ಬೆಂಗಳೂರು: ನಿರ್ಗಮಿತ ಸಚಿವ ಬಿ. ನಾಗೇಂದ್ರ ರಾಜೀನಾಮೆ ಬಿಜೆಪಿ – ಜೆಡಿಎಸ್ ಹೋರಾಟದ ಫಲ ಎಂದು ವಿಪಕ್ಷ ನಾಯಕ ಆರ್. ಅಶೋಕ್ ಬಣ್ಣಿಸಿದರು.
ಬೆಂಗಳೂರಿನಲ್ಲಿಂದು ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ವಿಪಕ್ಷ ನಾಯಕರು, ನಾಗೇಂದ್ರ ರಾಜೀನಾಮೆ ಪ್ರಕರಣದ ಕುರಿತು ಕಾಂಗ್ರೆಸ್ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು.
ಕರ್ನಾಟಕ ವಿಧಾನಸಭೆಯ ಇತಿಹಾಸದಲ್ಲಿ ನಾಗೇಂದ್ರ ರಾಜೀನಾಮೆ ಪ್ರಕರಣ ಅಪರೂಪದ್ದು. ಬಿಜೆಪಿ ಮತ್ತು ಜೆಡಿಎಸ್ ಒಟ್ಟಾಗಿ ನಾಗೇಂದ್ರ ವಿಚಾರವನ್ನು ವಿಧಾನಸಭೆಯಲ್ಲಿ ತಾರ್ಕಿಕ ಅಂತ್ಯಕ್ಕೆ ಕೊಂಡೊಯ್ದಿವೆ. ಜೆಡಿಎಸ್ ಬೆಂಬಲದೊಂದಿಗೆ ಬಿಜೆಪಿ ಹೋರಾಟ ನಡೆಸಿದ್ದು, ನಮ್ಮ ಗುರಿ ಆರಂಭದಿಂದಲೂ ಸ್ಪಷ್ಟವಾಗಿತ್ತು ಎಂದು ಆರ್. ಅಶೋಕ್ ಹೇಳಿದರು.
ಪಕ್ಷವೇ ಲೂಟಿ ಮಾಡುವಂತೆ ಹೇಳಿಕೊಡ್ತಾ?
ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ವಿಧಾನಸಭೆಯಲ್ಲಿ ಅಕ್ರಮದ ಬಗ್ಗೆ ಚರ್ಚೆಯಾಗಿತ್ತು. ಇದೀಗ ಎರಡನೇ ಬಾರಿ ನಾಗೇಂದ್ರ ರಾಜೀನಾಮೆ ನೀಡುವಂತಾಗಿದೆ. ಪಕ್ಷಕ್ಕೆ ಮುಜುಗರ ಆಗಬಾರದು ಎಂಬ ಕಾರಣಕ್ಕೆ ರಾಜೀನಾಮೆ ನೀಡಿದ್ದೇನೆ ಎಂದು ನಾಗೇಂದ್ರ ಹೇಳಿದ್ದಾರೆ. ಹಾಗಾದ್ರೆ ಪಕ್ಷವೇ ಲೂಟಿ ಮಾಡುವಂತೆ ಹೇಳಿಕೊಡ್ತಾ? ಎಂದು ಪ್ರಶ್ನಿಸಿದರು.
ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿ.ಕೆ ಶಿವಕುಮಾರ್ ನಾಗೇಂದ್ರ ಅಮಾಯಕರು ಎಂದು ಹೇಳುತ್ತಿದ್ದಾರೆ. ಆದರೆ, ತನಿಖಾ ಸಂಸ್ಥೆಗಳು ಪ್ರಕರಣದಲ್ಲಿ ಹಲವು ಆರೋಪಗಳನ್ನು ದಾಖಲಿಸಿವೆ. ಇಡಿ ನಾಲ್ಕು ಚಾರ್ಜ್ಶೀಟ್ಗಳನ್ನು ಸಲ್ಲಿಸಿದ್ದು, ಅವುಗಳಲ್ಲಿ ನಾಗೇಂದ್ರ ವಿರುದ್ಧ ಆರೋಪಗಳಿವೆ ಎಂದು ಅಶೋಕ್ ಹೇಳಿದರು.
