Breaking News

ರಾಷ್ಟ್ರಾಧ್ಯಕ್ಷ ಟ್ರಂಪ್ ಮತ್ತು ಪ್ರಧಾನಿ ನರೇಂದ್ರ ಮೋದಿ ಎರಡೂ ರಾಷ್ಟ್ರಗಳ ಗೆಳೆತನವನ್ನು ಮತ್ತಷ್ಟು ಗಟ್ಟಿಗೊಳಿಸುವುದಕ್ಕೆ ಮುನ್ನುಡಿ ಬರೆದಿದ್ದಾರೆ.

Spread the love

ಅಹಮದಾಬಾದ್, ಫೆ.24-ಉಭಯ ದೇಶಗಳಲ್ಲೂ ಭಾರೀ ಸಂಚಲನ ಸೃಷ್ಟಿಸಿರುವ ಅಮೆರಿಕ ಅಧ್ಯಕ್ಷ ಡೋನಾಲ್ಡ್ ಟ್ರಂಪ್ ಅವರ ಭಾರತ ಭೇಟಿಯಿಂದಾಗಿ ವಿಶ್ವದ ಎರಡು ಬೃಹತ್ ಪ್ರಜಾಪ್ರಭುತ್ವ ದೇಶಗಳ ಬಾಂಧವ್ಯ ಬಲವರ್ಧನೆಯಲ್ಲಿ ಹೊಸ ಅಧ್ಯಾಯ ಆರಂಭವಾಗಿದೆ. ರಾಷ್ಟ್ರಾಧ್ಯಕ್ಷ ಟ್ರಂಪ್ ಮತ್ತು ಪ್ರಧಾನಿ ನರೇಂದ್ರ ಮೋದಿ ಎರಡೂ ರಾಷ್ಟ್ರಗಳ ಗೆಳೆತನವನ್ನು ಮತ್ತಷ್ಟು ಗಟ್ಟಿಗೊಳಿಸುವುದಕ್ಕೆ ಮುನ್ನುಡಿ ಬರೆದಿದ್ದಾರೆ.

ಭವ್ಯ ಸ್ವಾಗತ : ವಾಷಿಂಗ್ಟನ್‍ನಿಂದ ಏರ್‍ಪೊರ್ಸ್ ಒನ್ ವಿಶೇಷ ವಿಮಾನದಲ್ಲಿ ಗುಜರಾತ್‍ನ ಅಹಮದಾಬಾದ್‍ನ ಸರ್ದಾರ್ ವಲ್ಲಭ್ ಭಾಯಿ ಪಟೇಲ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಆಗಮಿಸಿದ ಡೊನಾಲ್ಡ್ ಟ್ರಂಪ್ ಅವರಿಗೆ ಭಾರತದ ಪರವಾಗಿ ಪ್ರಧಾನಿ ಮೋದಿ ಭವ್ಯ ಸ್ವಾಗತ ನೀಡಿದರು. ತಮ್ಮ ಆಪ್ತ ಮಿತ್ರನನ್ನು ಸ್ವಾಗತಿಸಲು ಮೋದಿ ಇಂದು ಬೆಳಗ್ಗೆ ಅತ್ಯಂತ ಉತ್ಸಾಹದಿಂದ ಅಹಮದಾಬಾದ್‍ಗೆ ಆಗಮಿಸಿದ್ದರು.
ಟ್ರಂಪ್ ಅವರೊಂದಿಗೆ ಅಮೆರಿಕದ ಪ್ರಥಮ ಮಹಿಳೆ ಮೆಲಾನಿಯಾ ಟ್ರಂಪ್. ಪುತ್ರಿ ಇವಾಂಕಾ ಟ್ರಂಪ್ ಹಾಗೂ ಅಲ್ಲಿನ ಉನ್ನತ ಮಟ್ಟದ ನಿಯೋಗಕ್ಕೂ ಅದ್ದೂರಿ ಸ್ವಾಗತ ಕೋರಲಾಯಿತು. ಭಾರತದ ನೆಲವನ್ನು ಸ್ಪರ್ಶಿಸಿದ ಕೂಡಲೇ ಅಮೆರಿಕ ರಾಷ್ಟ್ರಾಧ್ಯಕ್ಷರು ಹಸನ್ಮುಖರಾಗಿ ಎಲ್ಲರತ್ತ ಕೈಬೀಸಿದರು. ಹೃದಯಪೂರ್ವಕವಾಗಿ ಟ್ರಂಪ್ ಅವರನ್ನು ಸ್ವಾಗತಿಸಿದ ಮೋದಿ, ಮಹಾ ಶಕ್ತಿಶಾಲಿ ದೇಶದ ನಾಯಕನನ್ನು ಆಲಂಗಿಸಿಕೊಂಡರು. ರಾಷ್ಟ್ರಾಧ್ಯಕ್ಷರೊಂದಿಗೆ ಅಗಮಿಸಿದ ನಿಯೋಗಕ್ಕೂ ಸಹ ಆತ್ಮೀಯ ಸ್ವಾಗತ ಕೋರಲಾಯಿತು.

