Breaking News

ಮಗುವನ್ನು ಶಾಲೆಗೆ ಕಳುಹಿಸುವ ನೆಪದಲ್ಲಿ ಹಣ ಸಾಗಾಟಕ್ಕೆ ಯತ್ನ – ಅರಣ್ಯಾಧಿಕಾರಿ ಮನೆ ಸೇರಿ ಐದು ಕಡೆ ಲೋಕಾಯುಕ್ತ ದಾಳಿ

Spread the love

ಹಾಸನ: ಆದಾಯಕ್ಕಿಂತ ಹೆಚ್ಚು ಆಸ್ತಿ ಗಳಿಕೆ ಆರೋಪದ ಹಿನ್ನೆಲೆಯಲ್ಲಿ ಸಕಲೇಶಪುರ ವಲಯ ಅರಣ್ಯಾಧಿಕಾರಿ  ಹೇಮಂತ್‌ಕುಮಾರ್ ಅವರ ಮನೆ ಸೇರಿದಂತೆ ಐದು ಕಡೆಗಳಲ್ಲಿ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿದ್ದಾರೆ.

ಈ ವೇಳೆ ಹಾಸನ ನಗರದ ಚಿಕ್ಕಹೊನ್ನೇನಹಳ್ಳಿಯಲ್ಲಿರುವ ಅವರ ನಿವಾಸದಲ್ಲಿ ಮಗುವನ್ನು ಶಾಲೆಗೆ ಕಳುಹಿಸುವ ನೆಪದಲ್ಲಿ ಹಣ ಸಾಗಿಸಲು ಯತ್ನಿಸಲಾಗಿದೆ ಎಂಬ ಅನುಮಾನ ವ್ಯಕ್ತವಾಗಿದೆ.

ಐದು ಕಡೆಗಳಲ್ಲಿ ಲೋಕಾಯುಕ್ತ ದಾಳಿ
ಹಾಸನ ನಗರದ ಚಿಕ್ಕಹೊನ್ನೇನಹಳ್ಳಿಯಲ್ಲಿರುವ ಹೇಮಂತ್‌ಕುಮಾರ್ ಅವರ ನಿವಾಸ, ಸಕಲೇಶಪುರದಲ್ಲಿರುವ ಬಾಡಿಗೆ ಮನೆ ಹಾಗೂ ಕಚೇರಿಯಲ್ಲಿ ಪರಿಶೀಲನೆ ನಡೆಸಲಾಗಿದೆ. ಅಲ್ಲದೆ, ಆಲೂರು ತಾಲ್ಲೂಕಿನ ದೊಡ್ಡಮಗ್ಗೆ ಗ್ರಾಮದಲ್ಲಿರುವ ಅವರ ಮಾವನ ಮನೆ ಮತ್ತು ಕುವೆಂಪು ನಗರದಲ್ಲಿರುವ ಅವರ ಆಪ್ತ ಗುತ್ತಿಗೆದಾರ ಹರೀಶ್ ಅವರ ಮನೆಯ ಮೇಲೂ ದಾಳಿ ನಡೆಸಲಾಗಿದೆ.

ಲೋಕಾಯುಕ್ತ ಎಸ್‌ಪಿ ನಂದಿನಿ, ಡಿವೈಎಸ್‌ಪಿ ಸುರೇಶ್ ಹಾಗೂ ಇನ್‌ಸ್ಪೆಕ್ಟರ್‌ ಶಿಲ್ಪ, ಗವಿರಾಜು ಮತ್ತು ಚಂದ್ರಶೇಖರ್ ನೇತೃತ್ವದಲ್ಲಿ ಈ ಕಾರ್ಯಾಚರಣೆ ನಡೆದಿದೆ

