Breaking News

ಠಾಣೆಗಳು ಕಾಂಗ್ರೆಸ್‌ ಕಚೇರಿಗಳಾಗಿವೆ – ಸರ್ಕಾರದ ವಿರುದ್ಧ ರಾಜ್ಯಪಾಲರಿಗೆ ಬಿಜೆಪಿ, ಜೆಡಿಎಸ್‌ ದೂರು

Spread the love

ಬೆಂಗಳೂರು: ರಾಜ್ಯದಲ್ಲಿ ಆಡಳಿತಾರೂಢ ಕಾಂಗ್ರೆಸ್ ಸರ್ಕಾರವು ವಿರೋಧ ಪಕ್ಷಗಳ ಕಾರ್ಯಕರ್ತರ ಮೇಲೆ ರಾಜಕೀಯ ದ್ವೇಷ ಸಾಧಿಸುತ್ತಿದೆ ಹಾಗೂ ಅಧಿಕಾರ ದುರ್ಬಳಕೆ ಮಾಡಿಕೊಳ್ಳುತ್ತಿದೆ ಎಂದು ಆರೋಪಿಸಿ ಬಿಜೆಪಿ-ಜೆಡಿಎಸ್ಮೈತ್ರಿಯ ಎನ್‌ಡಿಎ  ನಿಯೋಗ ಮಂಗಳವಾರ ರಾಜ್ಯಪಾಲ ಥಾವರ್‌ಚಂದ್ ಗೆಹ್ಲೋಟ್ ಅವರಿಗೆ ದೂರು ಸಲ್ಲಿಸಿದೆ.

ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ವಿಧಾನಸಭೆ ವಿರೋಧ ಪಕ್ಷದ ನಾಯಕ ಆರ್. ಅಶೋಕ್, ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಛಲವಾದಿ ನಾರಾಯಣಸ್ವಾಮಿ, ಜೆಡಿಎಸ್ ಮುಖಂಡರಾದ ಎಸ್.ಎಲ್. ಭೋಜೇಗೌಡ, ಟಿ.ಎ. ಶರವಣ, ಶಾಸಕರಾದ ಶ್ರೀವತ್ಸ, ವಿಠಲ್ ಹಲಗೇಕರ್ ಹಾಗೂ ಸಂಸದ ಮಲ್ಲೇಶ್ ಬಾಬು ಸೇರಿದಂತೆ ಹಲವು ನಾಯಕರು ನಿಯೋಗದಲ್ಲಿದ್ದರು.

ದೂರಿನಲ್ಲಿ ಏನಿದೆ?
ಮತದಾರರ ಪಟ್ಟಿಗೆ ಸಂಬಂಧಿಸಿದ ಫಾರ್ಮ್-7 ವಿಚಾರದಲ್ಲಿ ಬಿಜೆಪಿ-ಜೆಡಿಎಸ್ ಕಾರ್ಯಕರ್ತರ ಮೇಲೆ ಬಿಎನ್‌ಎಸ್ (BNS) ಕಾಯ್ದೆಯಡಿ ಅಕ್ರಮವಾಗಿ ಎಫ್‌ಐಆರ್ ದಾಖಲಿಸಿ ಕಿರುಕುಳ ನೀಡಲಾಗುತ್ತಿದೆ. ರಾಜಕೀಯ ಪ್ರೇರಿತ ಕೇಸ್‌ಗಳಿಗೆ ತಕ್ಷಣ ತಡೆ ನೀಡಬೇಕು.

ಮುಖ್ಯಮಂತ್ರಿ ಹಾಗೂ ಸಚಿವರು ಸಾಂವಿಧಾನಿಕ ಸಂಸ್ಥೆಯಾದ ಚುನಾವಣಾ ಆಯೋಗದ ಮುಂದೆ ಧರಣಿ ನಡೆಸಿದ್ದರೂ ಅವರ ವಿರುದ್ಧ ಯಾವುದೇ ಪೊಲೀಸ್ ಕ್ರಮವಾಗಿಲ್ಲ. ಸರ್ಕಾರದ ಈ ನಡೆ ಸಂಪೂರ್ಣ ಅಸಾಂವಿಧಾನಿಕವಾಗಿದ್ದು, ರಾಜ್ಯಪಾಲರು ಮಧ್ಯಪ್ರವೇಶಿಸಿ ಸರ್ಕಾರಕ್ಕೆ ಕಟ್ಟುನಿಟ್ಟಿನ ನಿರ್ದೇಶನ ನೀಡಬೇಕು.