ಚಂದ್ರಶೇಖರ್ ಕುಟುಂಬಕ್ಕೆ ನ್ಯಾಯ ಸಿಕ್ಕಿದೆಯೇ?
ನಿಗಮದ ಎಂಡಿ ಆಗಿದ್ದ ಚಂದ್ರಶೇಖರ್ ಆತ್ಮಹತ್ಯೆ ಮಾಡಿಕೊಂಡಿದ್ದರು. ಅವರು ದಲಿತ ಸಮುದಾಯಕ್ಕೆ ಸೇರಿದವರಾಗಿದ್ದರು. ನಾಗೇಂದ್ರ ಕೂಡ ತಮ್ಮನ್ನು ದಲಿತ ಎಂದು ಹೇಳುತ್ತಾರೆ. ಹಾಗಾದರೆ ಚಂದ್ರಶೇಖರ್ ಕುಟುಂಬಕ್ಕೆ ಕಾಂಗ್ರೆಸ್ ಸರ್ಕಾರ ನೀಡಿದ ನ್ಯಾಯವೇನು ಎಂದು ಪ್ರಶ್ನಿಸಿದರು.
ಚಂದ್ರಶೇಖರ್ ಅವರ ಕುಟುಂಬಕ್ಕೆ ಪಿಂಚಣಿ ಹಾಗೂ ಗ್ರಾಚ್ಯುಯಿಟಿ ನೀಡಿಲ್ಲ. ಅವರ ಮಗನಿಗೆ ಸರ್ಕಾರಿ ಉದ್ಯೋಗ ನೀಡಿಲ್ಲ. 187 ಕೋಟಿ ರೂ. ಹಣವನ್ನು ಉಳಿಸಿದ ಚಂದ್ರಶೇಖರ್ ಅವರಿಗೆ ಅನ್ಯಾಯವಾಗಿದೆ. ಆದರೆ ನಾಗೇಂದ್ರ ಅವರಿಗೆ ಅನ್ಯಾಯವಾಗಿದೆ ಎಂದು ಕಾಂಗ್ರೆಸ್ ನಾಯಕರು ಹೇಳುತ್ತಿದ್ದಾರೆ. ಇದೇನಾ ಕಾಂಗ್ರೆಸ್ನ ದಲಿತ ಕಾಳಜಿ? ಎಂದು ವಾಗ್ದಾಳಿ ನಡೆಸಿದರು.
ಸದನದಲ್ಲಿ 37 ದಾಖಲೆ ಬಿಡುಗಡೆ ಮಾಡಿದ್ದೇನೆ
ನಾನು ವಿಧಾನಸಭೆಯಲ್ಲಿ ನಾಗೇಂದ್ರ ವಿರುದ್ಧ 37 ದಾಖಲೆಗಳನ್ನು ಬಿಡುಗಡೆ ಮಾಡಿದ್ದೇನೆ. ಇಷ್ಟೊಂದು ದಾಖಲೆಗಳು ಹೊರಬಂದಿದ್ದರಿಂದಲೇ ನಾಗೇಂದ್ರ ರಾಜೀನಾಮೆ ನೀಡುವಂತಾಯಿತು. ಸಿಬಿಐ ನಾಗೇಂದ್ರ ಅವರನ್ನು ಕಿಂಗ್ಪಿನ್ ಎಂದು ಹೇಳಿದೆ. ಸಿಬಿಐ ಸುಳ್ಳು ಹೇಳುತ್ತಿದ್ದರೆ ಡಿ.ಕೆ. ಶಿವಕುಮಾರ್ ಸಿಬಿಐ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡಲಿ ಎಂದು ಸವಾಲು ಹಾಕಿದರು.
