ನವದೆಹಲಿ,ಜ.20- ರಾಜಕೀಯ ಪಕ್ಷಗಳಿಗೆ ದೇಣಿಗೆ ಸಂಗ್ರಹಿಸಲು ಅಸ್ತಿತ್ವದಲ್ಲಿರುವ ಚುನಾವಣಾ ಬಾಂಡ್ ಯೋಜನೆಗೆ ಮಧ್ಯಂತರ ತಡೆಯಾಜ್ಞೆ ನೀಡಲು ಸುಪ್ರೀಂಕೋರ್ಟ್ ಇಂದು ನಿರಾಕರಿಸಿದೆ. ಚುನಾವಣಾ ಬಾಂಡ್ ಯೋಜನೆಗೆ ತಡೆಯಾಜ್ಞೆ ನೀಡಬೇಕೆಂದು ಕೋರಿ ಸರ್ಕಾರೇತರ ಸಂಸ್ಥೆಯೊಂದು ಸಲ್ಲಿಸಿದ್ದ ಅರ್ಜಿಯ ಕುರಿತು ವಿಚಾರಣೆ ನಡೆಸಿದ ಸುಪ್ರೀಂಕೋರ್ಟ್ ಇದನ್ನು ನಿರಾಕರಿಸಿದೆ.
ಮುಖ್ಯ ನ್ಯಾಯಮೂರ್ತಿ ಎಸ್.ಎ.ಬೋಬ್ಡೆ ಹಾಗೂ ನ್ಯಾಯಮೂರ್ತಿಗಳಾದ ಬಿ.ಆರ್.ಗವಾಯಿ ಮತ್ತು ಸೂರ್ಯಕಾಂತ್ ಅವರನ್ನೊಳಗೊಂಡ ಪೀಠ ಈ ಸಂಬಂಧ ಎರಡು ವಾರಗಳ ಒಳಗೆ ಪ್ರತ್ಯುತ್ತರ ನೀಡುವಂತೆ ಕೇಂದ್ರ ಸರ್ಕಾರ ಮತ್ತು ಚುನಾವಣಾ ಆಯೋಗಕ್ಕೆ ಸೂಚನೆ ನೀಡಿದೆ. ಅಸೋಸಿಯೇಷನ್ ಫಾರ್ ಡೆಮೊಕ್ರಟಿಕ್ ರಿಫಾಮ್ರ್ಸ್ ಎಂಬ ಎನ್‍ಜಿಒ ಸಂಸ್ಥೆ ಪರವಾಗಿ ವಕಾಲತ್ತು ವಹಿಸಿದ್ದ ಹಿರಿಯ ವಕೀಲ ಪ್ರಶಾಂತ್ ಭೂಷಣ್ ರಾಜಕೀಯ ಪಕ್ಷಗಳು ದೇಣಿಗೆ ಸಂಗ್ರಹಿಸಲು ಚುನಾವಣಾ ಬಾಂಡ್ ಅಸ್ತಿತ್ವದಲ್ಲಿದೆ.
ಆದರೆ ಆಡಳಿತಾರೂಢ ಕೇಂದ್ರ ಸರ್ಕಾರ ಕಪ್ಪು ಹಣ ಮತ್ತು ಕಾಳಧನ ಸಂಗ್ರಹಿಸುವ ಉದ್ದೇಶದಿಂದ ಈ ಯೋಜನೆಯನ್ನು ದುರುಪಯೋಗ ಮಾಡಿಕೊಳ್ಳುತ್ತಿದೆ. ಈ ಕಾರಣದಿಂದ ಈ ಯೋಜನೆಗೆ ತಡೆಯಾಜ್ಞೆ ನೀಡಬೇಕೆಂದು ಕೋರಿದ್ದರು.