ಮಂಡ್ಯ: ಮಂಡ್ಯ ಜಿಲ್ಲಾ ಸಹಕಾರ ಹಾಲು ಉತ್ಪಾದಕರ ಸಂಘ ನಂದಿನಿ ಹಾಲಿನ ಪುಡಿ ಕಲಬೆರಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ತೀವ್ರಗೊಂಡಿದ್ದು, ಪೊಲೀಸರು ಮತ್ತೆ ಮೂವರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಇದರೊಂದಿಗೆ ಈ ಪ್ರಕರಣದಲ್ಲಿ ಬಂಧಿತರಾದವರ ಒಟ್ಟು ಸಂಖ್ಯೆ 11ಕ್ಕೆ ಏರಿಕೆಯಾಗಿದೆ.
ಈ ಹಿಂದೆ ಪ್ರಮುಖ ಆರೋಪಿ ಜಾದವ್ ಹಾಗೂ ಮನ್ಮುಲ್ ಮಾಜಿ ಅಧ್ಯಕ್ಷ ಉಮ್ಮಡಹಳ್ಳಿ ಶಿವಪ್ಪ ಸೇರಿದಂತೆ ಒಟ್ಟು 8 ಮಂದಿಯನ್ನು ಬಂಧಿಸಲಾಗಿತ್ತು. ಈಗ ಕೇರಳ ಮೂಲದ ಅನಸ್, ತೂಬಿನಕೆರೆಯ ವಿಜೇಶ್, ಮದ್ದೂರಿನ ಅರ್ಪಿತ್ನನ್ನು ಪೊಲೀಸರು ಬಂಧಿಸಿದ್ದಾರೆ.
ಪ್ರಕರಣದ ಪ್ರಮುಖ ಆರೋಪಿ ಜಾದವ್ ಇವರಿಗೆ ಮಾರುಕಟ್ಟೆಗಿಂತ ಕಡಿಮೆ ದರಕ್ಕೆ ನಂದಿನಿ ಹಾಲಿನ ಪುಡಿಯನ್ನು ಸರಬರಾಜು ಮಾಡುತ್ತಿದ್ದ. ಕಳೆದ 2 ವರ್ಷಗಳಿಂದ ಟನ್ಗಟ್ಟಲೆ ಹಾಲಿನ ಪುಡಿ ವಹಿವಾಟು ಅವ್ಯಾಹತವಾಗಿ ನಡೆದಿರುವುದು ತನಿಖೆಯಿಂದ ಬಯಲಾಗಿದೆ.
ಬಂಧಿತರಾದ ವಿಜೇಶ್ ಮತ್ತು ಅನಸ್ ಬೇಕರಿ ಉತ್ಪನ್ನಗಳನ್ನು ತಯಾರು ಮಾಡುತ್ತಿದ್ದು, ಹಾಲಿನ ಪುಡಿಯನ್ನು ಬೇಕರಿ ಪದಾರ್ಥಗಳ ತಯಾರಿಕೆಗೆ ಬಳಸುತ್ತಿದ್ದರು. ಇದರ ಜೊತೆಗೆ ಮತ್ತಷ್ಟು ಹಾಲಿನ ಪುಡಿಯನ್ನು ಕೇರಳಕ್ಕೂ ಸಹ ರವಾನೆ ಮಾಡಲಾಗುತ್ತಿತ್ತು. ಪೊಲೀಸರು ಈ ಜಾಲದ ಹಿಂದೆ ಇರುವ ಇತರ ಪ್ರಮುಖ ವ್ಯಕ್ತಿಗಳ ಪತ್ತೆಗಾಗಿ ತನಿಖೆಯನ್ನು ಮುಂದುವರೆಸಿದ್ದಾರೆ.
Laxmi News 24×7