600 ಖಾತೆಗಳಿಗೆ 187 ಕೋಟಿ ಹಣವನ್ನು ಒಬ್ಬ ಕ್ಲರ್ಕ್ ವರ್ಗಾವಣೆ ಮಾಡಲು ಸಾಧ್ಯವೇ? ಚಂದ್ರಶೇಖರ್ ಅವರ ಡೆತ್ನೋಟ್ನಲ್ಲಿ ಸಚಿವರ ಮೌಖಿಕ ಸೂಚನೆಯ ಮೇರೆಗೆ ಹಣ ವರ್ಗಾವಣೆ ಮಾಡಲಾಗಿದೆ ಎಂಬ ಉಲ್ಲೇಖವಿದೆ ಎಂದು ಅಶೋಕ್ ಹೇಳಿದರು.
ನಾಗೇಂದ್ರ ವಿರುದ್ಧ ಹಲವು ಪ್ರಕರಣಗಳಿವೆ: ಅಶೋಕ್
ಎಫ್ಎಸ್ಎಲ್ ವರದಿಯಲ್ಲಿ ನೆಕ್ಕುಂಟಿ ನಾಗರಾಜ್ ಅವರೊಂದಿಗೆ ನಾಗೇಂದ್ರ ಎಷ್ಟು ಬಾರಿ ಮಾತನಾಡಿದ್ದಾರೆ ಎಂಬ ಮಾಹಿತಿಯಿದೆ. ನಾಗೇಂದ್ರ ವಿರುದ್ಧ ಲೋಕಾಯುಕ್ತದಲ್ಲಿ 12 ಪ್ರಕರಣಗಳಿವೆ. ಒಟ್ಟಾರೆ 35 ಪ್ರಕರಣಗಳಿವೆ ಎಂದು ಹೇಳಿದ ಅಶೋಕ್, ನಾಗೇಂದ್ರ ಅಮಾಯಕರು ಎಂಬ ಕಾಂಗ್ರೆಸ್ ನಾಯಕರ ಹೇಳಿಕೆಯನ್ನು ಪ್ರಶ್ನಿಸಿದರು.
ನಾಗೇಂದ್ರ ತಪ್ಪು ಮಾಡಿಲ್ಲ ಎಂದಾದ್ರೆ ಸಿದ್ದರಾಮಯ್ಯ ಅವರು ತಮ್ಮ ಸಂಪುಟದಿಂದ ಅವರನ್ನು ಏಕೆ ತೆಗೆದುಹಾಕಿದರು? ಅಂದು ಡಿಸಿಎಂ ಆಗಿದ್ದ ಡಿ.ಕೆ. ಶಿವಕುಮಾರ್ ರಾಜೀನಾಮೆ ತಡೆಯಲು ಏಕೆ ಪ್ರಯತ್ನಿಸಲಿಲ್ಲ? ಈಗ ದೆಹಲಿಗೆ ಹೋಗಿ ಹೈಕಮಾಂಡ್ ಜತೆ ಮಾತುಕತೆ ನಡೆಸಿದ್ದೇಕೆ ಎಂದು ಪ್ರಶ್ನಿಸಿದರು.