ವಿಮಾನ ನಿಲ್ದಾಣದಲ್ಲಿ ಇಂದು ಹಬ್ಬದಂತ ವಾತಾವರಣ ಸೃಷ್ಟಿಯಾಗಿತ್ತು. ಟ್ರಂಪ್ ಆಗಮನದ ಹಿನ್ನೆಲೆಯಲ್ಲಿ ಏರ್‍ಪೊರ್ಟ್‍ನನ್ನು ವರ್ಣರಂಜಿತವಾಗಿ ಅಲಂಕರಿಸಲಾಗಿತ್ತು. ಅಲ್ಲಿ ಭಾರತ ಮತ್ತು ಅಮೆರಿಕ ರಾಷ್ಟ್ರಧ್ವಜ ರಾರಾಜಿಸುತ್ತಿದ್ದವು. ಮುನ್ನೆಚ್ಚರಿಕೆ ಕ್ರಮವಾಗಿ ಅಭೂತಪೂರ್ವ ಬಂದೋಬಸ್ತ್ ಮಾಡಲಾಗಿತ್ತು. ಟ್ರಂಪ್ ಭಾರತಕ್ಕೆ ಬರುವುದಕ್ಕೆ ಮುನ್ನ ಇಂದು ಬೆಳಗ್ಗೆ ಟ್ವೀಟ್ ಮಾಡಿದ್ದ ಮೋದಿ, ಅಮೆರಿಕ ಅಧ್ಯಕ್ಷರನ್ನು ಸ್ವಾಗತಿಸಲು ಇಡೀ ಭಾರತ ಸಜ್ಜಾಗಿದೆ. ನಾನು ಅವರನ್ನು ಸ್ವಾಗತಿಸಲು ಉತ್ಸುಕನಾಗಿದ್ದೇನೆ ಎಂದು ಹೇಳಿದ್ದರು.

ಇದಕ್ಕೆ ಪ್ರತಿಯಾಗಿ ಏರ್‍ಪೊರ್ಸ್ ಇನ್ ವಿಮಾನದಿಂದಲೇ ಹಿಂದಿಯಲ್ಲಿ ಟ್ವೀಟ್ ಮಾಡಿದ್ದ ಟ್ರಂಪ್ ನಾವು ಮಾರ್ಗಮಧ್ಯದಲ್ಲಿದ್ದೇವೆ. ಕೆಲವೇ ಗಂಟೆಗಳಲ್ಲಿ ನಿಮ್ಮೆಲ್ಲರನ್ನು ಭೇಟಿ ಮಾಡಲು ನಾನು ಕಾತುರನಾಗಿದ್ದೇನೆ ಎಂದು ತಿಳಿಸಿದ್ದರು. ಅಹಮದಾಬಾದ್ ವಿಮಾನ ನಿಲ್ದಾಣದಿಂದ ಟ್ರಂಪ್ ಮತ್ತು ಮೋದಿ ಸಬರಮತಿ ಆಶ್ರಮಕ್ಕೆ ತೆರಳಿ ಅಲ್ಲಿ ರಾಷ್ಟ್ರಪಿತ ಮಹಾತ್ಮಗಾಂಧಿ ಅವರಿಗೆ ಗೌರವ ನಮನ ಸಲ್ಲಿಸಿದರು.

ಭರ್ಜರಿ ರೋಡ್ ಶೋ : ಬಳಿಕ ಟ್ರಂಪ್ ಮತ್ತು ಮೋದಿ ವಿಶೇಷ ವಾಹನದಲ್ಲಿ ಸುಮಾರು 22 ಕಿ.ಮೀ. ಭರ್ಜರಿ ರೋಡ್ ಶೋ ನಡೆಸಿದರು. ರಸ್ತೆಯ ಇಕ್ಕೆಲಗಳಲ್ಲಿ ನಿಂತು ಸಹಸ್ರಾರು ಮಂದಿ ವೀಕ್ಷಿಸಿದರು.

