ ನೀಡಿತ್ತು.
ಈ ವಸ್ತುಗಳು ‘ಸ್ಫೋಟಕ ಕಾಯಿದೆ, 1884’ರ ನಿಯಮದ ಪ್ರಕಾರ ನಿಷೇಧಿಸಲ್ಪಟ್ಟಿದ್ದು, 1983ರ ಆಗಸ್ಟ್ 7ರ ಅಧಿಸೂಚನೆ GSR 625(E) ರ ಪ್ರಕಾರ ‘ಪಿಕ್ರಿಕ್ ಆಮ್ಲ’ವನ್ನೂ ಸ್ಫೋಟಕ ಎಂದು ಘೋಷಿಸಲಾಗಿದೆ. ಹಾಗಾಗಿ ‘ಅಮೋನಿಯಂ ನೈಟ್ರೇಟ್’ ಅನ್ನು 2012’ರ ನಿಯಮದಡಿ ನಿಯಂತ್ರಣಕ್ಕೆ ಕ್ರಮ ಕೈಗೊಳ್ಳಲಾಗಿದೆ.

ಮಾರಾಟಗಾರರ ಮಾನ್ಯವಾದ PESO (ಪೆಟ್ರೋಲಿಯಂ ಮತ್ತು ಸ್ಫೋಟಕಗಳ ಸುರಕ್ಷತಾ ಸಂಸ್ಥೆ – Petroleum and Explosives Safety Organisation) ಪರವಾನಗಿ ಬಹಿರಂಗಪಡಿಸದೆ, ಖರೀದಿದಾರರ ಗುರುತು ಮತ್ತು ಅವರ ಪರವಾನಗಿ ಸ್ಥಿತಿಯನ್ನು ಪರಿಶೀಲಿಸದೆ; ಪತ್ತೆ ಹಚ್ಚುವಿಕೆಗೆ (traceability) ಸಂಬಂಧಿಸಿದ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳದೆ ಹಾಗೂ ಕಾನೂನು ನಿರ್ಬಂಧಗಳ ಬಗ್ಗೆ ಯಾವುದೇ ಎಚ್ಚರಿಕೆ ಸಹ ನೀಡದೆ ಅತಿ ಸೂಕ್ಷ್ಮವಾದ ಈ ವಸ್ತುಗಳನ್ನು ಪಡೆಯಲು ಹಲವು ಇ-ಕಾಮರ್ಸ್ ವೇದಿಕೆಗಳು (platforms) ಅವಕಾಶ ಕಲ್ಪಿಸುತ್ತಿರುವುದನ್ನು CCPA ಪತ್ತೆ

IndiaMART, Justdial, Dial4Trade, Sigma-Aldrich India, ExportersIndia, Ibuychemikals ಮತ್ತು TradeIndia ಗಳ ಪರಿಶೀಲನೆ ನಡೆಸಿತ್ತು CCPA. ಬಳಿಕ ಈ ವಸ್ತುಗಳ listings ಅನ್ನು ಸದರಿ ವೇದಿಕೆಗಳಿಂದ ತೆಗೆದುಹಾಕಲಾಯಿತು. ವೆಬ್‌ಲಿಂಕ್ ಇನ್ ಪ್ರೈವೇಟ್ ಲಿಮಿಟೆಡ್‌ಗೆ CCPA ಎರಡು ಬಾರಿ ನೋಟಿಸ್ ಜಾರಿ ಮಾಡಿದ್ದು, ತನಿಖೆಗೆ ಆದೇಶಿಸಿತ್ತು. ತನಿಖಾ ವರದಿ ಆಧರಿಸಿ CCPA 20 ಲಕ್ಷ ರೂ. ದಂಡ ವಿಧಿಸಿತ್ತು. ಆದರೆ ಕಂಪನಿ ಇದರ ವಿರುದ್ಧ ರಾಷ್ಟ್ರೀಯ ಗ್ರಾಹಕ ವಿವಾದ ಪರಿಹಾರ ಆಯೋಗಕ್ಕೆ ಮೇಲ್ಮನವಿ ಸಲ್ಲಿಸಿದ್ದು ಆಯೋಗವು CCPA ದೇಶವನ್ನೇ ಎತ್ತಿ ಹಿಡಿದಿದೆ.

