ಕಲಬುರಗಿ: ಗುತ್ತಿಗೆ ಪಡೆದ ಕೆಲಸದ ಹಣ ಕೇಳಿದ ಹಿನ್ನೆಲೆಯಲ್ಲಿ ಕಾಂಗ್ರೆಸ್ ಮುಖಂಡನ ಬೆದರಿಕೆಗೆ ಹೆದರಿದ ವ್ಯಕ್ತಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಕಲಬುರಗಿ ಜಿಲ್ಲೆಯ ಕಾಳಗಿ ತಾಲೂಕಿನ ರಟಕಲ್ ಗ್ರಾಮದಲ್ಲಿ ನಡೆದಿದೆ.
ರಟಕಲ್ ಗ್ರಾಮದ ನಿವಾಸಿ ಖದೀರ್ ಪಾಷಾ (38) ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಕೆಲಸಗಾರ. ಪ್ರಕರಣಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ ಮುಖಂಡ ಅರವಿಂದ್ ಚವ್ಹಾಣ್ ಹಾಗೂ ಅವರ ಅಳಿಯ ಅಮಿತ್ ರಾಠೋಡ್ ವಿರುದ್ಧ ದೂರು ದಾಖಲಾಗಿದೆ.
ಪೊಲೀಸರ ಮಾಹಿತಿ ಪ್ರಕಾರ, ಸೇಡಂನ ಸಿಮೆಂಟ್ ಕಾರ್ಖಾನೆಯ ಕಾಮಗಾರಿಯನ್ನು ಗುತ್ತಿಗೆ ಪಡೆದಿದ್ದ ಅರವಿಂದ್ ಚವ್ಹಾಣ್ ಅದರ ಕೆಲಸಕ್ಕೆ ಖದೀರ್ ಪಾಷಾ ನನ್ನ ಕೂಲಿಗಾಗಿ ನೇಮಿಸಿಕೊಂಡಿದ್ದರು. ಬಳಿಕ ಕಾಮಗಾರಿಗೆ ಸಂಬಂಧಿಸಿದ ಬಾಕಿ ಹಣ ಕೇಳಿದಾಗ ಅರವಿಂದ್ ಚವ್ಹಾಣ್ ಹಾಗೂ ಅಮಿತ್ ರಾಠೋಡ್ ಬೆದರಿಕೆ ಹಾಕಿದ್ದಾರೆ ಎಂದು ಆರೋಪಿಸಲಾಗಿದೆ.
ಈ ಕಿರುಕುಳದಿಂದ ಮನನೊಂದು ಖದೀರ್ ಪಾಷಾ ರಟಕಲ್ ಗ್ರಾಮದ ಜಮೀನಿನಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಕುಟುಂಬದವರು ಆರೋಪಿಸಿದ್ದಾರೆ.
ಮೃತನ ಪತ್ನಿ ಅನೀಸಾ ಬೇಗಂ ನೀಡಿದ ದೂರಿನ ಮೇರೆಗೆ ಅರವಿಂದ್ ಚವ್ಹಾಣ್ ಹಾಗೂ ಅಮಿತ್ ರಾಠೋಡ್ ವಿರುದ್ಧ ಎಫ್ಐಆರ್ ದಾಖಲಿಸಲಾಗಿದೆ. ಅರವಿಂದ್ ಚವ್ಹಾಣ್ ಅವರು 2028ರ ಕಲಬುರಗಿ ಗ್ರಾಮೀಣ ವಿಧಾನಸಭಾ ಕ್ಷೇತ್ರದ ಟಿಕೆಟ್ ಆಕಾಂಕ್ಷಿಯಾಗಿದ್ದಾರೆ ಎಂದು ತಿಳಿದುಬಂದಿದೆ.
Laxmi News 24×7