Breaking News

ನರೇಗಾ ಕಾರ್ಮಿಕರು ದಿನಗೂಲಿ ವೇತನ ಕಡಿತವನ್ನು ವಿರೋಧಿಸಿ ಪಂಚಾಯತ್ ಕಚೇರಿಗೆ ಮುತ್ತಿಗೆ

Spread the love

ಬೆಳಗಾವಿ ಜಿಲ್ಲೆಯ ಖಾನಾಪುರ ತಾಲೂಕಿನ ಇಟಗಿ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ನರೇಗಾ ಕಾರ್ಮಿಕರು ದಿನಗೂಲಿ ವೇತನ ಕಡಿತವನ್ನು ವಿರೋಧಿಸಿ ಪಂಚಾಯತ್ ಕಚೇರಿಗೆ ಮುತ್ತಿಗೆ ಹಾಕಿ ಧರಣಿ ನಡೆಸಿದ್ದಾರೆ. ಪ್ರತಿ ದಿನದ ಕೂಲಿ ಹಣವನ್ನು ಅರ್ಧಕ್ಕರ್ಧ ಕಡಿಮೆ ಮಾಡಿರುವುದಕ್ಕೆ ರೊಚ್ಚಿಗೆದ್ದ ಬೋಗೂರು ಗ್ರಾಮದ ಕಾರ್ಮಿಕರು ಅಧಿಕಾರಿಗಳ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಖಾನಾಪುರ ತಾಲೂಕಿನ ಗಡಿ ಭಾಗದ ಗ್ರಾಮ ಪಂಚಾಯಿತಿಯಾದ ಇಟಗಿ ವ್ಯಾಪ್ತಿಯ ಬೋಗೂರು ಗ್ರಾಮದ ಉದ್ಯೋಗ ಖಾತ್ರಿ ಯೋಜನೆ ಕೂಲಿ ಕಾರ್ಮಿಕರು ಇಂದು ಮುಂಜಾನೆ ಜಮಾವಣೆಗೊಂಡು ಪ್ರತಿಭಟನೆ ನಡೆಸಿದರು. ನಿಯಮಾನುಸಾರ ಬರಬೇಕಿದ್ದ ಪ್ರತಿ ದಿವಸದ ದಿನಗೂಲಿ ವೇತನ 375 ರೂಪಾಯಿಗಳ ಬದಲು ಕೇವಲ 190 ರೂಪಾಯಿಗಳನ್ನು ಮಾತ್ರ ಬ್ಯಾಂಕ್ ಖಾತೆಗೆ ಹಾಕಲಾಗಿದೆ ಎಂದು ಆರೋಪಿಸಿ ಕಾರ್ಮಿಕರು ಇಟಗಿ ಗ್ರಾಮ ಪಂಚಾಯಿತಿ ಕಚೇರಿಗೆ ಮುತ್ತಿಗೆ ಹಾಕಿ ಧರಣಿ ಕುಳಿತರು.

ಬೋಗೂರು ಗ್ರಾಮದ ಹಿರಿಯರಾದ ಮಕ್ಬುಲ್ ಸನಧಿ ನೇತೃತ್ವದಲ್ಲಿ ನಡೆದ ಈ ಪ್ರತಿಭಟನೆಯಿಂದಾಗಿ ಪಂಚಾಯತ್ ಕಚೇರಿ ಆವರಣದಲ್ಲಿ ಕೆಲಕಾಲ ಬಿಗುವಿನ ವಾತಾವರಣ ನಿರ್ಮಾಣವಾಗಿತ್ತು. ಯಾವುದೇ ಅಹಿತಕರ ಘಟನೆ ನಡೆಯದಂತೆ ಮುನ್ನೆಚ್ಚರಿಕೆ ಕ್ರಮವಾಗಿ ಸ್ಥಳೀಯ ನಂದಗಡ ಪೊಲೀಸರು ಬಿಗಿ ಬಂದೋಬಸ್ತ್ ಏರ್ಪಡಿಸಿದ್ದರು.

ಪ್ರತಿಭಟನಾ ಸ್ಥಳಕ್ಕೆ ಖಾನಾಪುರ ತಾಲೂಕು ಪಂಚಾಯಿತಿ ನರೇಗಾ ಯೋಜನೆ ಸಹಾಯಕ ನಿರ್ದೇಶಕಿ ರೂಪಾಲಿ ಬಡಕುದ್ರಿ, ಸ್ಥಳೀಯ ಪಿಡಿಒ ವೀರೇಶ್ ಸಜ್ಜನ ಹಾಗೂ ನರೇಗಾ ತಾಂತ್ರಿಕ ಸಹಾಯಕ ಪ್ರಕಾಶ್ ಭೇಟಿ ನೀಡಿ ಕಾರ್ಮಿಕರ ಅಳಲನ್ನು ಆಲಿಸಿದರು. ಕೂಲಿ ಕಾರ್ಮಿಕರೊಂದಿಗೆ ಸುದೀರ್ಘ ಚರ್ಚೆ ನಡೆಸಿದ ಸಹಾಯಕ ನಿರ್ದೇಶಕಿ ರೂಪಾಲಿ ಬಡಕುದ್ರಿ ಅವರು ಮನವಿ ಪತ್ರವನ್ನು ಸ್ವೀಕರಿಸಿ, ತಾಂತ್ರಿಕ ಸಮಸ್ಯೆಗಳನ್ನು ಪರಿಹರಿಸಿ ಬಾಕಿ ವೇತನವನ್ನು ಶೀಘ್ರದಲ್ಲೇ ಕೊಡಿಸುವುದಾಗಿ ಭರವಸೆ ನೀಡಿದರು. ನಮ್ಮ ನ್ಯೂಸ್ ಸಮೂಹದ ರಾಜ್ಯ ಉಪ ಸಂಪಾದಕ ಬಸವರಾಜು ಅವರೊಂದಿಗೆ ನಡೆಸಿದ ಸಂವಾದದಲ್ಲೂ ಅವರು ಈ ಸಮಸ್ಯೆಯನ್ನು ಶೀಘ್ರ ಇತ್ಯರ್ಥಪಡಿಸುವುದಾಗಿ ತಿಳಿಸಿದ್ದು, ಬಡ ಕಾರ್ಮಿಕರಿಗೆ ನ್ಯಾಯ ಸಿಗುತ್ತದೆಯೇ ಎಂಬುದನ್ನು ಕಾದುನೋಡಬೇಕಿದೆ.


Spread the love

About Laxminews 24x7

Check Also

ಶಿಕ್ಷಿಸುವುದಕ್ಕಿಂತ ಸರಿಯಾದ ದಾರಿಗೆ ತರೋದೇ ನಮ್ಮ ಧರ್ಮ: ನಿಂದಿಸಿದ ಮಕ್ಕಳನ್ನು ಕ್ಷಮಿಸಿದ ಮೋದಿ

Spread the loveನವದೆಹಲಿ: ಜಂತರ್ ಮಂತರ್‌ನಲ್ಲಿ ನಡೆದ ಘಟನೆ ಮತ್ತು ತಮ್ಮ ಹಾಗೂ ತಮ್ಮ ದಿವಂಗತ ತಾಯಿಯವರ ವಿರುದ್ಧ ವ್ಯಕ್ತವಾದ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