ಈಗ ಆಯೋಗದಿಂದಲೂ ಸೂಚನೆ:
ಸ್ಫೋಟಕ ಕಾಯ್ದೆ 1884 ಅಥವಾ ಸ್ಫೋಟಕ ವಸ್ತುಗಳ ಕಾಯ್ದೆ 1908ರ ಅಡಿಯಲ್ಲಿ ಸ್ಫೋಟಕ ಎಂದು ವರ್ಗೀಕರಿಸಲಾದ ಯಾವುದೇ ವಸ್ತುಗಳ ಮಾರಾಟ, ಜಾಹೀರಾತು ಅಥವಾ ಮಾರಾಟಕ್ಕೆ ಅನುಕೂಲ ಕಲ್ಪಿಸುವಂತಿಲ್ಲ ಎಂದು ರಾಷ್ಟ್ರೀಯ ಗ್ರಾಹಕ ವಿವಾದ ಪರಿಹಾರ ಆಯೋಗವೂ ಇದೀಗ ಆನ್ ಲೈನ್ ವೇದಿಕೆಗಳಿಗೆ ಕಟ್ಟು ನಿಟ್ಟಿನ ಸೂಚನೆ ನೀಡಿದೆ.

ಅಪಾಯಕಾರಿ ವಸ್ತುಗಳ ವ್ಯಾಪಾರಕ್ಕೆ ಪ್ರಚಾರದ ಉದ್ದೇಶದಿಂದ ಡಿಜಿಟಲ್ ವೇದಿಕೆಯನ್ನು ಬಳಸಿದಾಗ ಈ ಕಾಮರ್ಸ್ ವೇದಿಕೆಗಳು ಸಮಂಜಸ ಕಾಳಜಿ ವಹಿಸಬೇಕು ಮತ್ತು ಜಾಗರೂಕತೆ ಪಾಲಿಸಬೇಕು ಎಂದೂ ಹೇಳಿದೆ.ಇದನ್ನೂ ಓದಿ: ಬೇಲೂರಿನಲ್ಲಿ 2ನೇ ದಿನವೂ ವಿಫಲವಾದ ಕಾಡಾನೆ ಸೆರೆ ಕಾರ್ಯಾಚರಣೆ

ಇತರೆ ಇ-ಕಾಮರ್ಸ್ ಗಳ ವಿರುದ್ಧವೂ ಕ್ರಮ:
ಇತರ ಪ್ಲಾಟ್‌ಫಾರ್ಮ್‌ಗಳ ವಿರುದ್ಧವೂ CCPA ಕ್ರಮ ಕೈಗೊಂಡಿದೆ. Dial4Trade Technologies Private Limited ಅಮೋನಿಯಂ ನೈಟ್ರೇಟ್ ಅನ್ನು ಪಟ್ಟಿಯಲ್ಲಿ (listing) ಸೇರಿಸಿದ್ದಕ್ಕಾಗಿ ಈ ಸಂಸ್ಥೆಗೆ 10 ಲಕ್ಷ ರೂ. ದಂಡ ವಿಧಿಸಿದೆ. NCDRC ಇದರ ಮೇಲ್ಮನವಿಯನ್ನು ಸಹ ವಜಾಗೊಳಿಸಿದೆ. Just Dial Limited ಸಂಸ್ಥೆಗೂ 10 ಲಕ್ಷ ರೂ. ದಂಡ ಬಿದ್ದಿದೆ.

