ಬೆಂಗಳೂರು: ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ 108 ಅಂಬುಲೆನ್ಸ್ ನೌಕರರು ಮುಷ್ಕರಕ್ಕೆ ಕರೆ ನೀಡಿದ್ದಾರೆ. ಇಂದು ರಾತ್ರಿಯಿಂದಲೇ ಅಂಬುಲೆನ್ಸ್ ಸೇವೆ ಸ್ಥಗಿತಗೊಳಿಸಿ ಸೇವೆಗೆ ಹಾಜರಾಗದಿರಲು ನಿರ್ಧಾರ ಮಾಡಿದ್ದಾರೆ. ಇದೇ ತಿಂಗಳ 22ರಂದು ಫ್ರೀಡಂಪಾರ್ಕ್ನಲ್ಲಿ ಅನಿರ್ದಿಷ್ಟಾವಧಿ ಮುಷ್ಕರ ನಡೆಸಲಿದ್ದಾರೆ. 108 ಮುಷ್ಕರಕ್ಕೆ ಮಣಿಯಲ್ಲ ಅಂತಾ ಸಚಿವ ಖಾದರ್ ಎಚ್ಚರಿಸಿದ್ದಾರೆ.
ಕಳೆದೊಂದು ತಿಂಗಳಿಂದ ಸಭೆ ಮೇಲೆ ಸಭೆ ನಡೆಸಿದ್ರೂ ಬಗ್ಗದ ಸರ್ಕಾರದ ವಿರುದ್ಧ ಅಂಬುಲೆನ್ಸ್ ಸಿಬ್ಬಂದಿ ಸಿಡಿದಿದ್ದಾರೆ. ವಾರ್ಷಿಕವಾಗಿ ವೇತನ ಹೆಚ್ಚಳ ಆಗಬೇಕು. ಜೇಷ್ಠತೆ ಆಧಾರದ ಮೇಲೆ ವೇತನ ಹೆಚ್ಚಳ ಆಗಬೇಕು. ಅಪಘಾತದಲ್ಲಿ ಮೃತಪಟ್ಟವರಿಗೆ 50 ಲಕ್ಷ ಪರಿಹಾರ ಕೊಡಬೇಕು. ಹೀಗೆ ಹತ್ತು ಹಲವು ಬೇಡಿಕೆಗಳನ್ನ ಅಂಬುಲೆನ್ಸ್ ಸಿಬ್ಬಂದಿ ಸರ್ಕಾರದ ಮುಂದಿಟ್ಟಿದ್ದಾರೆ.
ಅಂಬುಲೆನ್ಸ್ ಸಿಬ್ಬಂದಿ ಬೇಡಿಕೆಗಳೇನು?
– ಪ್ರತಿವರ್ಷ ವಾರ್ಷಿಕ ವೇತನ ಹೆಚ್ಚಳದೊಂದಿಗೆ ವೇತನ ಪರಿಷ್ಕರಣೆ.
– ಮೂರು ಪಾಳಿಯಲ್ಲಿ ಕರ್ತವ್ಯ ನಿರ್ವಹಿಸಲು ವಾಹನಗಳ ವ್ಯವಸ್ಥೆ.
– ವಲಯವಾರು ವೇತನ ನಿಗದಿ ವ್ಯವಸ್ಥೆ ರದ್ದುಪಡಿಸಿ ಏಕರೂಪ ವೇತನ ಜಾರಿ.
– ಜೇಷ್ಠತೆ ಆಧಾರದ ಮೇಲೆ ಸಿಬ್ಬಂದಿಗೆ ವೇತನ ನಿಗದಿ.
– ಕಾರ್ಮಿಕ ಇಲಾಖೆ ನಿಯಮದಂತೆ ಪ್ರತಿ ತಿಂಗಳ 7ರೊಳಗೆ ವೇತನ ಪಾವತಿ.
– ಅಪಘಾತದಲ್ಲಿ ಮೃತಪಟ್ಟ ಸಿಬ್ಬಂದಿ ಕುಟುಂಬಕ್ಕೆ 50 ಲಕ್ಷ ರೂ. ಪರಿಹಾರ.
– ಸಿಬ್ಬಂದಿಗೆ ಸೂಕ್ತ ವಿಶ್ರಾಂತಿ ಕೊಠಡಿಗಳ ವ್ಯವಸ್ಥೆ.
– ಶಿಫ್ಟ್ ಸಮಯ ಬದಲಾವಣೆ ಮಾಡುವಂತೆ ಆಗ್ರಹಿಸಿದ್ದಾರೆ.
ಇನ್ನು ಜಿವಿಕೆ ಸಂಸ್ಥೆ 108 ಅಂಬುಲೆನ್ಸ್ ಅನ್ನು ನಿರ್ವಹಣೆ ಮಾಡುತ್ತಿದೆ. ಜಿವಿಕೆ ಕಂಪನಿ ಮತ್ತು ಆರೋಗ್ಯ ಸಚಿವ ಯುಟಿ ಖಾದರ್ ನೇತೃತ್ವದಲ್ಲಿ ಸಭೆ ಆಗಿದೆ. ಸರ್ಕಾರ ನೀಡಿದ ಭರವಸೆ ಈಡೇರಿಸದ ಹಿನ್ನೆಲೆ ಈಗ ಮುಷ್ಕರಕ್ಕೆ ಕರೆ ನೀಡಲಾಗಿದೆ. ಆದರೆ, ಅಂಬುಲೆನ್ಸ್ ನೌಕರರ ಮುಷ್ಕರ ವಿಚಾರಕ್ಕೆ ಸಚಿವ ಯುಟಿ ಖಾದರ್ ಪ್ರತಿಕ್ರಿಯಿಸಿದ್ದು, ಇವರ ಬ್ಲಾಕ್ಮೇಲ್ಗೆ ನಾವು ಬಗ್ಗಲ್ಲ. ಬೆದರಿಕೆಗೆ ಬಗ್ಗಲ್ಲ. ರೋಗಿಗಳಿಗೆ ತೊಂದರೆ ಆದರೆ ಜಿವಿಕೆ ಸಂಸ್ಥೆ ಹೊಣೆ ಆಗಿರುತ್ತೆ ಎಂದು ಹೇಳಿದ್ದಾರೆ.
ಇನ್ನು ರಾಜ್ಯದಲ್ಲಿ 108 ಅಂಬುಲೆನ್ಸ್ ಸೇವೆಯನ್ನೇ ಬಡ ಜನರು ನೆಚ್ಚಿಕೊಂಡಿದ್ದಾರೆ. ಎರಡು ತಿಂಗಳು ಬೇರೆ ವ್ಯವಸ್ಥೆ ಮಾಡಿಕೊಳ್ಳಿ, ನಂತರ ವ್ಯವಸ್ಥೆ ಸರಿಪಡಿಸುತ್ತೇವೆ. ಹೊಸ ಅಂಬುಲೆನ್ಸ್ ಖರೀದಿಸುತ್ತಾ ಇದ್ದೇವೆ. ಹೊಸ ಪಾಲಿಸಿ ಮಾಡುತ್ತೇವೆ. ಸರಿಯಾದ ಸಮಯಕ್ಕೆ ಅಂಬುಲೆನ್ಸ್ ಸಿಗುವ ರೀತಿ ಮಾಡುತ್ತೇವೆ ಎಂದು ಖಾದರ್ ತಿಳಿಸಿದ್ದಾರೆ.
Laxmi News 24×7