ನಮಸ್ತೆ ಟ್ರಂಪ್ : ನಂತರ ಅಹಮದಾಬಾದ್‍ನ ಮೊಟೆರಾ ಕ್ರೀಡಾಂಗಣದಲ್ಲಿ ನಡೆದ ನಮಸ್ತೆ ಟ್ರಂಪ್ ಬೃಹತ್ ಕಾರ್ಯಕ್ರಮದಲ್ಲಿ ರಾಷ್ಟ್ರಾಧ್ಯಕ್ಷರು ಮತ್ತು ಪ್ರಧಾನಿ ಭಾಗವಹಿಸಿದರು.
ನಮ್ಮ ಪರಮಾಪ್ತ ಗೆಳೆಯ ಟ್ರಂಪ್ ಭಾರತ ಭೇಟಿಯಿಂದಾಗಿ ಉಭಯ ದೇಶಗಳ ಬಾಂಧವ್ಯ ಬಲವರ್ಧನೆ ಮತ್ತಷ್ಟು ಸದೃಢಗೊಂಡಿದೆ ಎಂದು ಮೋದಿ ಬಣ್ಣಿಸಿದರು. ತಮಗಾಗಿ ಅಹಮದಾಬಾದ್‍ನಲ್ಲಿ ನಮಸ್ತೆ ಟ್ರಂಪ್ ಕಾರ್ಯಕ್ರಮ ಆಯೋಜಿಸಿರುವುದಕ್ಕಾಗಿ ಮೋದಿ ನೇತೃತ್ವದ ಕೇಂದ್ರ ಸರ್ಕಾರಕ್ಕೆ ಅಮೆರಿಕ ಅಧ್ಯಕ್ಷರು ಕೃತಜ್ಞತೆ ಸಲ್ಲಿಸಿದರು. ಉಭಯ ದೇಶಗಳ ನಡುವಣ ಸಂಬಂಧ ವೃದ್ದಿಯಲ್ಲಿ ಹೊಸ ಅಧ್ಯಾಯ ಆರಂಭವಾಗಿದೆ ಎಂದು ಟ್ರಂಪ್ ಹೇಳಿದರು.

ಟ್ರಂಪ್-ಮೋದಿ ಜೋಡಿಯ ಭಾಷಣಕ್ಕೆ ಸ್ಟೇಡಿಯಂನಲ್ಲಿ ನೆರೆದಿದ್ದ ಲಕ್ಷಾಂತರ ಮಂದಿಯ ಪ್ರಚಂಡ ಕರತಾಡನ ಮಾರ್ದನಿಸಿತು. ಅಹಮದಾಬಾದ್ ಏರ್‍ಪೊರ್ಟ್‍ನಿಂದ ಮೊಟೆರಾ ಕ್ರೀಡಾಂಗಣದವರೆಗೂ ಅಭೂತಪೂರ್ವ ಬಂದೋಬಸ್ತ್ ವ್ಯವಸ್ಥೆ ಮಾಡಲಾಗಿತ್ತು. ನಮಸ್ತೆ ಟ್ರಂಪ್ ಕಾರ್ಯಕ್ರಮದ ನಂತರ ಟ್ರಂಪ್ ನಿಯೋಗ ಉತ್ತರ ಪ್ರದೇಶದ ಆಗ್ರಾದಲ್ಲಿರುವ ವಿಶ್ವವಿಖ್ಯಾತ ತಾಜ್ ಮಹಲ್‍ಗೆ ಭೇಟಿ ನೀಡಿ ಪ್ರೇಮಸೌಧದ ಸೊಬಗನ್ನು ಸವಿದರು.

ಟ್ರಂಪ್ ನಂತರ ರಾತ್ರಿ ರಾಜಧಾನಿ ದೆಹಲಿಗೆ ಪ್ರಯಾಣ ಬೆಳೆಸುವರು. ನಾಳೆ ದೆಹಲಿಯಲ್ಲಿ ನಡೆಯುವ ವಿಶೇಷ ಕಾರ್ಯಕ್ರಮಗಳಲ್ಲಿ ಟ್ರಂಪ್ ಮತ್ತು ಮೋದಿ ಭಾಗವಹಿಸುವರು. ಡೊನಾಲ್ಡ್ ಟ್ರಂಪ್ ಸಾಮಾನ್ಯವಾಗಿ ವಿದೇಶ ಪ್ರವಾಸಗಳನ್ನು ಇಷ್ಟಪಡುವುದಿಲ್ಲ. ಆದರೆ ಭಾರತದ ಮೇಲೆ ಅದರಲ್ಲಿಯೂ ಪ್ರಧಾನಿ ಮೋದಿ ಮೇಲಿನ ವಿಶೇಷ ಆತ್ಮೀಯತೆ ಮತ್ತು ಸ್ನೇಹ-ಪ್ರೀತಿಯಿಂದ ಎರಡು ದಿನಗಳ ಪ್ರವಾಸ ಕೈಗೊಂಡಿದ್ಧಾರೆ.


Spread the love

About Laxminews 24x7

Check Also

HC ಮಹದೇವಪ್ಪ ಸೇರಿದಂತೆ ಕಾಂಗ್ರೆಸ್ ನಾಯಕರ ನಿವಾಸಗಳಿಗೆ ಭೇಟಿ ನೀಡಿದ ಜಾರಕಿಹೊಳಿ

Spread the love ಮೈಸೂರು: ಲೋಕೋಪಯೋಗಿ ಸಚಿವ ಸತೀಶ ಜಾರಕಿಹೊಳಿ ಅವರು ನಗರದಲ್ಲಿ ಮಂಗಳವಾರ ಸಚಿವ ಎಚ್.ಸಿ. ಮಹದೇವಪ್ಪ ಸೇರಿದಂತೆ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