ಇನ್ನು, India MART InterMESH Limited, Sigma-Aldrich Chemicals Private Limited, TradeIndia (Infocom Network Private Limited) ಮತ್ತು Ibuychemikals ವಿರುದ್ಧದ ವಿಚಾರಣೆ ಮುಂದುವರಿದಿವೆ.ಇದನ್ನೂ ಓದಿ: ವಿಜಯಪುರ | ಗ್ರಾಮಸ್ಥರ ನಿದ್ದೆಗೆಡಿಸಿದ್ದ ಚಿರತೆ ಕೊನೆಗೂ ಸೆರೆ

ಮಧ್ಯವರ್ತಿ ನೆಪವೊಡ್ಡಿ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ: ಸಚಿವ ಪ್ರಹ್ಲಾದ್‌ ಜೋಶಿ ಎಚ್ಚರಿಕೆ:
ಗ್ರಾಹಕ ಸಂರಕ್ಷಣಾ ಕಾನೂನಿನಡಿ ಜವಾಬ್ದಾರಿಯಿಂದ ತಪ್ಪಿಸಿಕೊಳ್ಳಲು ಇಂತಹ ಪ್ಲಾಟ್‌ಫಾರ್ಮ್‌ಗಳು ಕೇವಲ ಮಧ್ಯವರ್ತಿ ಸ್ಥಾನದಲ್ಲಿರುವುದನ್ನು ನೆಪವಾಗಿ ಬಳಸಿಕೊಳ್ಳಲು ಸಾಧ್ಯವಿಲ್ಲ ಎಂದು ಕೇಂದ್ರ ಗ್ರಾಹಕ ವ್ಯಾವಹಾರ ಸಚಿವ ಪ್ರಲ್ಹಾದ ಜೋಶಿ ಇ ಕಾಮರ್ಸ್ ವೇದಿಕೆಗಳಿಗೆ ಎಚ್ಚರಿಸಿದ್ದಾರೆ.

ಅಪಾಯಕಾರಿ ವಸ್ತುಗಳು ಆನ್‌ಲೈನ್‌ನಲ್ಲಿ ಯಾವುದೇ ನಿಯಂತ್ರಣವಿಲ್ಲದೆ ಲಭ್ಯವಿರುವುದನ್ನು ತಡೆಯುವ ಮೂಲಕ ಗ್ರಾಹಕರನ್ನು ಮತ್ತು ಸಾರ್ವಜನಿಕರನ್ನು ರಕ್ಷಿಸಲು ಕೇಂದ್ರ ಗ್ರಾಹಕ ಇಲಾಖೆ ಸದಾ ಬದ್ಧವಾಗಿದೆ. ಯಾವುದೇ ಆನ್‌ಲೈನ್ ಪ್ಲಾಟ್‌ಫಾರ್ಮ್‌ನಲ್ಲಿ ಸ್ಫೋಟಕಗಳನ್ನು ಮಾರಾಟಕ್ಕೆ ಇರಿಸಿರುವುದು ಕಂಡುಬಂದರೆ ರಾಷ್ಟ್ರೀಯ ಗ್ರಾಹಕ ಸಹಾಯವಾಣಿ ಸಂಖ್ಯೆ 1915ಕ್ಕೆ ವರದಿ ಮಾಡಬಹುದು ಎಂದು ಸಚಿವರು ತಿಳಿಸಿದ್ದಾರೆ.


Spread the love

About Laxminews 24x7

Check Also

ಪ್ರದೀಪ್ ಈಶ್ವರ್ ಕುಟುಂಬಕ್ಕೆ ಮಹಾಲಕ್ಷ್ಮಿಯ ಆಗಮನ – ತಂದೆಯಾದ ಸಂಭ್ರಮದಲ್ಲಿ ಶಾಸಕ

Spread the loveಚಿಕ್ಕಬಳ್ಳಾಪುರ: ಚಿಕ್ಕಬಳ್ಳಾಪುರ ವಿಧಾನಸಭಾ ಕ್ಷೇತ್ರದ ಶಾಸಕ ಪ್ರದೀಪ್ ಈಶ್ವರ್ ಅವರ ಕುಟುಂಬದಲ್ಲಿ ಸಂಭ್ರಮ ಮನೆ ಮಾಡಿದೆ. ಶಾಸಕ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