ಠಾಣೆಗಳು ಕಾಂಗ್ರೆಸ್ ಕಚೇರಿಗಳಾಗಿವೆ
ರಾಜ್ಯಪಾಲರ ಭೇಟಿಯ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ವಿಪಕ್ಷ ನಾಯಕ ಆರ್. ಅಶೋಕ್, ಕಾಂಗ್ರೆಸ್ ಸರ್ಕಾರ ಸಂಪೂರ್ಣ ಕಾನೂನುಬಾಹಿರವಾಗಿ ಆಡಳಿತ ನಡೆಸುತ್ತಿದೆ. ಗೂಂಡಾಗಿರಿ ಮೂಲಕ ವಿಪಕ್ಷ ಕಾರ್ಯಕರ್ತರನ್ನು ಹತ್ತಿಕ್ಕುವ ಯತ್ನ ಮಾಡುತ್ತಿದೆ. ಕೂಡಲೇ ಈ ಸರ್ಕಾರವನ್ನು ವಜಾ ಮಾಡುವಂತೆ ರಾಜ್ಯಪಾಲರಿಗೆ ಮನವಿ ಮಾಡಿದ್ದೇವೆ ಎಂದರು.

ರಾಜ್ಯದಲ್ಲಿ ಪೊಲೀಸ್ ಠಾಣೆಗಳು ಕಾಂಗ್ರೆಸ್ ಕಚೇರಿಗಳಂತೆ ವರ್ತಿಸುತ್ತಿವೆ. ಜಯನಗರ ಶಾಸಕ ಸಿ.ಕೆ. ರಾಮಮೂರ್ತಿ ಸೇರಿದಂತೆ ಹಲವರ ಮೇಲೆ ವಿನಾಕಾರಣ ಎಫ್‌ಐಆರ್ ಹಾಕಲಾಗಿದೆ. ನಾವು ಚುನಾವಣಾ ಆಯೋಗವನ್ನು ಭೇಟಿಯಾಗಿ ಕೇಳಿದಾಗ, ತಾವು ಯಾರ ಮೇಲೂ ದೂರು ನೀಡಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಆದರೂ ಪೊಲೀಸರು ದ್ವೇಷದ ಕೇಸ್ ದಾಖಲಿಸುತ್ತಿದ್ದಾರೆ ಎಂದು ಹೇಳಿದರು.

ಗ್ಯಾರಂಟಿ ಹೆಸರಲ್ಲಿ ಅಧಿಕಾರಕ್ಕೆ ಬಂದ ಸರ್ಕಾರ ಈಗ ಜನರ ಜೇಬಿಗೆ ಕತ್ತರಿ ಹಾಕುತ್ತಿದೆ. ಸರ್ಕಾರ ಆರ್ಥಿಕವಾಗಿ ದಿವಾಳಿಯಾಗಿದ್ದು, ಭಿಕ್ಷಾಪಾತ್ರೆ ಹಿಡಿಯುವ ಹಂತಕ್ಕೆ ತಲುಪಿದೆ. ಖಜಾನೆ ತುಂಬಿಸಿಕೊಳ್ಳಲು ಹಾಲು ಮತ್ತು ಬಸ್ ಟಿಕೆಟ್ ದರ ಏರಿಸಲು ಹೊರಟಿರುವ ಈ ಸರ್ಕಾರ ನಿಜಕ್ಕೂ ಲೂಟಿಕೋರ ಹಾಗೂ ಜನದ್ರೋಹಿ ಸರ್ಕಾರ ಎಂದು ಆಕ್ರೋಶ ಹೊರಹಾಕಿದರು.

ಜೆಡಿಎಸ್ ಮುಖಂಡ ಎಸ್.ಎಲ್. ಭೋಜೇಗೌಡ ಮಾತನಾಡಿ, ರಾಜ್ಯದಲ್ಲಿ ತಲೆದೋರಿರುವ ಬರಗಾಲ ಮತ್ತು ಸರ್ಕಾರದ ವೈಫಲ್ಯಗಳನ್ನು ಮುಚ್ಚಿಹಾಕಲು ಎಫ್‌ಐಆರ್ ಅಸ್ತ್ರ ಬಳಸಲಾಗುತ್ತಿದೆ. ಬಿ.ಎಸ್. ಯಡಿಯೂರಪ್ಪ ಅವರು ಹೇಳಿರುವಂತೆ ಎನ್‌ಡಿಎ ಮೈತ್ರಿ ಅಖಂಡವಾಗಿದ್ದು, ಮುಂಬರುವ 2028ರ ವಿಧಾನಸಭಾ ಚುನಾವಣೆ ಸೇರಿದಂತೆ ಎಲ್ಲಾ ಚುನಾವಣೆಗಳನ್ನು ಒಟ್ಟಾಗಿಯೇ ಎದುರಿಸಿ ಜಯಭೇರಿ ಬಾರಿಸುತ್ತೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.


Spread the love

About Laxminews 24x7

Check Also

ದೇವರ ಕೋಣೆಯಲ್ಲೇ ಕೆಜಿಗಟ್ಟಲೆ ಗಾಂಜಾ ಸಂಗ್ರಹ; 22 ವರ್ಷದ ಯುವಕ ಅರೆಸ್ಟ್

Spread the loveಗದಗ: ಗಾಂಜಾ ಮಾರಾಟ ಮಾಡುತ್ತಿದ್ದ ಆರೋಪದ ಮೇಲೆ 22 ವರ್ಷದ ಯುವಕನನ್ನು ಪೊಲೀಸರು ಬಂಧಿಸಿರುವ ಘಟನೆ ಗದಗ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