ಮಗುವಿನ ಬ್ಯಾಗ್ ಪರಿಶೀಲಿಸಿದಾಗ ಹಣ ಪತ್ತೆ
ಚಿಕ್ಕಹೊನ್ನೇನಹಳ್ಳಿಯ ನಿವಾಸದಲ್ಲಿ ಲೋಕಾಯುಕ್ತ ಅಧಿಕಾರಿಗಳು ಪರಿಶೀಲನೆ ನಡೆಸುತ್ತಿದ್ದ ವೇಳೆ, ಮಗುವನ್ನು ಶಾಲೆಗೆ ಕಳುಹಿಸುವ ಸಿದ್ಧತೆ ನಡೆದಿತ್ತು. ಈ ಸಂದರ್ಭದಲ್ಲಿ ಬಾಲಕನ ಬ್ಯಾಗ್ ಹಾಗೂ ಬಟ್ಟೆಗಳನ್ನು ಪರಿಶೀಲಿಸಿದಾಗ 500 ರೂಪಾಯಿ ನೋಟುಗಳ ಒಂದು ಕಟ್ಟು ಪತ್ತೆಯಾಗಿದೆ .

ಮಗುವಿನ ಮೂಲಕ ಹಣ ಸಾಗಿಸಲು ಯತ್ನಿಸಲಾಗುತ್ತಿದೆಯೇ ಎಂಬ ಅನುಮಾನದಿಂದ ಅಧಿಕಾರಿಗಳು ಪರಿಶೀಲನೆ ನಡೆಸಿದ್ದಾರೆ. ಈ ವೇಳೆ ಸಮರ್ಪಕವಾಗಿ ತಪಾಸಣೆ ನಡೆಸಲು ಅವಕಾಶ ನೀಡುವಂತೆ ಕುಟುಂಬದವರಿಗೆ ಲೋಕಾಯುಕ್ತ ಸಿಬ್ಬಂದಿ ತಾಕೀತು ಮಾಡಿದ್ದಾರೆ. ಬಾಲಕನ ಪ್ಯಾಂಟ್‌ ಪರಿಶೀಲಿಸಿದಾಗ ಹಣ ಪತ್ತೆಯಾಗಿದೆ

ಮನೆಯಲ್ಲೇ ತಿಂಡಿ ತರಿಸಿಕೊಂಡ ಅಧಿಕಾರಿಗಳು
ದಾಳಿ ಮುಂದುವರಿದ ವೇಳೆ ಹೇಮಂತ್‌ಕುಮಾರ್ ಅವರ ಮನೆಯಿಂದಲೇ ತಿಂಡಿ ತರಿಸಿಕೊಂಡು ಲೋಕಾಯುಕ್ತ ಪೊಲೀಸರು ಪರಿಶೀಲನೆ ನಡೆಸಿದ್ದಾರೆ. ಆದಾಯಕ್ಕಿಂತ ಹೆಚ್ಚು ಆಸ್ತಿ ಗಳಿಕೆ ಆರೋಪದ ಹಿನ್ನೆಲೆಯಲ್ಲಿ ದಾಖಲೆಗಳು ಮತ್ತು ಹಣಕಾಸಿನ ವ್ಯವಹಾರಗಳ ಕುರಿತು ಅಧಿಕಾರಿಗಳು ತನಿಖೆ ಮುಂದುವರಿಸಿದ್ದಾರೆ


Spread the love

About Laxminews 24x7

Check Also

ಪ್ರದೀಪ್ ಈಶ್ವರ್ ಕುಟುಂಬಕ್ಕೆ ಮಹಾಲಕ್ಷ್ಮಿಯ ಆಗಮನ – ತಂದೆಯಾದ ಸಂಭ್ರಮದಲ್ಲಿ ಶಾಸಕ

Spread the loveಚಿಕ್ಕಬಳ್ಳಾಪುರ: ಚಿಕ್ಕಬಳ್ಳಾಪುರ ವಿಧಾನಸಭಾ ಕ್ಷೇತ್ರದ ಶಾಸಕ ಪ್ರದೀಪ್ ಈಶ್ವರ್ ಅವರ ಕುಟುಂಬದಲ್ಲಿ ಸಂಭ್ರಮ ಮನೆ ಮಾಡಿದೆ. ಶಾಸಕ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