Breaking News

ನಡುರಸ್ತೆಯಲ್ಲೇ ಮೆಡಿಕಲ್ ಶಾಪ್ ಮಾಲೀಕನ ಕೊಲೆ

Spread the love

ಬೆಂಗಳೂರು: ರಾಜಧಾನಿ ಬೆಂಗಳೂರಿನ ಮಡಿವಾಳದ ಮುಖ್ಯರಸ್ತೆಯಲ್ಲಿ ಸಾರ್ವಜನಿಕರ ಎದುರಲ್ಲೇ ವ್ಯಕ್ತಿಯೊಬ್ಬನನ್ನು ದುಷ್ಕರ್ಮಿಗಳು ಮಾರಕಾಸ್ತ್ರಗಳಿಂದ ಕೊಚ್ಚಿ ಭೀಕರವಾಗಿ ಹತ್ಯೆ ಮಾಡಿರುವ ಘಟನೆ ನಡೆದಿದೆ.

ಮಂಗಮ್ಮನಪಾಳ್ಯದ ನಿವಾಸಿ, ಮೆಡಿಕಲ್ ಶಾಪ್ ನಡೆಸುತ್ತಿದ್ದ ಸುಹೇಲ್ ಕೊಲೆಯಾದ ದುರ್ದೈವಿ. ಶನಿವಾರ ರಾತ್ರಿ ಸುಮಾರು 10 ಗಂಟೆಯ ವೇಳೆಗೆ ಸುಹೇಲ್ ಮಡಿವಾಳದಿಂದ ಕೊರಮಂಗಲ ಕಡೆಗೆ ತಮ್ಮ ಬೈಕ್‌ನಲ್ಲಿ ತೆರಳುತ್ತಿದ್ದರು.

ಈ ವೇಳೆ ಟ್ರಾಫಿಕ್ ಜಾಮ್‌ನಲ್ಲಿ ಬೈಕ್ ನಿಲ್ಲಿಸಿಕೊಂಡಿದ್ದಾಗ, ಎರಡು ಬೈಕ್‌ಗಳಲ್ಲಿ ಬಂದ ನಾಲ್ವರು ದುಷ್ಕರ್ಮಿಗಳ ಗ್ಯಾಂಗ್ ಏಕಾಏಕಿ ತಲ್ವಾರ್‌ಗಳಿಂದ ಅವರ ಮೇಲೆ ಮುಗಿಬಿದ್ದಿದೆ. ನೂರಾರು ಜನರ ಕಣ್ಣೆದುರೇ ಸುಹೇಲ್ ಅವರನ್ನು ಕೊಚ್ಚಿ ಕೊಲೆ ಮಾಡಿದ ಹಂತಕರು ಸ್ಥಳದಿಂದ ಪರಾರಿಯಾಗಿದ್ದಾರೆ.

ಶಬ್ಬೀರ್ ಹತ್ಯೆಗೆ ಪ್ರತೀಕಾರ?
ಜನವರಿ 13 ರಂದು ಬಂಡೆಪಾಳ್ಯದಲ್ಲಿ ರೌಡಿಶೀಟರ್ ಶಬ್ಬೀರ್ ಎಂಬಾತನ ಹತ್ಯೆ ನಡೆದಿತ್ತು. ಆ ಕೊಲೆ ಪ್ರಕರಣದಲ್ಲಿ ಸುಹೇಲ್ ಸಹೋದರರಾದ ಖಲೀಂ, ನಜೀರ್ ಹಾಗೂ ಇನ್ನೊಬ್ಬ ಸಹೋದರ ಆರೋಪಿಗಳಾಗಿದ್ದರು. ಈ ಪೈಕಿ ಖಲೀಂ ಇನ್ನೂ ಜೈಲಿನಲ್ಲಿದ್ದರೆ, ನಜೀರ್ ಒಂದು ತಿಂಗಳ ಹಿಂದೆಯಷ್ಟೇ ಜಾಮೀನಿನ ಮೇಲೆ ಹೊರಬಂದಿದ್ದ.

ಸುಹೇಲ್ ಯಾವುದೇ ಕ್ರಿಮಿನಲ್ ಹಿನ್ನೆಲೆ ಹೊಂದಿರದೆ ಮೆಡಿಕಲ್ ಶಾಪ್ ನಡೆಸಿಕೊಂಡು ಸಾಮಾನ್ಯ ಜೀವನ ನಡೆಸುತ್ತಿದ್ದರು. ಸಹೋದರರ ಮೇಲಿನ ಹಗೆತನಕ್ಕೆ ಶಬ್ಬೀರ್ ಸಹಚರರೇ ಮುಗ್ಧ ಸುಹೇಲ್‌ನನ್ನು ಟಾರ್ಗೆಟ್ ಮಾಡಿ ಹತ್ಯೆ ಮಾಡಿದ್ದಾರೆ ಎಂದು ಶಂಕಿಸಲಾಗಿದೆ.

ಕೊಲೆ ನಡೆದ ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಧಾವಿಸಿದ ಸಹೋದರ ನಜೀರ್, “ಸುಹೇಲ್ ನನಗೆ ಕೇವಲ ಅಣ್ಣನಾಗಿರಲಿಲ್ಲ, ಅಪ್ಪನ ಸ್ಥಾನದಲ್ಲಿದ್ದ. ಈ ಕೃತ್ಯ ಎಸಗಿದ ಯಾರನ್ನೂ ಸುಮ್ಮನೆ ಬಿಡುವುದಿಲ್ಲ” ಎಂದು ಶಪಥ ಮಾಡಿದ್ದಾನೆ. ಘಟನೆ ಸಂಬಂಧ ಮಡಿವಾಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಹಂತಕರ ಪತ್ತೆಗಾಗಿ ಪೊಲೀಸರು ಬಲೆ ಬೀಸಿದ್ದಾರೆ.


Spread the love

About Laxminews 24x7

Check Also

2027ರ ಜನವರಿ ಅಂತ್ಯಕ್ಕೆ ವಿಮಾನಯಾನ – ಕೊನೆ ಹಂತದತ್ತ ವಿಜಯಪುರ ವಿಮಾನ ನಿಲ್ದಾಣ ಕಾಮಗಾರಿ

Spread the loveವಿಜಯಪುರ: ಬಹುನಿರೀಕ್ಷಿತ ವಿಜಯಪುರ ವಿಮಾನ ನಿಲ್ದಾಣ ಕಾರ್ಯಾರಂಭಕ್ಕೆ ಮುಹೂರ್ತ ಕೂಡಿ ಬಂದಿದ್ದು, 2027ರ ವರ್ಷಾರಂಭವಾಗುತ್ತಿದ್ದಂತೆಯೇ ವಿಮಾನ ಹಾರಿಸುವ ಪ್ರಯತ್ನ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