ತನಿಖೆ ಮತ್ತು ನ್ಯಾಯಾಲಯವೇ ಅಂತಿಮ ತೀರ್ಪು ನೀಡಬೇಕು
ಹಣ ರಿಕವರಿ ಆದ ಬಳಿಕ ಆರೋಪಿಯನ್ನು ನಿರಪರಾಧಿ ಎಂದು ಹೇಳಲು ಸಾಧ್ಯವಿಲ್ಲ. ಪೊಲೀಸರು ಕಳ್ಳನನ್ನು ಹಿಡಿದು ಹಣವನ್ನು ವಶಪಡಿಸಿಕೊಂಡ ಬಳಿಕ ಕಳ್ಳನನ್ನು ಬಿಡುತ್ತಾರೆಯೇ? ನಾಗೇಂದ್ರ ಪ್ರಕರಣದಲ್ಲಿ ಮಾತ್ರ ಹಣ ರಿಕವರಿ ಆದ ತಕ್ಷಣ ಅವರು ನಿರಪರಾಧಿ ಹೇಗೆ ಆಗುತ್ತಾರೆ? ಯಾರು ಅಪರಾಧಿ, ಯಾರು ನಿರಪರಾಧಿ ಎಂಬುದನ್ನು ಜನತಾ ನ್ಯಾಯಾಲಯ ನಿರ್ಧರಿಸುವುದಿಲ್ಲ. ತನಿಖಾ ಸಂಸ್ಥೆಗಳು ಹಾಗೂ ನ್ಯಾಯಾಲಯಗಳು ಅಂತಿಮ ತೀರ್ಪು ನೀಡಬೇಕು ಎಂದು ಅವರು ಹೇಳಿದರು.
ಸಿಬಿಐ ಮತ್ತು ಇಡಿ ಪ್ರಾಸಿಕ್ಯೂಷನ್ಗೆ ಅನುಮತಿ ಕೇಳಿವೆ. ರಾಜ್ಯಪಾಲರ ಅನುಮತಿ ದೊರೆತರೆ ಮುಂದಿನ ಕಾನೂನು ಕ್ರಮ ನಡೆಯಲಿದೆ. ಸಚಿವರಾಗಿದ್ದ ಸಂದರ್ಭದಲ್ಲಿ ಬಂಧನವಾದರೆ ಸರ್ಕಾರಕ್ಕೆ ಮುಜುಗರವಾಗಬಹುದು ಎಂಬ ಕಾರಣಕ್ಕೆ ರಾಜೀನಾಮೆ ಪಡೆಯಲಾಗಿದೆ ಎಂದು ಅಶೋಕ್ ಕುಟುಕಿದರು.
‘ನಾಗೇಂದ್ರ ರಾಜೀನಾಮೆ ಬಿಜೆಪಿ-ಜೆಡಿಎಸ್ ಹೋರಾಟದ ಫಲ’
ನಾಗೇಂದ್ರ ರಾಜೀನಾಮೆ ಬಿಜೆಪಿ ಮತ್ತು ಜೆಡಿಎಸ್ ನಡೆಸಿದ ಹೋರಾಟದ ಫಲ. ಇದು ಬಿಜೆಪಿ ಜಯಕ್ಕಿಂತಲೂ ದಲಿತ ಸಮುದಾಯದ ಜಯ. ದಲಿತರ ಹಣ ಕಳವು ಮಾಡಿದರೆ ಉಳಿಗಾಲವಿಲ್ಲ ಎಂಬುದು ಕಾಂಗ್ರೆಸ್ಗೆ ಇನ್ಮೇಲಾದರೂ ಅರ್ಥವಾಗಲಿ. ನಮ್ಮ ಹೋರಾಟದಿಂದ ರಾಜೀನಾಮೆ ಆಗಿದೆ. ಇನ್ನುಳಿದ ವಿಚಾರಗಳನ್ನು ನ್ಯಾಯಾಲಯಕ್ಕೆ ಬಿಡುತ್ತೇವೆ ಎಂದರು.
ಅಧಿವೇಶನದಲ್ಲಿ ಇತರ ಹಲವು ವಿಚಾರಗಳ ಬಗ್ಗೆ ಚರ್ಚೆಯಾಗಲಿಲ್ಲ. ಆ ವಿಚಾರಗಳನ್ನು ಜನರ ಬಳಿಗೆ ಪಾದಯಾತ್ರೆ ಮೂಲಕ ಕೊಂಡೊಯ್ಯುತ್ತೇವೆ ಎಂದು ತಿಳಿಸಿದರು.
Laxmi News 24×7